Saturday, November 12, 2022

ಪದ್ಮಶಾಲಿ ಪ್ರತಿಭೆ ಉದಯೋನ್ಮುಖ ಚಿತ್ರ ನಿರ್ದೇಶಕ ಶ್ರೀ ಅವಿರಾಮ್ ಕಂಠೀರವ

ಈ ಭೂಮಿ ಮೇಲೆ ಜನ ಹುಟ್ಟಿದ ಮೇಲೆ ಬಾಳಿ ಬದುಕುವುದಕ್ಕೆ ಒಂದಲ್ಲ ಒಂದು ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ ಎನ್ನುವುದನ್ನ ನಾವೆಲ್ಲರೂ ಕಾಣುತಿದ್ದೇವೆ. ಹುಟ್ಟಿದ ಮೇಲೆ ನಾಲ್ಕು ಜನ ಗುರುತಿಸುವಂತಹ  ಏನ್ ಸಾಧನೆ ಮಾಡಿದೆ ಅಂತ ಪ್ರಶ್ನೆ ಕೇಳಿದರೆ, ಕೆಲಸ ಮಾಡಿಕೊಂಡು ಜೀವನ ನಡೆಸುವುದೇ ಒಂದು ದೊಡ್ಡ ಸಾಧನೆ ಅದಕ್ಕಿಂತ ಬೇರೆ ಏನು ಮಾಡೋಕಾಗುತ್ತೆ? ಏನಾದರು ಮಾಡಬೇಕೆಂದರೆ, ಸಮಯ ಬೇಕು, ಹಣ ಬೇಕು, ಬೆಂಬಲ ಬೇಕು, ಗಾಡ್ ಫಾದರ್ ಬೇಕು, ಹೀಗೆ ಬೇಕು ಬೇಡಗಳ ಪಟ್ಟಿಯನ್ನ ಜನ ತೆರೆಯುತ್ತಾ ಹೋಗುತ್ತಾರೆ. 

ಇಲ್ಲೊಬ್ಬರು ಇದ್ದಾರೆ, ಇವರು ಎಲ್ಲರಂತೆ ಪದವಿ ಪಡೆದು ಕೈಗೆ ಸಿಕ್ಕಿದ ಕೆಲಸ ಮಾಡಿಕೊಂಡು ಇರಬಹುದಿತ್ತು, ಆದರೆ ಸಿನಿಮಾದ ಮೇಲಿನ ಪ್ರೀತಿ, ಸಿನಿಮಾ ರಂಗದಲ್ಲಿ ಏನಾದರು ಸಾಧಿಸ ಬೇಕು ಅಂತ ಕನಸನ್ನ ಹೊತ್ತು ಚಿತ್ರರಂಗದಲ್ಲಿ ಕಾಲಿಟ್ಟು ಹಂತ ಹಂತವಾಗಿ ಬೆಳೆಯುತಿದ್ದಾರೆ ಅವರೇ "ಅವಿರಾಮ್ ಕಂಠೀರವ".

 2018 ರಲ್ಲಿ ತೆರೆಕಂಡ ತಾರಕ್ ಪೊನ್ನಪ್ಪ ಅಭಿನಯದ `ಕನ್ನಡ ದೇಶದೋಳ್' ಚಿತ್ರವನ್ನು ಮತ್ತು . 2021 ರಲ್ಲಿ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರಗಳನ್ನನಿರ್ದೇಶಿಸಿದ  ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಇವರು.

ಇವರು ಪದ್ಮಶಾಲಿ ಸಮಾಜದ ತುಮ್ಮ ಮನೆತನಕ್ಕೆ ಸೇರಿದವರು, ತಂದೆ ತುಮ್ಮ ಶ್ರೀ ಪಿ.ವಿ.ನಾಗಭೂಷಣ್ ಮತ್ತು ತಾಯಿ ಶ್ರೀಮತಿ ನ್ಯಾಯಂ ರಮಾಮಣಿ ದಂಪತಿಗಳ ಪುತ್ರ.  ಊರು ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ. ವಿದ್ಯಾಭ್ಯಾಸ BSC in microbiology. 

ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಹಠ ಹಿಡಿದು, ಯಾವ ನಂಟು, ಯಾವ ಗಾಡ್ ಫಾದರ್ ಇಲ್ಲದೆ ಇದ್ದರು ಮೊದಲಿಗೆ ಸಹಾಯ ನಿರ್ದೇಶಕನಾಗಿ ನಂತರ ಸಹ ನಿರ್ದೇಶಕನಾಗಿ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿ ನಂತರ ಸ್ವತಂತ್ರ ನಿರ್ದೇಶಕನಾಗಿದ್ದಾರೆ ಅವಿರಾಮ್.

ಅವರ ಸಾಧನೆಗಳು ಈ ಕೆಳಗಿನಂತಿವೆ: -

ನಿರ್ದೇಶಿದ ಚಲನಚಿತ್ರಗಳು: - 

1. 2011 ರಲ್ಲಿ ಬಿಡುಗಡೆಯಾದ "ನೂರಾರು ಕನಸು" ಮಕ್ಕಳ ಚಲನಚಿತ್ರ. ( ಸರ್ಕಾರಿ ಶಾಲೆ ಮತ್ತು ಕಾನ್ವೆಂಟ್ ಮಕ್ಕಳ ಮನಸ್ಥಿತಿಯನ್ನು ಸಾರುವ ಚಲನ ಚಿತ್ರ )

2.  2014 ರಲ್ಲಿ "ಅನ್ನದಾತಂ ಶರಣಂ" ಎಂಬ ರೈತರನ್ನು ಶ್ಲಾಘಿಸುವ ದೃಶ್ಯಗೀತೆ‌ಯನ್ನು ರಚಿಸಿ, ನಿರ್ದೇಶನದ ಜೊತೆಗೆ ನಿರ್ಮಾಣ.

3. 2015 ರಲ್ಲಿ " ಇಂಡಿಯಾ ರೇಪ್ಡ್ " ಎಂಬ ಭಾರತದ ಭ್ರಷ್ಟಾಚಾರ ವಿರೋಧಿಸುವ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣ.

4. 2016 ಲ್ಲಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಾಮಾಜಿಕ ಜಾಲತಾಣ Facebook ನಲ್ಲಿ ಧಾರವಾಹಿ ನಿರ್ದೇಶನದ ಜೊತೆಗೆ ನಿರ್ಮಾಣ. 

5. 2018 ರಲ್ಲಿ ಕನ್ನಡ ನಾಡು ನುಡಿಯ ಬಗ್ಗೆ "ಕನ್ನಡ ದೇಶದೊಳ್" ಎಂಬ ಅಪ್ಪಟ ಕನ್ನಡಮಯ ಚಲನಚಿತ್ರ ನಿರ್ದೇಶನದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ದೇಶದೊಳ್ ಅಭಿಯಾನದ ಹಲವಾರು ಕಾರ್ಯಕ್ರಮಗಳ ಆಯೋಜನೆ. 

6. 2021 ರಲ್ಲಿ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರದ ನಿರ್ದೇಶನ. 

7. 2022 ರಲ್ಲಿ ರಾಘವೇಂದ್ರ ರಾಜ್ ಕುಮಾರ್ ರವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ " ಆಪರೇಷನ್ ಯು " ಎಂಬ ಕಮರ್ಷಿಯಲ್ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಚಿತ್ರಕ್ಕೆ ನಿರ್ದೇಶನ. 

8. ಇಲ್ಲಿಯವರೆಗೆ ಕರ್ನಾಟಕದ 13 ಜಿಲ್ಲೆಗಳ ಕುರಿತು ಸರ್ಕಾರದಿಂದ ನಿರ್ಮಾಣ ಆಗಿರುವ ಆಯಾ ಜಿಲ್ಲೆಗಳ ಸಾಕ್ಷ್ಯಚಿತ್ರದ ನಿರ್ದೇಶನ.

2018 ರಲ್ಲಿ ಬಿಡುಗಡೆಯಾದ ಕನ್ನಡ ನಾಡು ನುಡಿಯ ಬಗೆಗಿನ ‘ಕರುನಾಡಲ್ಲಿ ಕನ್ನಡಿಗನೇ ಕಂಠೀರವ’ ಎಂಬ ಅಡಿಬರಹ ಇದ್ದ  "ಕನ್ನಡ ದೇಶದೊಳ್" ಚಲನಚಿತ್ರ , ಚಿತ್ರದಲ್ಲಿ ಇವತ್ತಿನ ಕನ್ನಡ ಯಾವ ಪರಿಸ್ಥಿತಿಯಲ್ಲಿದೆ, ಮುಂದೇನು ಆಗುತ್ತದೆ ಎಂಬುದನ್ನು ಕಮರ್ಷಿಯಲ್ ಮಾದರಿಯಲ್ಲೇ ಚಿತ್ರದಲ್ಲಿ ತೋರಿಸಿದ್ದಾರೆ. ಈ ಸಿನಿಮಾ ಬೆಂಗಳೂರಿನ ಈಗಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ, ಚಿತ್ರದಲ್ಲಿ ಯಾವುದನ್ನೂ ವೈಭವೀಕರಿಸದೆ ಎಲ್ಲವನ್ನೂ ನೈಜವಾಗಿ ತೋರಿಸುವ ಪ್ರಯತ್ನ ಮಾಡಿದ್ದರು. ಕನ್ನಡ ಭಾಷೆಯು ಆಟೋದ ಮೇಲೆ, ಫೇಸ್ಬುಕ್ನಲ್ಲಿ ಚಾಲ್ತಿಯಲ್ಲಿದ್ದರೆ ಸಾಕಾಗುವುದಿಲ್ಲ. ಇದು ಎಲ್ಲಾ ಕಡೆ ಪಸರಿಸಬೇಕು. ಇದಕ್ಕಾಗಿ ಹೋರಾಟ ಮಾಡುವುದನ್ನು ಚಿತ್ರರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದರು. ಸಂಪೂರ್ಣವಾಗಿ ಹೊಸಬರನ್ನೇ ಹಾಕಿಕೊಂಡುಈ ಚಿತ್ರವನ್ನ ನಿರ್ಮಿಸಿದ್ದರು.

2021 ರಲ್ಲಿ ಬಿಡುಗಡೆಯಾದ "ಕಲಿವೀರ" ಎಂಬ ಆಕ್ಷನ್ ಮನರಂಜನಾ ಕಮರ್ಷಿಯಲ್ ಚಲನಚಿತ್ರ, ಚಿತ್ರರಸಿಕರ ಮನಗೆದ್ದಿತ್ತು. ಎರಡನೇ ಲಾಕ್ ಡೌನ್ ನಂತರ ಬಿಡುಗಡೆಯಾದ ಮೊದಲ ಚಲನ ಚಿತ್ರ ಕಲಿವೀರ.  ಅದ್ಭುತವಾದ ಮೇಕಿಂಗ್ ನಿಂದ ಅತ್ಯುತ್ತಮ ವಿಮರ್ಶೆಗಳನ್ನ ಈ ಚಿತ್ರ ಪಡೆದಿತ್ತು.  ದಕ್ಷಿಣ ಭಾರತದ ಚಿತ್ರರಂಗದಲ್ಲೇ ಮೊದಲ ಬಾರಿಗೆ ಕಲಿವೀರ ಸಿನಿಮಾದಲ್ಲಿ ರಿಯಲ್ ಸ್ಟಂಟ್ಸ್ ಪ್ರದರ್ಶಿಸಲಾಗಿತ್ತು. OTT ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಲು ಪ್ರಸಿದ್ದ ಕಂಪನಿಗಳು ಸಂಪರ್ಕಿಸಿದ್ದಾರೆ, ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರವನ್ನ OTT ಪ್ಲಾಟ್ ಫಾರ್ಮ್ ನಲ್ಲಿ ನೋಡಬಹುದಾಗಿದೆ. 

ಮುಂದಿನ ಚಿತ್ರ ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಆಪರೇಷನ್ ಯು' ಚಿತ್ರದಲ್ಲಿ ಉತ್ತಮ್ ಪಾಲಿ, ಯಶ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಸೋನಲ್ ಮೊಂಥೆರೋ-ಲಾಸ್ಯ ನಾಗರಾಜ್ ನಾಯಕಿಯರಾಗಿ ನಟಿಸುತಿದ್ದಾರೆ.  ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು. ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. 

ವಿದ್ಮಯಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉದ್ಯಮಿ ಮಂಜುನಾಥ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಆರ್ಮುಗ ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕ ಅವಿನಾಶ್, ಸ್ಪರ್ಶ ರೇಖಾ, ಗೋವಿಂದೇ ಗೌಡ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸುತಿದ್ದಾರೆ.

ಅವಿರಾಮ್ ಅವರು ಪ್ರತಿ ಸಿನಿಮಾದಲ್ಲೂ ಒಂದಲ್ಲ ಒಂದು ಹೊಸ ಪ್ರಯತ್ನವನ್ನ ಮಾಡುತ್ತಾರೆ, ಕನ್ನಡ ದೇಶದೋಳ್ ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿದ್ದರು. ಕಲಿವೀರದಲ್ಲಿ ರಿಯಲ್ ಸ್ಟಂಟ್ಸ್ ಹೊಸ ಬಗೆಯ ಮೋಶನ್ ಪೋಸ್ಟರ್, ಈಗ ಆಪರೇಶನ್ ಯು ಎನ್ನುವ ಹೊಸ ರೀತಿಯ ಚಿತ್ರದ ಹೆಸರು. ಇವರ ಅವಿರತ ಶ್ರಮದಿಂದ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನದನ್ನ ಸಾಧಿಸಲು ಸತತ ಪ್ರಯತ್ನಿಸುತಿದ್ದಾರೆ.

ದೊಡ್ಡ ನಟರ ಜತೆ ಹಾಗೂ ದೊಡ್ಡ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸಮಾಡಲು ಅವಕಾಶಕ್ಕಾಗಿ ಕಾಯುತಿದ್ದಾರೆ,  ಇನ್ನೂ ಹೆಚ್ಚಿನದನ್ನ ಚಿತ್ರರಂಗದಲ್ಲಿ ಸಾಧಿಸುವ ಆಕಾಂಕ್ಷೆ, ಹಂಬಲ ಇವರ ಮನದಲ್ಲಿದೆ. ದೇವರು ಇವರಿಗೆ ಇನ್ನೂ ಹೆಚ್ಚಿನ ಅವಕಾಶವನ್ನ ಕೊಟ್ಟು ದೊಡ್ಡ ಯಶಸ್ಸನ್ನ ಹೆಸರು, ಕೀರ್ತಿ ಗಳಿಸಿ ನಮ್ಮ ಪದ್ಮಶಾಲಿ ಸಮಾಜಕ್ಕೆ ಹೆಸರನ್ನು ತರಬೇಕೆನ್ನುವುದು ನಮ್ಮ ಆಶಯ.





















Tuesday, November 8, 2022

ಪದ್ಮಶಾಲಿ ಪ್ರತಿಭೆ ಅಂತರಾಷ್ಟ್ರೀಯ ಕ್ರೀಡಾಪಟು "ಹೆಚ್.ಎಮ್.ಜ್ಯೋತಿ"

 

ಭಾರತದ ಅಥ್ಲೆಟಿಕ್ಸ್‌ ಕ್ರೀಡಾ ಲೋಕದಲ್ಲಿ ನಮ್ಮ ಪದ್ಮಶಾಲಿ ಸಮಾಜದ ಹೆಮ್ಮೆಯ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಎಚ್‌.ಎಂ.ಜ್ಯೋತಿ ಯವರ ಸಾಧನೆ ಗಮನಾರ್ಹವಾದುದು.  ಇವರು ಹುಟ್ಟಿ ಬೆಳೆದಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ, ಶ್ರೀ ಮಂಜುನಾಥ್‌ ಮತ್ತು ಶ್ರೀಮತಿ ತಿಪ್ಪಮ್ಮ ದಂಪತಿಗಳ  ಪುತ್ರಿ. ತಂದೆ ಕೃಷಿಕರು, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಜ್ಯೋತಿಯವರ ಸಾಧನೆ ಅಪಾರ ಮತ್ತು ಇತರರಿಗೂ ಮಾದರಿ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಲವಾರು ಟೂರ್ನಿಗಳಲ್ಲಿ ಜಯಗಳಿಸಿ ಹಲವು ಪದಕಗಳನ್ನ ಗಳಿಸಿದ್ದಾರೆ.

ಬಹಳ ಮುಖ್ಯವಾಗಿ 2005 ರ ಏಶಿಯನ್ ಟ್ರಾಕ್ ಮತ್ತು ಫೀಲ್ಡ್ ನಲ್ಲಿ ಚಿನ್ನದ ಪದಕ, 2009 ರ ಏಶಿಯನ್ ಗೇಮ್ಸ್ ಕಂಚಿನ ಪದಕ, ಏಶಿಯನ್ ಆಲ್ ಸ್ಟಾರ್ಸ್ ನಲ್ಲಿ ಚಿನ್ನದ ಪದಕ ಮತ್ತು 2010ರಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕಗಳಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ. ಇವರು, 100, 200, 400 ಮೀಟರ್ಸ್‌ ಓಟ ಮತ್ತು 4 x100 ಮೀಟರ್ಸ್‌ ರಿಲೇಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿರುವ ಕೀರ್ತಿಗೂ ಭಾಜನರಾಗಿದ್ದಾರೆ. 100 ಮತ್ತು 200 ಮೀಟರ್ಸ್‌ ಓಟಗಳಲ್ಲಿ ಕ್ರಮವಾಗಿ 11.30 ಹಾಗೂ 23.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕರ್ನಾಟಕದ ಮಟ್ಟಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. 2016ರ ಬೆಸ್ಟ್‌ ಅಥ್ಲೀಟ್‌ ಪ್ರಶಸ್ತಿಯೂ ದೊರೆತಿದೆ. ಭಾರತದ ವೇಗದ ಮಹಿಳೆ ಎಂಬ ಬಿರುದು ಕೂಡ ಜ್ಯೋತಿಯವರಿಗಿದೆ.

ಜ್ಯೋತಿಯವರು ಚಿಕ್ಕವರಿದ್ದಾಗ ಅವರ ಅಕ್ಕ ಸರಿತಾ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆಗ ಅವರಿಗೆ ಸಾಕಷ್ಟು ಬಹುಮಾನಗಳು ದೊರೆಯುತಿದ್ದದನ್ನು ಕಂಡು, ಇವರಲ್ಲೂ ಸಹ ಅಕ್ಕನ ಹಾಗೆ ಬಹುಮಾನ ಗೆಲ್ಲಬೇಕೆಂಬ ಆಸೆ ಚಿಗುರೊಡೆದಿತ್ತು. ಒಮ್ಮೆ ಅವರು ಅಕ್ಕನ ಜತೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅಕ್ಕನನ್ನೇ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಅಲ್ಲಿ ಅವರ ಸಾಮರ್ಥ್ಯ ಕಂಡು ಬಹಳಷ್ಟು ಜನ ಪ್ರಶಂಸೆಯ ಮಾತುಗಳನ್ನಾಡಿದ್ದರು. ಅವರ ಮೆಚ್ಚುಗೆಯೇ ಜೀವನದ ಮುಂದಿನ ಗುರಿಗೆ ಸ್ಫೂರ್ತಿಯಾಯಿತು. 8ನೇ ತರಗತಿಗೆ ಮನೆಯವರು ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಹಾಸ್ಟೆಲ್‌ಗೆ ಸೇರಿಸಿದರು. ಅಲ್ಲಿಂದ ಕ್ರೀಡಾ ಬದುಕಿನ ಪಯಣ ಆರಂಭವಾಯಿತು.

ಕ್ರೀಡಾ ನಿಲಯದಲ್ಲಿದ್ದ ಮಂಜುನಾಥ್‌ ಎನ್ನುವ ಕೋಚ್‌  ಅವರು ಜ್ಯೋತಿಯವರ ಪ್ರತಿಭೆಗೆ ಸಾಣೆ ಹಿಡಿದವರು. ಬಳಿಕ ರವಿ ಅವರೂ ಕೂಡಾ ಹಲವು ಕೌಶಲ್ಯಗಳನ್ನು ಹೇಳಿಕೊಟ್ಟಿದ್ದರು. ಹೀಗೆ ಎಲ್ಲರ ಮಾರ್ಗದರ್ಶನ ದಲ್ಲಿ ಓಟದಲ್ಲಿ ನೈಪುಣ್ಯತೆಯನ್ನ ಸಂಪಾದಿಸಿ ಜೂನಿಯರ್‌ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿದರು. ಕ್ರಮೇಣ ಇವರು ಸೀನಿಯರ್‌ ತಂಡದ ತರಬೇತಿ ಶಿಬಿರಕ್ಕೂ ಆಯ್ಕೆಯಾದರು. 2004ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ ನ 4‌‍X400 ಮೀಟರ್ಸ್‌ ರಿಲೇಯಲ್ಲಿ ಭಾಗವಹಿಸಿ ಚಿನ್ನ ಗೆದ್ದರು. ಅಲ್ಲಿಂದ ಅವರ ಕ್ರೀಡಾ ಬದುಕಿಗೆ ಹೊಸ ತಿರುವು ಸಿಕ್ಕಿತು. ಶಾಲಾ ದಿನಗಳಲ್ಲಿ ಟ್ರಿಪಲ್‌ ಜಂಪ್‌ ಸೇರಿದಂತೆ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದರು. ತುಂಬಾ ಚೆನ್ನಾಗಿ ಓಡುತ್ತಿದ್ದುದರಿಂದ ಇದರಲ್ಲಿಯೇ ಮುಂದುವರಿಯುವಂತೆ ಕೋಚ್‌ಗಳು ಸಲಹೆ ನೀಡಿದ್ದರು. ಹೀಗಾಗಿ ಓಟದಲ್ಲಿ ಗಮನ ಕೇಂದ್ರೀಕರಿಸಿದರು. “100, 200, 400 ಮತ್ತು 4x100 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ. ನಾಲ್ಕೂ ಸ್ಪರ್ಧೆಗಳಲ್ಲೂ ಕಣಕ್ಕಿಳಿಯುವುದು ಆರಂಭದಲ್ಲಿ ತುಂಬಾ ಕಷ್ಟ ಅನಿಸುತ್ತಿತ್ತು ಆದರೆ ಸಾಧನೆಯ ಹಸಿವು ಬಡಿದೆಬ್ಬಿಸುತಿದ್ದರಿಂದ ಕ್ರಮೇಣ ಕಠಿಣ ತಾಲೀಮು ನಡೆಸುವುದಕ್ಕೆ ಒತ್ತು ನೀಡಿದೆ. ಈಗ ಯಾವುದೂ ಸವಾಲು ಅನಿಸುವುದೇ ಇಲ್ಲ. 100 ಮೀಟರ್ಸ್‌ ಓಟ ನನ್ನ ಅಚ್ಚುಮೆಚ್ಚಿನ ವಿಭಾಗ. ಜೊತೆಗೆ ಅಷ್ಟೇ ಭಯ ಕೂಡ. ಬೇರೆ ವಿಭಾಗಗಳಲ್ಲಾದರೆ ಸ್ವಲ್ಪ ಯೋಚಿಸುವುದಕ್ಕಾದರೂ ಸಮಯ ಇರುತ್ತೆ. ಆದರೆ 100 ಮೀಟರ್ಸ್‌ನಲ್ಲಿ ಹಾಗಲ್ಲ. ಈ ವಿಭಾಗದಲ್ಲಿ ಓಡಲು ಗಂಡೆದೆ ಬೇಕು. ಆ ಕ್ಷಣದಲ್ಲಿ ಕ್ಷಿಪ್ರಗತಿಯಲ್ಲಿ ಓಡಿದರಷ್ಟೇ ಪದಕ ಗೆಲ್ಲಲಾಗುತ್ತದೆ.” ಎನ್ನುತ್ತಾರೆ ಜ್ಯೋತಿ.

ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹಾಗೂ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಕಿರಿಯರ ಹಾಗೂ ಹಿರಿಯರ ಅಂತರ್‌ ಜಿಲ್ಲಾ ಅಥ್ಲೆಟಿಕ್‌ ಕ್ರೀಡಾಕೂಟ ಬಾಗಲಕೋಟೆಯಲ್ಲಿ ನಡೆದಿತ್ತು. ಆ ಕ್ರೀಡಾಕೂಟದಲ್ಲಿ ಕಿರಿಯರನ್ನು ಹುರಿದುಂಬಿಸುವುದಕ್ಕಾಗಿ ಆಗ ಪಾಟಿಯಾಲಾದಿಂದ ಮಗಳು ಧೃತಿಯೊಂದಿಗೆ ಆಗಮಿಸಿದ್ದ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿ 100 ಮೀ. ಓಟದಲ್ಲಿ ನಿರೀಕ್ಷೆಯಂತೆ ಚಿನ್ನ ಗೆದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಮಕ್ಕಳಾದ ಮೇಲೆ ಕ್ರೀಡಾಪಟುಗಳು ಸಾಧನೆ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ನನಗೆ ಮಗಳು ಜನಿಸಿದ ನಂತರ ಎರಡು ಪದಕ ಗೆದ್ದಿದ್ದೇನೆ. ಸದ್ಯ ಏಶಿಯನ್‌ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌, ಏಶಿಯನ್‌ ಗೇಮ್ಸ್‌ಗಾಗಿ ಸಜ್ಜಾಗುತ್ತಿದ್ದೇನೆ. ನಮ್ಮಲ್ಲಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ‌ವಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ' ಎಂದರು

ತಂದೆ ಶ್ರೀ ಮಂಜುನಾಥ್‌ ಮತ್ತು ತಾಯಿ ತಿಪ್ಪಮ್ಮ ಅವರ ಬೆಂಬಲದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಇವತ್ತು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇನೆ. ಅವರಿಗೆ ಮಗಳು ದೊಡ್ಡ ಸಾಧನೆ ಮಾಡಬೇಕೆಂಬ ಹಂಬಲ ಇತ್ತು, ಎನ್ನುತ್ತಾರೆ ಜ್ಯೋತಿ. ಪತಿ ಶ್ರೀನಿವಾಸ್‌ ಸಹ ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತ. ಮಾಜಿ ರಾಷ್ಟ್ರೀಯ ಚಾಂಪಿಯನ್! ರಿಲೇ ರಾಷ್ಟ್ರೀಯ ದಾಖಲೆ ಹೊಂದಿದವರು. ಅವರು ಅಥ್ಲೆಟಿಕ್-ಓಟದ ಕೋಚ್‌ ಆಗಿ ಪತ್ನಿಯನ್ನು ಬೆಂಬಲಿಸಿದ್ದಾರೆ. ದಂಪತಿಗೆ ಒಂದು ಚಿಕ್ಕ ಮಗಳಿದ್ದಾಳೆ, ಜ್ಯೋತಿಯವರ ಕ್ರೀಡಾ ಸಾಧನೆಯಸಮಯದಲ್ಲಿ, ಪತ್ನಿಗೆ ಬೆಂಬಲವಾಗಿ ನಿಂತು ಮಗಳನ್ನ ನೋಡಿಕೊಂಡಿದ್ದಾರೆ.  ಸದ್ಯ ಜ್ಯೋತಿಯವರು ಕೆನರಾ ಬ್ಯಾಂಕ್‌ ನಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕ್ರೀಡೆಯಿಂದ ನೀವು ಕಲಿತ ಪಾಠ ಏನು ಎಂದು ಕೇಳಿದರೆ,  ಎಂತಹ ಕಠಿಣ ಸ್ಪರ್ಧೆಯಿದ್ದರೂ ಎಲ್ಲಾ ಸಮಯದಲ್ಲೂ ಧನಾತ್ಮಕವಾಗಿರಬೇಕು,  ಏಕಾಗ್ರತೆ, ಬದ್ಧತೆ, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನ ಕಲಿತಿದ್ದೇನೆ ಎನ್ನುತ್ತಾರೆ.  ಅಕ್ಷರಶಃ ಈ ಮಾತುಗಳು ನಿಜ, ಈ ಮಾತುಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗುವಂತಹದ್ದು.

















#H.M.Jyothi #Jyothi.H.M #ಹೆಚ್.ಎಮ್.ಜ್ಯೋತಿ #ಜ್ಯೋತಿ #padmashali #jyothisrinivas #Karnataka_Padmashali_Samaja