Saturday, July 9, 2022

ಶಾತವಾಹನರ ಕಾಲದಲ್ಲಿ ಪದ್ಮಶಾಲಿಗಳ ಕೊಡುಗೆ

ಶಾತವಾಹನರ ಕಾಲದಲ್ಲಿ ಪದ್ಮಶಾಲಿಗಳ ಕೊಡುಗೆ

"ಪದ್ಮ ಪುಪ್ಪ" (ಕಮಲ) ದೇವತೆಗಳಿಗೆ ಅತಿ ಹೆಚ್ಚು ಪ್ರಿಯವಾದದ್ದು, ಮುಖ್ಯವಾಗಿ ಶ್ರೀ ಲಕ್ಷ್ಮೀನಾರಾಯಣರ ಕೈಯಲ್ಲಿ ಪದ್ಮವನ್ನ ಹಿಡಿದು ಕೊಂಡಿರುವುದು, ಪದ್ಮವನ್ನ ಪೀಠವಾಗಿಸಿ ಕೊಂಡಿರುವುದು ನಾವು ಕಾಣ ಬಹುದು.  ಇಂತಹ ಶ್ರೇಷ್ಠ ಪದ್ಮ ಪುಷ್ಪದ (ಕಮಲ) ನಾರಿನಿಂದಾದ ವಸ್ತ್ರ ತಯಾರಿಸಿ ಶ್ರೀ ಮನ್ನಾರಾಯಣನಿಗೆ ಸಮರ್ಪಿಸಿದ್ದು ಭಾವನಾಋಷಿ. ಸ್ವರ್ಣ ತಂತುಗಳ ಬಳಸಿ ಕಮಲದ ನಾರಿನಿಂದಾದ ನೈಸರ್ಗಿಕ ಪವಿತ್ರ ಮಡಿವಸ್ತ್ರ ಕಂಡು ಶ್ರೀಮನ್ನಾರಾಯಣನು ಮೆಚ್ಚಿ ಭಾವನಾ ಮಹರ್ಷಿಗೇ ಪದ್ಮಶಾಲಿ ಎಂದು ಬಿರುದು ನೀಡಿ ಗೌರವಿಸುತ್ತಾರೆ.  ಪದ್ಮಶಾಲಿ ಎಂದರೆ ಏನು ಎನ್ನುವ ಅರ್ಥ ಹಲವರಿಗೆ ಗೊತ್ತಿರಲಿಕ್ಕಿಲ್ಲ.  *ಪದ್ಮ* ಎಂದರೆ ಉತ್ತಮ ಜ್ಞಾನ, ಉಚ್ಛಸ್ಥಾನ, ಶ್ರೇಷ್ಠತೆ, ಉನ್ನತ ಜ್ಞಾನ, ಬಹೋತ್ತಮ, ಪವಿತ್ರತೆ & ವರ್ಣಿಸಲಾಗದ್ದು ಇತ್ಯಾದಿ. *ಶಾಲಿ* ಉಳ್ಳವರು, ಹೋಂದಿದವ, ಇರುವವ, ಬಲಿಷ್ಠನು, ಸಂಸ್ಕಾರವಂತನು & ಇತ್ಯಾದಿ.

ಉದಾಹರಣೆಗೆ : ಶಕ್ತಿಶಾಲಿ - ಶಕ್ತಿ ಉಳ್ಳವ, ದೈರ್ಯಶಾಲಿ - ದೈರ್ಯ ಉಳ್ಳವ, ಬುದ್ಧಿಶಾಲಿ - ಬುದ್ಧಿ ಉಳ್ಳವ, ಹೀಗೆ ಪದ್ಮಶಾಲಿ - ಉನ್ನತ ಜ್ಞಾನ ಉಳ್ಳವ (ಬ್ರಾಹ್ಮಣ). ಇಂತಹ ಮಹಾನ್ ಬಿರುದು ಪಡೆದ ಶ್ರೀ ಭಾವನಾ ಮಹರ್ಷಿಯ ಕೀರ್ತಿ ಹೆಚ್ಚಾಗಿ ಅವರ ಸಂತತಿ ನೂರಾವೊಂದು  ಪುತ್ರರೊಂದಿಗೆ ಪ್ರಾರಂಭಗೊಂಡು ಇಂದು ಭಾರತದಾದ್ಯಂತ ಲಕ್ಷಾಂತರ ಜನರ ಪದ್ಮಶಾಲಿ ಸಮಾಜವಾಗಿ ಪರಿವರ್ತನೆ ಯಾಗಿದೆ. ಪದ್ಮಶಾಲಿಗರ ಮೂಲ ವೃತ್ತಿ  ಪುರೋಹಿತ್ಯ ಪರಂಪರೆ ನಂತರದ್ದು ಕಮಲದ ನಾರಿನಿಂದಾದ ಮಡಿವಸ್ತ್ರ ತಯಾರಿಕೆ ವೃತ್ತಿ. ಪದ್ಮಶಾಲಿಗಳ ಮೂಲ ಪುರುಷ ಶ್ರೀ ಭೃಗು ಮಹರ್ಷಿಯವರ ಆದಿಯಿಂದ ಮಾರ್ಕಂಡೇಯ ಮಹರ್ಷಿವರೆಗೂ ಹಲವಾರು ಪೌರೋಹಿತ್ಯ ಕಾರ್ಯಕ್ರಮಗಳನ್ನ ನಡೆಸಿರುವುದನ್ನ ನಾವು ಪುರಾಣಗಳಲ್ಲಿ ಕೇಳಿರಬಹುದು. ಆದ್ದರಿಂದ ಇಂದಿಗೂ ಸಾವಿರಾರು ಜನರು ಪೌರೋಹಿತ್ಯ ನಡೆಸುತ್ತಾ ಬಂದಿದ್ದಾರೆ. ಭಾವನಾಋಷಿಯು ಮಡಿವಸ್ತ್ರ ಮತ್ತು ಪವಿತ್ರವಾದ ಯಜ್ನೋಪವೀತ ತಯಾರಿಸಿದ್ದರಿಂದ ಆ ನೇಯ್ಗೆ ವೃತ್ತಿಯನ್ನು ಸಮಾಜಸ್ಥರು ಇಂದಿಗೂ ಸಹ ಮುಂದುವರಿಸಿ  ವಸ್ತ್ರ ತಯಾರಿಕೆಯಲ್ಲಿ ನಿಪುಣರಾಗಿ ಜೀವನ ನಡೆಸುತಿದ್ದಾರೆ. 

ನೂರಾವೊಂದು ಗೋತ್ರವಿರುವ ಪದ್ಮಶಾಲಿಗಳು ವಂಶವೃಕ್ಷದ ಮೂಲಕ ಇಂದಿಗೂ ತಮ್ಮ ಮೂಲವನ್ನು ಗುರುತಿಸಿಟ್ಟುಕೊಂಡಿದ್ದಾರೆ. ಬಹುಶಃ ಇಂತಹ ವಿಶಿಷ್ಟ ವಂಶವೃಕ್ಷವನ್ನು ಪದ್ಮಶಾಲಿಗಳಲ್ಲಿ ಕಾಣಬಹುದು.

ಪುರಾಣಗಳ ಪ್ರಕಾರ ಪದ್ಮಶಾಲಿಗಳ ಇತಿಹಾಸ ಸುಮಾರು ಸಾವಿರಾರು ವರ್ಷಗಳ ಹಿಂದಿನದ್ದು. ಮಾರ್ಕಂಡೇಯ ಪುರಾಣದಲ್ಲಿ ಮಾರ್ಕಂಡೇಯ ಋಷಿಮುನಿಗಳ ಪುತ್ರ ಶ್ರೀ ಭಾವನಾ ಋಷಿ ಅಥವಾ ವೇದಶೀರ್ಷ ಅಥವ ಭಾವನಾರಾಯಣ ಉಲ್ಲೇಖವಿದೆ. . ಪದ್ಮಶಾಲಿಗಳ ಕುರಿತ ಹಲವಾರು ಉಲ್ಲೇಖಗಳು ಪಕ್ಕದ ತೆಲುಗುರಾಷ್ಟ್ರಗಳಲ್ಲಿ ಲಭ್ಯವಿದ್ದು, ಪುರಾಣಗಳು, ಜನಪದ ಕಥೆಗಳು, ತಾಳೇಗರಿಗಳು, ತಾಮ್ರದ ಶಾಸನಗಳು, ಶಿಲಾ ಶಾಸನಗಳು ಹೀಗೆ ಹಲವಾರು ವಿಧದಲ್ಲಿ ಪದ್ಮಶಾಲಿಗಳ ಕುರಿತು ಮಾಹಿತಿಯಿದೆ.  ಪದ್ಮಶಾಲಿಗಳು ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ನೆಲೆಗೊಂಡಿರುವಂತೆ  ತೆಲುಗುರಾಜ್ಯ ಗಳಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ.

 

ಪದ್ಮಶಾಲಿ ವಂಶದ ಮಾಹಿತಿ ಭಾವನಾಮಹರ್ಷಿ ಅಥವ ಪದ್ಮ ಕುಲ ಪುರಾಣದಲ್ಲಿ ಸವಿವರವಾಗಿದೆ, ಈ ಪುರಾಣ ಕಥೆಯನ್ನು ಮುಂಬರುವ ಪೀಳಿಗೆಗೆ ಕುಲದ ಬಗ್ಗೆ ಮಾಹಿತಿ ಇರಲಿ ಎನ್ನುವ ಉದ್ದೇಶದಿಂದ  ಪದ್ಮಶಾಲಿಯವರ ಆಶ್ರಿತಕುಲವಾದ ಕೂನಪುಲಿಯವರು ತೆಲುಗು ರಾಷ್ಟ್ರಗಳಲ್ಲಿ ಪಟದ ಕಥೆಯಂತೆ (ಬಟ್ಟೆಯ ಮೇಲೆ ಚಿತ್ರಗಳ ಮೂಲಕ ತೋರಿಸುವುದು) ಪುರಾಣ ಪ್ರವಚನದಂತೆ ಹೇಳುತ್ತಾ ಇಂದಿಗೂ ಪದ್ಮಶಾಲಿ ಕುಲದ ಮಾಹಿತಿಯನ್ನು ಮನೆಮನೆಗೂ ತಲುಪಿಸುತಿದ್ದಾರೆ. ದೇಶದೆಲ್ಲೆಡೆ ಪ್ರತಿ ವರ್ಷ ಆಚರಿಸುವ ಶ್ರೀ ಭಾವನಾ ಋಷಿ ಮತ್ತು ಶ್ರೀಮತಿ ಭದ್ರಾವತಿ ಕಲ್ಯಾಣೋತ್ಸವ ಸಂಧರ್ಭದಲ್ಲಿ ಕುಲಪುರಾಣದ ಕಥೆಯನ್ನ ಹಲವೆಡೆ ಹೇಳಲಾಗುತ್ತದೆ.

ಪದ್ಮಶಾಲಿಗಳ ಆಶ್ರಿತ ಮತ್ತೊಂದು ಪಂಗಡವಾದ ತೆಲಂಗಾಣದ ಸಾಧನಾಶೂರರು ಸಹ ಹಲವಾರು ಶತಮಾನಗಳಿಂದ ಪದ್ಮಶಾಲಿ ಕುಲ ಪುರಾಣದ ಕಥೆಯನ್ನು ಹೇಳುತ್ತಾ ಬಂದಿದ್ದಾರೆ.

ಸುಮಾರು ಹನ್ನೊಂದನೆ ಶತಮಾನದಿಂದಲೂ ಪದ್ಮಶಾಲಿಗಳ ಮತ್ತು ಭಾವನಾ ಋಷಿಯ ಕುರಿತ ಮಾಹಿತಿಯನ್ನ ತೆಲುಗಿನ ಹಲವಾರು ಸಾಹಿತ್ಯಗ್ರಂಥಗಳಲ್ಲಿ ಉಲ್ಲೇಖಿಸುತ್ತಾ ಬಂದಿದ್ದಾರೆ.  ಇತ್ತೀಚೆಗೆ ದೊರೆತ ಶಾಸನವೊಂದರ ಆಧಾರದ ಮೇಲೆ ತಿರುಪತಿ ತಿರುಮಲ ದೇವಸ್ಥಾನದವರು ಸಿರಿ ಕೋಲುವು ಎನ್ನುವ ಪುಸ್ತಕ ಪ್ರಕಟಿಸಿ, ಅದರಲ್ಲಿ ಶ್ರೀ ಪದ್ಮಾವತಿ ದೇವಿ ಪದ್ಮಶಾಲಿಯವರ ಮನೆಮಗಳು ಎಂದು ಆರು ಶತಮಾನಗಳ ಹಿಂದೆ ನಡೆದ ಒಂದು ಘಟನಾವಳಿಯನ್ನ ಉಲ್ಲೇಖಿಸಿದ್ದಾರೆ. ಈ ಎಲ್ಲಾ ದಾಖಲೆಗಳು ಸಮಾಜದ ಹಿರಿಮೆಯನ್ನು ಹೆಚ್ಚಿಸುತ್ತಾ ಬಂದಿದೆ.  ತಿರುಪತಿ, ಶ್ರೀರಂಗಂ, ಅಹೋಬಿಲಂ, ತಿರುಚಾನೂರ್, ನಾರಾಯಣವನಂ, ಶ್ರೀನಿವಾಸ ಮಂಗಾಪುರಂ, ಜಮ್ಮಲಮಡುಗು ಮಂಗಳಗಿರಿ ಮುಂತಾದ 108  ವೈಷ್ಣವ ಕ್ಷೇತ್ರಗಳಲ್ಲಿ ಪದ್ಮಶಾಲಿಗಳೇ ವಸ್ತ್ರಾಭರಣವನ್ನು, ಅರಿಶಿಣ ಕುಂಕುಮ ಕೊಡುತ್ತಾ ಬಂದಿದ್ದಾರೆ.


ಮೌರ್ಯರ ಪತನದ ನಂತರ ಸ್ವತಂತ್ರ ರಾಗಿ ಭಾರತ ರಾಷ್ಟ್ರವನ್ನ ಆಳಿದ ಮಹಾನ್ ರಾಜ ವಂಶ ಶಾತವಾಹನರು, ನಾಲ್ಕು ವರೆ ಶತಮಾನಗಳ ( ಕ್ರಿ.ಪೂ. ೨೩೦ ರಿಂದ ) ಕಾಲ ಆಳಿದ ಸದೃಢ ಸಾಮ್ರಾಜ್ಯ. ಸಾಮ್ರಾಜ್ಯದ ವ್ಯಾಪ್ತಿ , ಪಶ್ಚಿಮದ ಕೊಂಕಣದಿಂದ, ಪೂರ್ವದ ಕೃಷ್ಣೆ ಮತ್ತು ಗೋದಾವರಿಯ ಡೆಲ್ಟಾದ ವರೆಗೂ. ಹಾಗೂ ದಕ್ಷಿಣದ ಕಡೆಗೆ ಚಂದ್ರಾವಳಿ ವರೆಗೂ ಹರಡಿತ್ತು. ಮಧ್ಯ ಏಷ್ಯಾದಿಂದ ಆಕ್ರಮಣಗಳನ್ನ ತಡೆದು ಕೊಂಡು ಎಂದೂ ಸೋಲದೆ, ದೊಡ್ಡ ಮತ್ತು ಪ್ರಬಲ ಸಾಮ್ರಾಜ್ಯದ ಆಳ್ವಿಕೆ ಮಾಡಿದವರು. ಅವರ ಸಮಯದಲ್ಲಿ ದೇಶದಲ್ಲಿ ಪರಕೀಯರ ಪ್ರವೇಶವಾಗಿರಲಿಲ್ಲ. ದೇಶದ ಆರ್ಥಿಕತೆ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲ. ಸನಾತನದ ಧರ್ಮದ ಪೋಷಕರಾಗಿದ್ದ ಅವರು ದಕ್ಷ ಆಡಳಿತಗಾರರು. ಕಲೆ, ಸಾಹಿತ್ಯ, ಧರ್ಮಗಳ ಪೋಷಕರಾಗಿ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಮೊದಲಿಗೆ ಸಾಂಸ್ಕೃತಿಕ ಐಕ್ಯತೆಯನ್ನು ತಂದು ಬೃಹತ್ ಭಾರತಕ್ಕೆ ತಳಹದಿ ಹಾಕಿದ್ದ ರಾಜ ಮನೆತನ ಅದು.  ಅವರ ಆ ಶ್ರೀಮಂತಿಕೆಗೆ ಬೆಂಬಲವಾಗಿ ನಿಂತ ಎಲ್ಲಾ ಕುಲದವರನ್ನೂ ಅವರು ವಿಶೇಷವಾಗಿ ಗೌರವಿಸುತಿದ್ದರು. ಮಹಾರಾಷ್ಟ್ರದ ನಾಸಿಕ್ ನಲ್ಲಿ ದೊರೆತಿರುವ ಶಾತವಾಹನರ ಸಾಮ್ರಾಟ ರಿಷಭದತ್ತ ಕೆತ್ತಿಸಿದ ಒಂದು ಶಿಲಾಶಾಸನದಲ್ಲಿ ಈ ಕುರಿತು ಮಾಹಿತಿಯಿದೆ. ಅದರಲ್ಲಿ ನೇಕಾರಿಕೆ ಮಾಡುತಿದ್ದ ಪದ್ಮಶಾಲಿಗಳನ್ನ ಹೆಸರಿಸಿದ್ದಾನೆ. ಈ ಶಿಲಾಶಾಸನ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಸಾಮ್ರಾಜ್ಯದ ಶ್ರೀಮಂತಿಕೆಗೆ ಬೆಂಬಲವಾಗಿ ನಿಂತಿರುವ ಎಲ್ಲ ಕಸುಬುದಾರರಿಗೆ ಕೃತಜ್ನತೆ ಸೂಚಿಸುವ ಈ ಶಾಸನ, ಎರಡು ಸಾವಿರ ವರ್ಷಗಳ ಹಿಂದಿನ ಇತಿಹಾಸಕ್ಕೆ ನಮ್ಮನ್ನು ಒಮ್ಮೆ ಒಳ ಹೊಕ್ಕಿ ನೋಡುವಂತೆ ಮಾಡುತ್ತದೆ. ಮೇಲೆ ತಿಳಿಸಿದ ಹಲವಾರು ವಿಷಯಗಳ ಕಾರಣಗಳಿಂದ ಪದ್ಮಶಾಲಿ ಸಮಾಜ ಸಾವಿರಾರು ವರ್ಷಗಳ ಹಿಂದೆಯೇ ರೂಪುಗೊಂಡಿದೆ ಎಂದು ಹೇಳಲು ನಮಗೆಲ್ಲ ಹೆಮ್ಮೆಯೆನಿಸುತ್ತದೆ.

  

ಬರಹ:-

ಪಿ.ಎಸ್.ರಂಗನಾಥ

ಲೇಖಕರು ಮತ್ತು ಭಾರತೀಯ ಸಾಮಾಜಿಕ ವೇದಿಕೆಯ ಮಾಜಿ ಕಾರ್ಯದರ್ಶಿಗಳು.

ಒಮಾನ್ ರಾಷ್ಟ್ರ - ಮಸ್ಕತ್