Sunday, November 20, 2022

"ಪದ್ಮಶಾಲಿಗಳ ಹಿನ್ನೆಲೆಯ ತೆಲುಗು ಚಲನಚಿತ್ರ ಮಲ್ಲೀಶ್ವರಿ"


 

1951 ನೇ ಇಸವಿಯಲ್ಲಿ ಬಿಡುಗಡೆಯಾದ ತೆಲುಗು ಚಲನ ಚಿತ್ರ ಮಲ್ಲೀಶ್ವರಿ ಅಂದಿನ ದಿನಗಳಲ್ಲಿ ಒಂದು ಅದ್ಭುತ ದೃಶ್ಯಕಾವ್ಯ ಎಂದು ಹೇಳಲಾಗುತ್ತದೆ. ಈ ಚಿತ್ರ ಬಿಡುಗಡೆಯಾಗಿ 70 ವರ್ಷಗಳು ಕಳೆದರೂ ಜನರ ಮನಸ್ಸಿನಿಂದ ದೂರವಾಗಿಲ್ಲ. ಚಿತ್ರರಂಗದ ಸಾಹಿತ್ಯ ಎಂದರೆ ಎಲ್ಲರಿಗೂ ಮೊದಲು ನೆನಪಾಗುವ ಚಿತ್ರ ಮಲ್ಲೀಶ್ವರಿ.  ಪ್ರಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಾದ ಬಿ.ಎನ್.ರೆಡ್ಡಿಯವರು ಈ ಚಿತ್ರವನ್ನ ನಿರ್ಮಿಸಿದ್ದರು. ಈ ಚಿತ್ರದ ವಿಶೇಷ ಏನೆಂದರೆ ನಮ್ಮ ಪದ್ಮಶಾಲಿಗಳಿಗೆ ಸಂಭಂಧ ಇರುವಂತಹ ಚಿತ್ರ. ಇದರಲ್ಲಿನ ಕಥಾನಾಯಕ ದಿ. ಎನ್.ಟಿ.ರಾಮರಾವ್ ಅವರು ಒಂದು ಸಂಧರ್ಭದಲ್ಲಿ ನಾವು ಪದ್ಮಶಾಲಿಗಳು ನಮ್ಮ ಮಾವ ನೂರು ಮಗ್ಗಗಳನ್ನ ಇಟ್ಟುಕೊಂಡಿದ್ದಾರೆ ಎಂದು ಹೇಳುತ್ತಾರೆ. ಕುಲದ ಕುರಿತು ನೇರವಾಗಿ ಹೇಳುವ ಚಿತ್ರದಲ್ಲಿನ ಸಂಭಾಷಣೆ ಇದೇ ಮೊದಲಾಗಿರಬಹುದೇನೋಪದ್ಮಶಾಲಿಗಳ ಹಿನ್ನೆಲೆಯನ್ನಿಟ್ಟುಕೊಂಡು ನಿರ್ಮಿಸಿದ ಮೊದಲ ಚಿತ್ರ ಇದು. ವೃತ್ತಿಯಲ್ಲಿ ಕಲಾನೈಪುಣ್ಯತೆಯನ್ನಿಟ್ಟುಕೊಂಡು ಬದುಕುತಿದ್ದ ಪದ್ಮಶಾಲಿಗಳು ಬಹಳಷ್ಟು ಜನರ ಹೃದಯಗೆದ್ದಿದ್ದರು ಎನ್ನುವುದು ಪದೇ ಪದೇ ಸಾಬೀತಾಗುತ್ತದೆ.  ರಾಜ ಮಹಾರಾಜರ ಕಾಲದಿಂದಲೂ ಪದ್ಮಶಾಲಿಗಳಿಗೆ ಒಂದು ಉನ್ನತವಾದ ಸ್ಥಾನವನ್ನ ನೀಡಲಾಗಿರುವುದನ್ನ ನಾವು ಗಮನಿಸಿದ್ದೇವೆ. ಅಂತಹ ವಿಷಯವನ್ನೂ ಸಹ ಈ ಸಿನಿಮಾದಲ್ಲೂ ತೋರಿಸಲಾಗಿದೆ.

 

ಚಿತ್ರದ ಕಥೆ ಏನೆಂದರೆ, ಶ್ರೀಕೃಷ್ಣದೇವರಾಯ ರಾಜ್ಯಭಾರ ಮಾಡುವ ಸಮಯದಲ್ಲಿ ಆತನ ಪರಿಧಿಯಲ್ಲಿ ವೀರಾಪುರಂ ಎನ್ನುವ ಗ್ರಾಮವಿರುತ್ತದೆ. ಆ ಊರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಕಾರರಾದ ಪದ್ಮಶಾಲಿಗಳು ವಾಸಿಸುತ್ತಿರುತ್ತಾರೆ. ಆ ಹಳ್ಳಿಯ ಜನ ಬಟ್ಟೆ ನೇಯುವುದರಲ್ಲಿ, ಶಿಲ್ಪಗಳನ್ನು ಮಾಡುವುದರಲ್ಲಿ, ಆಟ ಆಡುವುದರಲ್ಲಿ ನಿಪುಣರು. ನಾಯಕ ನಾಗರಾಜು ಮತ್ತು ನಾಯಕಿ ಮಲ್ಲೀಶ್ವರಿ ಯವರ ಎರಡು ಕುಟುಂಬಗಳು. ಮಲ್ಲೀಶ್ವರಿ, ನಾಗರಾಜು ಅವರ ತಾಯಿಯ ಸ್ವಂತ ಅಣ್ಣನ ಮಗಳು. ಬಾಲ್ಯದಿಂದಲೂ  ಅನ್ಯೋನ್ಯತೆಯಿಂದ ನಾಗರಾಜು ಮತ್ತು ಮಲ್ಲೀಶ್ವರಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಒಬ್ಬರನ್ನ ಬಿಟ್ಟು ಇನ್ನೊಬ್ಬರಿರಲಾರದ ಸ್ಥಿತಿ ಅವರದು. ಆದರೆ ಮಲ್ಲೀಶ್ವರಿ ತಾಯಿಗೆ ನಾಗರಾಜನಂಥ ಬಡವ ತನ್ನ ಮಗಳಿಗೆ ಸೂಕ್ತವಲ್ಲ ಎನ್ನುವ ಮನೋಧೋರಣೆ ಅವರದು. ತನ್ನ ಮಗಳಿಗೆ ರಾಣಿಯ ಅಂತಃ ಪುರದಲ್ಲಿ ವಾಸಿಸುವ ಯೋಗವಿದೆ ಎಂದು ಭಾವಿಸಿರುತ್ತಾಳೆ. ರಾಣಿವಾಸ ಎಂದರೆ ರಾಣಿಯರ ಅರಮನೆಯಲ್ಲಿ ವಾಸ ಮಾಡುವ ಪದ್ದತಿ. ರಾಣಿಯರು ಮತ್ತು ಪರಿವಾರದವರ ಮನರಂಜನೆಗಾಗಿ ಕಲೆ, ಸಾಹಿತ್ಯ, ನೃತ್ಯ ಮುಂತಾದ ಪ್ರಾಕಾರಗಳಲ್ಲಿ ನುರಿತವರನ್ನ  ಮತ್ತು ಸುಂದರ ಮಹಿಳೆಯರನ್ನು ತಮ್ಮ ನಿವಾಸಕ್ಕೆ ಕರೆದು ಅವರನ್ನ ಅಂತಃಪುರ ನಿವಾಸಿಯನ್ನಾಗಿ ಇಟ್ಟುಕೊಳ್ಳುತಿದ್ದುದು ವಾಡಿಕೆ ಯಾಗಿತ್ತು. ಹುಡುಗಿಯರು ರಾಣಿಯ ನಿವಾಸವನ್ನು ಪ್ರವೇಶಿಸಿದ ನಂತರ ಅವರಿಗೆ ಹೊರಗಿನ ಪ್ರಪಂಚವು ತಿಳಿಯುವುದಿಲ್ಲ. ವಿಶೇಷವಾಗಿ ಗಂಡಸರ ವಾಸನೆ ಸಹ ಸುಳಿಯಬಾರದು. ಇದು ಆ ಕಾಲದ ಪದ್ಧತಿಯಾಗಿತ್ತು. ಈ ಪದ್ಧತಿ ಎಷ್ಟೇ ಅನಿಷ್ಟವಾದರೂ ಹಣದ ಆಸೆ ಇರುವವರು ತಮ್ಮ ಮಕ್ಕಳಿಗೆ ರಾಣಿ ಸ್ಥಾನಮಾನ ಸಿಗಲಿ ಎಂದು ಹಾರೈಸುತ್ತಾರೆ. ತಮ್ಮ ಹೆಣ್ಣುಮಕ್ಕಳು ರಾಣಿಯರ ಅಂತಃಪುರದಲ್ಲಿ ರಾಣಿಯರ ಜತೆ ಬದುಕುತಿದ್ದರೆ, ಆ ಕುಟುಂಬದವರಿಗೂ ಹಾಗೂ ಆ ಮಹಿಳೆಯರಿಗೂ ವಿಶೇಷವಾದ ಗೌರವ, ಆತಿಥ್ಯ ಸತ್ಕಾರ ದೊರೆಯುತಿತ್ತು. ಮಲ್ಲೀಶ್ವರಿಯ ಅಮ್ಮನೂ ಸಹ ಅದನ್ನೇ ನಿರೀಕ್ಷಿಸಿದ್ದಳು. ಹೀಗಾಗಿ ಸಮಾಜದಲ್ಲಿ ಒಳ್ಳೆಯ ಗೌರವ ಎಂದು ಭಾವಿಸಿದ್ದಳು.

 

ನಾಗರಾಜು ಮತ್ತು ಮಲ್ಲೀಶ್ವರಿ ದೊಡ್ಡವರಾದ ಮೇಲೂ ಪರಸ್ಪರ ತುಂಬಾ ಆತ್ಮೀಯರಾಗಿದ್ದರು. ಆ ಆತ್ಮೀಯತೆ ಪ್ರೀತಿಗೆ ತಿರುಗಿತ್ತು. ಮದುವೆಯಾಗುವ ಆಸೆಯೂ ಮನದಲ್ಲಿ ಮೂಡಿತ್ತು. ಒಮ್ಮೆ ಇಬ್ಬರೂ ಕೂಡಿ ಎತ್ತಿನ ಗಾಡಿಯಲ್ಲಿ ಜಾತ್ರೆಗೆ ಹೋಗುತ್ತಾರೆ. ಜಾತ್ರೆಯಲ್ಲಿ ಆಟವಾಡುತ್ತಾರೆ, ವಸ್ತುಗಳನ್ನ ಖರೀದಿಸುತ್ತಾರೆ, ಜ್ಯೋತಿಷ್ಯ ಸಹ ಕೇಳುತ್ತಾರೆ, ಮಲ್ಲೀಶ್ವರಿಗೆ ಅರಮನೆಯಲ್ಲಿ ಬಾಳುವಂತಹ ಯೋಗವಿದೆ ಎಂದು ಹೇಳುತ್ತಾರೆ. ಅದನ್ನೇ ತಮಾಷೆಯಾಗಿ NTR ತೆಗೆದುಕೊಳ್ಳುತ್ತಾರೆ.  ಮರಳಿ ಮನೆಗೆ ಬರುವಾಗ ದಾರಿಯಲ್ಲಿ ಅತ್ಯಂತ ಜೋರಾಗಿ ಮಳೆ ಬರುತ್ತಿರುತ್ತದೆ. ಮಳೆನಿಂತ ಮೇಲೆ ಮನೆಗೆ ಹೋಗೋಣವೆಂದು ಅಲ್ಲಿ ಪಾಳುಬಿದ್ದ ಮಂಟಪದಲ್ಲಿ ಆಶ್ರಯಿಸಿರುತ್ತಾರೆ. ಅಕಸ್ಮಾತ್ ಆಗಿ ಅಲ್ಲಿಗೆ ಮಾರುವೇಷದಲ್ಲಿದ್ದಲ್ಲಿ ಶ್ರೀಕೃಷ್ಣದೇವರಾಯರು ಮತ್ತು ಕವಿ ಅಲ್ಲಸಾನಿ ಪೆದ್ದನ್ನ ಅವರು ಸಹ ಮಳೆಯ ಅಬ್ಬರ ನಿಂತ ಮೇಲೇ ಹೋಗೋಣ ಎಂದು ಮಂಟಪದ ಮತ್ತೊಂದು ಬದಿಯಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆಗ ನಾಗರಾಜು ಮತ್ತು ಮಲ್ಲೀಶ್ವರಿ ಸರಸವಾಡುತ್ತಿರುತ್ತಾರೆ. ಮಲ್ಲೀಶ್ವರಿ ಖುಷಿಯಿಂದ ನಾಟ್ಯವಾಡುತ್ತಿರುತ್ತಾಳೆ. ತಲ್ಲೀನತೆಯಿಂದ ನೋಡಿದ ವೇಷಧಾರಿ ರಾಯರು ಮತ್ತು ಕವಿ ಪೆದ್ದನ್ನ ಹರ್ಷಗೊಂಡು ಅವರ ವಿವರ ಕೇಳಿ ತಿಳಿದುಕೊಳ್ಳುತ್ತಾರೆ. ಶಾಸ್ತ್ರೀಯವಾಗಿ ನೃತ್ಯ ಕಲಿತಿದ್ದೀರಾ? ಯಾರು ನಿಮ್ಮ ಗುರು ಎಂದು ಮಾತಿಗೆಳೆಯುತ್ತಾರೆ. ಅಯ್ಯೋ ಅಂತಹದ್ದೇನಿಲ್ಲ. ಮನಸ್ಸಿಗೆ ಬಂದ ಹಾಗೆ ನೃತ್ಯ ಮಾಡುತ್ತೇನೆ. ಅಷ್ಟೇ ಎಂದು ನಾಚಿಕೆಯಿಂದ ಹೇಳುತ್ತಾಳೆ. ಹೀಗೆ ಸಂಭಾಷಿಸುತ್ತಿರುವಾಗ, ಜಾತ್ರೆಯಿಂದ ಖರೀದಿಸಿ ತಂದಿದ್ದ ಹಣ್ಣುಗಳನ್ನ ರಾಯರ ಜತೆ ಹಂಚಿಕೊಳ್ಳುತ್ತಾಳೆ. ನಾಗರಾಜು ಸಹ ಅವರು ಯಾರು, ಯಾವ ಊರು ಎಂದು ಕೇಳಿದ್ದಕ್ಕೆ, ನಾವು ವಿಜಯನಗರದವರು ಎಂದು ಕವಿ ಅಲ್ಲಸಾನಿ ಪೆದ್ದನ್ನ ಹೇಳುತ್ತಾನೆ.  ಓಹ್, ಹಾಗಾದರೆ ‘ ನಿಮಗೆ ರಾಜರ ಅರಮನೆಯ ಸಂಭಂಧವಿರಬಹುದು, ಹೇಗಾದರು ಮಾಡಿ ಅರಮನೆಯವರನ್ನ ಸಂಪರ್ಕಿಸಿ ನಮ್ಮ ಮಲ್ಲೀಶ್ವರಿಗೆ ರಾಣಿವಾಸಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿ, ಏಕೆಂದರೆ ಅವಳಿಗೆ ಅರಮನೆಯಲ್ಲಿ ಬಾಳಿ ಬದುಕುವ ಯೋಗವಿದೆಯಂತೆ ಎಂದು ತಮಾಷೆ ಮಾಡುತ್ತಾನೆ. ಮಲ್ಲೀಶ್ವರಿ ತನ್ನ ಸೋದರ ಮಾವನನ್ನು ಚುಡಾಯಿಸಿತ್ತಾಳೆ. ಅವರ ಈ ವಿನೋದದ ಮೋಜಿಗೆ ನಗುತ್ತ ರಾಯರು ಅಲ್ಲಿಂದ ಹೊರಡುತ್ತಾರೆ, ಆಗಲೂ ಸಹ ನಾಗರಾಜ ಮತ್ತೊಮ್ಮೆ ರಾಯರತ್ತ ತಿರುಗಿ, ಮಲ್ಲೀಶ್ವರಿಗೆ ರಾಣಿವಾಸಕ್ಕೆ  ಕಳುಹಿಸಲು ಮರೆಯಬೇಡಿ ಪದೇ ಪದೇ ಹೇಳುತ್ತಾನೆ. ಸರಿ ಎಂದು ರಾಯರು ನಗುತ್ತಾ ಹೊರಟು ಹೋಗುತ್ತಾರೆ. ರಾಯರು ಅರಮನೆಗೆ ಬಂದು ನಡೆದ ಘಟನೆಯನ್ನ ರಾಣಿ ತಿರುಮಲದೇವಿಯವರ ಬಳಿ ಹೇಳುತ್ತಾರೆ. ಸಾಧ್ಯವಾದರೆ, ರಾಣಿವಾಸಕ್ಕೆ ವ್ಯವಸ್ಥೆ ಮಾಡಿ ಎಂದು ವಿಷಯ ತಿಳಿಸುತ್ತಾರೆ.

 

ಏನೂ ಇಲ್ಲದ ಭಿಕಾರಿ ನಾಗರಾಜ್ ಜೊತೆ ಸುತ್ತಾಡುತ್ತಾಳೆ ಎಂದು ಮಲ್ಲೀಶ್ವರಿ ತಾಯಿ ಕೋಪಗೊಂಡಿರುತ್ತಾರೆ. ಬಡವ ನಾಗರಾಜು, ತಮ್ಮ ಮಗಳನ್ನು ಹೇಗೆ ಸಂತೋಷಪಡಿಸಲು ಸಾಧ್ಯ ಎಂದು ಹಲಬುತ್ತಾಳೆ. ಇದನ್ನ ನಾಗರಾಜುತಾಯಿಯ ಬಳಿ ಹೇಳಿ ಜಗಳ ಮಾಡುತ್ತಾಳೆ. ಇದರಿಂದ ಕೋಪಗೊಂಡ ನಾಗರಾಜು ತನಗೆ ಗೊತ್ತಿರುವ ಶಿಲ್ಪಕಲೆಯ ವಿದ್ಯೆಯಿಂದ ಹಣ ಸಂಪಾದಿಸಿಕೊಂಡು ಬರುತ್ತೀನಿ ಎಂದು ಹೊರಟುಹೋಗುತ್ತಾನೆ. ನಾಗರಾಜು ಎತ್ತ ಹೋಗುತಿದ್ದಾನೆ ಎಂದು ತಿಳಿಯದ ಮಲ್ಲೀಶ್ವರಿ ಚಿಂತಾಕ್ರಾಂತಳಾಗುತ್ತಾಳೆ. ಇಂದಲ್ಲ ನಾಳೆ ಬರುತ್ತಾನೆ ಎಂದು ಕಾಯುತ್ತಿರುತ್ತಾಳೆ. ಆದರೆ ನಾಗರಾಜು ಬರುವುದಿಲ್ಲ.

 

ಅವಳ ಮನಸ್ಸಿನ ವೇದನೆ ದಿನೇ ದಿನೇ ಹೆಚ್ಚಾಗುತ್ತದೆ. ಈ ಮಧ್ಯೆ ಮಲ್ಲೀಶ್ವರಿಯನ್ನ ರಾಣಿಯ ನಿವಾಸಕ್ಕೆ ಕರೆದು ಕೊಂಡು ಬನ್ನಿ ಅಂತ ರಾಜರ ಆಜ್ನೆ ಬರುತ್ತದೆ. ಇದಕ್ಕೆ ಕಾಯುತಿದ್ದ ತಾಯಿ ಬಹಳ ಖುಷಿಪಡುತ್ತಾಳೆ. ಆದರೆ ನಾಗರಾಜ್ ನನ್ನ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದ ಮಲ್ಲೀಶ್ವರಿ ಕೊರಗುತ್ತಿರುತ್ತಾಳೆ. ರಾಜರ ಆದೇಶವನ್ನ ನಿರ್ಲಕ್ಷಿಸುವಂತಿಲ್ಲ. ರಾಣಿವಾಸಕ್ಕೆ ಹೋಗಲೇ ಬೇಕಾಗುತ್ತದೆ. ಇತ್ತ ನಾಗರಾಜು ತನ್ನ ಶಿಲ್ಪಕಲೆಯಿಂದ ಚೆನ್ನಾಗಿ ಹಣ ಸಂಪಾದಿಸತೊಡಗಿರುತ್ತಾನೆ. ಅವಳು ಹೋದ ಕೆಲವು ದಿನಗಳ ನಂತರ ನಾಗರಾಜು ಕೈತುಂಬಾ ಹಣದೊಂದಿಗೆ ಊರಿಗೆ ಬರುತ್ತಾನೆ. ಆಗ ಮಲ್ಲೀಶ್ವರಿ ರಾಣಿ ವಾಸಕ್ಕೆ ಹೋದ ಸುದ್ದಿ ಕೇಳಿ ಅವನ ಹೃದಯ ಛಿದ್ರವಾಗುತ್ತದೆ. ಅವನು ಹುಚ್ಚನಂತನಾಗುತ್ತಾನೆ. ಅವನು ತನ್ನ ಪ್ರಿಯತಮೆಯ ಆಕೃತಿಯನ್ನು ಕಲ್ಲು ಬಂಡೆಗಳಲ್ಲಿ ಶಿಲ್ಪಕಲೆಯಾಗಿ ರಚಿಸುತ್ತ ಸಮಯ ಕಳೆಯುತ್ತಾನೆ.

ಇತ್ತ ಅಂತಃಪುರದಲ್ಲಿದ್ದ ಮಲ್ಲೀಶ್ವರಿ, ಅನ್ಯಮನಸ್ಕಳಾಗಿ ಕಾಲಕಳೆಯುತ್ತಿರುತ್ತಾಳೆ. ತನ್ನ ಮಾಮನನ್ನ ಮರೆತು ಬದುಕುವುದು ಅವಳು ಊಹಿಸಿಯೂ ಇರಲಿಲ್ಲ. ತಮಾಷೆ ವಿಷಯ ಇಂದು ಇಷ್ಟೊಂದು ಗಂಭೀರವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅವಳನ್ನ ನೋಡಲು ಒಮ್ಮೆ ತಂದೆ ತಾಯಿ ಅರಮನೆಗೆ ಬಂದಾಗ, ಅವರೊಂದಿಗೆ ಸರಿಯಾಗಿ ಮಾತನಾಡದೆ ಅಲ್ಲಿಂದ ಅವರನ್ನ ವಾಪಾಸು ಕಳುಹಿಸುತ್ತಾಳೆ. ಹಣದಿಂದ ಎಲ್ಲವೂ ದೊರಕುವುದಿಲ್ಲ, ನನ್ನ ಮನಸ್ಸಿನ ಭಾವನೆಯನ್ನ ಅರಿಯದೆ ನಮ್ಮಿಬ್ಬರನ್ನ ದೂರ ಮಾಡಿದೆಯಲ್ಲ ನೀನು, ಈಗ ಯಾವ ನೆಮ್ಮದಿಯಿಂದ ನೀನು ಬದುಕುತ್ತೀಯ ನೋಡು, ಮಗಳು ಎಂದು ಇನ್ನೊಮ್ಮೆ ನೋಡಲು ಇಲ್ಲಿಗೆ ಬರಬೇಡ ಎಂದು ತಾಯಿಗೆ ಕೋಪದಿಂದ ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.

 

ಅದೇ ಸಮಯದಲ್ಲಿ, ರಾಯರು ವಸಂತಮಂಟಪವನ್ನು ನಿರ್ಮಿಸಲು ನಿರ್ಧರಿಸುತ್ತಾರೆ. ಅದಕ್ಕಾಗಿ ಪ್ರಧಾನ ಶಿಲ್ಪಿ  ದೇಶ-ವಿದೇಶಗಳಲ್ಲಿರುವ ಶಿಲ್ಪಿಗಳನ್ನು ಸಂಪರ್ಕಿಸುತ್ತಾರೆ. ಆಗ ನಾಗರಾಜು ಮತ್ತು ಅವರ ಶಿಲ್ಪ ಪ್ರಧಾನ ಶಿಲ್ಪಿ ಯ ಕಣ್ಣಿಗೆ  ಬೀಳುತ್ತದೆ. ಪ್ರಧಾನ ಶಿಲ್ಪಿ ಹುಚ್ಚನಂತಾಗಿದ್ದ ನಾಗರಾಜನನ್ನು ಕರೆದುಕೊಂಡು ಹೋಗಿ ಕೆಲಸ ಮುಗಿಸುತ್ತಾರೆ. ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡವನ್ನು ನೋಡಲು ರಾಣಿವಾದ ಕನ್ಯೆಯರನ್ನು ಆಹ್ವಾನಿಸಲಾಗುತ್ತದೆ. ಆ ಶಿಲ್ಪಗಳಲ್ಲಿ ಮಲ್ಲೀಶ್ವರಿ ಸಾಮ್ಯತೆ ಇದೆ ಎಂದು ಕೆಲವರು ಚರ್ಚಿಸುತ್ತಾರೆ. ಅದನ್ನು ಕೇಳಿದ ಜಲಜ ಎನ್ನುವಾಕೆ ಮಲ್ಲೀಶ್ವರಿಗೆ ವಿಷಯ ತಿಳಿಸುತ್ತಾಳೆ. ಆಗ ಮಲ್ಲೀಶ್ವರಿ ಆ ಶಿಲ್ಪವನ್ನ ಬಂದು ನೋಡುಲಾಗಿ ಅದು ತನ್ನ ಸೋದರಮಾವನ ಪ್ರತಿಭೆ ಎಂದು ಭಾವಿಸುತ್ತಾಳೆ. ಅಲ್ಲಿ ಕೆಲಸ ಮಾಡುತಿದ್ದ ತನ್ನ ಸೋದರ ಮಾವನ ಕಂಡು, ಆದರೆ ರಾಣಿವಾಸದ ಕಟ್ಟು ಪಾಡುಗಳ ಅರಿವಿದ್ದ ಜಲಜಾಳ ಎಚ್ಚರಿಕೆಯೊಂದಿಗೆ ಅಲ್ಲಿ ಏನೂ ಮಾತನಾಡದೆ ಹಿಂತಿರುಗುತ್ತಾಳೆ. ಮದ್ಯರಾತ್ರಿ ತುಂಗಭದ್ರಾ ತೀರದಲ್ಲಿ ಇಬ್ಬರನ್ನೂ ಭೇಟಿಯಾಗುವಂತೆ ಜಲಜ ವ್ಯವಸ್ಥೆ ಮಾಡುತ್ತಾಳೆ. ಬಹಳ ದಿನಗಳ ನಂತರ ಭೇಟಿಯಾದ ಈರ್ವರು  ಆನಂದ ತುದಿಲರಾಗುತ್ತಾರೆ. ಮಾತು ಹಾಡು ಹೀಗೆ  ಹರಟುತ್ತ ಸಮಯ ಹೋದದ್ದೇ ತಿಳಿಯುವುದಿಲ್ಲ.  ಮಲ್ಲೀಶ್ವರಿಗೆ ಮತ್ತೆ ರಾಣಿವಾಸಕ್ಕೆ ಹೋಗಬೇಕೆಂದು ಅನಿಸುವುದೇ ಇಲ್ಲ. ಆದರೂ ಹೋಗಲೇ ಬೇಕಾದ ಪರಿಸ್ಥಿತಿ, ಮನಸ್ಸಿಲ್ಲದ ಮನಸ್ಸಿನಲ್ಲಿ ಮರಳಿ ಹೊರಡುತ್ತಾಳೆ. ಮತ್ತೊಮ್ಮೆ ಅವರು ಮತ್ತೆ ಭೇಟಿಯಾಗಲು ನಿರ್ಧರಿಸುತ್ತಾರೆ. ಆ ದಿನ ಅದೇ ಸಮಯದಲ್ಲಿ ರಾಣಿಯವರು ಮಲ್ಲೀಶ್ವರಿಯವರ ನೃತ್ಯವನ್ನು ಮನರಂಜನೆಗಾಗಿ ನೋಡಬೇಕೆಂದು ಬಯಸುತ್ತಾರೆ.

 

ಮಲ್ಲೀಶ್ವರಿ, ನಿಗದಿತ ಸಮಯಕ್ಕೆ ನಾಗರಾಜ್ ಅವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಆಗ ನಾಗರಾಜ ತನ್ನ ಮಲ್ಲೀಶ್ವರಿ ಏನಾಯಿತೆಂದು ತಿಳಿಯುವ ಆತಂಕದಲ್ಲಿ ಕಳ್ಳನಂತೆ ಕೋಟೆಯನ್ನು ಪ್ರವೇಶಿಸುತ್ತಾನೆ. ಭಟರು ಅವನನ್ನ ಹಿಡಿಯುತ್ತಾರೆ. ಅದೇ ಸಮಯಕ್ಕೆ ಮಲ್ಲೀಶ್ವರಿ ತನ್ನ ಸೋದರ ಮಾವನ ನೋಡಿದಳು. ಅವನನ್ನ ಬರಲಿಕ್ಕೆ ನಾನೇ ಹೇಳಿದ್ದು ಎನ್ನುತ್ತಾಳೆ. ಮಲ್ಲೀಶ್ವರಿಗೆ ಎಲ್ಲಿ ಶಿಕ್ಷೆಯಾಗುತ್ತದೋ ಎಂಬ ಭಯದಿಂದ ನಾಗರಾಜ್, ಆಕೆ ಯಾರೆಂದು ನನಗೆ ಗೊತ್ತಿಲ್ಲ ಎನ್ನುತ್ತಾನೆ. ಆದರೆ, ಮಲ್ಲೀಶ್ವರಿ ಭಟರಿಗೆ ತಾನೇ ನಿಜವಾದ ಅಪರಾಧಿ ಎಂದು ಹೇಳುತ್ತಾಳೆ. ಇಲ್ಲಿ ಏನೋ ಸಮಸ್ಯೆ ಇದೆ ಅರಿತ ಅರಮನೆಯ ಭಟರು ಇಬ್ಬರನ್ನ ಬಂಧಿಸುತ್ತಾರೆ. ಇಬ್ಬರೂ ಜೈಲು ಪಾಲಾಗುತ್ತಾರೆ. ಇಬ್ಬರಿಗೂ ಮರಣದಂಡನೆ ವಿಧಿಸಲಾಗುತ್ತದೆ. ಈವಿಷಯ ಜಲಜಾಳಿಗೆ ಗೊತ್ತಾಗಿ ಅವಳು ರಾಣಿ ತಿರುಮಲಾಂಬರಿಗೆ ಮಲ್ಲೀಶ್ವರಿ ಮತ್ತು ನಾಗರಾಜು ಪ್ರೇಮಕಥೆಯನ್ನು ಹೇಳುತ್ತಾಳೆ.  ಜಲಜಾ ಮೂಲಕ ವಿಷಯ ತಿಳಿದುಕೊಂಡ ರಾಣಿ ತಿರುಮಲಾಂಬ ದೇವಿ ಶ್ರೀ ಕೃಷ್ಣ ದೇವರಾಯರಿಗೆ ವಿಷಯ ತಿಳಿಸುತ್ತಾರೆ. ಅದರೊಂದಿಗೆ ರಾಯರು, ಮಲ್ಲೀಶ್ವರಿ ಮತ್ತು ನಾಗರಾಜ್ ಅವರನ್ನು ಸಭೆಗೆ ಕರೆಯುತ್ತಾರೆ.

 

ನಾಗರಾಜು ಮತ್ತು ಮಲ್ಲೀಶ್ವರಿ ತಪ್ಪನ್ನ ತಮ್ಮ ಮೇಲೆ ಹಾಕಿ ಕೊಂಡು ಒಬ್ಬರು ಇನ್ನೊಬ್ಬರನ್ನ ಕಾಪಾಡಲು ಸುಳ್ಳು ಹೇಳುತ್ತಾರೆ.  ಆಗ ರಾಯರಿಗೆ ರಾಣಿವಾಸವೇ ಕಾರಣ ಎಂದು ಮನದಟ್ಟಾಗುತ್ತದೆ.

ನಾಗರಾಜುವಿಗೆ, ಮಲ್ಲೀಶ್ವರಿಗೆ  ರಾಣಿವಾಸಕ್ಕಾಗಿ ಆಹ್ವಾನ ನೀಡಿ ಅಂತ ಹೇಳಿದ್ದೆಯಲ್ಲ? ಅದಕ್ಕಾಗಿ ಪಲ್ಲಕ್ಕಿಗೆ ಕಳುಹಿಸಿದ್ದು ತಪ್ಪಾ ಎಂದು ರಾಯರು ಕೋಪದಿಂದ ಪ್ರಶ್ನಿಸುತ್ತಾರೆ. ಆಗ ನಾಗರಾಜು, ಅಂತಹ ಧೈರ್ಯ ನಮಗೆಲ್ಲಿಂದ ಬರಬೇಕು ಸ್ವಾಮಿ ಎಂದು ವಿನಮ್ರನಾಗಿ ಕೇಳುತ್ತಾನೆ. ಆಗ ರಾಯರು, ಸರಿಯಾಗಿ ಜ್ನಾಪಿಸಿಕೊ ನೀನು ಕೇಳಿಲ್ಲವೇ? ಎನ್ನುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಕವಿ ಅಲ್ಲಸಾನಿ ಪೆದ್ದನ್ನನ್ನ ಗುರುತುಹಿಡಿದ. ಆಗ ಹಿಂದಿನ ಘಟನೆ ನೆನಪಾಗಿ, ತಪ್ಪು ನನ್ನದೇ ಸ್ವಾಮಿ. ನಾನೇ ರಾಣಿವಾಸಕ್ಕೆ ಆಹ್ವಾನ ನೀಡಿ ಎಂದು ಕೇಳಿದ್ದೆ. ನನಗೆ ಗಲ್ಲು ಶಿಕ್ಷೆ ನೀಡಿ ಎಂದು ಹೇಳುತ್ತಾನೆ.  ಆಗ ಮಲ್ಲೀಶ್ವರಿ, ಬೇಡ ಬೇಡ ತಪ್ಪು ನನ್ನದು. ನನ್ನಿಂದಾಗಿಯೇ ನನ್ನ ಭಾವ ಕೋಟೆಯೊಳಗೆ ಬರುವಂತಾಯಿತು. ನನಗೆ ಶಿಕ್ಷೆ ನೀಡಿ ಎಂದು ಕೋರುತ್ತಾಳೆ. ಆಗ ರಾಯರು ಸಂಧಿಗ್ದ ಪರಿಸ್ಥಿತಿಗೆ ಒಳಗಾಗುತ್ತಾರೆ.  ಕೊನೆಗೆ ತೀರ್ಪು ನುಡಿಯುತ್ತ, ತನ್ನ ಗಾನ ಮತ್ತು ನೃತ್ಯವೈಭವದಿಂದ ತಮ್ಮೆಲ್ಲರನ್ನ ಸಂತಸ ಪಡಿಸಿದ ಮಲ್ಲೀಶ್ವರಿಯನ್ನ ಮತ್ತೆ ತನ್ನ ಅದ್ಭುತ ಶಿಲ್ಪಕಲೆಯಿಂದ ವಸಂತ ಮಂಟಪಕ್ಕೆ ಒಂದು ಸುಂದರ ಕಳೆಯನ್ನ ತಂದುಕೊಟ್ಟ ನಾಗರಾಜನನ್ನ ಕ್ಷಮಿಸಿ ಈರ್ವರನ್ನ ಬಂಧನದಿಂದ ಬಿಡುಗಡೆ ಗೊಳಿಸುತಿದ್ದೇವೆ ಎಂದು ಆದೇಶಿಸುತ್ತಾರೆ. ಶ್ರೀಕೃಷ್ಣದೇವರಾಯರ ಈ ಔದಾರ್ಯವನ್ನ ನೆನೆದು ಕೃತಜ್ನತೆಯನ್ನ ಸಲ್ಲಿಸಿ ಈರ್ವರು ತಮ್ಮ ಸ್ವಂತ ಊರಿಗೆ ಮರಳುತ್ತಾರೆ. ಅಲ್ಲಿ ಮದುವೆಯಾಗಿ ಮುಂಚಿನಂತೆ ಹಾಡುತ್ತ ನಲಿಯುತ್ತಾರೆ. ಇಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ.

 ಮಲ್ಲೀಶ್ವರಿ ಚಿತ್ರವು 1951 ರಲ್ಲಿ ಬಿಡುಗಡೆಯಾದರೂ, ಚಿತ್ರದ ಪರಿಕಲ್ಪನೆಯು 1939 ರಲ್ಲಿಯೇ ಹುಟ್ಟಿಕೊಂಡಿತು. ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಬಿ.ಯನ್ ರೆಡ್ಡಿಯವರು ಹಂಪಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ವಿರೂಪಾಕ್ಷ ಸ್ವಾಮಿ ದೇವಸ್ಥಾನದಲ್ಲಿ ದೇವರನ್ನು ಪ್ರಾರ್ಥಿಸುತ್ತಿರುವಾಗ ಅವರ ಮನಸ್ಸಿನಲ್ಲಿ ಒಂದು ಆಲೋಚನೆ ಬರುತ್ತದೆ. ಶ್ರೀಕೃಷ್ಣದೇವರಾಯನು ಸಹ ಇದೇ ರೀತಿಯಲ್ಲಿ ದೇವಸ್ಥಾನದಲ್ಲಿ ಸ್ವಾಮಿಯನ್ನು  ಪೂಜಿಸಿರಬಹುದಲ್ಲವೇಆಗ ಕೃಷ್ಣದೇವರಾಯರ ಆಡಳಿತದ ಹಿನ್ನೆಲೆಯಲ್ಲಿ ಸಿನಿಮಾ ಮಾಡುವ ಯೋಚನೆ ಆಗ ಬಿ.ಯನ್‌. ರೆಡ್ಡಿಯವರಿಗೆ ಬರುತ್ತದೆ.

ಚಿತ್ರೀಕರಣದ ನಂತರ ಮದ್ರಾಸಿಗೆ ಮರಳಿ ಬಂದಾಗ ಖ್ಯಾತ ಬರಹಗಾರ ಬುಚ್ಚಿಬಾಬು ಅವರು ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಬರೆದ ಕರುಣಾಕೃತ್ಯಂ ಎಂಬ ಕಥೆ ಅವರನ್ನ ಆಕಷಿಸುತ್ತದೆ.

ಆ ನಂತರ ದೇವನ್ ಶರಾರ್  ಸಣ್ಣ ಕಥೆ ದಿ ಎಂಪರೆರ್ ಅಂಡ್ ದ ಸ್ಲೇವ್ ಗರ್ಲ್ ಎನ್ನುವ ಕಥೆಯೂ ಕೂಡ ಅವರನ್ನ ಆಕರ್ಷಿಸುತ್ತದೆ. ಈ ಎರಡು ಕತೆಗಳನ್ನ ಒಗ್ಗೂಡಿಸಿ ಮಲ್ಲೀಶ್ವರಿ ಕಥೆಯನ್ನು ಬಿ.ಯನ್ ಮನದಲ್ಲಿ ರೂಪಿಸಿಕೊಳ್ಳುತ್ತಾರೆ. ಆಗ ಆಂಧ್ರದಲ್ಲಿ ದೇವುಲಪಲ್ಲಿ ವೆಂಕಟಕೃಷ್ಣ ಶಾಸ್ತ್ರಿಗಳು ತಮ್ಮ ಭಾವಪೂರ್ಣ ಕಾವ್ಯದಿಂದ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತಿದ್ದರು. ಹೇಗಾದರೂ ಮಾಡಿ ತನ್ನ ಮಲ್ಲೀಶ್ವರಿಯನ್ನು ಅವರಿಂದ ಬರೆಸಿಕೊಳ್ಳಬೇಕು ಎಂದು ಬಿ.ಯನ್ ಯೋಚಿಸಿ, ದೇವುಲಪಲ್ಲಿ ಅವರನ್ನ ಆಹ್ವಾನಿಸಿದರು. ಆಗ ದೇವುಲಪಲ್ಲಿ ಚಿತ್ರರಂಗಕ್ಕೆ ಬರಲು ಅಷ್ಟಾಗಿ ಉತ್ಸಾಹಿತರಾಗಿರಲಿಲ್ಲ.  ಆದರೆ ಬಿ.ಯನ್.  ರವರ ಮಲ್ಲೀಶ್ವರಿ ಕಥೆ ಕೇಳಿದ ತಕ್ಷಣ ದೇವುಲಪಲ್ಲಿ ಖಂಡಿತ ಚಿತ್ರಕ್ಕಾಗಿ ಬರೆಯುತ್ತೇನೆ ಎಂದು ಭರವಸೆ ನೀಡಿದರು.  ಅಸಲಿಗೆ ಶ್ರೀ ಕೃಷ್ಣ ದೇವರಾಯರು ಸ್ವತಹ ಕವಿಯಾಗಿದ್ದರು, ಕೃಷ್ಣದೇವರಾಯರನ್ನು ತುಂಬಾ ಇಷ್ಟಪಡುವವರು ಕೇವಲ ಯೋಧರು ಧೀರರು ಮಾತ್ರವಲ್ಲದೆ ಸಾಹಿತ್ಯದ ದಿಗ್ಗಜರಿಗೂ ಇಷ್ಟವಾಗುವ ವ್ಯಕ್ತಿತ್ವ. ಆದ್ದರಿಂದ ದೇವುಲಪಲ್ಲಿ ವೆಂಕಟಕೃಷ್ಣ ಶಾಸ್ತ್ರಿಗಳು ತಮ್ಮ ಸಾಹಿತ್ಯವೈಭವದಿಂದ ಮಲ್ಲೀಶ್ವರಿ ಚಿತ್ರವನ್ನ ಸುಂದರ ಪ್ರೇಮಕಾವ್ಯದಂತೆ ರೂಪಿಸುತ್ತಾರೆ. ಆಗಿನ ಸಮಯದಲ್ಲಿ, ನಟಿಯಾಗಿ ಭಾನುಮತಿ ಅವರಿಗೆ "ಸ್ವರ್ಗಸೀಮ" ಚಿತ್ರದ ಮೂಲಕ ಒಳ್ಳೆಯ ಹೆಸರು ಬಂದಿರುತ್ತದೆ. ಆದ್ದರಿಂದ, ಬಿ.ಯನ್.ರೆಡ್ಡಿ ಮರುಮಾತಿಲ್ಲದೆ ಮಲ್ಲೀಶ್ವರಿ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದ್ದರು. ಮತ್ತು ನಾಗರಾಜು ಪಾತ್ರಕ್ಕಾಗಿ ಅವರು ಮೊದಲಿನಿಂದಲೂ NTR ಮನಸ್ಸಿನಲ್ಲಿದ್ದರು. ಅದರಂತೆ NTR ರವರ ಆಯ್ಕೆಯಾಗುತ್ತದೆ. ಕೃಷ್ಣದೇವರಾಯರಾಯರ ಪಾತ್ರಕ್ಕೆ ಶ್ರೀವಾತ್ಸವ ಮತ್ತು ಕವಿ ಅಲ್ಲಸಾನಿ ಪೆದ್ದನ್ನನ ಪಾತ್ರಕ್ಕೆ ನ್ಯಾಪತಿ ರಾಘವರಾವ್ ನಟಿಸುತ್ತಾರೆ.

ಸಾವಿರಾರು ಚಿತ್ರ ನಿರ್ಮಿಸಿರುವ ತೆಲುಗು ಚಿತ್ರರಂಗ ಮತ್ತು ಹಳೆ ತಲೆಮಾರಿನ ತೆಲುಗು ಚಿತ್ರ ಪ್ರೇಮಿಗಳು ಈ ಚಿತ್ರವನ್ನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಪದ್ಮಶಾಲಿ ಸಮಾಜದ ಹಿನ್ನೆಲೆಯನ್ನಿಟ್ಟುಕೊಂಡು ತೆರೆಗೆ ತಂದ ಈ ಅದ್ಭುತವಾದ ಚಲನಚಿತ್ರ ಅಪಾರಮಟ್ಟದ ಲಾಭವನ್ನ ಆದಿನಗಳಲ್ಲಿ ಮಾಡಿದೆ.