Tuesday, January 25, 2022

ಕಥೆ:- ಸೀರೆ ಕಪ್ಪ




ಕಾರ್ ಬಂದ ಸದ್ದಾಯಿತು. ಪತಿ ಬಂದರು ಅಂತ ಗೇಟ್ ಬಳಿ ಬಂದ  ಪತ್ನಿ ಸುನಂದಮ್ಮ ಕಾರ್ ಒಳಗೆ ಬರಲು ಗೇಟ್ ಅನ್ನು ತೆರೆದಳು. ಕಾಂಪೌಂಡ್ ನಲ್ಲಿ ಕಾರ್ ಅನ್ನು  ನಿಲ್ಲಿಸಿದ ಆನಂದ ಮೂರ್ತಿ, ಕಾರಿನಲ್ಲಿದ್ದ ಬ್ಯಾಗ್ ಅನ್ನು ಹೆಂಡತಿ ಕೈಗೆ ಕೊಟ್ಟು ಅಲ್ಲಿಯೇ ಇದ್ದ ನಲ್ಲಿಯ ನೀರಿನಲ್ಲಿ ಕಾಲನ್ನು ತೊಳೆದುಕೊಂಡ. ಮನೆಯೊಳಗೆ ಬರುತಿದ್ದಂತೆ, ಏನ್ರೀ!!! ನಾವು ದುರ್ಗಕ್ಕೆ ಬಂದು ಒಂದು ವರ್ಷ ಆಯಿತು ಆದರೂ ಇದುವರೆಗೂ ಒಂದೂ ಮೊಳಕಾಲ್ಮೂರು ಸೀರೆಯನ್ನು ತಗಂಡು ಬರಲಿಲ್ಲ, ಅದೂ ಅಲ್ಲದೆ ಮಗಳ ಮದುವೆ ಸೀರೆಗಳನ್ನ ನೋಡಲಿಕ್ಕೆ ಹೋಗಲೇ ಇಲ್ಲ. ದಿನಗಳು ಹತ್ತಿರ ಬರುತ್ತಿವೆ, ನೀವು ಇಷ್ಟು ತಡ ಮಾಡಿದ್ರೆ ಹೆಂಗೆ? ಮೀನಾಕ್ಷಮ್ಮನವರ ಮನೆಗೆ ಹೋಗಿದ್ದೆ. ಅವರು ಮೊನ್ನೆ ಮೊಳಕಾಲ್ಮೂರುಗೆ ಹೋಗಿ ಸೀರೆ ತಂದಿದ್ರು. ಅದನ್ನ ನೋಡಿಕೊಂಡು ಬಂದೆ. ಸೀರೆಗಳು ತುಂಬಾ ಚೆನ್ನಾಗಿವೆ. ಆದಷ್ಟು ಬೇಗ ನಾವು ಸಹ ಒಂದ್ಸಾರಿ ಹೋಗಿಬರೋಣಾರಿ ಎಂದಳು.  ಮೂರ್ತಿಗೂ ಹೌದೆನ್ನಿಸಿತು. ಕೆಲಸದಲ್ಲಿ ಬಿಜಿಯಾಗಿದ್ದರಿಂದ ಸೀರೆ ನೋಡಲಿಕ್ಕೆ ಹೋಗಲೇ ಇಲ್ಲ. ಮಗಳ ಮದುವೆಗೆ ಸೀರೆಗಳನ್ನ ತರಬೇಕಿತ್ತು. ಸರಿ, ಈ ವಾರ ಹೋಗೋಣ ಎಂದು ಮಡದಿಗೆ ಹೇಳಿದ. ತಕ್ಷಣ ತನ್ನ ಸಹಾಯಕನಿಗೆ ಗೋವಿಂದಪ್ಪನಿಗೆ ಫೋನ್ ಮಾಡಿ,  ಮೊಳಕಾಲ್ಮೂರು ಸಿದ್ದಣ್ಣನಿಗೆ ಫೋನ್ ಮಾಡಿ ಹೇಳ್ರಿ ಈ ಶನಿವಾರ ನಾನು ಮತ್ತು ನಮ್ಮ ಫ್ಯಾಮಿಲಿ ಮೊಳಕಾಲ್ಮೂರುಗೆ ಸೀರೆಗಳನ್ನ ನೋಡಕ್ಕೆ ಬರ್ತಾಯಿದ್ದೀವಿ ಅಂತ. 

ಆಯ್ತು ಸರ್ ಎಂದು ಆ ಕಡೆಯಿಂದ ಗೋವಿಂದಪ್ಪ ಹೇಳಿದ. ಮಗಳಿಗೆ ಅಮೇರಿಕದ ಅಳಿಯ ಸಿಕ್ಕಿದ್ದ. ಮದುವೆಯನ್ನ ಅದ್ದೂರಿಯಾಗಿ ಮಾಡಬೇಕು ಎನ್ನುವ ಆಸೆ ಮಡದಿಗೆ. ಸರ್ಕಾರಿ ಅಧಿಕಾರಿಯಾಗಿದ್ದ ಆನಂದ ಮೂರ್ತಿ ಬಹಳಷ್ಟು ಆಸ್ತಿ ಮಾಡಿದ್ದ, ಯಾವುದೇ ಮಿತಿಯಿಲ್ಲದೆ ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದ. 

ಸಾಹೇಬರು ಮೊಳಕಾಲ್ಮೂರುಗೆ ಬರುತ್ತಾರೆ ಎಂದು ಸಿದ್ದಣ್ಣನಿಗೆ ಫೋನ್ ಬಂತು. ತಕ್ಷಣವೇ ಮೊಳಕಾಲ್ಮೂರುವಿನಲ್ಲಿದ್ದ ಸೀರೆವ್ಯಾಪಾರಿಗಳು, ಕೈ ಮಗ್ಗ ನೇಕಾರರನ್ನ ಸಂಪರ್ಕಿಸಿ, ಸಾಹೇಬರು ಬರ್ತಾರೆ, ಒಳ್ಳೆ ಚೆನ್ನಾಗಿರುವ ಸೀರೆಗಳನ್ನ ರೆಡಿಯಾಗಿಟ್ಟುಕೊಂಡಿರಿ ಎಂದು ಹುಕುಂ ಹೊರಡಿಸಿದ. ಚಿತ್ರದುರ್ಗ ಮತ್ತು ಸುತ್ತ ಮುತ್ತಲಿನ ತಾಲೂಕಿನ ಅಧಿಕಾರಿಗಳು ಮೊಳಕಾಲ್ಮೂರುವಿಗೆ ಭೇಟಿ ಇತ್ತು, ಅತ್ಯುತ್ತಮ ಸೀರೆಗಳನ್ನ ಕೊಂಡು ಕೊಳ್ಳುವುದು ಇಲ್ಲವೆ ಉಡುಗೊರೆಯಾಗಿ ಪಡೆಯುವುದು ಹಲವಾರು ವರ್ಷಗಳಿಂದ ನಡೆದು ಬಂದಿತ್ತು. ಕೆಲವರಂತೂ ತಮ್ಮ ಮೇಲಧಿಕಾರಿಗಳನ್ನ ಮೆಚ್ಚಿಸಲು ಲಾಟ್ ಗಟ್ಟಲೆ ಸೀರೆಗಳನ್ನ ಕಳುಹಿಸುತಿದ್ದರು. ಅದರಲ್ಲೂ ಮದುವೆ, ಮತ್ತಿತರ ಸಂಧರ್ಭದಲ್ಲಿ, ದಂಡಿಯಾಗಿ ಸೀರೆಗಳ ವಹಿವಾಟು ನಡೆಯುತಿದ್ದವು. ಈ ವ್ಯವಹಾರದಲ್ಲಿ ಕೆಲವೊಮ್ಮೆ ಹಣ ಪಾವತಿಯಾಗುವುದು ಅಷ್ಟೊಂದು ಸಲೀಸಾಗಿರಲಿಲ್ಲ. ಯಾರಾದರು ಅಧಿಕಾರಿಗಳು ಸೀರೆ ತಗಳ್ಳೋಕೆ ಬರ್ತಾರೆ ಅಥವ ಸೀರೆಗಳು ಕಳುಹಿಸಬೇಕು  ಅಂದರೆ, ಇದೊಳ್ಳೆ ತಲೆನೋವಾಯ್ತಲ್ಲ ಎಂದು ವ್ಯಾಪಾರಿಗಳು ಗೋಳಿಡುವುದಕ್ಕೆ ಶುರು ಮಾಡುತಿದ್ದರು. ಯಾಕೆಂದರೆ ಸಿಕ್ಕಾಬಟ್ಟೆ ಚೌಕಾಶಿ ಮಾಡಿ ಮಾಲು ತೆಗೆದು ಕೊಂಡು ಹೋಗ್ತಿದ್ದರು, ಸರಿಯಾಗಿ ದುಡ್ಡು ಕೊಡ್ತಿರಲಿಲ್ಲ. ಕೆಲ ವ್ಯಾಪಾರಿಗಳಿಗಂತೂ, ಇನ್ನೂ ಹಳೆ ಬಾಕಿ ಸಂದಾಯ ಆಗಿರಲಿಲ್ಲ. ಲಾಭ ಅಷ್ಟಕ್ಕಷ್ಟೆ, ಅದೂ ಅಲ್ಲದೆ ಬಾಕಿ ದುಡ್ಡು ಕೊಡಿ ಅಂತ ಹಿಂದೆ ಅಲೆಯೋದು ದೊಡ್ಡ ಕರ್ಮ, ಈ ಅಧಿಕಾರಿ ವರ್ಗದವರಿಂದ ನಮ್ಮಂತ ನೇಕಾರರು ನ್ಯಾಯವಾಗಿ ದುಡಿದು ತಿನ್ನುವುದು ಬಹಳ ಕಷ್ಟ ಎಂದು ಮನಸ್ಸಿನಲ್ಲಿಯೇ ಸಂಕಟ ಪಡುತಿದ್ದರು. 

  

ಅಂದುಕೊಂಡಂತೆ, ಶನಿವಾರ ಕುಟುಂಬ ಸಮೇತ ಮೊಳಕಾಲ್ಮೂರುಗೆ ಸೀರೆ ನೋಡಲು ಬಂದರು. ಸಿದ್ದಣ್ಣ ಅಂಗಡಿಗೆ ಕರೆದುಕೊಂಡು ಹೋದ. ಒಂದು ಅಂಗಡಿ ಬಾಗಿಲು ಹಾಕಿತ್ತು. ಸರಿ ಇನ್ನೊಂದು ಅಂಗಡಿಗೆ ಹೋದರೆ ಅದೂ ಸಹ ಬಾಗಿಲು ಹಾಕಿತ್ತು. ಕೆಲ ಅಂಗಡಿಯಲ್ಲಿ ಒಂದೆರೆಡು ಕೆಲಸಗಾರರಿದ್ದರೆ, ಇನ್ನು ಕೆಲವು ಕಡೆ ಮಕ್ಕಳು ಅಂಗಡಿಯನ್ನು ನೋಡಿಕೊಳ್ಳುತಿದ್ದರು. ಆನಂದಮೂರ್ತಿಗೆ ಬಹಳ ಬೇಸರವಾಯಿತು. ಮನೆಯವರ ಮುಂದೆ ಮುಜುಗರ ಅನ್ನಿಸುವಂತ ಸನ್ನಿವೇಶಗಳು.  ಸಿದ್ದಣ್ಣನಿಗೆ ಮಂಗಳಾರತಿ ಮಾಡಿದರು, ಏನ್ರೀ ಇದು ದುರ್ಗದಿಂದ ಬಂದಿದ್ದಕ್ಕೆ ನನಗೆ ಅವಮಾನ ಮಾಡ್ತಿದ್ದೀರ. ಎಲ್ಲಿಗೆ ಹೋಗಿದ್ದಾರೆ ಎಲ್ಲರೂ? ಸಾರ್, ಫೋನ್ ಮಾಡಿ ವಿಚಾರ್ಸ್ತಿನಿ ಸ್ವಲ್ಪ ಸಮಾಧಾನ ಮಾಡಿಕೊಳ್ಳಿ. ಸಿದ್ದಣ್ಣನಿಗೆ ಕೆಟ್ಟ ಕೋಪ ಬಂದಿತ್ತು. ಈ ವ್ಯಾಪಾರಿಗಳು ಕೈಗೆ ಸಿಕ್ಕಿದರೆ  ಒಬ್ಬೊಬ್ಬರನ್ನ ಹುಟ್ಟಲಿಲ್ಲ ಅನ್ನಿಸಿಬಿಡ್ತೀನಿ ಎಂದು ಹಲ್ಲು ಮಸೆದ. ಅಷ್ಟರಲ್ಲಿ ಒಂದು ಆಲೋಚನೆ ಬಂತು. ನೇರವಾಗಿ ನೇಕಾರರ ಬಳಿ ಕರೆದು ಕೊಂಡು ಹೋಗೋಣ ಎಂದು ಆಲೋಚಿಸಿ, ಹಲವಾರು ಮನೆಗಳಿಗೆ ಎಡತಾಕಿದ. ಪಕ್ಕದಲ್ಲಿನ ಕೆಲ ಊರುಗಳಲ್ಲಿನ ನೇಕಾರರ ಮನೆಗಳಿಗೂ ಬೇಟಿ ನೀಡಿದರು. 


ಹೀಗೆ ಅಲ್ಲಲ್ಲಿ ಅವರಿಗಿಷ್ಟವಾದ ಡಿಸೈನ್ ಗಳ ಸೀರೆಗಳನ್ನ ಕೊಂಡು ಕೊಂಡರು. ಸಿದ್ದಣ್ಣ, ಸಾಹೇಬರ ಪರವಾಗಿ ಚೌಕಾಶಿ ಮಾಡುತಿದ್ದ. ಪಕ್ಕಕ್ಕೆ ಕರೆದು ಉದ್ರೆ ಕೊಡಿ, ದುಡ್ಡನ್ನ ಆದಷ್ಟು ಬೇಗ ಮರಳಿಸುತ್ತೇನೆ. ಅವಶ್ಯ ಬಿದ್ದರೆ, ಆಫೀಸಿನ ಬಳಿ ಬಂದು ತೆಗೆದು ಕೊಂಡು ಹೋಗಬಹುದು ಎಂದು ಬಲವಂತ ಮಾಡುತಿದ್ದ. ಆಗ ನೇಕಾರರು "ಸಾರ್, ಈ ಸೀರೆ ನೇಯ್ಗೆಯಿಂದ ನಮ್ಮ ಜೀವನ ನಡೆಯುತ್ತಿದೆ. ನಾವು ಅವರಿವರ ಬಳಿಯಿಂದ ಸಾಲ ತಂದು ನೇಯುವ ಕೆಲಸ ಮಾಡುತಿದ್ದೇವೆ. ವ್ಯವಹಾರದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರು ಸಹ ನಮಗೆ ಬಹಳ ತೊಂದರೆಯಾಗುತ್ತದೆ, ಬೇಕಾದರೆ ಒಂದು ನೂರೋ ಅಥವ ಇನ್ನೂರೋ ಕಡಿಮೆ ಕೊಡಿ, ಉದ್ರೆ ಮಾತ್ರ ಬೇಡ ಸಾರ್ ಎಂದು ಅವಲತ್ತು ಕೊಳ್ಳುತಿದ್ದರು.  ಸಿದ್ದಣ್ಣನಿಗೆ ಜವಳಿ ವ್ಯಾಪಾರಿಗಳ ಮೇಲೆ ಬಹಳ ಕೋಪ ಬಂದಿತ್ತು, ಸಾಹೇಬರು ಬಂದಾಗ ಬೇಕು ಅಂತಲೇ ಕೈ ಕೊಟ್ಟರಲ್ಲ ಇವರು. ನಾಳೆ ವಿಚಾರಿಸಿಕೊಳ್ಳೋಣ ಎಂದು ಮನಸ್ಸಿನಲ್ಲಿ ಎಣಿಸಿದ. ಸಂಜೆ ಆಗುತ್ತ ಬಂತು, ಸಾಹೇಬರು ಬಂದ ಕೆಲಸ ಆಯಿತು, ಎಂದು ಹೊರಡಲು ಅನುವಾದರು. ಸಿದ್ದಣ್ಣನಿಗೆ ಧನ್ಯವಾದಗಳನ್ನು ಅರ್ಪಿಸಿ ಅಲ್ಲಿಂದ ಹೊರಟು ಹೋದರು. 


ಮರುದಿನ ಕಛೇರಿಗೆ ಬಂದ ಸಿದ್ದಣ್ಣ, ತನ್ನ ಸಹಾಯಕರನ್ನ ಕಳುಹಿಸಿ ಜವಳಿ ಅಂಗಡಿಯಲ್ಲಿ ವ್ಯಾಪಾರಿಗಳು ಇರುವಿಕೆಯನ್ನ ಖಚಿತ ಪಡಿಸಿಕೊಂಡ. ತಡ ಮಾಡದೆ ನೇರವಾಗಿ ಅಂಗಡಿಗೆ  ಹೊರಟೇ ಬಿಟ್ಟ, ನಿನ್ನೆ ಸಾಹೇಬರ ಮುಂದೆ ಆಗಿದ್ದ ಅವಮಾನವನ್ನ ಇಂದು ವ್ಯಾಪಾರಿಗಳಿಗೆ ತಕ್ಕ ಶಾಸ್ತಿ ಮಾಡ ಬೇಕು ಎಂದು ನಿರ್ಧರಿಸಿದ್ದ. ಅಲ್ಲಿಗೆ ಹೋಗಿ ಜವಳಿ ವ್ಯಾಪಾರಿಯನ್ನ ಏರುದನಿಯಲ್ಲಿ ಜಗಳವಾಡಲು ತೊಡಗಿದ. ಮತ್ತೆಲ್ಲರನ್ನ ಅಲ್ಲಿಗೆ ಈ ಕೂಡಲೆ ಬರಬೇಕೆಂದು ಕರೆಯಿಸಿದ.  ಸ್ವಲ್ಪ ಹೊತ್ತಿನಲ್ಲಿ ಎಲ್ಲ ಜವಳಿ ವ್ಯಾಪಾರಿಗಳು ಜಮಾಯಿಸಿದರು. ಸಿದ್ದಣ್ಣ ಸಹ ತನ್ನ ಕಛೇರಿಯ ಸಿಬ್ಬಂದಿಗಳಿಗೆ ಬರ ಹೇಳಿದ್ದ, ಎಲ್ಲರೂ ಮಾತುಕತೆಗೆ ಕುಳಿತು ಕೊಂಡರು. ಮತ್ತದೇ ಏರುದನಿಯಲ್ಲಿ ಮಾತನಾಡಲು ಶುರು ಮಾಡಿದ. ನನ್ನ ಮಾತಿಗೆ ಬೆಲೆ ಕೊಡದೆ ನೀವೆಲ್ಲ ನಿನ್ನೆ ಪಲಾಯನ ಗೈದಿದ್ದೀರಿ. ಕೆಲವರು ಫೋನ್ ಸ್ವಿಚ್ ಮಾಡಿದ್ರೆ, ಇನ್ನೂ ಕೆಲವರು ನಾಟ್ ರೀಚಬಲ್, ಮತ್ತೆ ಕೆಲವರು ತಿರುಪತಿ, ಬೆಂಗಳೂರು ನಲ್ಲಿದ್ದೀನಿ ಎಂದು ಉತ್ತರ ಕೊಡ್ತೀರಿ. ಸರಕಾರಿ ಅಧಿಕಾರಿ ಮಾತಿಗೆ ಬೆಲೆ ಇಲ್ಲವೇ, ನಾನು ಮನಸ್ಸು ಮಾಡಿದ್ರೆ ಏನೆಲ್ಲ ಮಾಡಬಹುದು ಗೊತ್ತೆ? ಯಾವ್ಯಾವುದೋ ಕೇಸ್ ಗಳನ್ನ ಹಾಕಿಸಿ ಬಿಡ್ತೀನಿ. ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಿಬಿಡ್ತೀನಿ. ನನ್ನನ್ನ ಏನೆಂದು ಕೊಂಡಿದ್ದೀರಿ. ನನ್ನಂತ ಅಧಿಕಾರಿಯನ್ನ ಎದುರು ಹಾಕಿ ಕೊಂಡರೆ ಪರಿಸ್ಥಿತಿ ನೆಟ್ಟಗಿರಲ್ಲ. ಹೀಗೆ ಆವೇಶದಿಂದ ಮಾತನಾಡ ತೊಡಗಿದ್ದ.


ಎಲ್ಲವನ್ನ ಕೇಳಿಸಿಕೊಂಡ ಹಿರಿಯ ವ್ಯಾಪಾರಿಯೊಬ್ಬರು, ನೋಡಿ ಸರ್ ತಮ್ಮಲ್ಲಿ ಅಧಿಕಾರ ಇದೆ ಅಂತ ಏನೆಲ್ಲ ಮಾಡಬಹುದು ಎಂದು ತಾವು ಹೇಳಿದ್ದೀರಿ. ಸಂತೋಷ ಸರ್. ಆದರೆ ಸರಕಾರಿ ಅಧಿಕಾರಿಗಳು ಜನರ ಸೇವೆ ಮಾಡುವುದಿಕ್ಕೆ ಇದ್ದಾರೆ ಅಂತ ನಾವು ತಿಳಿದು ಕೊಂಡಿದ್ದಿವಿ. ಬಹುಶಃ ನಮ್ಮದು ತಪ್ಪು ಗ್ರಹಿಕೆ ಅಂತ ಈಗ ಅರಿವಾಗ್ತಯಿದೆ. ಎಂದರು.


ಸಿದ್ದಣ್ಣ ನಿಗೆ ಈ ಮಾತಿನಿಂದ ಸ್ವಲ್ಪ ಇರಿಸುಮುರುಸಾಯಿತು. ನಿಮ್ಮ ಕಥೆ ನಮ್ಮತ್ರ ಬೇಡ ಸ್ವಾಮಿ. ನೀವೆಲ್ಲ ನಿನ್ನೆ ಯಾಕೆ ಓಡಿ ಹೋಗಿದ್ದು ಅಂತ ಗೊತ್ತಿದೆ. ಸ್ವಲ್ಪ ಕಾಯಿರಿ, ನಾನು ಹೇಗೆ ಉತ್ತರ ಕೊಡ್ತೀನಿ ಅಂದರೆ ಮೈ ಮುಟ್ಟಿ ನೋಡಿ ಕೊಳ್ಳಬೇಕು ಹಂಗೆ ಉತ್ತರ ಕೊಡ್ತೀನಿ. 


ಸರಿ ಸಾರ್, ಶ್ರೀನಿವಾಸನ ಹಳೆ ಬಾಕಿ ಏನಾಯ್ತು? ಇನ್ನೂ ಎಷ್ಟು ದಿನ ಕಾಯಬೇಕು? ಬಾಕಿ ಹಣಕ್ಕೆ ಬಡ್ಡಿ ಸೇರಿಸಿ ಕೊಡ್ತೀರಾ?  ನಿಮ್ಮ ಇಲಾಖೆ ಮಾತ್ರ ಅಲ್ಲ, ಇದೇ ರೀತಿ ಬೇರೆ ಬೇರೆ ಡಿಪಾರ್ಟ್ ಮೆಂಟ್ ನವರು ಎಷ್ಟೊಂದು ಬಾಕಿ ಉಳಿಸಿಕೊಂಡಿದ್ದಾರೆ ಗೊತ್ತಾ. ಕೆಲವರು ಟ್ರಾನ್ಸ್ ಫರ್ ಆಗಿ ಹೋಗಿದ್ದಾರೆ ಅವರನ್ನಹುಡುಕಿ ಹಣ ವಸೂಲಿ ಮಾಡುವುದು ಎಷ್ಟು ಕಷ್ಟ ಆಗಿದೆ ನಿಮಗೆ ಗೊತ್ತಾ? ನಮ್ಮ ನೇಕಾರರು, ಜವಳಿ ಅಂಗಡಿಯವರನ್ನ ನೀವೆಲ್ಲಏನು ಅಂದು ಕೊಂಡಿದ್ದೀರಿ. ನಮಗೆ ದುಡ್ಡು ಆಕಾಶ ದಿಂದ ಉದರಲ್ಲ ಸಾರ್, ನಾವು ಲಕ್ಷಾಂತರ ರೂಪಾಯಿಯನ್ನ ಸಾಲ ಮಾಡ್ತೀವಿ, ಆ ಹಣಕ್ಕೆ ಬಡ್ಡಿ ಸಹ ಕಟ್ತೀವಿ, ವ್ಯಾಪಾರ ಆದಮೇಲೆ ತೀರಿಸ್ತೀವಿ. ಕೆಲಸಗಾರರಿಗೆ ಕೂಲಿ ಕೊಡ್ತೀವಿ. ಮಾಲು ಕೊಟ್ಟವರಿಗೆ ಹಣ ಮರಳಿ ಹಿಂತಿರುಗಿಸ್ತಿವಿ. ಅಂಗಡಿ ಬಾಡಿಗೆ ಕಟ್ತೀವಿ. ಜಿಎಸ್ಟಿ, ಕಟ್ತೀವಿ, ಲೈಟ್ ಬಿಲ್, ಕಂದಾಯ, ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಮನೆಯ ಹಿರಿಯರ ಆಸ್ಪತ್ರೆ, ಔಷದ ಖರ್ಚು ಹೀಗೆ ಹಲವಾರು ಖರ್ಚುವೆಚ್ಚ ಎಲ್ಲವನ್ನ ಈ ಸೀರೆ ವ್ಯವಹಾರದಿಂದ ನಡೆಸಿಕೊಂಡು ಬರ್ತೀವಿ, ಅಂತಹದ್ರಲ್ಲಿ, ನೀವು ತಿಂಗಳು ಗಟ್ಟಲೆ ದುಡ್ಡು ಕೊಡದೆ ಸತಾಯಿಸಿದ್ರೆ, ನಾವು ಏನ್ ಮಾಡ ಬೇಕು ಸಾರ್? ನೇಕಾರರು, ಜವಳಿ ವ್ಯಾಪಾರಿಗಳು ಅಂದರೆ ಅಷ್ಟು ನಿಮಗೆಲ್ಲ ಅಷ್ಟೊಂದು ಸದರಾನ? 

ಹಿಂದೆ ರಾಜ ಮಹರಾಜರು, ನೇಕಾರರಿಗೆ ಕಷ್ಟ ಆಗಬಾರದು ಅಂತ ಎಷ್ಟೊಂದು  ಅನುಕೂಲ ಮಾಡಿಕೊಟ್ಟಿದ್ದರು ಅಂತ ನಿಮಗೆ ಗೊತ್ತಿದೆಯೇ? ರಾಜ್ಯ ಸರ್ಕಾರ ಗಳು ಮತ್ತು ಕೇಂದ್ರ ಸರ್ಕಾರಗಳು ಸಹ ನೇಕಾರರ ಏಳಿಗೆಗೆ ಏನೆಲ್ಲ ಯೋಜನೆ ಹಾಕಿಕೊಡ್ತಾಯಿದ್ದಾರೆ, ಅವರೆಲ್ಲ ನಿಮ್ಮ ಹಾಗೆ ತೊಂದರೆ ಕೊಡ್ತಾರಾ? ನಾವು ಮಾಡುವ ನೇರವಾದ ವ್ಯಾಪಾರದ ಹಣ ಕೇಳಿದರೆ ನಿಮಗೆ ಕೋಪ ಬರುತ್ತೆ ಅಲ್ಲವೇ. ಅದಕ್ಕೆ ಈ ಸಹವಾಸವೇ ಬೇಡ ಅಂತ, ನಾವು ನಿಮ್ಮ ಆಫೀಸರ್ ಗಳು ಸೀರೇ ನೋಡೋಕೆ ಬರ್ತಾರೆ ಅಂದರೆ ನಾವೆಲ್ಲ ಅಷ್ಟೊಂದು ಆಸಕ್ತಿ ತೋರಿಸಲ್ಲ. ನಮಗೆ ನಿಮ್ಮಗಳ ವ್ಯವಹಾರ ಬೇಡ, ಸಾಕಾಗಿ ಹೋಗಿದೆ ಸ್ವಾಮಿ.


ಸಿದ್ದಣ್ಣ ಎಲ್ಲ ಮಾತುಗಳನ್ನ ಕೇಳಿಸಿಕೊಂಡು, ಉಡಾಫೆ ಯಿಂದ, ರೀ ಸುಮ್ನಿರಿ. ನಿಮ್ಮ ಕಾಗಕ್ಕ ಗೂಬಕ್ಕ ಕಥೆಗಳನ್ನ ಕೇಳಕ್ಕೆ ನಾನು ಬಂದಿಲ್ಲ. ನಾನು ಏನು ಅಂತ ಇನ್ನು ಸ್ವಲ್ಪ ದಿನದಲ್ಲಿ ತೋರಿಸ್ತೀನಿ, ನೋಡ್ತೀರಿ... ಎಂದು ಅವಾಜು ಹಾಕಿದ.


ಆಗ ಆ ಹಿರಿಯರು, ಸ್ವಾಮಿ ನಾವು  ಇಷ್ಟೆಲ್ಲಾ ಹೇಳಿದರು ನಿಮಗೆ ಅರ್ಥ ಆಗಿಲ್ಲ ಅಂದ್ರೆ, ನಿಮಗೆ ದೇವರು ಬಂದು ಬುದ್ದಿ ಹೇಳಿದರು ಅರ್ಥ ಆಗಲ್ಲ ಬಿಡಿ. ಕರ್ಮ ಅಂದರೆ ಗೊತ್ತಲ್ಲ. ಅದು ಏನು ಅಂತ ಅರ್ಥ ಮಾಡಿಕೊಳ್ಳಿ. ಆವಾಗ ನಿಮಗೆ ಇದೆಲ್ಲ ಅರ್ಥ ಆಗುತ್ತೆ. ಆದರೆ, ನಾವು ಮಾಡಿದ ಕರ್ಮ ಅನುಭವಿಸಲೇ ಬೇಕು. ಆ ದೇವರು ಅದನ್ನ ತಪ್ಪಿಸಿಕೊಳ್ಳುವುದಿಕ್ಕೆ ಬಿಡುವುದಿಲ್ಲ. ನಮ್ಮ ಜನರ ನಿಟ್ಟುಸಿರು, ಶಾಪ, ಬೈಗುಳ ಒಂದಲ್ಲ ಒಂದು ರೂಪದಲ್ಲಿ ನಮಗೆ ಅನ್ಯಾಯ ಮಾಡಿದವರಿಗೆ ತಟ್ಟದೇ ಬಿಡಲ್ಲ. ಯಾರ್ಯಾರೋ ಏನೇನೋ ಆಗಿ ಹೋಗಿದ್ದನ್ನ ನಾನು ನನ್ನ ಕಣ್ಣಾರೆ ನೋಡಿದ್ದೀನಿ. ಬದುಕಿದ್ದಾಗ ನಾಲ್ಕು ಜನರ ಕೈಲಿ ಒಳ್ಳೆಯ ಮನುಷ್ಯ ಅಂತ ಬಾಳಿ ಬದುಕಿದರೆ ಅವನ ಜೀವನಕ್ಕೊಂದು ಅರ್ಥ ಇರುತ್ತೆ. ಅದು ಬಿಟ್ಟು, ಅವನು ಲಫಂಗ, ಲುಚ್ಚಾ, ಭ್ರಷ್ಟ, ಸುಳ್ಳುಗಾರ, ಹೀಗೆ ದಿನಂಪ್ರತಿ ಬೈಗುಳಗಳಿಂದ, ನೂರಾರು ಜನರ ಶಾಪದಿಂದ ಎಷ್ಟು ದಿನ ಬದುಕಬಲ್ಲ. ಅವನ ಬದುಕೇ ವ್ಯರ್ಥ.  ಒಮ್ಮೊಮ್ಮೆ ಆ ಶಾಪ ಅವರ ಮನೆಯವರನ್ನ ಸಹ ಬಿಡಲ್ಲವಂತೆ. ಎಲ್ಲವನ್ನ ದೇವರೇ ನೋಡಿಕೊಳ್ತಾನೆ ಬಿಡಿ. ನೀವೆಲ್ಲಾ ಇಷ್ಟೊಂದು ಸತಾಯಿಸಿದ್ದೀರಿ, ಆ ನೋವು ಸಂಕಟ ನಮಗೆ ಗೊತ್ತಿದೆ.  ಒಂದು ಸೀರೆ ನೇಯುವುದರ ಹಿಂದೆ ನೇಕಾರರ ಸಾಕಷ್ಟು ಶ್ರಮ ಇರುತ್ತದೆ. ಎಷ್ಟೊಂದು ಜನರ ಮನೆ ಬೆಳಗುವ ಕೆಲಸ ಈ ನೇಕಾರಿಕೆಯಿಂದ ನಡೆಯುತ್ತಿದೆ. ಅವರ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕರೆ ಅದಕ್ಕಿಂತ ಬೇರೆಯದನ್ನೇನು ಯಾರೂ ಬಯಸುವುದಿಲ್ಲ. ಆದರೆ, ಶ್ರಮಜೀವಿಗಳಾದ, ರೈತರನ್ನ ನೇಕಾರರನ್ನ ಜತೆಗೆ  ಜವಳಿ ವ್ಯಾಪಾರಿಗಳನ್ನ ಹೀಗೆ ಶೋಷಿಸುವುದು ಎಷ್ಟು ಸರಿ? ನಮ್ಮ ಕಣ್ಣೀರು, ನಮ್ಮ ನಿಟ್ಟುಸಿರು ನಿಮಗೆ ತಟ್ಟ ಬಾರದು ಸಾರ್. ನೀವು ಸಹ ಚೆನ್ನಾಗಿ ಬಾಳಿ ಬದುಕಿ, ಈ ತರಹ ವ್ಯವಹಾರ ಬೇಡ ಸರ್. 


ಸಿದ್ದಣ್ಣ ನಿಗೆ ಈ ಮಾತುಗಳನ್ನ ಕೇಳಿ ಕಸಿವಿಸಿ ಉಂಟಾಯಿತು. ಹೌದಲ್ವೇ, ನನ್ನ ಹಿಂದೆ ಎಷ್ಟು ಜನ ಬೈದಾಡಿಕೊಂಡಿದ್ದಾರೋ? ಎಷ್ಟು ಜನ ಶಾಪ ಹಾಕಿದ್ದಾರೋ, ಏನೋ? ಇಂತಹ ವ್ಯವಹಾರ ನನಗ್ಯಾಕೆ ಬೇಕು, ನಾನ್ಯಾಕೆ ಇದರ ಬಲೆಯಲ್ಲಿ ಸಿಲುಕಲಿ. ಆದರೆ ಇವರಿಗೆ ಏನು ಉತ್ತರ ಕೊಡಲಿ ಎಂದು ಯೋಚಿಸುತ್ತಾ..... ಆಯ್ತು, ನಿಮ್ಮ ಬಾಕಿ ಏನಿದೆಯೋ ಅದನ್ನೆಲ್ಲ ನಾನು ವಸೂಲಿ ಮಾಡಿಸಿಕೊಡ್ತೀನಿ. ಇನ್ನೊಂದು ಸಾರಿ ನೀವು ಹೀಗೆಲ್ಲ ಮಾಡಬೇಡಿ. ನಮ್ಮ ಕಡೆ ರೇಶ್ಮೆ ಸೀರೆಗಳಿಗೆ ಒಳ್ಳೆ ಹೆಸರಿದೆ. ಎಂದು ಅಲ್ಲಿಂದ ಹೊರಟು ಹೋದ.


ಆಯ್ತು ಸಾರ್, ನಮ್ಮ ಹಳೇ ಬಾಕಿ ಬರಲಿ ಆಮೇಲೆ ನೋಡೋಣ ಎಂದರು. 


---

ಬರಹ:- ಪಿ.ಎಸ್.ರಂಗನಾಥ - ರಾಂಪುರ

Photo Credit:- Google Images.

ಸಾಂಧರ್ಭಿಕ ಚಿತ್ರ