Tuesday, July 19, 2022

ವ್ಯಕ್ತಿ ಪರಿಚಯ: ಖ್ಯಾತ ವಾಸ್ತು ತಜ್ಞ, ಕ್ಷೇತ್ರ ಮಹಾತ್ಮೆ, ಯಕ್ಷಗಾನ ಪ್ರಸಂಗಕರ್ತ ಪದ್ಮಶಾಲಿ ಸಮಾಜದ ಡಾ. ಬಸವರಾಜ್ ಶೆಟ್ಟಿಗಾರ್


ವ್ಯಕ್ತಿ ಪರಿಚಯ: ಖ್ಯಾತ ವಾಸ್ತು ತಜ್ಞ, ಕ್ಷೇತ್ರ ಮಹಾತ್ಮೆ, ಯಕ್ಷಗಾನ ಪ್ರಸಂಗಕರ್ತ ಪದ್ಮಶಾಲಿ ಸಮಾಜದ ಡಾ. ಬಸವರಾಜ್ ಶೆಟ್ಟಿಗಾರ್

ವಾಸ್ತು ತಜ್ಞ, ಯಕ್ಷಸಾಧಕರು, .ಕ್ಷೇತ್ರ ಮಹಾತ್ಮೆಗಳ ಸರದಾರ ಮತ್ತು ಪ್ರಸಿದ್ದ ಯಕ್ಷಗಾನ ಪ್ರಸಂಗಕರ್ತರಾದ ಕೋಟೇಶ್ವರದ ಡಾ.ಬಸವರಾಜ್ ಶೆಟ್ಟಿಗಾರರು ಅವರ ವ್ಯಕ್ತಿ ಪರಿಚಯ. 

ಶ್ರೀಯುತರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ದಿ. ಶ್ರೀನಿವಾಸ ಶೆಟ್ಟಿಗಾರ್ ಮತ್ತು ಪಣಿಯಮ್ಮ ದಂಪತಿಗಳ ಪುಣ್ಯಗರ್ಭದಲ್ಲಿ ದಿನಾಂಕ: 11.10.1967 ರಲ್ಲಿ ಜನಿಸಿದರು.

ಪದವಿ ಶಿಕ್ಷಣವನ್ನು ಪಡೆದಿರುವ ಇವರು ಪತ್ರಿಕೋದ್ಯಮ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪಡೆದಿದ್ದು, ಕಂಪ್ಯೂಟರ್ ಶಿಕ್ಷಣ, ಟೈಪ್ ರೈಟಿಂಗ್ ಮತ್ತು ಕೃಷಿ ಕ್ಷೇತ್ರದಲ್ಲಿಯೂ ಕೂಡ ವಿಶೇಷ ಪದವಿಯನ್ನು ಪಡೆದುಕೊಂಡಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಕುಂದಾಪುರದ ಆಡುಬಾಷೆಯಂತೆ ಶೆಟ್ಟಿಗಾರರು ಕೈಯಾಡಿಸದ ಕ್ಷೇತ್ರಗಳಿಲ್ಲ ಎನ್ನಬಹುದು.. ವಾಸ್ತು ಶಾಸ್ತ್ರಜ್ಞರಾಗಿ, ಜ್ಯೋತಿಷ್ಯ ಪಂಡಿತರಾಗಿ, ಪ್ರವಚನಕಾರರಾಗಿ, ಕೃಷಿಕರಾಗಿ,ಪತ್ರಿಕ ವರದಿಗಾರರಾಗಿ, ಸಾಹಿತಿಯಾಗಿ,ಶಾಲಾ ಶಿಕ್ಷಕರಾಗಿ, ನಾಟಕ ಕಲಾವಿದರಾಗಿ, ಭಜನಾ ತಂಡದ ಸದಸ್ಯರಾಗಿ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ , ಪ್ರಸಂಗಕರ್ತರಾಗಿ, ಲೇಖಕರಾಗಿ,ಕಾದಂಬರಿಕಾರರಾಗಿ,ಕವಿಯಾಗಿ,ರಂಗ ನಿರ್ದೇಶಕರಾಗಿ ಶನಿಕಥಾ ಕಲಾವಿದರಾಗಿ,ಕರ್ಜೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ,ಕೃಷಿ, ಪತ್ರಿಕೋದ್ಯಮ,ಸಾಹಿತ್ಯಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ    ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿ ಅಪರೂಪದಲ್ಲಿ ಅಪರೂಪದ ಸಾಧನೆಗೈದ ಬಹುಮುಖ ಪ್ರತಿಭೆಯುಳ್ಳ ಸಾಧಕರಾಗಿ ಗುರುತಿಸಿ ಕೊಂಡಿದ್ದಾರೆ...

ಇವರು ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ ಚಂದ್ರಸೇನ, ವೀರಮಣಿ, ಧನಪಾಲ ಶೆಟ್ಟಿ, ರಾಮಗಾಣಿಗ, ಹನುಮಂತ,ಸುಗ್ರೀವ, ರಾಮ,ಲಕ್ಷ್ಮಣ, ವಿಭೀಷಣ,ನಂದಿ ಶೆಟ್ಟಿ, ವಿಕ್ರಮ, ತಾಮ್ರಧ್ವಜ,ಸುಧನ್ವ,ವಿಷ್ಣು,ಅಭಿಮನ್ಯು,ಮಯೂರದ್ವಜ  ಶನೈಶ್ಚರ ಮೊದಲಾದ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿ ಅಪಾರವಾದ ಜನಮನ್ನಣೆಗೆ ಪಾತ್ರರಾಗಿದ್ದಾರೆ...

ಸೌಕೂರು ಕ್ಷೇತ್ರ ಮಹಾತ್ಮೆ,ಸೂರಾಲು ಕ್ಷೇತ್ರ ಮಹಾತ್ಮೆ,ವಸುಪುರ ಕ್ಷೇತ್ರ ಮಹಾತ್ಮೆ,ಹಿರಿಯಡ್ಕ ಕ್ಷೇತ್ರ ಮಹಾತ್ಮೆ,ಕನ್ನಾರು ಕ್ಷೇತ್ರ ಮಹಾತ್ಮೆ,ಮಡಾಮಕ್ಕಿ ಕ್ಷೇತ್ರ ಮಹಾತ್ಮೆ,ಹಟ್ಟಿಯಂಗಡಿ ಕ್ಷೇತ್ರ ಮಹಾತ್ಮೆ,ಮೂರೂರು ಕ್ಷೇತ್ರ ಮಹಾತ್ಮೆ,ಮೊಗವೀರ ಪೇಟೆ ಕ್ಷೇತ್ರ ಮಹಾತ್ಮೆ, ಆರೂರು ಕ್ಷೇತ್ರ ಮಹಾತ್ಮೆ,ಮೇಸ್ತ್ರಿ ಮಾದಯ್ಯ, ಸ್ವಸ್ತಿ ಸಿಂಚನ,ಕೊರಗನ ಕೊರಪೋಲು(ತುಳು)ಸೌಮ್ಯ ಸೌಂದರ್ಯ ಸೇರಿದಂತೆ 57 ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ..

ಪ್ರೇಮಚಕ್ರ,ಸಂಸಾರ ಚಕ್ರ,ಅಪಹರಣ, ಕಣ್ಣೀರ ಯಾತ್ರೆ ಮೊದಲಾದ ಕಾದಂಬರಿಗಳನ್ನು,ಪುನರ್ಜನ್ಮ,ಅತ್ತೆಯ ಸೋಲು,ಅರಿವು,ಕತ್ತಲಿಂದ ಬೆಳಕಿನೆಡೆಗೆ, ವಿಷಾಮೃತ,ಕನ್ಯಾದಾನ, ವ್ರಕೋದರ ಪ್ರತಿಜ್ಞೆ ಮೊದಲಾದ ನಾಟಕಗಳನ್ನು, ರತಿರೇಖಾ ಇತ್ಯಾದಿ ಕತೆಯನ್ನು, ಕವನಾಮೃತ ಎನ್ನುವ ಕವನ ಸಂಕಲನವನ್ನು,ಜಾನಪದ ಗೀತೆ, ಬಾವಗೀತೆ ಮತ್ತು ಭಕ್ತಿಗೀತೆಗಳನ್ನು ರಚಿಸಿದ್ದಾರೆ..

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಗೌರವ ಡಾಕ್ಟರೇಟ್ ಪ್ರಶಸ್ತಿ,ಶಿವರಾಮ ಕಾರಂತ ಸದ್ಬಾವನ ಪ್ರಶಸ್ತಿ,ಪ್ರಸಂಗ ರಚನೆಗಾಗಿ ಸ್ಕಂದ ಪುರಸ್ಕಾರ,ಕರ್ನಾಟಕ ಭೂಷಣ ರಾಜ್ಯ, ಪ್ರಶಸ್ತಿ,ಭಾರತ ಭೂಷಣ ರಾಷ್ಟ ಪ್ರಶಸ್ತಿ,ಬಸವ ಪ್ರಶಸ್ತಿ ಸೇರಿದಂತೆ 15ಕ್ಕೊ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಮತ್ತು 385 ಕ್ಕೂ ಹೆಚ್ಚು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ

ಕುಂದಾಪುರದ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಕೋಶಾಧಿಕಾರಿಯಾಗಿ, ಬೆಂಗಳೂರು ಪದ್ಮಶಾಲಿ ಸಮಾಜದ ಸ್ಥಾಪಕ ಸದಸ್ಯರಾಗಿ,ಕೋಟೇಶ್ವರದ ಮಾರಿಯಮ್ಮ ದೇವಸ್ಥಾನದ ಸಾಂಸ್ಕೃತಿಕ ಸಂಘದ ಸ್ಥಾಪಕ ಕೋಶಾಧಿಕಾರಿಯಾಗಿ, ಗಂಗೊಳ್ಳಿ ಸಂಗೀತ ಕಲಾಶಾಲೆಯ ಸ್ಥಾಪಕ ನಿರ್ದೇಶಕರಾಗಿ,ಕೋಟೇಶ್ವರ ಆಸ್ತಿಕ ಸಮಾಜದ ಉಪಾಧ್ಯಕ್ಷ ಸೇರಿದಂತೆ ಇನ್ನು ಅನೇಕ ಸಂಘಸಂಸ್ಥೆಗಳನ್ನು  ಸ್ಥಾಪಿಸಿ, ಮುನ್ನೆಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ

ಕರುನಾಡ ಕಣ್ಮಣಿ,ಕ್ಷೇತ್ರಮಹಾತ್ಮೆಗಳ ಸರದಾರ,ಪದ್ಮಶಾಲಿ ಕುಲತಿಲಕ, ಜ್ಯೋತಿಷ್ಯ ಶಿರೋಮಣಿ,ಪದ್ಮಶಾಲಿ ಕಣ್ಮಣಿ, ಕಲಾಕಸ್ತೂರಿ,ಸಮಾಜರತ್ನ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದಿರುವ ಇವರು ಆಕಾಶವಾಣಿ, ದೂರದರ್ಶನ ಸೇರಿದಂತೆ ಅನೇಕ ಕಡೆ ಸಂದರ್ಶನವನ್ನು ನೀಡಿದ್ದಾರೆ...

ಇವರ ಕುರಿತು ಕೀರ್ತಿಕಲಸ ಕೀರ್ತಿಕಿರೀಟ,ಶತಸನ್ಮಾನ ಸಂಭ್ರಮ ಎನ್ನುವ ಅಭಿನಂದನಾ ಗ್ರಂಥಗಳು ಬಿಡುಗಡೆಗೊಂಡಿವೆ..

ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರ ವಿನ್ಯಾಸದಲ್ಲಿ ಅಪಾರವಾದ ಸಿದ್ಧಿಯನ್ನು ಪಡೆದಿರುವ ಇವರು *2* ಲಕ್ಷಕ್ಕೂ ಮಿಕ್ಕಿ ಜಾತಕ ಪರಿಶೀಲನೆ ಮತ್ತು *75000* ಕ್ಕೂ ಹೆಚ್ಚು ವಾಸ್ತುವಿನ್ಯಾಸ ಮತ್ತು ನಕ್ಷೆಯನ್ನು ರಚಿಸಿಕೊಟ್ಟಿದ್ದಾರೆ...

ಕಾರ್ಕಳದ ಕಾವ್ಯಶ್ರೀ. ಬಿ.ಶೆಟ್ಟಿಗಾರ್ ರನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಆದರ್ಶ ದಾಂಪತ್ಯ ಜೀವನವನ್ನು ನಡೆಸಿ, ಸೌಜನ್ಯಶ್ರೀ ( ಮಗಳು) ಚೈತನ್ಯಶ್ರೀ (ಮಗಳು) ಲೋಕೇಶ್ ಕುಮಾರ್ (ಅಳಿಯ) ಗುರುರಾಜ ಶೆಟ್ಟಿಗಾರ್ (ಅಳಿಯ) ಮತ್ತು ಸಂಕಲ್ಪ ಎನ್ನುವ  ಮೊಮ್ಮಗನೊಂದಿಗೆ ಕೋಟೇಶ್ವರದ ಓಂಶ್ರೀ ಯಲ್ಲಿ ವಾಸವಾಗಿದ್ದಾರೆ..


















Monday, July 18, 2022

ಕರ್ನಾಟಕ ಪದ್ಮಶಾಲಿ ಸಂಘ - ಬೆಂಗಳೂರು

 



Karnataka Padmashali Sangha ®

N R Road, Kalasipalya New Extension, Mothinagara, Bengaluru- 56002.

ಕರ್ನಾಟಕ ಪದ್ಮಶಾಲಿ ಸಂಘದ ಅಧ್ಯಕ್ಷರು         

ಶ್ರೀ ಜಗದೀಶ್ ಬಲಭದ್ರ 

9448044588

ಬೆಂಗಳೂರು

ಬಹುಮುಖ ವ್ಯಕ್ತಿತ್ವದ ಸಮಾಜಮುಖಿ ಡಾ. ಕೆ.ಜಿ. ಲಕ್ಷ್ಮಿನಾರಾಯಣಪ್ಪ

ಬಹುಮುಖ ವ್ಯಕ್ತಿತ್ವದ ಸಮಾಜಮುಖಿ ಡಾ. ಕೆ.ಜಿ. ಲಕ್ಷ್ಮಿನಾರಾಯಣಪ್ಪ



ಬಡತನದಲ್ಲಿ ಹುಟ್ಟಿದವರು ಕಡೆತನಕ ಬಡವರಾಗಿಯೇ ಇರಬೇಕೆಂದು ಆ ಬ್ರಹ್ಮ ಬರೆಯಲು ಸಾಧ್ಯವಿಲ್ಲ. ಒಂದು ವೇಳೆ ಹಾಗೇನಾದರೂ ಬರೆದಿದ್ದನೆಂದರೆ ನಮ್ಮ ಬಡತನದ ಗೆರೆಯನ್ನು ಅಳಿಸಿಕೊಳ್ಳಲು ಆ ಭಗವಂತ ಸಾಕಷ್ಟು ಅವಕಾಶಗಳನ್ನು ಕೂಡ ನೀಡಿರಲೇಬೇಕು. ಆಗಲೂ ನಾವು ಎಚ್ಚತ್ತುಕೊಳ್ಳದಿದ್ದರೆ ಶಾಪಗ್ರಸ್ಥರಂತೆ ದೀನರಾಗಿಯೇ ಉಳಿಯಬೇಕಾಗುತ್ತದೆ. ಅದಕ್ಕೆ ಆ ದೇವರು ಹೊಣೆಯಲ್ಲ. ಹೀಗೆ ದೇವರು, ಬಡತನ

ಸಿರಿತನ ದುಡಿಮೆಗಳ ಬಗ್ಗೆ ತಮ್ಮದೇಯಾದ ಸಿದ್ಧಾಂತಗಳನ್ನು ರೂಪಿಸಿಕೊಂಡು ಇತರರಿಗೆ ಸದಾ ಮಾರ್ಗದರ್ಶಕರಂತೆ ಬದುಕುತ್ತಿರುವ ಸಾಹಿತಿ ಚಿಂತಕರಲ್ಲಿ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮಿನಾರಾಯಣಪ್ಪ ಅವರೂ ಒಬ್ಬರು. ಕೇಂದ್ರೀಯ ಅಬಕಾರಿ ಇಲಾಖೆಯಲ್ಲಿ ಓರ್ವ ದಕ್ಷ ಅಧಿಕಾರಿಯಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿ ಬಳಿಕ ನಿವೃತ್ತರಾದ ಇವರು ಈ ಮೊದಲೇ ತಮ್ಮೊಳಗೆ ಹುದುಗಿದ್ದ ಕಲೆ , ಸಾಹಿತ್ಯ ಸಮಾಜ ಸೇವಾ ಆಸಕ್ತಿಗಳನ್ನು ಮತ್ತಷ್ಟು ಉದ್ದೀಪನಗೊಳಿಸಿಕೊಂಡು ಒಂದೊಂದಾಗಿ ಅನಾವರಣಗೊಳಿಸುವ ಮೂಲಕ ಮೇಲ್ಪಂಗ್ತಿಗೆ

ಬಂದು ನಿಂತವರು. ನಿರಂತರ ಓದು ಬರಹ ಇವರ ಹವ್ಯಾಸ. ಸಾಹಿತಿ ಬರಹಗಾರರೊಂದಿಗೆ ವಿಶೇಷ ಒಡನಾಟ ಇವರದು. ಕುವೆಂಪು, ಬೇಂದ್ರೆ ಆದಿಯಾಗಿ ಡಾ.ಶಿವರುದ್ರಪ್ಪ, ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ ಅವರನ್ನು ಮತ್ತು ಅವರ ಸಾಹಿತ್ಯವನ್ನು ಓದಿಕೊಂಡ ಇವರು ಕನ್ನಡ ಸಾಹಿತ್ಯ ಲೋಕದ ಅನೇಕ ದಿಗ್ಗಜರೊಂದಿಗೆ ಸೌಹಾರ್ದ ಸ್ನೇಹ ಸಲುಗೆ ಹೊಂದಿದಂಥವರು. ತಮ್ಮ ಸಮಕಾಲೀನರೊಂದಿಗೆ ಹರಟೆಗೆ ಮುಂದಾದರೆ ತಮಗಿಂತ ಎಷ್ಟೇ ಕಿರಿಯರಾಗಿದ್ದರೂ ಅವರೊಂದಿಗೆ ಅಹಮ್ಮಿಲ್ಲದೆ ಬೆರೆತುಕೊಳ್ಳುವ ಸರಳ ಸಜ್ಜನಿಕೆ ಇವರ ಮತ್ತೊಂದು ವಿಶೇಷ ಗುಣ ಎಂದು ಕೊಂಡಾಡುತ್ತಾರೆ ಇವರನ್ನು ಹತ್ತಿರದಿಂದ ಬಲ್ಲ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ  .ವೆಂಕಟೇಶ್ ಅವರು.

ವಿಶಿಷ್ಟ ಸಾಹಿತಿ, ವಿಮರ್ಶಕ

ದೇಶದ ಪ್ರಧಾನಿಯನ್ನು, ಒಬ್ಬ ಸಾಮಾನ್ಯ ಪೌರ ಕಾರ್ಮಿಕನನ್ನೂ ಆ ದೇವರು ಒಂದೇ ಬಗೆಯಾಗಿ ಸೃಷ್ಠಿಸಿದ್ದಾನೆ. ಈ ಇಬ್ಬರಿಗೂ ಇರುವುದು ೨೪ ಗಂಟೆಗಳೇ. ಆದರೆ, ಪ್ರಧಾನಿ ಹುದ್ದೆಗೇರುವಂತಾಗಲು ಆ ವ್ಯಕ್ತಿ ಪಡೆದ ಶಿಕ್ಷಣ ಹಾಕಿದ ಶ್ರಮ ಸವೆಸಿದ ಹಾದಿ ಮಾತ್ರ ಒಂದೇ ರೀತಿಯಾಗಿರುವುದಿಲ್ಲ. ಅವರವರ ಆಯ್ಕೆ, ಅರ್ಹತೆ, ಬುದ್ಧಿಶಕ್ತಿ ಮತ್ತು ಒದಗಿಬಂದಂಥ ಅವಕಾಶಗಳ ಸದ್ಬಳಕೆ ಸೇರಿದಂತೆ ಮುಂತಾದ ಅಂಶಗಳು ಆಯಾ ವ್ಯಕ್ತಿಯ ಸ್ಥಾನ-ಮಾನಗಳಿಗೆ ಕಾರಣವಾಗುತ್ತವೆ. ಜೊತೆಗೆ ಒಬ್ಬ ಮನುಷ್ಯ ಹಿಂದುಳಿಯಲು ಬರೀ ಬಡತನವೊಂದೇ ಕಾರಣವಾಗುವುದಿಲ್ಲ ಎನ್ನುವ ಇವರು ಬಡತನವನ್ನೇ ಹಾಸಿ ಹೊದ್ದು ಬಡತನದಲ್ಲೇ ಬಂಧಿಯಾಗಿರುವವರ ಬಗ್ಗೆ ಕನಿಕರಪಡುತ್ತಾರೆ ಹೊರತು

ಯಾವತ್ತೂ ಅಸಹ್ಯಪಟ್ಟವರಲ್ಲ. ಮಾತ್ರವಲ್ಲ ಇಂಥ ಬಡ ಮತ್ತು ಅಸಹಾಯಕರ ಕಷ್ಟ-ಕಾರ್ಪಣ್ಯಗಳಿಗೆ ಸಹಾಯದ ಹಸ್ತವನ್ನು ಚಾಚಿದ್ದುಂಟು. ತಮ್ಮ ದುಡಿಮೆಯ ಶೇ.೧೦ರಷ್ಟು ಹಣವನ್ನು ಬಡವರಿಗಾಗಿಯೇ ಮೀಸಲಿಟ್ಟ ಲಕ್ಷ್ಮಿನಾರಾಯಣಪ್ಪ ರಾಯಣಪ್ಪ ಅವರು ಹುಟ್ಟಿನಿಂದಲೂ ಲಕ್ಷಿ÷್ಮÃ ಪುತ್ರರೇನೂ ಅಲ್ಲ! ಒಂದು ಕೈಯಿಂದ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗದಂತೆ ದಾನ-ಧರ್ಮ ಮಾಡುವ ಇವರು ಕೊಟ್ಟು ಕೊಡದಂತಿರುವುದೇ ಇವರ ನೈಜ ಸ್ವಭಾವ. ಇನ್ನು ಕೊಡುವ ಮುನ್ನ, ಕೊಟ್ಟ ನಂತರ ಆ ಬಗ್ಗೆ ಯೋಚಿಸುವಂಥವರೇ ಅಲ್ಲ. ಆಸ್ತಿ-ಅಂತಸ್ತು ಯಾರಿಗೂ ಯಾವತ್ತೂ ಶಾಶ್ವತವಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಕೂಡ ಬೇರೆಯವರ ಕಷ್ಟಗಳಿಗೆ ನೆರವಾಗದಿದ್ದರೆ ಮನುಷ್ಯರಾಗಿದ್ದು ಏನು ಪ್ರಯೋಜನ? ಎಂದು ಕೇಳುವ ಇವರು, ಆ ದೇವರು ಕೊಟ್ಟ ಪ್ರಸಾದದಲ್ಲಿ ಇತರರಿಗೆ ಹಂಚಿ ತಿನ್ನುವುದೇ ಲೇಸು ಎನ್ನುತ್ತಾರೆ. ತೊಂದರೆ ತಾಪತ್ರಯಗಳನ್ನು ಹೇಳಿಕೊಂಡು ಮನೆತನಕ ಸಹಾಯ ಕೇಳಿ ಬಂದವರಿಗೆ ಯಾವತ್ತೂ ಬರಿಗೈಯಿಂದ ಕಳುಹಿಸಿದವರಲ್ಲ ಎನ್ನುತ್ತಾರೆ ಇವರನ್ನು ಬಹಳ ಕಾಲದಿಂದಲೂ ಬಹಳ ಹತ್ತಿರದಿಂದ ಬಲ್ಲವರು. ಒಂದೇ ಮಾತಿನಲ್ಲಿ ಹೇಳುವುದಾದರೆ ಡಾ.ಕೆ.ಜಿ.ಲಕ್ಷ್ಮಿನಾರಾಯಣಪ್ಪ ಅವರದು `ಪರೋಪಕಾರಂ ಇದಂ ಶರೀರಂ' ಎಂಬ ಧ್ಯೇಯ.

ಡಾ. ಲಕ್ಷ್ಮಿನಾರಾಯಣಪ್ಪ ಅವರು ಎಂಎಸ್ಸಿ, ಎಲ್ ಎಲ್ ‌ಬಿ, ಡಿಬಿಎ ಪದವಿಗಳನ್ನು ಬೆಂಗಳೂರು ವಿವಿಯಲ್ಲಿ ಪಡೆದರೆ, ಬಿಸಿಇ ಪದವಿಯನ್ನು ಕೆನಡಾದಲ್ಲಿ ಪಡೆದರು. ಬಳಿಕ ಭಾರತದ ಅಬಕಾರಿ ಮತ್ತು ಸುಂಕ ಇಲಾಖೆಯಲ್ಲಿ ೩೫ ವರ್ಷಗಳ ಕಾಲ ಸುಧೀರ್ಘ ಕರ್ತವ್ಯ ನಿರ್ವಹಿಸಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿ ನಿವೃತ್ತರಾದವರು. `ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು-ಒಂದು ಅಧ್ಯಯನ' ಎಂಬ ಪ್ರಬಂಧವನ್ನು ರಚಿಸಿ ತುಮಕೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಗಳಿಸಿದವರು. ಕಾಲೇಜು ದಿನಗಳಿಂದಲೂ ಬರವಣಿಯಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದ ಇವರು ಕಥೆ, ಕವನ, ಅಂಕಣ ಬರಹದ ಮೂಲಕ ಸಾಹಿತ್ಯ ಕೃಷಿ ಮಾಡಿದವರು. ಅಂತೆಯೇ ಇವರ ಅನೇಕ ಬರಹಗಳು ಆಗಾಗ ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಲಕ್ಷ್ಮಿನಾರಾಯಣಪ್ಪ ಅವರು ಓದುಗರಿಗೆ ಚಿರಪರಿಚಿತರಾಗುವಂತೆ ಮಾಡಿತು. ನಾಡಿನ ಖ್ಯಾತ ಸಂಶೋಧಕರಾಗಿದ್ದ ಡಾ.ಎಂ.ಚಿದಾನಂದಮೂರ್ತಿಯವರ ಪ್ರೀತಿಗೆ ಪಾತ್ರರಾದವರು ಕೂಡ. ರಾಜ್ಯದ ೧೨ ಲಕ್ಷದಷ್ಟಿರುವ ಪದ್ಮಶಾಲಿ ಜನಾಂಗದವರಲ್ಲಿ ಡಾ.ಕೆ.ಜಿ. ಲಕ್ಷ್ಮಿನಾರಾಯಣಪ್ಪ ಅವರು ಮೊಟ್ಟ ಮೊದಲ ಸಂಶೋಧಕರಾಗಿದ್ದರೆ, ಇಡೀ ನೇಕಾರ ಸಮುದಾಯದ  ಒಬ್ಬ ಸಂಶೋಧಕರಾಗಿ ಡಿ.ಲಿಟ್ ಪಡೆದ ನಾಲ್ಕನೇ ವ್ಯಕ್ತಿಯೂ ಇವರೇ.

ದಕ್ಷ, ಪ್ರಾಮಾಣಿಕ ಅಧಿಕಾರಿ

ಮೂಲತ: ತುಮಕೂರು ಜಿಲ್ಲೆಯ ಕೋರ ಹೋಬಳಿಯ ಕೆಸ್ತೂರು ಎಂಬ ಪುಟ್ಟ ಗ್ರಾಮ ಇವರ ಹುಟ್ಟೂರು. ೧೯೫೦ರಲ್ಲಿ ಜನಿಸಿದ ಲಕ್ಷ್ಮಿನಾರಾಯಣಪ್ಪ ಅವರ ತಂದೆ ಗುಂಡಪ್ಪ, ತಾಯಿಯ ಹೆಸರು ಸಂಜೀವಮ್ಮ ಎಂದು. ಕಡು ಬಡತನದ ನೇಕಾರ ಕುಟುಂಬದಿಂದ ಬಂದ ಇವರು ಚಿಕ್ಕಂದಿನಿಂದಲೂ ಕಷ್ಟ ಪಟ್ಟು ಓದಬೇಕಾಯಿತು. ನೇಕಾರಿಕೆ ಮಾಡಿಕೊಂಡಿದ್ದ ಇವರ ತಂದೆಯವರ ಸಂಪಾದನೆಯಲ್ಲಿ ಮನೆಯ ಸಂಸಾರಕ್ಕೇ ಕಾಗುತ್ತಿರಲಿಲ್ಲ. ಇನ್ನು ಮಕ್ಕಳ ವಿದ್ಯಾಭ್ಯಾಸಕ್ಕೆಂದು ಎಲ್ಲಿಂದ ಣ ತರಲು ಸಾಧ್ಯ? ಮನೆಯ ಆರ್ಥಿಕ ಪರಿಸ್ಥಿತಿ ಹೀಗಿರುವಾಗ

ಬಾಲಕ ಲಕ್ಷ್ಮಿನಾರಾಯಣಪ್ಪ ತನ್ನ ಹುಟ್ಟೂರನ್ನು ಬಿಟ್ಟು ಗಳೂರಿಗೆ ಬಂದು ಅವರಿವರ ಆಶ್ರಯದಲ್ಲಿದ್ದುಕೊಂಡು ಓದು ಮುಂದುವರಿಸಬೇಕಾಯಿತು. ಆದರೆ, ತನ್ನ ಖರ್ಚು ವೆಚ್ಚಕ್ಕಾಗಿ ಪಾರ್ಟ್ ಟೈಂ ಕೆಲಸಕ್ಕೆ ಹೋಗ ಬೇಕಾಯಿತು. ಮುಂದೆ ತಾನೊಬ್ಬ ದೊಡ್ಡ ಅಧಿಕಾರಿಯಾಗಬೇಕೆಂಬ ದಿಟ್ಟ ಛಲ ಮಾತ್ರ ಇವರು ಇವರು ಯಾವತ್ತೂ ಬಿಟ್ಟಿರಲಿಲ್ಲ. ಜೀವನದ ಆರಂಭ ಕಾಲದಲ್ಲಿ ಬಡತನವನ್ನು ಕಂಡುಂಡ ಇವರು ಶ್ರದ್ಧೆ ಮತ್ತು ಆಸಕ್ತಿಯಿಂದ ಓದಿ ಬಳಿಕ ಸರ್ಕಾರಿ ನೌಕರಿಯೊಂದನ್ನು ಹಿಡಿದುಕೊಂಡು ತಾವಂದುಕೊಂಡಿದ್ದನ್ನು ಸಾಧಿಸದೇ ಬಿಡಲಿಲ್ಲ. ಕಷ್ಟದ ಕಾರ್ಮೋಡಗಳು ಸರಿದು ಮುಂದೆ ಜೀವನದಲ್ಲಿ ಸುಖ ನೆಮ್ಮದಿಯ ನೆˉÉ ದೊರೆತ ಬಳಿಕವೂ ತಮ್ಮ ಹಿಂದಿನ ಕಷ್ಟಗಳನ್ನು ಇವರೆಂದೂ ಮರೆತವರಲ್ಲ. ಕಷ್ಟದಲ್ಲಿದ್ದ ಸ್ನೇಹಿತರನ್ನೂ ಇವರು ಯಾವತ್ತೂ ಕೈ ಬಿಟ್ಟವರಲ್ಲ. ಡಾ.ಲಕ್ಷ್ಮಿನಾರಾಯಣಪ್ಪ ಅವರ ಓದು ವಿಸ್ತಾರವಾದರೂ ಬರವಣಿಗೆ ಬೆರೆಳೆಣಿಕೆಯಷ್ಟು ಎನ್ನುವುದೇ ಸರಿಯಾದುದು. ಆದರೆ, ಬರೆದದ್ದೆಲ್ಲ ಪುಟಕಿಟ್ಟ ಚಿನ್ನವೆಂದರೆ ತಪ್ಪಾಗಲಿಕ್ಕಿಲ್ಲ. ಆಧ್ಯಾತ್ಮಿಕ ತಳಹದಿಯಿಂದ ಬಂದ ಕಾರಣವೋ ಏನೋ ವಿವಿಧ ದತ್ತಿ-ದೇವಾಲಯಗಳ ಆಡಳಿತದ ಜವಾಬ್ದಾರಿಯನ್ನು ಹೊತ್ತುಕೊಂಡು ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸಿದವರು. ಡಾ.ಲಕ್ಷ್ಮಿನಾರಾಯಣಪ್ಪ ಅವರ ಸೇವಾ ಮನೋಭಾವ ಸಮಾಜದ ಬಗ್ಗೆ ಹೊಂದಿರುವ ಅಪಾರ ಕಕ್ಕುಲತೆ ಇತರರ ಬಗ್ಗೆ ಇರುವ ಗೌರವ, ಕನ್ನಡ ನಾಡು-ನುಡಿ, ಜಲ ನೆಲದ ಬಗ್ಗೆ ಹೊಂದಿರುವ ಅಪಾರ ಆದರ-ಅಭಿಮಾನಗಳು ಇವರ ವ್ಯಕ್ತಿತ್ವಕ್ಕೆ ಕಳಶಪ್ರಾಯ.

ನಿಷ್ಕಾಮ ಸಮಾಜ ಸೇವಕ

ದಿನದ ೨೪ ಗಂಟೆಯೂ ಒಂದಿಲ್ಲೊಂದು ಕೆಲಸ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿನಾರಾಯಣಪ್ಪ ಸದಾ ಪಾದರಸದಂತೆ ಓಡಾಡುತ್ತ ಇರುತ್ತಾರೆ. ಸಮುದಾಯ, ಸಂಘಟನೆ, ಸಾಮಾಜಿಕ ಕಳಕಳಿ, ಸಾಹಿತ್ಯಿಕ, ಧಾರ್ಮಿಕ ಇವರ ಸೇವಾ ಕಾರ್ಯಗಳು ಒಂದೇ ಎರಡೆ? ನಿವೃತ್ತಿಯ ಬಳಿಕ ಆರಾಮದಾಯಕ ಜೀವನ ನಡೆಸಬಹುದಾಗಿದ್ದರೂ ಅದಕ್ಕೆ ಅವಕಾಶ ಮಾಡಿಕೊಡದೆ ತಮ್ಮ ಸಮಾಜದವರ ಒಳಿತಿಗಾಗಿ ಟೊಂಕ ಕಟ್ಟಿ ನಿಂತವರು. ಪದ್ಮಶಾಲಿ ನೌಕರರ ಸಂಘ, ಕರ್ನಾಟಕ ಯುವ ಸಾಹಿತ್ಯ ಪರಿಷತ್ತು ಹಾಗೂ ಕೇಂದ್ರೀಯ ಕನ್ನಡ

ಸಂಘ ಸೇರಿದಂತೆ ಮುಂತಾದ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ ಅಳಿಲು ಸೇವೆ ಸಲ್ಲಿಸಿದವರು. ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಶ್ರೀ ಮಾರ್ಕಂಡೇಯ ಮಹರ್ಷಿ ಗುರುಪೀಠ ಮಹಾಸಂಸ್ಥಾನದ ಧರ್ಮದರ್ಶಿಯಾಗಿಯೂ ಜೊತೆಗೆ ಅದರ ಕೋಶಾಧಿಕಾರಿಯಾಗಿಯೂ ಸದ್ಯ ಸೇವೆಯಲ್ಲಿ ತೊಡಗಿದ್ದಾರೆ. ಅನಾಥ ಹೆಣ್ಣು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅವರ ಉನ್ನತ ಶಿಕ್ಷಣಕ್ಕಾಗಿ ನೆರವು ಒದಗಿಸುತ್ತಿರುವುದು ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ. ಹಿಂದುಳಿದ ತಮ್ಮ ಸಮಾಜದ ಮಕ್ಕಳಿಗಾಗಿ `ಕೆಜಿಎಲ್ ಪದ್ಮಶಾಲಿ ಐಎಎಸ್/ಯುಪಿಎಸ್‌ಸಿ ಅಕಾಡಮಿ' ಎಂಬ ಹೆಸರಿನಲ್ಲಿ ತರಬೇತಿ ಸಂಸ್ಥೆಯೊಂದನ್ನು ತೆರೆದಿದ್ದಾರೆ. ಇಂಥ ಇನ್ನೂ ಅನೇಕ ಸಮಾಜಮುಖಿ ಕೆಲಸ- ಕಾರ್ಯಗಳಿಗೆಂದೇ ಇವರು ತಮ್ಮ ವೃತ್ತಿ ಜೀವನದಾರಭ್ಯದಿಂದಲೂ ತಮ್ಮ ವೇತನದ ಶೇ.೧೦ ರಷ್ಟು ಹಣವನ್ನು ಖರ್ಚು ಮಾಡುತ್ತ

ಬಂದಿದ್ದಾರೆಂದರೆ ಸಣ್ಣ ಮಾತಲ್ಲ. ಇಷ್ಟೆಲ್ಲ ಸೇವಾ ಕೈಂಕರ್ಯ ಮಾಡಿದ ಕೆ.ಜಿ. ಲಕ್ಷ್ಮಿನಾರಾಯಣಪ್ಪ ಅವರಿಗೆ ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳು ಗೌರವಾದರಗಳು ಲಭಿಸಬೇಕು. ಸಮಾಜಕ್ಕೆ ಪ್ರೇರಣೆಯಂತಿರುವ ಇಂಥವರಿಗೆ ಪ್ರತಿಯಾಗಿ ಸಮಾಜವೂ ಪ್ರೇರಣೆ ಒದಗಿಸಬೇಕು ಅಲ್ಲವೆ?

ಮಾಹಿತಿ:- ನೇಕಾರವಾಣಿ

#KGL #KGlakshminarayanappa #K.G.lakshminarayanappa #ಕೆ.ಜಿ.ಲಕ್ಷ್ಮಿನಾರಾಯಣಪ್ಪ

#padmashali


Friday, July 15, 2022

ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಪದ್ಮಶಾಲಿ ಸಮಾಜದ ಹೆಮ್ಮೆ

ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಪದ್ಮಶಾಲಿ ಸಮಾಜದ ಹೆಮ್ಮೆ


ಕನ್ನಡ ಚಿತ್ರ ರಸಿಕರ ಮನಸೂರೆಗೊಂಡಿರುವ ಕವಿರತ್ನ ಶ್ರೀ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ನಮ್ಮ ಪದ್ಮಶಾಲಿ ಸಮಾಜದ ಹೆಮ್ಮೆಯ ಪ್ರತಿಭಾನ್ವಿತರು. ದೇವಿ ಶಾರದೆಯ ಕೃಪೆ ಇವರ ಮೇಲಿರುವುದರಿಂದ ಸಂಗೀತ ಸಾಹಿತ್ಯ, ಚಿತ್ರ ನಿರ್ದೇಶನ ಜತೆಗೆ ಮತ್ತು ನಟನೆಯಲ್ಲೂ ಸೈ ಎನಿಸಿಕೊಂಡಿರುವ ಪದ್ಮಶಾಲಿ ಸಮಾಜದಲ್ಲಿನ ಅಪರೂಪದ ಪ್ರತಿಭೆ. 

ನೇಕಾರ ಮನೆತನದಲ್ಲಿ ಹುಟ್ಟಿ ಬೆಳೆದು ಇಂದು ಸಮಾಜದಲ್ಲಿ ಅತ್ಯುತ್ತಮ ಸ್ಥಾನಗಳಿಸಿರುವ ಇವರು ತುಂಬಾ  ಸರಳವ್ಯಕ್ತಿತ್ವದವರು. ಕೇವಲ ಸಾಹಿತ್ಯ ಸಂಗೀತ ಎನ್ನದೇ ಸಾಮಾಜಿಕ ಜವಬ್ದಾರಿಯನ್ನು ಹೊತ್ತು ಕವಿರತ್ನ ಟ್ರಸ್ಟ್ ಮೂಲಕ ಸಮಾಜಸೇವೆ ಮಾಡುತ್ತಿರುವ ಹೃದಯ ವೈಶಾಲವುಳ್ಳವರು. ಕೋವಿಡ್ ಸಮಯದಲ್ಲಿ ನೂರಾರು ಜನರಿಗೆ ಫುಡ್ ಕಿಟ್ ಅನ್ನು ಹಂಚಿದ್ದಾರೆ. ಕೆಲಸವಿಲ್ಲದೆ ಇದ್ದವರಿಗೆ, ಕೌಶಲ್ಯ ತರಬೇತಿ ನೀಡಿ ಖಾಸಗಿಸಂಸ್ಥೆಗಳಲ್ಲಿ ಉದ್ಯೋಗ ದೊರೆಯುವಂತೆ ಮಾಡಿದ್ದಾರೆ. ಇವರ ಕೆಲಸಗಳು ಒಂದೇ ಎರಡೇ, ಬಹಳಷ್ಟಿವೆ. 

ಇವರ ತಂದೆ ಎಂ ವಿ ವೆಂಕಟರಮಪ್ಪ, ತಾಯಿ ಚಂದ್ರಮ್ಮ. ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲ ಘಟ್ಟ ಎಂಬ ಪುಟ್ಟ ಊರಿನಲ್ಲಿ ಡಿಸೆಂಬರ್ 03, 1975 ರಂದು ಜನಿಸಿದರು.  ಶಾಲಾ ಶಿಕ್ಷಣವನ್ನು ದೊಡ್ಡಬಳ್ಳಾಪುರದಲ್ಲಿ ಮುಗಿಸಿ, ಮೈಸೂರು ಯೂನಿವರ್ಸಿಟಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. 

ನೇಕಾರ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರಿಗೆ, ನೇಕಾರ ಕಷ್ಟ ನಷ್ಟಗಳ ಅರಿವಿದೆ. ಸೂಕ್ತ ಅವಕಾಶ, ರಾಜಕೀಯ ಸ್ಥಾನಮಾನ  ದೊರೆತರೆ ಮುಂದೊಂದು ದಿನ ಸಮಾಜದ ಮುಖಂಡರಾಗಿ ಕೆಲಸ ಮಾಡುವ ದಿನಗಳು ದೂರವಿಲ್ಲ.

ಚಂದನವನದಲ್ಲಿ ನಟ, ಗೀತ ರಚನೆಕಾರ, ಸಂಗೀತಗಾರ, ನಿರ್ದೇಶಕ, ಸಂಭಾಷಣೆಕಾರ.. ಹೀಗೆ ವಿಭಿನ್ನ ಜವಬ್ದಾರಿಗಳನ್ನ ಹೊತ್ತು ನಿಭಾಯಿಸಿ ಇಂದು ಕರ್ನಾಟಕದ ಕನ್ನಡಿಗರ ಹೃದಯಗೆದ್ದಿದ್ದಾರೆ. ಕನ್ನಡ ಚಲನಚಿತ್ರರಂಗ ಕಂಡ ಹೆಮ್ಮೆಯ ಗೀತರಚನೆಕಾರರಾದ ಇವರು ಬಹಳ ವರ್ಷದಿಂದ ಚಿತ್ರರಂಗದಲ್ಲಿ ಸಾಧನೆ ಮಾಡಿ ಕನ್ನಡದಲ್ಲಿ ಅದ್ಭುತ ಹಾಡುಗಳನ್ನು ರಚಿಸಿದ್ದಾರೆ.  1000 ಕ್ಕೂ ಹೆಚ್ಚಿನ ಚಿತ್ರಗಳಿಗೆ 3000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಶ್ರೀ ಮಂಜುನಾಥ, ಸ್ವಾತಿಮುತ್ತು, ಶಿವಲಿಂಗ ಸಿನಿಮಾ ಸೇರಿದಂತೆ 20 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಬಾಷಣೆ ಬರೆದಿದ್ದಾರೆ

‘ಗಾಜಿನ ಮನೆ’ ಚಿತ್ರದ ಮೂಲಕ 23 ವರ್ಷಗಳ ಹಿಂದೆ ಚಿತ್ರೋದ್ಯಮ ಪ್ರವೇಶಿಸಿದ ಡಾ. ನಾಗೇಂದ್ರ ಪ್ರಸಾದ್ ಅವರು ಚಂದನವನದಲ್ಲಿ ನಟ, ಗೀತ ರಚನೆಕಾರ, ಸಂಗೀತಗಾರ, ನಿರ್ದೇಶಕ, ಸಂಭಾಷಣೆಕಾರ.. ಹೀಗೆ ಇನ್ನೂ ನಾನಾ ಅವತಾರಗಳಲ್ಲಿ ಮಿಂಚಿ, ಕನ್ನಡಿಗರ ಹೃದಯಗೆದ್ದಿದ್ದಾರೆ.

ಮೊದಲು ಇವರು ಗುರುತಿಸಿಕೊಂಡಿದ್ದು ಸಂಗೀತ ಕ್ಷೇತ್ರದಲ್ಲಿ. ನಂತರ ಇವರು ಕಿಚ್ಚ ಸುದೀಪ್​ ಅಭಿನಯದ 'ನಲ್ಲ' ಸಿನಿಮಾ ಮೂಲಕ ನಿರ್ದೇಶನಕ್ಕೂ ಸೈ ಎಂದರು.

ಇವರು ಪೆನ್ ಹಿಡಿದರೆ ಸಾಕು ಅಲ್ಲೊಂದು ಅದ್ಭುತವಾದ ಹಾಡು ಹುಟ್ಟಿತೆಂದೇ ಅರ್ಥ. ಭಕ್ತಿಗೀತೆ, ಪ್ರಣಯಗೀತೆ ಎಲ್ಲಾ ರೀತಿ ಯ ಹಾಡುಗಳನ್ನು ರಚಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಗೀತ ರಚನೆ, ನಿರ್ದೇಶನ, ನಾಟಕ ರಚನೆ, ಸಂಭಾಷಣೆ ಎಲ್ಲದಕ್ಕೂ ಜೈ ಎನ್ನುವ  ಪ್ರತಿಭಾನ್ವಿತ. 

ಶ್ರೀ ಮಂಜುನಾಥ ಸಿನಿಮಾದ ’ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ.... ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ಹಾಡು ಎಲ್ಲರ ಮನೆಯ ಸುಪ್ರಭಾತ ಎಂದರೆ ತಪ್ಪಾಗಲಿಕ್ಕಿಲ್ಲ.  ಧಮ್ ಚಿತ್ರದ ’ ಈ ಟಚ್ಚಲಿ ಏನೋ ಇದೆ... ಎಂದು ಕಚಗುಳಿ ಇಟ್ಟರೆ, ಕರಿಯಾ ಚಿತ್ರದ ’ಕೆಂಚಾಲೋ ಮಂಚಾಲೋ...’ ಎಂದು ಹುಡುಗರ ಪಾಲಿನ ರಾಷ್ಟ್ರಗೀತೆಯನ್ನು ಬರೆಯುತ್ತಾರೆ. 

ಕುರುಕ್ಷೇತ್ರ ಚಿತ್ರದ  ಸಾಹೋರೆ ಹಾಡು. ಸ್ವಾತಿ ಮುತ್ತು ಚಿತ್ರದಲ್ಲಿ ’ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ... ಎಂದು ಲಾಲಿ ಹಾಡಿದ್ರೆ ಆಪ್ತಮಿತ್ರದಲ್ಲಿ ’ ಪಟಪಟ ಗಾಳಿಪಟ... ಎಂದು ಗಾಳಿ ಪಟ ಹಾರಿಸುತ್ತಾರೆ. ಇತ್ತೀಚಿಗೆ ಬಂದ ಕೆಜಿಎಫ್ -1 ರಲ್ಲಿ ಸಲಾಂ ರಾಕಿ ಭಾಯ್... ಎಂದು ಯಶ್ ಗೆ ಎಲ್ಲರೂ ಸಲಾಂ ಹೊಡೆಯುವಂತೆ ಮಾಡಿದರು. 

ಸಂಗೀತಕ್ಕೆ ಯಾವುದೇ ಹಂಗಿಲ್ಲ. ಹಾಗೇ ನಾಗೇಂದ್ರ ಪ್ರಸಾದ್ ಅವ್ರು ಇಂತದ್ದೇ ಹಾಡು ಅಂತ ಎಂದಿಗೂ ಫಿಕ್ಸ್ ಆದವರಲ್ಲ. ಕಮರ್ಷಿಯಲ್ ಹಾಡು ಎಂದಾಗ ಸಲಾಂ ರಾಕಿ ಬಾಯ್ ಅಂತಾರೆ. ಟಗರು ಬಂತು ಟಗರು ಹಾಗೂ ಕೋಟಿಗೊಬ್ಬ ಕೋಟಿಗೊಬ್ಬ ಟೈಟಲ್ ಸಾಂಗ್ ಕೂಡ ಇವ್ರ ಕೈನಲ್ಲೇ ಮೂಡಿರೋ ಹಾಡುಗಳು. ಇನ್ನೂ ಫೀಲಿಂಗ್ ಅಂದ ತಕ್ಷಣ ‘ಅಪ್ಪ ಐ ಲವ್ ಯು ಪಾ...’ ಅಂತ ಎಲ್ಲರ ಕಣ್ಣಲ್ಲಿ ನೀರು ತರಿಸುವಂತ ಸಾಹಿತ್ಯ ಬರೆದವರು ಇವರೇ. 

ಅದರ ಜೊತೆಯಲ್ಲಿ ಮನಸ್ಸಿನಲ್ಲೇ ಕೃಷ್ಣನ ನೆನೆಯುವ ‘ನೀನೇ ರಾಮ ನೀನೇ ಶಾಮ... ಅಂತನೂ ಬರೆದಿದ್ರು. ಪ್ರತಿ ವರ್ಷವೂ ಹಿಟ್ ಲೀಸ್ಟ್ ಸೇರುವಂತ ಹಾಡುಗಳು ಇವರ ಬತ್ತಳಿಕೆಯಿಂದ ಬರುತ್ತಲೇ ಇರುತ್ತವೆ. ಅದೇ ರೀತಿ ಇಂದಿಗೂ ಯುವ ಪ್ರೇಮಿಗಳನ್ನ ಕಾಡುವ ಹಾಡುಗಳು ಅಂದ್ರೆ ಶಾಂಕುತ್ಲೆ ಸಿಕ್ಕಳು...ಒಂದು ಮಳೆ ಬಿಲ್ಲು ..ಒಂದು ಮಳೆ ಮೋಡ ಹಾಡು. 

ಕಿರುತೆರೆಯಲ್ಲೂ ಮಿಂಚಿರುವ ಡಾ. ನಾಗೇಂದ್ರ ಪ್ರಸಾದ್ ಅವರದು ನಾಟಕ, ಬೀದಿ ನಾಟಕಗಳಲ್ಲೂ ಎತ್ತಿದ ಕೈ. ಸಾವಿರಾರು ಚಲನಚಿತ್ರಗಳಲ್ಲಿ 3,000ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಭಕ್ತಿಗೀತೆ, ದೇಶಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ, ಧಾರಾವಾಹಿ, ಆಲ್ಬಂಗಳಿಗೆ ಹಾಡು ಬರೆದಿದ್ದಾರೆ.

ಕೆ ವಿ ಜಯರಾಮ್ ನಿರ್ದೇಶನದ ಗಾಜಿನ ಮನೆ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಾಗೇಂದ್ರ ಪ್ರಸಾದ್ ಹಿಂತಿರುಗಿ ನೋಡಿದ್ದೇ ಇಲ್ಲ. ಇವರು ಮೊಟ್ಟ ಮೊದಲ ಬಾರಿಗೆ 'ಶಿಷ್ಯ' ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸಂಗೀತ ನಿರ್ದೇಶಕರಾದರು. 2018 ರಲ್ಲಿ ಅವರು ಗೂಗಲ್ ಚಿತ್ರದಲ್ಲಿ ಪ್ರಮುಖ ನಟನಾಗಿ ಪಾದಾರ್ಪಣೆ ಮಾಡಿದರು ಮತ್ತು ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಪಡೆದರು.

ಡಾ.ವಿ.ನಾಗೇಂದ್ರ ಪ್ರಸಾದ್ ಅವರು 1000 ಕ್ಕೂ ಹೆಚ್ಚು ಚಲನಚಿತ್ರಗಳು, 100 ರ ಭಕ್ತಿ, ಜಾನಪದ, ಶಾಸ್ತ್ರೀಯ, ದೇಶಭಕ್ತಿ, ಪ್ರಚಾರ ಆಲ್ಬಂಗಳು ಮತ್ತು 50 ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಿಗೆ 3000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ.  

ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 150 ಕ್ಕೂ ಹೆಚ್ಚು ಕನ್ನಡ ಸಿನೆಮಾ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. 

ಡಾ. ನಾಗೇಂದ್ರ ಪ್ರಸಾದ್ ಅವರು ಸ್ವಯಂಕೃಷಿಯಿಂದ ಆಯುರ್ವೇದ ವೈದ್ಯ ಪದ್ದತಿ ವ್ಯಾಸಂಗ ಮಾಡಿ, ಚಿತ್ರರಂಗಕ್ಕೆ ಬರುವ ಮುನ್ನ ಬೆಂಗಳೂರಿನ ಕುರುಬರಹಳ್ಳಿಯಲ್ಲಿ `ಭಾವನಾ ಆಯುರ್ವೇದಿಕ್ ಸೆಂಟರ್’ ನಡೆಸ್ತಾ ಇದ್ದರು. 1999 ರಲ್ಲಿ ಕೆ.ವಿ. ಜಯರಾಂ ನಿರ್ದೇಶನದ ‘ಗಾಜಿನ ಮನೆ’ ಚಿತ್ರಕ್ಕೆ `ಬೇವು ಬೆಲ್ಲ ಹಂಚಿಕೊಂಡೆ’ ಎಂಬ ಹಾಡು ಬರೆಯುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 

ಸದ್ಯ ವಿ ನಾಗೇಂದ್ರ ಪ್ರಸಾದ್ ಅವ್ರ ಕುರುಕ್ಷೇತ್ರದ ಹಾಡುಗಳು ಸಖತ್ ಸೌಂಡ್ ಮಾಡ್ತಿದೆ. ಸಾಹೋರೆ ಅಂತ ದುರ್ಯೋಧನನ ಪೌರುಷವನ್ನ ವರ್ಣಿಸೋ ಹಾಡು ಕಳೆದ ವಾರ ಬಿಡುಗಡೆ ಆಗಿದ್ದು ಈಗ 'ಜಾರು ತಂತಿ ನಿಮ್ಮ ಭುಜವು.. ಹಾಡು ಎಲ್ಲರ ಮನಸ್ಸು ಕದ್ದಿದೆ. ಈ ಮೂಲಕ ಸಾಕಷ್ಟು ವರ್ಷಗಳ ನಂತರ ಪೌರಾಣಿಕ ಹಾಡನ್ನು ಕೇಳುವ ಸದಾವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. 

ಅವರು 20 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 2 ಟೆಲಿವಿಷನ್ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ

ಶ್ರೀ ಮಂಜುನಾಥ ಸಿನಿಮಾದ ’ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ....

ಧಮ್ ಚಿತ್ರದ ’ ಈ ಟಚ್ಚಲಿ ಏನೋ ಇದೆ..

ಕರಿಯಾ ಚಿತ್ರದ ’ಕೆಂಚಾಲೋ ಮಂಚಾಲೋ

*ಸ್ವಾತಿಮುತ್ತು ಚಿತ್ರದಲ್ಲಿ ’ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ... *

*ಆಪ್ತಮಿತ್ರದಲ್ಲಿ ’ ಪಟಪಟ ಗಾಳಿಪಟ... *

*ಕೆಜಿಎಫ್ -1 ರಲ್ಲಿ ಸಲಾಂ ರಾಕಿ ಭಾಯ್... *

*ಚೌಕ ಚಿತ್ರದ.... ಅಪ್ಪ ಐ ಲವ್ ಯು ಪಾ...’ ಅಂತ ಎಲ್ಲರ ಕಣ್ಣಲ್ಲಿ ನೀರು ತರಿಸುವಂತ ಸಾಹಿತ್ಯ ಬರೆದವರು ಇವರೇ. *

ಚಿತ್ರನಿರ್ದೇಶನ:- 

ಅಷ್ಟೇ ಅಲ್ಲದೆ, ಚಿತ್ರನಿರ್ದೇಶಕನಾಗಿ ಹಲವಾರು ಚಿತ್ರ ಗಳನ್ನ ಸಹ ನಿರ್ದೇಶಿಸಿದ್ದಾರೆ. 

ಸುದೀಪ್ ಅಭಿನಯದ ನಲ್ಲಾ(2004),

ಆದಿತ್ಯ ಅಭಿನಯದ ಅಂಬಿ(2006),

ಮೇಘವೆ ಮೇಘವೆ(2009)

ವಿಜಯ್ ರಾಘವೇಂದ್ರ, ನವೀನ್ ಕೃಷ್ಣ ಅಭಿನಯದ ವಿನಾಯಕ ಗೆಳೆಯರ ಬಳಗ(2011)

ಶುಭ ಪೂಂಜ ಅಭಿನಯದ ಗೂಗಲ್ (ಚಲನಚಿತ್ರ)



ನಾಟಕ :-

ಡಾ. ವಿ. ನಾಗೇಂದ್ರ ಪ್ರಸಾದ್ ಅವರು  ನಾಲ್ಕು ರಂಗ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ. ಅವರು ಹತ್ತು ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಆಕಾಶವಾಣಿಗಾಗಿ ಅವರು 15 ರೇಡಿಯೋ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.

ಬೋಧನೆ:-

ವಿ.ನಾಗೇಂದ್ರ ಪ್ರಸಾದ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಅಸೆಕ್ಷನ್ ಚಲನಚಿತ್ರ ಸಂಸ್ಥೆಯ ಕಾರ್ಯದರ್ಶಿಯಾಗಿ ಚಲನಚಿತ್ರ ನಿರ್ದೇಶನದಲ್ಲಿ ತರಬೇತಿ ಕೋರ್ಸ್‌ಗಳನ್ನು ನಡೆಸುತ್ತಾರೆ. ವಿಜಯಾ ಫಿಲ್ಮ್ ಇನ್ಸ್ಟಿಟ್ಯೂಟ್, ಶ್ರುತಿ ಫಿಲ್ಮ್ ಇನ್ಸ್ಟಿಟ್ಯೂಟ್ ಮತ್ತು ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಷನ್ ಇತರ ಸಂಸ್ಥೆಗಳಲ್ಲಿ ಅತಿಥಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೂರಾರು ಪ್ರಶಸ್ತಿಗಳು ಮತ್ತು ಬಿರುದುಗಳನ್ನ ಅಭಿಮಾನಿಗಳಿಂದ ಪಡೆದಿದ್ದಾರೆ.

ವಿ.ನಾಗೇಂದ್ರ ಪ್ರಸಾದ್ ಸತತ ಎರಡನೇ ಬಾರಿಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾವು ಮಾಡಿದ ಸಾಧನೆ ಅಥವಾ ತಮ್ಮ ಕೊಡುಗೆ ಗುರುತಿಸಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವ ಉದಾಹರಣೆಗಳಿವೆ.

ಆದರೆ, ಶ್ರೀ ನಾಗೇಂದ್ರ ಪ್ರಸಾದ್ ಅವರು ವಿದ್ಯಾರ್ಥಿಯಂತೆ ಸಂಶೋಧನೆ ನಡೆಸಿ ಮಹಾಪ್ರಬಂಧ ರಚಿಸಿ ಅದಕ್ಕೆ ಪದವಿ ಪಡೆದಿರುವುದು ನಿಜಕ್ಕೂ ಶ್ಲಾಘನೀಯ.

‘ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ’ ಎಂಬ ವಿಷಯ ಕುರಿತು ಸಂಶೋಧನೆ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿ. ನಾಗೇಂದ್ರ ಪ್ರಸಾದ್ ಸಲ್ಲಿಸಿದ್ರು.  ಅವರ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ತನ್ನ 29ನೇ ಘಟಿಕೋತ್ಸವದಲ್ಲಿ ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿ ನೀಡಿದೆ.



ಬರಹ:- ಪಿ.ಎಸ್.ರಂಗನಾಥ 

ಲೇಖಕರು ಮತ್ತು ಭಾರತೀಯ ಸಾಮಾಜಿಕ ವೇದಿಕೆಯ ಮಾಜಿ ಕಾರ್ಯದರ್ಶಿಗಳು.

ಒಮಾನ್ ರಾಷ್ಟ್ರ - ಮಸ್ಕತ್

Saturday, July 9, 2022

ಶಾತವಾಹನರ ಕಾಲದಲ್ಲಿ ಪದ್ಮಶಾಲಿಗಳ ಕೊಡುಗೆ

ಶಾತವಾಹನರ ಕಾಲದಲ್ಲಿ ಪದ್ಮಶಾಲಿಗಳ ಕೊಡುಗೆ

"ಪದ್ಮ ಪುಪ್ಪ" (ಕಮಲ) ದೇವತೆಗಳಿಗೆ ಅತಿ ಹೆಚ್ಚು ಪ್ರಿಯವಾದದ್ದು, ಮುಖ್ಯವಾಗಿ ಶ್ರೀ ಲಕ್ಷ್ಮೀನಾರಾಯಣರ ಕೈಯಲ್ಲಿ ಪದ್ಮವನ್ನ ಹಿಡಿದು ಕೊಂಡಿರುವುದು, ಪದ್ಮವನ್ನ ಪೀಠವಾಗಿಸಿ ಕೊಂಡಿರುವುದು ನಾವು ಕಾಣ ಬಹುದು.  ಇಂತಹ ಶ್ರೇಷ್ಠ ಪದ್ಮ ಪುಷ್ಪದ (ಕಮಲ) ನಾರಿನಿಂದಾದ ವಸ್ತ್ರ ತಯಾರಿಸಿ ಶ್ರೀ ಮನ್ನಾರಾಯಣನಿಗೆ ಸಮರ್ಪಿಸಿದ್ದು ಭಾವನಾಋಷಿ. ಸ್ವರ್ಣ ತಂತುಗಳ ಬಳಸಿ ಕಮಲದ ನಾರಿನಿಂದಾದ ನೈಸರ್ಗಿಕ ಪವಿತ್ರ ಮಡಿವಸ್ತ್ರ ಕಂಡು ಶ್ರೀಮನ್ನಾರಾಯಣನು ಮೆಚ್ಚಿ ಭಾವನಾ ಮಹರ್ಷಿಗೇ ಪದ್ಮಶಾಲಿ ಎಂದು ಬಿರುದು ನೀಡಿ ಗೌರವಿಸುತ್ತಾರೆ.  ಪದ್ಮಶಾಲಿ ಎಂದರೆ ಏನು ಎನ್ನುವ ಅರ್ಥ ಹಲವರಿಗೆ ಗೊತ್ತಿರಲಿಕ್ಕಿಲ್ಲ.  *ಪದ್ಮ* ಎಂದರೆ ಉತ್ತಮ ಜ್ಞಾನ, ಉಚ್ಛಸ್ಥಾನ, ಶ್ರೇಷ್ಠತೆ, ಉನ್ನತ ಜ್ಞಾನ, ಬಹೋತ್ತಮ, ಪವಿತ್ರತೆ & ವರ್ಣಿಸಲಾಗದ್ದು ಇತ್ಯಾದಿ. *ಶಾಲಿ* ಉಳ್ಳವರು, ಹೋಂದಿದವ, ಇರುವವ, ಬಲಿಷ್ಠನು, ಸಂಸ್ಕಾರವಂತನು & ಇತ್ಯಾದಿ.

ಉದಾಹರಣೆಗೆ : ಶಕ್ತಿಶಾಲಿ - ಶಕ್ತಿ ಉಳ್ಳವ, ದೈರ್ಯಶಾಲಿ - ದೈರ್ಯ ಉಳ್ಳವ, ಬುದ್ಧಿಶಾಲಿ - ಬುದ್ಧಿ ಉಳ್ಳವ, ಹೀಗೆ ಪದ್ಮಶಾಲಿ - ಉನ್ನತ ಜ್ಞಾನ ಉಳ್ಳವ (ಬ್ರಾಹ್ಮಣ). ಇಂತಹ ಮಹಾನ್ ಬಿರುದು ಪಡೆದ ಶ್ರೀ ಭಾವನಾ ಮಹರ್ಷಿಯ ಕೀರ್ತಿ ಹೆಚ್ಚಾಗಿ ಅವರ ಸಂತತಿ ನೂರಾವೊಂದು  ಪುತ್ರರೊಂದಿಗೆ ಪ್ರಾರಂಭಗೊಂಡು ಇಂದು ಭಾರತದಾದ್ಯಂತ ಲಕ್ಷಾಂತರ ಜನರ ಪದ್ಮಶಾಲಿ ಸಮಾಜವಾಗಿ ಪರಿವರ್ತನೆ ಯಾಗಿದೆ. ಪದ್ಮಶಾಲಿಗರ ಮೂಲ ವೃತ್ತಿ  ಪುರೋಹಿತ್ಯ ಪರಂಪರೆ ನಂತರದ್ದು ಕಮಲದ ನಾರಿನಿಂದಾದ ಮಡಿವಸ್ತ್ರ ತಯಾರಿಕೆ ವೃತ್ತಿ. ಪದ್ಮಶಾಲಿಗಳ ಮೂಲ ಪುರುಷ ಶ್ರೀ ಭೃಗು ಮಹರ್ಷಿಯವರ ಆದಿಯಿಂದ ಮಾರ್ಕಂಡೇಯ ಮಹರ್ಷಿವರೆಗೂ ಹಲವಾರು ಪೌರೋಹಿತ್ಯ ಕಾರ್ಯಕ್ರಮಗಳನ್ನ ನಡೆಸಿರುವುದನ್ನ ನಾವು ಪುರಾಣಗಳಲ್ಲಿ ಕೇಳಿರಬಹುದು. ಆದ್ದರಿಂದ ಇಂದಿಗೂ ಸಾವಿರಾರು ಜನರು ಪೌರೋಹಿತ್ಯ ನಡೆಸುತ್ತಾ ಬಂದಿದ್ದಾರೆ. ಭಾವನಾಋಷಿಯು ಮಡಿವಸ್ತ್ರ ಮತ್ತು ಪವಿತ್ರವಾದ ಯಜ್ನೋಪವೀತ ತಯಾರಿಸಿದ್ದರಿಂದ ಆ ನೇಯ್ಗೆ ವೃತ್ತಿಯನ್ನು ಸಮಾಜಸ್ಥರು ಇಂದಿಗೂ ಸಹ ಮುಂದುವರಿಸಿ  ವಸ್ತ್ರ ತಯಾರಿಕೆಯಲ್ಲಿ ನಿಪುಣರಾಗಿ ಜೀವನ ನಡೆಸುತಿದ್ದಾರೆ. 

ನೂರಾವೊಂದು ಗೋತ್ರವಿರುವ ಪದ್ಮಶಾಲಿಗಳು ವಂಶವೃಕ್ಷದ ಮೂಲಕ ಇಂದಿಗೂ ತಮ್ಮ ಮೂಲವನ್ನು ಗುರುತಿಸಿಟ್ಟುಕೊಂಡಿದ್ದಾರೆ. ಬಹುಶಃ ಇಂತಹ ವಿಶಿಷ್ಟ ವಂಶವೃಕ್ಷವನ್ನು ಪದ್ಮಶಾಲಿಗಳಲ್ಲಿ ಕಾಣಬಹುದು.

ಪುರಾಣಗಳ ಪ್ರಕಾರ ಪದ್ಮಶಾಲಿಗಳ ಇತಿಹಾಸ ಸುಮಾರು ಸಾವಿರಾರು ವರ್ಷಗಳ ಹಿಂದಿನದ್ದು. ಮಾರ್ಕಂಡೇಯ ಪುರಾಣದಲ್ಲಿ ಮಾರ್ಕಂಡೇಯ ಋಷಿಮುನಿಗಳ ಪುತ್ರ ಶ್ರೀ ಭಾವನಾ ಋಷಿ ಅಥವಾ ವೇದಶೀರ್ಷ ಅಥವ ಭಾವನಾರಾಯಣ ಉಲ್ಲೇಖವಿದೆ. . ಪದ್ಮಶಾಲಿಗಳ ಕುರಿತ ಹಲವಾರು ಉಲ್ಲೇಖಗಳು ಪಕ್ಕದ ತೆಲುಗುರಾಷ್ಟ್ರಗಳಲ್ಲಿ ಲಭ್ಯವಿದ್ದು, ಪುರಾಣಗಳು, ಜನಪದ ಕಥೆಗಳು, ತಾಳೇಗರಿಗಳು, ತಾಮ್ರದ ಶಾಸನಗಳು, ಶಿಲಾ ಶಾಸನಗಳು ಹೀಗೆ ಹಲವಾರು ವಿಧದಲ್ಲಿ ಪದ್ಮಶಾಲಿಗಳ ಕುರಿತು ಮಾಹಿತಿಯಿದೆ.  ಪದ್ಮಶಾಲಿಗಳು ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ನೆಲೆಗೊಂಡಿರುವಂತೆ  ತೆಲುಗುರಾಜ್ಯ ಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ.

 

ಪದ್ಮಶಾಲಿ ವಂಶದ ಮಾಹಿತಿ ಭಾವನಾಮಹರ್ಷಿ ಅಥವ ಪದ್ಮ ಕುಲ ಪುರಾಣದಲ್ಲಿ ಸವಿವರವಾಗಿದೆ, ಈ ಪುರಾಣ ಕಥೆಯನ್ನು ಮುಂಬರುವ ಪೀಳಿಗೆಗೆ ಕುಲದ ಬಗ್ಗೆ ಮಾಹಿತಿ ಇರಲಿ ಎನ್ನುವ ಉದ್ದೇಶದಿಂದ  ಪದ್ಮಶಾಲಿಯವರ ಆಶ್ರಿತಕುಲವಾದ ಕೂನಪುಲಿಯವರು ತೆಲುಗು ರಾಷ್ಟ್ರಗಳಲ್ಲಿ ಪಟದ ಕಥೆಯಂತೆ (ಬಟ್ಟೆಯ ಮೇಲೆ ಚಿತ್ರಗಳ ಮೂಲಕ ತೋರಿಸುವುದು) ಪುರಾಣ ಪ್ರವಚನದಂತೆ ಹೇಳುತ್ತಾ ಇಂದಿಗೂ ಪದ್ಮಶಾಲಿ ಕುಲದ ಮಾಹಿತಿಯನ್ನು ಮನೆಮನೆಗೂ ತಲುಪಿಸುತಿದ್ದಾರೆ. ದೇಶದೆಲ್ಲೆಡೆ ಪ್ರತಿ ವರ್ಷ ಆಚರಿಸುವ ಶ್ರೀ ಭಾವನಾ ಋಷಿ ಮತ್ತು ಶ್ರೀಮತಿ ಭದ್ರಾವತಿ ಕಲ್ಯಾಣೋತ್ಸವ ಸಂಧರ್ಭದಲ್ಲಿ ಕುಲಪುರಾಣದ ಕಥೆಯನ್ನ ಹಲವೆಡೆ ಹೇಳಲಾಗುತ್ತದೆ.

ಪದ್ಮಶಾಲಿಗಳ ಆಶ್ರಿತ ಮತ್ತೊಂದು ಪಂಗಡವಾದ ತೆಲಂಗಾಣದ ಸಾಧನಾಶೂರರು ಸಹ ಹಲವಾರು ಶತಮಾನಗಳಿಂದ ಪದ್ಮಶಾಲಿ ಕುಲ ಪುರಾಣದ ಕಥೆಯನ್ನು ಹೇಳುತ್ತಾ ಬಂದಿದ್ದಾರೆ.

ಸುಮಾರು ಹನ್ನೊಂದನೆ ಶತಮಾನದಿಂದಲೂ ಪದ್ಮಶಾಲಿಗಳ ಮತ್ತು ಭಾವನಾ ಋಷಿಯ ಕುರಿತ ಮಾಹಿತಿಯನ್ನ ತೆಲುಗಿನ ಹಲವಾರು ಸಾಹಿತ್ಯಗ್ರಂಥಗಳಲ್ಲಿ ಉಲ್ಲೇಖಿಸುತ್ತಾ ಬಂದಿದ್ದಾರೆ.  ಇತ್ತೀಚೆಗೆ ದೊರೆತ ಶಾಸನವೊಂದರ ಆಧಾರದ ಮೇಲೆ ತಿರುಪತಿ ತಿರುಮಲ ದೇವಸ್ಥಾನದವರು ಸಿರಿ ಕೋಲುವು ಎನ್ನುವ ಪುಸ್ತಕ ಪ್ರಕಟಿಸಿ, ಅದರಲ್ಲಿ ಶ್ರೀ ಪದ್ಮಾವತಿ ದೇವಿ ಪದ್ಮಶಾಲಿಯವರ ಮನೆಮಗಳು ಎಂದು ಆರು ಶತಮಾನಗಳ ಹಿಂದೆ ನಡೆದ ಒಂದು ಘಟನಾವಳಿಯನ್ನ ಉಲ್ಲೇಖಿಸಿದ್ದಾರೆ. ಈ ಎಲ್ಲಾ ದಾಖಲೆಗಳು ಸಮಾಜದ ಹಿರಿಮೆಯನ್ನು ಹೆಚ್ಚಿಸುತ್ತಾ ಬಂದಿದೆ.  ತಿರುಪತಿ, ಶ್ರೀರಂಗಂ, ಅಹೋಬಿಲಂ, ತಿರುಚಾನೂರ್, ನಾರಾಯಣವನಂ, ಶ್ರೀನಿವಾಸ ಮಂಗಾಪುರಂ, ಜಮ್ಮಲಮಡುಗು ಮಂಗಳಗಿರಿ ಮುಂತಾದ 108  ವೈಷ್ಣವ ಕ್ಷೇತ್ರಗಳಲ್ಲಿ ಪದ್ಮಶಾಲಿಗಳೇ ವಸ್ತ್ರಾಭರಣವನ್ನು, ಅರಿಶಿಣ ಕುಂಕುಮ ಕೊಡುತ್ತಾ ಬಂದಿದ್ದಾರೆ.


ಮೌರ್ಯರ ಪತನದ ನಂತರ ಸ್ವತಂತ್ರ ರಾಗಿ ಭಾರತ ರಾಷ್ಟ್ರವನ್ನ ಆಳಿದ ಮಹಾನ್ ರಾಜ ವಂಶ ಶಾತವಾಹನರು, ನಾಲ್ಕು ವರೆ ಶತಮಾನಗಳ ( ಕ್ರಿ.ಪೂ. ೨೩೦ ರಿಂದ ) ಕಾಲ ಆಳಿದ ಸದೃಢ ಸಾಮ್ರಾಜ್ಯ. ಸಾಮ್ರಾಜ್ಯದ ವ್ಯಾಪ್ತಿ , ಪಶ್ಚಿಮದ ಕೊಂಕಣದಿಂದ, ಪೂರ್ವದ ಕೃಷ್ಣೆ ಮತ್ತು ಗೋದಾವರಿಯ ಡೆಲ್ಟಾದ ವರೆಗೂ. ಹಾಗೂ ದಕ್ಷಿಣದ ಕಡೆಗೆ ಚಂದ್ರಾವಳಿ ವರೆಗೂ ಹರಡಿತ್ತು. ಮಧ್ಯ ಏಷ್ಯಾದಿಂದ ಆಕ್ರಮಣಗಳನ್ನ ತಡೆದು ಕೊಂಡು ಎಂದೂ ಸೋಲದೆ, ದೊಡ್ಡ ಮತ್ತು ಪ್ರಬಲ ಸಾಮ್ರಾಜ್ಯದ ಆಳ್ವಿಕೆ ಮಾಡಿದವರು. ಅವರ ಸಮಯದಲ್ಲಿ ದೇಶದಲ್ಲಿ ಪರಕೀಯರ ಪ್ರವೇಶವಾಗಿರಲಿಲ್ಲ. ದೇಶದ ಆರ್ಥಿಕತೆ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲ. ಸನಾತನದ ಧರ್ಮದ ಪೋಷಕರಾಗಿದ್ದ ಅವರು ದಕ್ಷ ಆಡಳಿತಗಾರರು. ಕಲೆ, ಸಾಹಿತ್ಯ, ಧರ್ಮಗಳ ಪೋಷಕರಾಗಿ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಮೊದಲಿಗೆ ಸಾಂಸ್ಕೃತಿಕ ಐಕ್ಯತೆಯನ್ನು ತಂದು ಬೃಹತ್ ಭಾರತಕ್ಕೆ ತಳಹದಿ ಹಾಕಿದ್ದ ರಾಜ ಮನೆತನ ಅದು.  ಅವರ ಆ ಶ್ರೀಮಂತಿಕೆಗೆ ಬೆಂಬಲವಾಗಿ ನಿಂತ ಎಲ್ಲಾ ಕುಲದವರನ್ನೂ ಅವರು ವಿಶೇಷವಾಗಿ ಗೌರವಿಸುತಿದ್ದರು. ಮಹಾರಾಷ್ಟ್ರದ ನಾಸಿಕ್ ನಲ್ಲಿ ದೊರೆತಿರುವ ಶಾತವಾಹನರ ಸಾಮ್ರಾಟ ರಿಷಭದತ್ತ ಕೆತ್ತಿಸಿದ ಒಂದು ಶಿಲಾಶಾಸನದಲ್ಲಿ ಈ ಕುರಿತು ಮಾಹಿತಿಯಿದೆ. ಅದರಲ್ಲಿ ನೇಕಾರಿಕೆ ಮಾಡುತಿದ್ದ ಪದ್ಮಶಾಲಿಗಳನ್ನ ಹೆಸರಿಸಿದ್ದಾನೆ. ಈ ಶಿಲಾಶಾಸನ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಸಾಮ್ರಾಜ್ಯದ ಶ್ರೀಮಂತಿಕೆಗೆ ಬೆಂಬಲವಾಗಿ ನಿಂತಿರುವ ಎಲ್ಲ ಕಸುಬುದಾರರಿಗೆ ಕೃತಜ್ನತೆ ಸೂಚಿಸುವ ಈ ಶಾಸನ, ಎರಡು ಸಾವಿರ ವರ್ಷಗಳ ಹಿಂದಿನ ಇತಿಹಾಸಕ್ಕೆ ನಮ್ಮನ್ನು ಒಮ್ಮೆ ಒಳ ಹೊಕ್ಕಿ ನೋಡುವಂತೆ ಮಾಡುತ್ತದೆ. ಮೇಲೆ ತಿಳಿಸಿದ ಹಲವಾರು ವಿಷಯಗಳ ಕಾರಣಗಳಿಂದ ಪದ್ಮಶಾಲಿ ಸಮಾಜ ಸಾವಿರಾರು ವರ್ಷಗಳ ಹಿಂದೆಯೇ ರೂಪುಗೊಂಡಿದೆ ಎಂದು ಹೇಳಲು ನಮಗೆಲ್ಲ ಹೆಮ್ಮೆಯೆನಿಸುತ್ತದೆ.

  

ಬರಹ:-

ಪಿ.ಎಸ್.ರಂಗನಾಥ

ಲೇಖಕರು ಮತ್ತು ಭಾರತೀಯ ಸಾಮಾಜಿಕ ವೇದಿಕೆಯ ಮಾಜಿ ಕಾರ್ಯದರ್ಶಿಗಳು.

ಒಮಾನ್ ರಾಷ್ಟ್ರ - ಮಸ್ಕತ್

Saturday, June 25, 2022

ಪದ್ಮಶಾಲಿಕುಲ ಆಶ್ರಯಿತ ಸಾಧನಾಶೂರರು ಎನ್ನುವ ಅಪೂರ್ವ ಜಾನಪದ ಕಲಾವಿದರು

ನಮ್ಮ ಕರ್ನಾಟಕದ ಪದ್ಮಶಾಲಿ ಸಮಾಜದ ಯುವ ಪೀಳಿಗೆಗೆ ಅರಿವು ಮೂಡಿಸುವ ಸಲುವಾಗಿ ಹಿಂದೊಮ್ಮೆ ಕೂನಪುಲಿಯವರ (ಪಗಡರಾಜು, ಪೊಗಡ ರಾಜು) ಬಗ್ಗೆ ಬರೆದಿದ್ದೆ. ಈ ಬಾರಿ "ಸಾಧನಾಶೂರುಲು" ರವರ ಬಗ್ಗೆ ಜನರಿಗೆ  ಮಾಹಿತಿ ಕೊಡಲು ಪ್ರಯತ್ನಿಸಿದ್ದೇನೆ.

ಬರಹ:- ಪಿ.ಎಸ್.ರಂಗನಾಥ.

ಲೇಖಕರು ಮತ್ತು ಭಾರತೀಯ ಸಾಮಾಜಿಕ ವೇದಿಕೆಯ ಮಾಜಿ ಕಾರ್ಯದರ್ಶಿ.

ಒಮಾನ್ ರಾಷ್ಟ್ರ - ಮಸ್ಕತ್

ತೆಲಂಗಾಣ ಪ್ರಾಂತ್ಯದಲ್ಲಿ ಕೆಲವೊಂದು ಜಾತಿ ಅವಲಂಬಿತ ಜಾನಪದ ಕಲೆಯನ್ನು ಪ್ರದರ್ಶಿಸುವ ಹಲವಾರು ಪಂಗಡಗಳಿವೆ. ಅವರಲ್ಲಿ ಪದ್ಮಶಾಲಿ ಸಮಾಜವನ್ನ ಆಶ್ರಯಿಸಿ ಜೀವನ ನಡೆಸುವ ಎರಡು ಪಂಗಡಗಳಿವೆ. ಒಂದು ಕೂನಪುಲಿ/ಪೊಗಡರಾಜು/ಪಗಡರಾಜು ಮತ್ತೊಂದು ಸಾಧನಾಶೂರರು. ಪದ್ಮಶಾಲಿಗಳ ಕುಲದೈವವಾದ ಭಾವನಋಷಿಯ ಬೆವರಿನಿಂದ ಹುಟ್ಟಿ ಕಾಲುವಾಸುರನ ಹೋರಾಟದಲ್ಲಿ ಭಾವನಋಷಿಯನ್ನು ರಕ್ಷಿಸಿದ ಕೂನಪುಲಿಗಳು. ಅದೇ ರೀತಿ ಸಾಧನಾಸುರರು ಸಹ ಪದ್ಮಶಾಲಿಗಳನ್ನ ಶ್ರೀಕೃಷ್ಣ ಗಂಧರ್ವರಾಜು ಅವರಿಂದ ವಂಶವನ್ನು ರಕ್ಷಿಸಿದ್ದಕ್ಕಾಗಿ  ಪದ್ಮಶಾಲಿಗಳ ಮೇಲೆ ಅವಲಂಬಿತರಾದರು. ಈ ಪ್ರಕಾರದ ಅವಲಂಬಿತ ಜನಪದ ಕಥೆಗಳು ಮೌಖಿಕವಾಗಿ ತೆಲಂಗಾಣದಲ್ಲಿ ವ್ಯಾಪಕವಾಗಿ ಹರಡಿವೆ. ಈ ಕಥೆಗಳಾಗಲಿ ಈ ಅವಲಂಬಿತ ಕುಟುಂಬಗಳಾಗಲಿ ನಿನ್ನೆ ಮೊನ್ನೆಯಿಂದ ಹುಟ್ಟಿಕೊಂಡಿರುವುದಲ್ಲ. ಇವರ ಕುರಿತ ಮಾಹಿತಿಗಳು 9 ರಿಂದ 11ನೇ ಶತಮಾನದ ತೆಲುಗಿನ ಹಲವಾರು ಸಾಹಿತ್ಯ ಪ್ರಾಕಾರಗಳಲ್ಲಿ ದಾಖಲಾಗಿವೆ. ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ನಲ್ಲಿ  ಕೂನಪುಲಿ ಮತ್ತು ಸಾಧನಾಶೂರರ ಕುರಿತ ಹಲವಾರು ವೀಡಿಯೋಗಳು ಲಭ್ಯವಿದೆ.

 ತೆಲಂಗಾಣ ರಾಜ್ಯದ "ಸಾಧನಾಶೂರುಲು" ಸಮಾಜದವರು ಇಂದ್ರಜಾಲವನ್ನು ಪ್ರದರ್ಶಿಸುವವರು. ಪದ್ಮಶಾಲಿ ಸಮಾಜವನ್ನು ಆಶ್ರಯಿಸಿ  ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಅಲೆದಾಡುವ ಅವರು ಪ್ರತಿ ಹಳ್ಳಿಯ ಪದ್ಮಶಾಲಿಗಳ ಅನುಮತಿಯೊಂದಿಗೆ ಊರಿನ ಎಲ್ಲ ಜನರಿಗಾಗಿ ಇಂದ್ರ ಜಾಲವಿದ್ಯೆಯ ಪ್ರದರ್ಶನ  ನೀಡುತ್ತಾರೆ.  ಇವರು ನೀಡುವ ಪ್ರದರ್ಶನವನ್ನ ಗ್ರಾಮ್ಯ ಭಾಷೆಯಲ್ಲಿ ಕಣಿಕಟ್ಟು ಅಂತಲೂ ಕರೆಯುತ್ತಾರೆ. ಪದ್ಮಶಾಲಿಗಳನ್ನು ಆರಾಧಿಸುವವರನ್ನ ಮಾತ್ರ ಸಾಧನಾ ಶೂರರು ಎಂದು ಕರೆಯಲಾಗುತ್ತದೆ. ಸಾಧನೆಯಲ್ಲಿ ಯಾರಿಗೂ ಕಮ್ಮಿಯಿಲ್ಲ ಎನ್ನುವ ಅರ್ಥದಲ್ಲಿ, ಇವರನ್ನೂ ಇನ್ನೊಂದು ರೀತಿಯಲ್ಲಿ ಸಾಧನಾಸುರುಲು ಎಂದು ಸಹ ಕರೆಯುತ್ತಾರೆ. ಅಂದರೆ, ಸಾಧನ+ಅಸುರರು.

ಈ ಕಲಾವಿದರು, ಕಣ್ಣಿಗೆ ಕಾಣುವ ವಸ್ತುವನ್ನು ಮಾಯ ಮಾಡಿ ಅದರ ಜಾಗದಲ್ಲಿ ಇನ್ನೊಂದು ವಸ್ತುವನ್ನು ಸೃಷ್ಟಿಸಿ, ಪ್ರೇಕ್ಷಕರನ್ನು ರಂಜಿಸುವುದು, ಪ್ರೇಕ್ಷಕರನ್ನ ಕಾರ್ಯಕ್ರಮದ ಭಾಗವಾಗಿಸಿ, ಅವರೊಂದಿಗೆ ಅಚ್ಚರಿ ಮೂಡಿಸುವ ಕೆಲಸಗಳನ್ನು ಮಾಡಿ, ಮಾಟ ಮಂತ್ರಗಳಿವೆ ಎಂದು ಜನರಲ್ಲಿ ಭ್ರಮೆ ಉಂಟು ಮಾಡುವುದರಲ್ಲಿ ಇವರು ನಿಪುಣರು. ಇವರ ಕುರಿತ ಉಲ್ಲೇಖ ತೆಲುಗಿನ ಕೆಲ ಪ್ರಸಿದ್ಧ ಕಾವ್ಯಗಳಲ್ಲಿ ದಾಖಲಾಗಿದೆ.

ಮಲ್ಲವಿದ್ಯೆ ಯಲ್ಲಿ ಪರಿಣಿತಿ ಪಡೆದು ಧೈರ್ಯದಿಂದ, ಶಕ್ತಿ ಬಲದಿಂದ ಶತ್ರುಗಳನ್ನ ಹಿಮ್ಮೆಟ್ಟಿಸುವವರು ಎನ್ನುವ ಅರ್ಥದಲ್ಲಿ ತೆಲುಗಿನಲ್ಲಿ ಸಾಧನಾಶೂರುಲು ಎನ್ನುವ ಹೆಸರು ಚಾಲ್ತಿಯಲ್ಲಿದೆ.  ನಿಜಾರ್ಥದಲ್ಲಿ ಇವರು ಬಹು ಧೈರ್ಯವಂತರು, ಆಗಿನಕಾಲದಲ್ಲಿ ಪದ್ಮಶಾಲಿ ಜನಾಂಗವನ್ನು ರಕ್ಷಿಸುವುದಕ್ಕೊಸ್ಕರ ಧೈರ್ಯ, ಶೌರ್ಯದಿಂದ ಹೋರಾಡಿ ಪದ್ಮಶಾಲಿಗಳನ್ನ ಹಿಂಸಿಸಿದ ರಾಜನೊಬ್ಬನನ್ನ ಸಂಹರಿಸಿದ ಕಾರಣಕ್ಕಾಗಿ ಅಂದಿನ ಪದ್ಮಶಾಲಿಗಳು ಇವರಿಗೆ ಸಾಧನಾ ಶೂರರು ಎನ್ನುವ ಬಿರುದು ಕೊಟ್ಟಿದ್ದರು. ಈ ಸಾಧನಾ ಶೂರರು ತಮಗೆ ಹೆಸರು ಹೇಗೆ ಬಂತು ಅಂತ ಒಂದು  ಕಥೆಯ ಮುಖಾಂತರ ವಿವರಿಸುತ್ತಾರೆ.

ತುಂಬಾ ವರ್ಷಗಳ ಹಿಂದೆ ತೆಲಂಗಾಣ ಪ್ರಾಂತ್ಯದಲ್ಲಿ, ಶ್ರೀ ಕೃಷ್ಣ ಗಂಧರ್ವರಾಜು ಎನ್ನುವ ಆಡಳಿತಗಾರ ಪೊಟ್ಲು ಚೆರುವು ಎನ್ನುವಲ್ಲಿ ಸುಮಾರು ಐವತ್ತಾರು ಪಾಳ್ಯಗಳಿಗೆ ರಾಜನಾಗಿ ಆಡಳಿತ ನಡೆಸುತಿದ್ದ. ತನಗೆ ಯಾರಿಂದಲೂ ಮರಣ ಬರಬಾರದು ಎಂದು ಕಾಳಿಕಾದೇವಿಯನ್ನು ಪೂಜಿಸುತ್ತಾನೆ. ರಾಜನಿಗೆ ನಿನ್ನ ಆಶೆ ನೆರವೇರಬೇಕೆಂದರೆ ಪ್ರತಿದಿನ ಒಬ್ಬ ವ್ಯಕ್ತಿಗೆ ಹೊಸ ಬಟ್ಟೆಯನ್ನು ಕಟ್ಟಿ ಅವನ ತಲೆಯನ್ನು ಕತ್ತರಿಸಿ ಅದರ ಮೇಲೆ ಕುಳಿತು 12 ವರ್ಷಗಳ ಕಾಲ ಪೂಜಿಸು ಎಂದು ಹೇಳುತ್ತಾಳೆ ಅಂತೆ. ಅದಕ್ಕೆ ರಾಜ ಒಪ್ಪಿ, ರಾಜ್ಯದ ಪ್ರಜೆಗಳಿಗೆ ಈ ಮಾಹಿತಿ ತಿಳಿಸದೆ, ಪದ್ಮಶಾಲಿಗಳಿಗೆ ಪ್ರತಿದಿನ ಹೊಸ ಬಟ್ಟೆ ಕಳುಹಿಸಬೇಕು, ಮತ್ತುಬೇರೆ ಕುಲದವರು ಪ್ರತಿಮನೆಯಿಂದ ಒಬ್ಬರನ್ನ ಅರಮನೆಗೆ ಕಳುಹಿಸಬೇಕೆಂದು ಆಜ್ನೆ ಹೊರಡಿಸುತ್ತಾನೆ. ರಾಜಾಜ್ನೆಯಂತೆ ಪದ್ಮಶಾಲಿ ಜಾತಿಯನ್ನು ಹೊರತುಪಡಿಸಿ ಸಾಮ್ರಾಜ್ಯದ ಇತರೆ ಎಲ್ಲಾ ಜಾತಿಗಳ ಜನರು ಒಬ್ಬೊಬ್ಬರಾಗಿ ಅರಮನೆಗೆ ಹೋಗುತ್ತಾರೆ. ಆದರೆ, ಹೀಗೆ ಹೋದವರ ಸುಳಿವು ಎಲ್ಲಿಯೂ ಇರುವುದಿಲ್ಲ. ರಾಜ್ಯದ ಜನರಿಗೆ ಈ ಬಗ್ಗೆ ಭಯವುಂಟಾಗುತ್ತದೆ.

ಮುಂದಿನ ವರ್ಷ ಪೂಜಾಸಮಯದಲ್ಲಿ ಅದೇ ಪದ್ದತಿಯನ್ನು ರಾಜ ಮರಳಿ ಜಾರಿಗೆ ತರುತ್ತಾನೆ.  ಉಳಿದ ಜಾತಿಯ ಜನಗಳು ಒಗ್ಗೂಡಿ ಈ ಬಾರಿ ಹೊಸ ಬಟ್ಟೆಗಳನ್ನು ನಾವು ನೀಡುತ್ತೇವೆ. ಮನೆಗೊಬ್ಬರನ್ನ ಕಳುಹಿಸಲು ಪದ್ಮಶಾಲಿಗಳಿಗೆ ಹೇಳಿ ಎಂದು ಕೇಳುತ್ತಾರೆ. ಆಗ  ರಾಜ ಆಜ್ನೆಯನ್ನ ಪರಿಷ್ಕರಿಸಿ ಪ್ರತಿದಿನ ಮನೆಗೊಬ್ಬ ಪದ್ಮಶಾಲಿಗಳು ಬರಬೇಕೆಂದು ಹೇಳುತ್ತಾನೆ. ಆಗಲೇ ರಾಜ್ಯದಲ್ಲಿ ಭಯದ ವಾತಾವರಣವಿದ್ದಿದ್ದರಿಂದ, ಪದ್ಮಶಾಲಿಗಳು ದುಗುಡದಿಂದಲೇ ವಿರೋಧಿಸುತ್ತಾರೆ. ಮೊದಲು, ಈ ಹಿಂದೆ ತೆಗೆದುಕೊಂಡು ಹೋದ ಜನರನ್ನ ಏನು ಮಾಡಿದಿರಿ ಎಂದು ಹೇಳಿ ಆನಂತರ ನಾವು ನಮ್ಮ ಮನೆಯವರನ್ನ ಕಳುಹಿಸುತ್ತೇವೆ ಎಂದು ಎದುರು ನಿಲ್ಲುತ್ತಾರೆ. ಆಗ ರಾಜ ಪ್ರತಿಭಟಿಸಿದವರನ್ನ ಬಂಧಿಸಿ ಕಾರಾಗೃಹದಲ್ಲಿಡುತ್ತಾನೆ. ಐದು ದಿನಗಳು ಕಳೆದ ನಂತರ, ನಾವು ಸ್ನಾನ, ಸಂಧ್ಯಾವಂದನೆ, ಪೂಜೆ ಇಲ್ಲದೆ ಸೆರೆವಾಸದಲ್ಲಿದ್ದೇವೆ. ಹೀಗಾಗಿ, ಈ ಎಲ್ಲವನ್ನ ಮುಗಿಸಿಕೊಂಡು ಸೆರೆವಾಸಕ್ಕೆ ಮರಳಿ ಬರುತ್ತೇವೆ, ನಮ್ಮನ್ನ ಬಿಡಿ ಎಂದು ಕಾವಲುಗಾರರನ್ನ ಬೇಡಿಕೊಳ್ಳುತ್ತಾರೆ. ಕಾವಲುಗಾರರು ಅದನ್ನ ನಂಬಿ ಅವರನ್ನ ಬಿಟ್ಟು ಕಳುಹಿಸುತ್ತಾರೆ. ಪದ್ಮಶಾಲಿಗಳು ಪ್ರತಿದಿನ ಪೂಜೆ ಮಾಡುವ ಮಾರ್ಕಂಡೇಯ ದೇವಸ್ಥಾನದಲ್ಲಿ ಎಲ್ಲರೂ ಸೇರಿ, ನೋಡಿ ರಾಜ ನಮ್ಮ ವಂಶವನ್ನ ನಿರ್ವಂಶವನ್ನಾಗಿ ಮಾಡಲು ಪಣ ತೊಟ್ಟಂತಿದೆ. ಹೀಗಾಗಿ ನಾವು ರಾಜನನ್ನ ಸಂಹರಿಸದೆ ಬದುಕಲಾರೆವು. ಹೇಗಾದರು ಮಾಡಿ ರಾಜನನ್ನ ಸಂಹರಿಸಬೇಕು ಎಂದು ಪಣತೊಡುತ್ತಾರೆ. ರಾಜ ಇರುವುದು ಉಕ್ಕಿನ ಕೋಟೆಯಲ್ಲಿ, ಮಧ್ಯದಲ್ಲಿ ಒಂಟಿ ಸ್ಥಂಭದ ಮಹಡಿ. ಆ ಮಹಡಿಯ ಸುತ್ತ ಮುಸ್ಸಾನದಿ, ಕಾವಲಾಗಿ ಕಾಳಿಕಾದೇವಿ ಇರುತ್ತಾಳೆ. ಆ ರಾಜನ ಕೈಯಲ್ಲಿರುವ ಕತ್ತಿಯಿಂದ ಸಾಯಿಸಿದರೆ ರಾಜ ಸತ್ತುಹೋಗುತ್ತಾನೆ, ಆಗ ನಮ್ಮ ವಂಶ ಉಳಿಯುವುದು ಎಂದು ತೀರ್ಮಾನಿಸುತ್ತಾರೆ. ಊರಿನ ಕೆಲ ಕುಟುಂಬಗಳು ಪದ್ಮಶಾಲಿ ಕುಲದವರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಅವರ ಧೈರ್ಯವನ್ನ ಮೆಚ್ಚಿ ಊರಿನ ಪದ್ಮಶಾಲಿ ಕುಲದವರು, ಇನ್ನು ಮುಂದೆ ನಮ್ಮ ಮದುವೆಗಳಲ್ಲಿ ಇವರಿಗೆ ಮೊದಲ ಬೊಟ್ಟು ಇಡಬೇಕು ಮತ್ತು ವಿಜಯಶಾಲಿಯಾಗಿ ಬಂದವರಿಗೆ ಪ್ರತಿ ವರ್ಷ ಅವರವರ ಗ್ರಾಮಗಳಿಗೆ ಕರೆದು ಸತ್ಕರಿಸಿ ಒಂದೊಂದು ಮನೆಯಿಂದ ಒಂದು ರೂಪಾಯಿ ಇಪ್ಪತ್ತೈದು ಪೈಸೆ ಯಂತೆ, 1016 ರೂ. ಗಳನ್ನ ಕೊಡಬೇಕು ಎಂದು ಎಲ್ಲಾ 56 ಪಾಳ್ಯಗಳ ಪದ್ಮಶಾಲಿಗಳ ಮುಂದೆ ತೀರ್ಮಾನವಾಗುತ್ತದೆ.

ಅವರಿಗೆ ಆ ಕ್ಷಣದಿಂದಲೇ, ಕತ್ತಿವರಸೆ, ಮುಂತಾದ ಶಸ್ತ್ರಭ್ಯಾಸ ಜತೆಗೆ ಮಂತ್ರ ತಂತ್ರವಿದ್ಯೆಯನ್ನು ಆ ಸ್ಥಳದಲ್ಲಿನ ಗೊಲ್ಲ ಕೇತಮ್ಮ ಎನ್ನುವವರ ಬಳಿ ಆ ವಿದ್ಯೆಗಳನ್ನು ಕಲಿಸಲಾಗುತ್ತದೆ. ತರಬೇತಿ ಮುಗಿದ ತಕ್ಷಣ ಗೊಲ್ಲ ಕೇತಮ್ಮ ರ ಬಳಿಯಿರುವ ಮಂತ್ರದಂಡವನ್ನ ಪಡೆದುಕೊಂಡು ರಾಜನನ್ನ ಸಂಹರಿಸಲು ಹೊರಡುತ್ತಾರೆ.

ಮುಸ್ಸಾನದಿ ದಾಟಿ ಕೋಟೆಯನ್ನು ಪ್ರವೇಶಿಸುವಾಗ, ಕಾಳಿಕಾದೇವಿ ಇವರನ್ನ ಅಡ್ಡಗಟ್ಟಿ, ಹಲವಾರು ಬೇಡಿಕೆಗಳನ್ನ ಇಡುತ್ತಾಳಂತೆ. ಆ ಪ್ರಕಾರವಾಗಿ, ಅವರು ಕಾಳಿಕಾದೇವಿ ಹೇಳಿದ ಹಾಗೆ ನಡೆದುಕೋಳ್ಳುತ್ತಾರೆ, ಆಗ ಅರಮನೆಗೆ ಪ್ರವೇಶ ಸಿಗುತ್ತದೆ. ಒಂಟಿ ಸ್ತಂಭದ ಮೇಲಿರುವ ಮಹಡಿಯನ್ನು ತಲುಪಿ, ತಾವು ಕಲಿತ ಶಕ್ತಿ ಯುಕ್ತಿಯಿಂದ ಅರಮನೆಯಲ್ಲಿದ್ದ ರಾಜನನ್ನ ಸಂಹರಿಸುತ್ತಾರೆ. ಈ ಯುದ್ದದಲ್ಲಿ ಪ್ರಚಂಡ ವಿಜಯಶಾಲಿಗಳಾಗಿ ಮರಳಿ ಬರುತ್ತಾರೆ.

ವಿಜಯದ ನಂತರ ಮಾಮೂಲಿಯಾಗಿ ತೆರಳದೆ, ಇವರು ಕಲಿತ ಮಂತ್ರ ತಂತ್ರ ಶಸ್ತ್ರವಿದ್ಯೆಗಳನ್ನ ಸಮುದಾಯದ ಮುಂದೆ ಪ್ರದರ್ಶಿಸುತ್ತಾರೆ. ಇವರ ಧೈರ್ಯ ಶೌರ್ಯಕಂಡ ಊರಿನವರು ಇವರಿಗೆ ಸತ್ಕರಿಸಿ ಸಾಧನಾಶೂರರು ಎನ್ನುವ ಬಿರುದು ನೀಡುತ್ತಾರೆ.  ಪದ್ಮಶಾಲಿಗಳ ಜತೆ ಮುಂಚಿತವಾಗಿ ಆದ ಒಪ್ಪಂದದಂತೆ, ಸತ್ಕಾರ ಪಡೆಯುತ್ತಾರೆ. ಪ್ರತಿ ವರ್ಷ ಅವರವರ ಗ್ರಾಮಗಳಿಗೆ ತೆರಳಿ ತಾವು ಕಲಿತ ಎಲ್ಲಾ ವಿದ್ಯೆಗಳನ್ನ ಪ್ರದರ್ಶಿಸಿ ಊರಿನವರ ಸತ್ಕಾರ ಪಡೆಯಲು ಆರಂಭಿಸುತ್ತಾರೆ. ಅಂದಾಜು ಎರಡನೇ ಶತಮಾನದಿಂದ ಈ ಆಚರಣೆ ತೆಲಂಗಾಣದಲ್ಲಿದೆ ಎಂದರೆ ನಂಬಲಸಾಧ್ಯ. ಅದೇ ರೀತಿ ಇಂದೂ ಸಹ ಕೆಲ ಕುಟುಂಬದವರು ಈ ಇಂದ್ರಜಾಲ ವಿದ್ಯೆಯಿಂದಲೇ ಜೀವನವನ್ನ ನಡೆಸುತಿದ್ದಾರೆ.  ನೂರಾರು ಜನಸಂಖ್ಯೆಯಲ್ಲಿದ್ದ ಇವರು ಬದಲಾದ ಕಾಲಘಟ್ಟದಲ್ಲಿ ಇಂದು ಬೆರಳಣಿಕೆಯಷ್ಟು ಜನ ಮಾತ್ರ ಉಳಿದಿದ್ದಾರೆ




ಇಂದಿಗೂ ಹಲವೆಡೆ ಪ್ರೇಕ್ಷಕರ ಮುಂದೆ, ಜಲಸ್ಥಂಭನ, ವಾಯು ಸ್ಥಂಭನ, ಅಗ್ನಿ ಸ್ಥಂಭನದ ಜತೆಗೆ ಮತ್ತಿತರ ವಿದ್ಯೆಗಳನ್ನ ಪ್ರದರ್ಶಿಸುತ್ತಾರೆ. ಈ ವಿದ್ಯೆಗಳ ಪ್ರದರ್ಶನ ಮಾಡುವಾಗ, ಕಲಾವಿದರು ನಾಟಕೀಯ, ಹಾಸ್ಯ, ಮತ್ತು ಭಯಾನಕ ಮುಂತಾದ ಅಂಶಗಳನ್ನು ಒಳಗೊಂಡ ರೂಪಕಗಳನ್ನ ಪ್ರದರ್ಶಿಸಿ ಪ್ರೇಕ್ಷಕರನ್ನ ರಂಜಿಸುತ್ತಾರೆ.  ಪ್ರದರ್ಶನದ ಪ್ರಾರಂಭದಲ್ಲಿ, ಕಾಳಿಕಾದೇವಿಯನ್ನ ಪೂಜಿಸಿದ ಗುರುವೊಬ್ಬರು, ವೃಂದದಲ್ಲಿನ ಎಲ್ಲರಿಗೂ ಮಂತ್ರಿಸಿದ ತಾಯತಗಳನ್ನ ಕಟ್ಟುತ್ತಾರೆ. ನಂತರ ಅಷ್ಟದಿಕ್ಪಾಲಕರನ್ನ ಬಂಧಿಸಿ ಪ್ರದರ್ಶನವನ್ನು ನೀಡುತ್ತಾರೆ. ಪ್ರಾರಂಭದಲ್ಲಿ ನಗಾರಿಗಳನ್ನ ಬಾರಿಸುತ್ತ ವೃಂದದಲ್ಲಿನ ಕಲಾವಿದರು ಒಬ್ಬೊಬ್ಬರಾಗಿ ಗುರುವಿನ ಆದೇಶದಂತೆ ಕರ್ರಸಾಮು (ಕೋಲುಗಳನ್ನ ತಿರುಗಿಸುತ್ತ, ಶತ್ರುಗಳ ಮೇಲೆ ಆಕ್ರಮಣಮಾಡುವ ವಿದ್ಯೆ) ಪ್ರದರ್ಶನ ನೀಡುತ್ತಾರೆ. ಜಲಸ್ಥಂಭ ವಿದ್ಯೆಯಲ್ಲಿ ನೀರನ್ನು ಸ್ತಂಭಿಸಿ ತಮ್ಮ ನಿಯಂತ್ರಣಕ್ಕೆ ತಂದುಕೊಂಡು ಪ್ರದರ್ಶನಕ್ಕೆ ಅನುಕೂಲವಾಗಿ ಬದಲಾಯಿಸುತ್ತಾರೆ. ಇದನ್ನ ಜಲಸ್ಥಂಭನ ಎಂದು ಕರೆಯುತ್ತಾರೆ. ಮೂಗಿನ ಒಂದು ರಂಧ್ರದ ಮುಖಾಂತರ ನೀರನ್ನು ಹಾಕಿ ಮತ್ತೊಂದು ಹೊಳ್ಳೆಯಲ್ಲಿ ಹೊರತೆಗೆಯುತ್ತಾರೆ. ಅರಿಶಿನ ಮತ್ತು ಕುಂಕುಮವನ್ನ ನೀರಲ್ಲಿ ಹಾಕಿ ಕಲಿಸಿ ಮತ್ತೆ ಯಥಾವತ್ತಾಗಿ ಅರಿಶಿನ ಕುಂಕುಮವನ್ನ ಹೊರತೆಗೆದು ಪ್ರೇಕ್ಷಕರನ್ನ ಆಶ್ಚರ್ಯಚಕಿತರನ್ನಾಗಿಸುತ್ತಾರೆ.

ಅದೇ ರೀತಿ ಈ ಕಲಾವಿದರು ಅಗ್ನಿಯನ್ನು ಸ್ಥಂಭಿಸಿ ಪ್ರದರ್ಶನ ನೀಡುತ್ತಾರೆ. ಇದೇ ರೀತಿ ಹಲವಾರು ರೀತಿಯ ಕಣಕಟ್ಟು ಮುಂತಾದ ಇಂದ್ರಜಾಲ ವಿದ್ಯೆಯನ್ನ ಜನರ ಮುಂದೆ ಪ್ರದರ್ಶನ ನೀಡುತ್ತಾರೆ.

ಪದ್ಮಶಾಲಿಗಳು ಕೊಟ್ಟ ದಕ್ಷಿಣೆ ಪಡೆದು ಮತ್ತೊಂದು ಗ್ರಾಮಕ್ಕೆ ಹೊರಡುತ್ತಾರೆ. ತೆಲಂಗಾಣದ ಒಂದೆರೆಡು ಜಿಲ್ಲೆಗಳಲ್ಲಿ ಬೆರಳಣಿಕೆಯಷ್ಟು ಕುಟುಂಬಗಳು ಈ ವಿದ್ಯೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪದ್ಮಶಾಲಿಗಳ ಆಶ್ರಯದಲ್ಲಿ ಇವರ ಜೀವನ ನಡೆಯುವುದರಿಂದ ಆರ್ಥಿಕವಾಗಿ ಇವರು ಅಷ್ಟೊಂದು ಸಬಲರಾಗಿಲ್ಲ. ಮುಂದಿನ ಜನಾಂಗಕ್ಕೆ ಇಂತಹ ಅವಲಂಬಿತ ಕುಟುಂಬಗಳಿದ್ದವು ಎಂದು ಹೇಳಲು ಅವರ ವಿಡಿಯೋಗಳು, ಪುಸ್ತಕಗಳು, ಲೇಖನಗಳು ಮಾತ್ರ ಉಳಿದಿರುತ್ತವೆ. ಬದಲಾದ ಜಗತ್ತು ಎಲ್ಲವನ್ನು ನುಂಗಿಹಾಕುತ್ತ ಹೊಸತನ್ನು ನೋಡಲು ಕಾದುಕುಳಿತಿದೆ. ಸಾಧನಾಶೂರರು ಪ್ರದರ್ಶಿಸುವ ಎಲ್ಲಾ ವಿದ್ಯೆಗಳು ಮತ್ತು ರೂಪಕಗಳನ್ನ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ನಲ್ಲಿ ಆಸಕ್ತಿಯಿದ್ದವರು ನೋಡಬಹುದು.



Wednesday, April 13, 2022

ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ

 


ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ

ಕೇರಳದ ಸಂಸದರಾದ ಶಶಿ ತರೂರ್ ಅವರು 2015 ರಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುತ್ತ, ನೇಕಾರರ ಮೇಲಿನ ಬ್ರಿಟೀಷರ ಕ್ರೌರ್ಯ ದ ಕುರಿತು ಪ್ರಸ್ತಾಪಿಸಿದ್ದರು. ಬಹುಶಃ  ಇತಿಹಾಸದ ಈ ಕ್ರೌರ್ಯ ಘಟನೆ ಕುರಿತು ಬಹುತೇಕ ಎಲ್ಲರೂ ಮರೆತಿದ್ದರು. ಬ್ರಿಟೀಷರು ನೇಕಾರರ ಕೈಯನ್ನು ಕತ್ತರಿಸಿದರು, ಹೆಬ್ಬೆರೆಳನ್ನ ಕತ್ತರಿಸಿದರು ಎನ್ನುವ ಘಟನೆ ಕುರಿತು ಹಲವಾರು ಕಾಲಘಟ್ಟದಲ್ಲಿ ಪ್ರಸ್ತಾಪಿಸಲಾಗಿದೆ. ಇದು ನಿಜ ಘಟನೆಯಾ ಎನ್ನುವ ಕುರಿತು ಹಲವಾರು ಚರ್ಚೆಗಳು ನಡೆದಿವೆ. ಆದರೂ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅಲ್ಲವೇ, ಅದಲ್ಲದೇ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅಸಹ್ಯಕರ, ತಾರತಮ್ಯ ಮತ್ತು ನಿರ್ಲಜ್ಜ ದೌರ್ಜನ್ಯಗಳನ್ನು ನಡೆಸಿ ಲಕ್ಷಾಂತರ ಜನರನ್ನ ಹಿಂಸಿಸಿ ಹತ್ಯೆ ಮಾಡಿದ ಕುಖ್ಯಾತಿ ಬ್ರಿಟೀಷರ ಮೇಲಿದೆ. ಯಾರು ಏನೇ ಹೇಳಲಿಈ ಘಟನೆ ನಡೆದೇ ಇಲ್ಲವೆಂದು ಹೇಳಲು ಸಾಧ್ಯವೇ  ಇಲ್ಲ. ಈ ಘಟನೆ ಏನು, ಎಲ್ಲಿ ನಡೆಯಿತು, ಇದರ ಕುರಿತು ಈ ಲೇಖನದಲ್ಲಿ ತಿಳಿಯೋಣ. 

ಭಾರತಕ್ಕೆ ಕಾಲಿಟ್ಟ ಬಹುತೇಕ ಪಾಶ್ಚ್ಯಾತರು ಅದರಲ್ಲೂ ಬ್ರಿಟೀಷರು ತಮ್ಮಲ್ಲಿನ ಉತ್ಪನ್ನಗಳನ್ನ ಇಲ್ಲಿ ಮಾರಾಟ ಮಾಡಲು ಬಹಳ ಪ್ರಯತ್ನ ಪಡುತಿದ್ದರು. ಮೊದ ಮೊದಲಿಗೆ ಇಲ್ಲಿನ ತಂತ್ರಜ್ನಾನ, ಕರಕುಶಲಗಾರಿಕೆ, ವಿದ್ಯೆನೀಡುವ ಗುರುಕುಲಗಳನ್ನ ಹೀಗೆ ಇಲ್ಲಿನ ದೇಶಿಯ ಮೂಲದ ಪ್ರತಿವಿಷಯವನ್ನ ಮೂಲೆಗುಂಪು ಮಾಡುವುದು ಮತ್ತು ತಮ್ಮ ಶ್ರೇಷ್ಟತೆಯನ್ನಜನರ ಮನಸಲ್ಲಿ ತುಂಬುವುದು. ಅವರು ಬಳಸುವ ವಸ್ತುಗಳು ಅತಿ ಶ್ರೇಷ್ಟ ಎಂದು ಜನರ ಮನಸ್ಸಿನಲ್ಲಿ ಬಿತ್ತುವುದು. ಅದು ಸಾಧ್ಯವಾಗದೇ ಇದ್ದಾಗ, ಇಲ್ಲಿನ ಮೂಲತನವನ್ನೇ ನಾಶಮಾಡುವುದು ಇಂತಹ ಹಲವಾರು ಪ್ರಯೋಗಗಳನ್ನ ಮಾಡುತ್ತ, ವಿರೋಧಿಸಿದವರನ್ನ ಹಿಂಸಿಸಿ, ಹತ್ಯೆ ಮಾಡಿ ಜನರನ್ನು ಭಯಭೀತರನ್ನಾಗಿ ಮಾಡಿ ಸುಮಾರು ಮೂರು ಶತಮಾನಗಳ ಕಾಲ ಭಾರತವನ್ನಾಳಿದ ನಮ್ಮ ಮುಂದಿದೆ.

 

ವ್ಯವಸ್ಥಿತ ಸಂಚು: ಮೊದಲನೆಯದಾಗಿ, ಘಟನೆ ನಡೆಯಲು ಕಾರಣ ಏನು ತಿಳಿಯೋಣ.  ಇಂಗ್ಲೆಂಡಿನಲ್ಲಿ ಜಿನ್ನಿಂಗ್ ಚಕ್ರದ ಆವಿಷ್ಕಾರದ ನಂತರ, ಅವುಗಳ ಉತ್ಪಾದನಾ ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗುತ್ತದೆ. ಬ್ರಿಟಿಷರ ಉತ್ಪನ್ನಗಳಿಗೆ ಭಾರತವನ್ನು ಮಾರುಕಟ್ಟೆಯಾಗಿಸಬೇಕಿತ್ತು. ಅದಕ್ಕಾಗಿ ಭಾರತೀಯ ಜನರು ಬ್ರಿಟಿಷ್ ಜವಳಿಗಳನ್ನು ಖರೀದಿಸಲು ಮತ್ತು ಭಾರತೀಯ ಗುಡಿ ಕೈಗಾರಿಕೆಯನ್ನು ಶಾಶ್ವತವಾಗಿ ತೆಗೆದುಹಾಕಲೇ ಬೇಕಿತ್ತು. ಈ ಆದೇಶ ಬ್ರಿಟನ್ ನಿಂದ ಆಗಿಂದಾಗ್ಗೆ ರವಾನೆಯಾಗುತಿತ್ತು.  ಬ್ರಿಟಿಷ್ ವ್ಯಾಪಾರಿಗಳಿಗೆ ಭಾರತದ ಬೃಹತ್ ಜನಸಂಖ್ಯೆಯು ಒಂದು ದೊಡ್ಡ ಆಸ್ತಿಯಾಗಿತ್ತು, ಅದೊಂದ್ದು ದೊಡ್ಡ ಮಾರುಕಟ್ಟೆ ಎಂದೇ ಭಾವಿಸಿದ್ದರು. ಬ್ರಿಟಿಷರ ಉತ್ಪನ್ನಗಳನ್ನು ಭಾರತದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲು ಬ್ರಿಟಿಷ್ ಆಡಳಿತಗಾರರು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಎಲ್ಲ ರೀತಿಯಲ್ಲಿ ವಿರೋಧಿಸುವುದಿಕ್ಕೆ ಪ್ರಾರಂಭಿಸಿದ್ದರು.  ಅಂದಿನ ಕಾಲದಲ್ಲಿ ಬಂಗಾಳ ಸೇರಿದಂತೆ ಭಾರತದಲ್ಲಿ  ಮಸ್ಲಿನ್ ವಸ್ತ್ರಗಳು (ಅತಿಸೂಕ್ಷ್ಮ ನೆಯ್ಗೆಯ ಹತ್ತಿಯ ಬಟ್ಟೆ) ಬಹಳ ಪ್ರಖ್ಯಾತಿ ಪಡೆದಿದ್ದವು. 

ಬ್ರಿಟೀಷರು ತಂದ ಬಟ್ಟೆಗಳನ್ನ ಇಲ್ಲಿ ಕೊಳ್ಳುವವರೇ ಇರಲಿಲ್ಲ. ಬ್ರಿಟಿಷರು ತಮ್ಮ ಜವಳಿಗಳನ್ನು ಭಾರತದಲ್ಲಿ ಸುರಿಯಲು ಹೆಚ್ಚು ಉತ್ಸುಕರಾಗಿದ್ದರು ಮತ್ತು ಜವಳಿಗಳ ಸ್ಥಳೀಯ ಉತ್ಪಾದನೆಯನ್ನು ಬಹುತೇಕವಾಗಿ ವಿರೋಧಿಸುತಿದ್ದರು.  ಮೊದಲನೆಯ ಪ್ರಯತ್ನವಾಗಿಜನರು  ದೇಶೀಯ ಮಸ್ಲಿನ್ ಬಟ್ಟೆಗಳನ್ನು ಕೊಳ್ಳುವುದು ಕಡಿಮೆ ಮಾಡಬೇಕು  ಮತ್ತು ಮಸ್ಲಿನ್ ಬಟ್ಟೆಗಳ ಮೇಲಿನ ಅವಲಂಬನೆ ಕಡಿಮೆಯಾಗಬೇಕೆಂದು ಎನ್ನುವ ಉದ್ದೇಶದಿಂದ ಈ  ವಸ್ತ್ರಗಳ ಮೇಲೆ ಸರಿ ಸುಮಾರು 70-80% ತೆರಿಗೆಯನ್ನು ಹೇರುತ್ತಾರೆ. ಇಂತಹ ಅತಿ ದೊಡ್ಡ ತೆರಿಗೆಯಿಂದ ಜನರು ಸ್ವಾಭಾವಿಕವಾಗಿ ಈ ವಸ್ತ್ರಗಳನ್ನ ಕೊಳ್ಳುವುದಿಲ್ಲ.  ಅದಕ್ಕೆ ಪರ್ಯಾಯವಾಗಿ ಬ್ರಿಟನ್‌ನಿಂದ ಆಮದು ಮಾಡಿಕೊಂಡ ಫ್ಯಾಕ್ಟರಿ-ನಿರ್ಮಿತ  ಬಟ್ಟೆಗಳ ಮೇಲೆ ಅತಿಕಡಿಮೆ 2-4% ತೆರಿಗೆಯನ್ನು ವಿಧಿಸಿ ಮಾರುಕಟ್ಟೆಗೆ ತರುತ್ತಾರೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಇಂಗ್ಲೇಡ್ ಮೂಲದಿಂದ ಬಟ್ಟೆಗಳು ಸಿಗುವಾಗ ಮಸ್ಲಿನ್ ಬಟ್ಟೆಗಳನ್ನ ಯಾಕೆ ಕೊಳ್ಳುತ್ತಾರೆ. 

ಈ ಮೂಲಕ ಮಸ್ಲಿನ್ ಉತ್ಪಾದನೆಯನ್ನು ಬ್ರಿಟೀಷರು ವ್ಯವಸ್ಥಿತವಾಗಿ ನಾಶಪಡಿಸುತ್ತಾರೆ.  ಇಂತಹ ಕಠೋರ ನೀತಿಗಳ ಪರಿಣಾಮವಾಗಿ, ಮಸ್ಲಿನ್ ಉತ್ಪಾದನೆಯು ಗುಣಮಟ್ಟ ಮತ್ತು ಪ್ರಮಾಣದಲ್ಲಿ ಬಹಳವಾಗಿ ಕುಸಿತ ಕಂಡು ಕೊಳ್ಳುತ್ತದೆ, ಅದು ಎಷ್ಟರ ಮಟ್ಟಿಗೆ ಎಂದರೆ, ಮತ್ತೆಂದಿಗೂ ಆ ಉದ್ಯಮ ಚೇತರಿಸಿಕೊಳ್ಳುವುದೇ ಇಲ್ಲ. ಇದರ ನೇರ ಪರಿಣಾಮ ಅನುಭವಿಸಿದವರು ಬಂಗಾಳದ ನೇಕಾರರು ಮಾತ್ರ. ಅವರ ಬಳಿಯಿದ್ದ ಏಕೈಕ ಕೌಶಲ್ಯವೆಂದರೆ ಮಸ್ಲಿನ್ ನೇಯ್ಗೆ, ಬ್ರಿಟೀಷರ ಇಂತಹ ಕಠಿಣ ನಿರ್ಧಾರದಿಂದ ನೇಕಾರರು ಕಡು ಬಡತನದಲ್ಲಿ ಮುಳುಗಿದರು ಮತ್ತು ಮಸ್ಲಿನ್ ನೇಯ್ಗೆಯ ಉದ್ಯಮವು ಸಂಪೂರ್ಣವಾಗಿ ನಾಶವಾಗುತ್ತದೆ. ಇಲ್ಲಿಗೆ ಬ್ರಿಟೀಷರ ಸಂಚು ವ್ಯವಸ್ಥಿತವಾಗಿ ಕಾರ್ಯಗತಕ್ಕೆ ಬಂದಿರುತ್ತದೆ 

 

ಕ್ರೌರ್ಯದ ಪರಮಾವಧಿ: ಬ್ರಿಟೀಷ್ ಆಳ್ವಿಕೆಯಲ್ಲಿ ಸ್ಥಳೀಯರ ವಿರುದ್ಧ ಬ್ರಿಟಿಷ್ ಆಡಳಿತ, ನಿರ್ದಿಷ್ಟವಾಗಿ, ರೈತರು ಮತ್ತು ನೇಕಾರರ ವಿರುದ್ಧ ಅಸಹ್ಯಕರ, ತಾರತಮ್ಯ ಮತ್ತು ನಿರ್ಲಜ್ಜ ದೌರ್ಜನ್ಯಗಳನ್ನು ನಡೆಸುತ್ತಿದ್ದರು ಎನ್ನುವ ವಿಷಯ ಹಲವು ಕಡೆ ದಾಖಲಾಗಿವೆ. ಇಂಥಹ ಕಾರ್ಯಕ್ಕೆ ಬ್ರಿಟೀಷ್ ಆಡಳಿತ ಮತ್ತೊಮ್ಮೆ ಮುಂದಾಗುತ್ತದೆ. ನೇಕಾರರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದರಿಂದ ಅತಿ ಸೂಕ್ಷ್ಮ ಮಸ್ಲಿನ್ ನೇಯ್ಗೆ ನಶಿಸಿ ಹೋಗಬಾರದು ಎನ್ನುವ ಉದ್ದೇಶದಿಂದ ನೇಕಾರರು ಅಲ್ಲಲ್ಲಿ ನೇಯ್ಗೆ ಕೆಲಸ ಮಾಡುತಿದ್ದರು. ಇಂತಹ ಘಟನೆಗಳು ಬ್ರಿಟೀಷರಿಗೆ ಕಿರಿಕಿರಿ ಉಂಟು ಮಾಡುತಿದ್ದವು. ಇದಕ್ಕೆ ಅಂತ್ಯ ಕಾಣಿಸಲೇ ಬೇಕೆಂದು ಬಹುಶಃ ನಿರ್ಧರಿಸಿದ್ದರೆನಿಸುತ್ತದೆ ಹೀಗಾಗಿ, ಮುಂದೆಂದೂ ಮಸ್ಲಿನ್ ಉತ್ಪನ್ನಗಳನ್ನು ನೇಯಲು ಸಾಧ್ಯ ವಾಗಬಾರದು ಎನ್ನುವ ಉದ್ದೇಶದಿಂದ 1769 ರ ಮಾರ್ಚ್ 17 ರಂದು, ಬ್ರಿಟಿಷ್ ಸರ್ಕಾರವು  ಬಡವರ ಬಗ್ಗೆ ಯಾವುದೇ ಕರುಣೆ ಇಲ್ಲದೆಬಂಗಾಳದ ಮಸ್ಲಿನ್ ನೇಕಾರರ ಹೆಬ್ಬೆರಳನ್ನು ಕತ್ತರಿಸಲು ಪ್ರಾರಂಭಿಸಿತು. ಈ ಘಟನೆ ನಡೆಯಲು ಶುರುವಾದಾಗಿನಿಂದ, ನೇಕಾರರು ದೇಶದ ವಿವಿಧಭಾಗಗಳಿಗೆ ದಿಕ್ಕಾಪಾಲಾಗಿ ಓಡಿ ಹೋದರು.

ಈ ಘಟನೆಯ ಸಮಯದಲ್ಲಿ ಮುರ್ಷಿದಾಬಾದ್ ಮತ್ತು ನಾಡಿಯಾದಿಂದ  ನೇಕಾರರ ಕುಟುಂಬಗಳು ಅವಧ್‌ಗೆ ಓಡಿ ಹೋಗುತ್ತಾರೆ, ಅಲ್ಲಿನ ನವಾಬ್ಬ್ ಅವರನ್ನು ಮಹುವಾ ದಬಾರ್‌ ಎನ್ನುವ ಪ್ರದೇಶದಲ್ಲಿ ಪುನರ್ವಸತಿ ಮಾಡಿ ಕೊಡುತ್ತಾರೆ ಮತ್ತು ಅವರ ಜೀವನೋಪಾಯವನ್ನು ಮುಂದುವರಿಸಲು ಅವಕಾಶ ಮಾಡುತ್ತಾರೆ. ಮೊದಲ ತಲೆಮಾರಿನ ಅನೇಕ ನೇಕಾರರು ಈಗಾಗಲೇ ತಮ್ಮ ಕೈಗಳನ್ನು ಕಳೆದುಕೊಂಡಿದ್ದರು, ನಂತರ ಅವರು ತಮ್ಮ ಪುತ್ರರಿಗೆ ಕರಕುಶಲತೆಯನ್ನು ಕಲಿಸುತ್ತಾರೆ. ಸುಮಾರು 5,000 ಜನರ ಆ ಸಣ್ಣ ಪಟ್ಟಣವು ಮತ್ತೆ ಕೈಮಗ್ಗ ಕೇಂದ್ರವಾಗಿ ಪ್ರಸಿದ್ದವಾಗುತ್ತದೆ.

 

ಆರದ ಕಿಚ್ಚು:  ದಶಕಗಳು ಕಳೆದರು ಆ ಘಟನೆಯ ಕಿಚ್ಚು ಮಾತ್ರ ಆರಿರರಿಲ್ಲ.  ಬಂಗಾಳದಿಂದ ವಲಸೆ ಬಂದ ಕುಟುಂಬದ ಕುಡಿಯೊಂದು, ಒಂದು ದಿನ ಆ ಪಟ್ಟಣದ  ಮನೋರಮಾ ನದಿಯ (ಘಾಗ್ರಾದ ಉಪನದಿ) ಕೆಳಗೆ ಬರುತ್ತಿರುವ ದೋಣಿಯನ್ನು ಗಮನಿಸುತ್ತಾನೆ. ಬ್ರಿಟೀಷರನ್ನ ಕಂಡ ಆ ಸಮಯದಲ್ಲಿ ತನ್ನ ಮನದ ಮೂಲೆಯಲ್ಲಿದ್ದ ಕಿಚ್ಚು ಬೆಂಕಿಯಂತಾಗುತ್ತದೆ. ಅದು ಮೊದಲೇ 1857 ರ ಪ್ರಕ್ಷುಬ್ಧತೆಯ (ಸಿಪಾಯಿ ದಂಗೆ) ಸಮಯ.  ಸಂತ್ರಸ್ತರ ಮೊಮ್ಮಕ್ಕಳು ಮತ್ತು ಸಂಬಂಧಿಕರು ಹೆಚ್ಚಾಗಿ ಅವಧ್‌ನ ಮಹುವಾ ದಬರ್‌ನ ನೇಕಾರರು ಎಲ್ಲರೂ ಒಟ್ಟಾಗಿ ಸೇರಿ, ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುತ್ತಾರೆ.  ಆರು ಬ್ರಿಟೀಷ ಯೋಧರು ಲೆಫ್ಟಿನೆಂಟ್ ಟಿ.ಇ. ಲಿಂಡ್ಸೆ, ಲೆಫ್ಟಿನೆಂಟ್ W.H. ಥಾಮಸ್, ಲೆಫ್ಟಿನೆಂಟ್ G.L. ಕಾಲ್ಟಿ, ಸಾರ್ಜೆಂಟ್ ಎಡ್ವರ್ಡ್ಸ್ ಮತ್ತು  A.F. ಇಂಗ್ಲೀಷ್ ಮತ್ತು T.J. ರಿಚಿ ಎನ್ನುವ ಕೆಲವು ಬ್ರಿಟಿಷ್ ತಲೆಗಳನ್ನು ಕತ್ತರಿಸಿ ಬಿಸಾಕುತ್ತಾರೆ.  ಎಂದು ಇತಿಹಾಸಕಾರರ ವರದಿಯಲ್ಲಿ ದಾಖಲಾಗುತ್ತದೆ.  ತದನಂತರ ಈ ಘಟನೆಯ ಪ್ರತಿಕಾರವಾಗಿ ಜೂನ್ 20, 1857 ರಂದು ಬ್ರಿಟೀಷರ ಅಶ್ವಸೈನ್ಯವು ಪಟ್ಟಣವನ್ನು ಸುತ್ತುವರೆಯುತ್ತದೆ, ಆ ಪಟ್ಟಣದ ನೂರಾರು ಜನರನ್ನು ಕೊಲ್ಲುತ್ತಾರೆ. ಮತ್ತು ಎಲ್ಲಾ ಮನೆಗಳಿಗೆ ಬೆಂಕಿ ಹಚ್ಚಿ, ಅಂದಿನಿಂದ ಈ ಸ್ಥಳದಲ್ಲಿ ಯಾರೂ ವಾಸಿಸುವಂತಿಲ್ಲ ಎಂದು ಆದೇಶಿಸುತ್ತಾರೆ. ಬಂಡವಾಳಶಾಹಿಯ ಕ್ರೌರ್ಯ ಮತ್ತು ಅನಾಗರಿಕತೆಗೆ ಆ ಕಾಲದಲ್ಲಿ ಕೊನೆಯಿರಲೇಇಲ್ಲ.

 





ಈ ಎಲ್ಲಾ ಘಟನೆಗಳ ಕುರಿತು ಹಲವಾರು ಲೇಖಕರು ವಿವಿಧ ದಾಟಿಯಲ್ಲಿ ದಾಖಲಿಸಿದ್ದಾರೆ.  ಬ್ರಿಟೀಷ್ ವ್ಯಾಪಾರಿ ವಿಲಿಯಂ ಬೋಲ್ಟ್ಸ್  ತನ್ನ "ಕನ್ಸಿಡರೇಶನ್ಸ್ ಆನ್ ಇಂಡಿಯಾ ಅಫೇರ್ಸ್" ಪುಸ್ತಕದಲ್ಲಿ ನೇಕಾರರ ಬೆರಳುಗಳನ್ನು ಕತ್ತರಿಸುವುದು ಸೇರಿದಂತೆ ತೀವ್ರ ಕ್ರೌರ್ಯದ ನಿದರ್ಶನಗಳನ್ನು ದಾಖಲಿಸಿದ್ದಾರೆ.   Economic transition in the Bengal presidency, 1793-1833 - ಹರಿ ರಂಜನ್ ಘೋಸಲ್ ಎನ್ನುವ ಲೇಖಕರು ಸಹ ದಾಖಲಿಸಿದ್ದಾರೆ. ಇನ್ನೂ ಹಲವಾರು ಲೇಖಕರು ಇದರ ಕುರಿತು ದಾಖಲಿಸುತ್ತಾ ಬಂದಿದ್ದಾರೆ. ಬ್ರಿಟೀಷರು ಮಾತ್ರ ಇದ್ಯಾವುದೂ ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಾ ಬಂದಿದ್ದಾರೆ.

 

ಲೇಖಕರು. ಪಿ.ಎಸ್.ರಂಗನಾಥ

ಸಾಹಿತಿಗಳು ಮತ್ತು ಭಾರತೀಯ ಸಾಮಾಜಿಕ ವೇದಿಕೆಯ ಮಾಜಿ ಕಾರ್ಯದರ್ಶಿ.

ಒಮಾನ್ ರಾಷ್ಟ್ರ - ಮಸ್ಕತ್


Thursday, April 7, 2022

RRR ತೆಲುಗು ಚಲನ ಚಿತ್ರದ ಚಿತ್ರ ಸಾಹಿತಿ "ಪದ್ಮಶಾಲಿ" ಶ್ರೀ ಸುದ್ದಾಲ ಅಶೋಕ್ ತೇಜ

 


RRR ತೆಲುಗು ಚಲನ ಚಿತ್ರದ ಚಿತ್ರ ಸಾಹಿತಿ "ಪದ್ಮಶಾಲಿ" ಶ್ರೀ ಸುದ್ದಾಲ ಅಶೋಕ್ ತೇಜ
 
ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಲನ ಚಿತ್ರ RRR ಸಿನಿಮಾ ವನ್ನು ತಾವೆಲ್ಲ ನೋಡಿರಬಹುದು. ಅದರಲ್ಲಿನ ಕೋಮರಂ ಭೀಮುಡು ಬಗೆಗಿನ ಹಾಡು ತೆಲುಗು ಪ್ರೇಕ್ಷಕರ ಹೃದಯ ಗೆದ್ದಿದೆ. ಚಿತ್ರದ ಪ್ರಮುಖ ಘಟ್ಟದಲ್ಲಿ ಬರುವ ಈ ಭಾವನಾತ್ಮಕ ಹಾಡು ಗಾಯಕ ಶ್ರೀ ಕಾಲ ಭೈರವರ  ಧ್ವನಿಯಲ್ಲಿ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತದೆ.  ಪ್ರೇಕ್ಷಕರಲ್ಲಿ ಕಣ್ಣಿರು ಬರಿಸುವಂಥಹ ಈ ಹಾಡನ್ನು ಬರೆದವರು ನಮ್ಮ ಪದ್ಮಶಾಲಿ ಸಮಾಜದ ಚಿತ್ರ ಸಾಹಿತಿ ಶ್ರೀ ಸುದ್ದಾಲ ಅಶೋಕ್ ತೇಜ. 

ಕೀರವಾಣಿಯವರ ಮನಮೋಹಕ ಸಂಗೀತ ಸಂಯೋಜನೆ. ಅಲ್ಲದೆ ಪ್ರೇಮ್ ರಕ್ಷಿತ್ ಅವರ ಛಾಯಾಗ್ರಹಣದಲ್ಲಿ ಅತ್ಯುತ್ತಮ ದೃಶ್ಯಾವಳಿಗಳು ಈ ಹಾಡನ್ನು ಪ್ರಾರಂಭದಿಂದ ಕೊನೆಯವರೆಗೂ ಬಹಳ ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ಪದ್ಮಶಾಲಿ ಶ್ರೀ ಸುದ್ದಾಲ ಅಶೋಕ್ ತೇಜ ಅವರು ತೆಲುಗು ಸಾಹಿತ್ಯ ಮತ್ತು ತೆಲುಗು ಚಲನ ಚಿತ್ರರಂಗದ ಗೀತರಚನೆಕಾರರಾಗಿ ಹೆಸರುವಾಸಿಯಾಗಿದ್ದಾರೆ.ಸುಮಾರು 2500 ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ನಟ ಚಿರಂಜೀವಿ ಅಭಿನಯದ ಟ್ಯಾಗೋರ್ (2004) ಚಲನಚಿತ್ರದ "ನೇನುಸೈತಂ" ಹಾಡಿಗೆ ಅತ್ಯುತ್ತಮ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಇದು ಮಹಾಪ್ರಸ್ಥಾನಂನ ಶ್ರೀ ಶ್ರೀ (ತೆಲುಗಿನ ಪ್ರಸಿದ್ದ ಕವಿ)  ಅವರ 'ನೇನು ಸೈತಂ' ಅನ್ನು ಆಧರಿಸಿದೆ. ಅಲ್ಲೂರಿ ಸೀತಾರಾಮರಾಜು ಅವರ “ತೆಲುಗು ವೀರ ಲೇವರಾ” ಮತ್ತು ವೇಟೂರಿ ಅವರ “ಮಾತೃದೇವೋಭವ” ದಲ್ಲಿ ಅವರ “ರಾಳಿಪೋಯೆ ಪುವ್ವ ನೀನು ರಾಗಾಲೆಂದುಕೆ” ಗಾಗಿ ಶ್ರೀ ಶ್ರೀ ನಂತರ ಈ ಪ್ರಶಸ್ತಿಯನ್ನು ಗೆದ್ದ ಮೂರನೇ ಬರಹಗಾರ. 

ಶ್ರೀ  ಸುದ್ದಾಲ ಅಶೋಕ್ ತೇಜ ಅವರು 2017 ರವರೆಗೆ 1250 ಚಲನಚಿತ್ರಗಳಿಗೆ ಮತ್ತು 2500 ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅವರು ಫಿದಾ (2017) ಚಿತ್ರದ ವಾಚಿಂಡೆ ಹಾಡಿಗಾಗಿ 2018 ರಲ್ಲಿ ಅತ್ಯುತ್ತಮ ಗೀತರಚನೆಕಾರ (ತೆಲುಗು) ಗಾಗಿ SIIMA ಪ್ರಶಸ್ತಿಯನ್ನು ಪಡೆದಿದ್ದಾರೆ.

ಶ್ರೀ  ಸುದ್ದಾಲ ಅಶೋಕ್ ತೇಜ ಅವರು ತೆಲಂಗಾಣದ ಜನಗಾಂವ್ ಜಿಲ್ಲೆಯ (ತೆಲಂಗಾಣ ರಾಜ್ಯದ ಜಿಲ್ಲೆಗಳ ಮರುಸಂಘಟನೆಯ ಮೊದಲು ಇದು ವಾರಂಗಲ್ ಜಿಲ್ಲೆ ಮತ್ತು ನಲ್ಗೊಂಡ ಜಿಲ್ಲೆಯ ಭಾಗವಾಗಿತ್ತು) ಸುದ್ದಲ ಗ್ರಾಮದಲ್ಲಿ ತೆಲುಗು ಕವಿ ಶ್ರೀ ಸುದ್ದಲ ಹನಮಂತು ಮತ್ತು ಅವರ ಪತ್ನಿ ಶ್ರೀಮತಿ ಜಾನಕಮ್ಮ ಅವರಿಗೆ ಜನಿಸಿದರು. ಅವರ ತಂದೆ ತಾಯಿಯರಿಬ್ಬರೂ ತೆಲಂಗಾಣ ರಾಜಕೀಯ ಬಂಡಾಯದಲ್ಲಿ ಭಾಗವಹಿಸಿ, ಹೈದರಾಬಾದ್ ನಿಜಾಮನ ವಿರುದ್ಧ ಹೋರಾಡಿದ್ದರು.  ಅವರಿಗೆ ಇಬ್ಬರು ಸಹೋದರರು ಪ್ರಭಾಕರ ತೇಜ, ಸುಧಾಕರ ತೇಜ ಮತ್ತು ಒಬ್ಬ ಸಹೋದರಿ ರಾಚ ಭಾರತಿ ಇದ್ದಾರೆ.

ಅಶೋಕ್ ತೇಜ ಅವರು ತೆಲುಗು ಚಿತ್ರರಂಗಕ್ಕೆ ಬರುವ ಮೊದಲು ಕರೀಂನಗರ ಜಿಲ್ಲೆಯ ಬಂಡಲಿಂಗಪುರ, ಮೇಡಿಪಲ್ಲಿ ಮತ್ತು ಮೆಟ್ಪಲ್ಲಿ ಗ್ರಾಮಗಳಲ್ಲಿ ಸರ್ಕಾರಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಅವರು ಚಿಕ್ಕಂದಿನಿಂದಲೂ ಸಾಹಿತ್ಯವನ್ನು ಬರೆಯಲಾರಂಭಿಸಿದ್ದರು. 1996-1997ರ ಅವಧಿಯಲ್ಲಿ ಒಸೆ ರಾಮುಲಮ್ಮ ಮತ್ತು ನಿನ್ನೇ ಪೆಲ್ಲಡುತಾ ಚಿತ್ರಗಳಿಗೆ ಸಾಹಿತ್ಯ ಬರೆದ ನಂತರ ಅವರು ಜನಪ್ರಿಯರಾದರು. ಅವರ ಸೋದರಳಿಯ ಉತ್ತೇಜ್ ಅವರು ಸಹ ತೆಲುಗು ಚಲನಚಿತ್ರಗಳಲ್ಲಿ ಪ್ರಸಿದ್ಧ ಪಾತ್ರ ಕಲಾವಿದರಾಗಿದ್ದಾರೆ.