Saturday, June 25, 2022

ಪದ್ಮಶಾಲಿಕುಲ ಆಶ್ರಯಿತ ಸಾಧನಾಶೂರರು ಎನ್ನುವ ಅಪೂರ್ವ ಜಾನಪದ ಕಲಾವಿದರು

ನಮ್ಮ ಕರ್ನಾಟಕದ ಪದ್ಮಶಾಲಿ ಸಮಾಜದ ಯುವ ಪೀಳಿಗೆಗೆ ಅರಿವು ಮೂಡಿಸುವ ಸಲುವಾಗಿ ಹಿಂದೊಮ್ಮೆ ಕೂನಪುಲಿಯವರ (ಪಗಡರಾಜು, ಪೊಗಡ ರಾಜು) ಬಗ್ಗೆ ಬರೆದಿದ್ದೆ. ಈ ಬಾರಿ "ಸಾಧನಾಶೂರುಲು" ರವರ ಬಗ್ಗೆ ಜನರಿಗೆ  ಮಾಹಿತಿ ಕೊಡಲು ಪ್ರಯತ್ನಿಸಿದ್ದೇನೆ.

ಬರಹ:- ಪಿ.ಎಸ್.ರಂಗನಾಥ.

ಲೇಖಕರು ಮತ್ತು ಭಾರತೀಯ ಸಾಮಾಜಿಕ ವೇದಿಕೆಯ ಮಾಜಿ ಕಾರ್ಯದರ್ಶಿ.

ಒಮಾನ್ ರಾಷ್ಟ್ರ - ಮಸ್ಕತ್

ತೆಲಂಗಾಣ ಪ್ರಾಂತ್ಯದಲ್ಲಿ ಕೆಲವೊಂದು ಜಾತಿ ಅವಲಂಬಿತ ಜಾನಪದ ಕಲೆಯನ್ನು ಪ್ರದರ್ಶಿಸುವ ಹಲವಾರು ಪಂಗಡಗಳಿವೆ. ಅವರಲ್ಲಿ ಪದ್ಮಶಾಲಿ ಸಮಾಜವನ್ನ ಆಶ್ರಯಿಸಿ ಜೀವನ ನಡೆಸುವ ಎರಡು ಪಂಗಡಗಳಿವೆ. ಒಂದು ಕೂನಪುಲಿ/ಪೊಗಡರಾಜು/ಪಗಡರಾಜು ಮತ್ತೊಂದು ಸಾಧನಾಶೂರರು. ಪದ್ಮಶಾಲಿಗಳ ಕುಲದೈವವಾದ ಭಾವನಋಷಿಯ ಬೆವರಿನಿಂದ ಹುಟ್ಟಿ ಕಾಲುವಾಸುರನ ಹೋರಾಟದಲ್ಲಿ ಭಾವನಋಷಿಯನ್ನು ರಕ್ಷಿಸಿದ ಕೂನಪುಲಿಗಳು. ಅದೇ ರೀತಿ ಸಾಧನಾಸುರರು ಸಹ ಪದ್ಮಶಾಲಿಗಳನ್ನ ಶ್ರೀಕೃಷ್ಣ ಗಂಧರ್ವರಾಜು ಅವರಿಂದ ವಂಶವನ್ನು ರಕ್ಷಿಸಿದ್ದಕ್ಕಾಗಿ  ಪದ್ಮಶಾಲಿಗಳ ಮೇಲೆ ಅವಲಂಬಿತರಾದರು. ಈ ಪ್ರಕಾರದ ಅವಲಂಬಿತ ಜನಪದ ಕಥೆಗಳು ಮೌಖಿಕವಾಗಿ ತೆಲಂಗಾಣದಲ್ಲಿ ವ್ಯಾಪಕವಾಗಿ ಹರಡಿವೆ. ಈ ಕಥೆಗಳಾಗಲಿ ಈ ಅವಲಂಬಿತ ಕುಟುಂಬಗಳಾಗಲಿ ನಿನ್ನೆ ಮೊನ್ನೆಯಿಂದ ಹುಟ್ಟಿಕೊಂಡಿರುವುದಲ್ಲ. ಇವರ ಕುರಿತ ಮಾಹಿತಿಗಳು 9 ರಿಂದ 11ನೇ ಶತಮಾನದ ತೆಲುಗಿನ ಹಲವಾರು ಸಾಹಿತ್ಯ ಪ್ರಾಕಾರಗಳಲ್ಲಿ ದಾಖಲಾಗಿವೆ. ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ನಲ್ಲಿ  ಕೂನಪುಲಿ ಮತ್ತು ಸಾಧನಾಶೂರರ ಕುರಿತ ಹಲವಾರು ವೀಡಿಯೋಗಳು ಲಭ್ಯವಿದೆ.

 ತೆಲಂಗಾಣ ರಾಜ್ಯದ "ಸಾಧನಾಶೂರುಲು" ಸಮಾಜದವರು ಇಂದ್ರಜಾಲವನ್ನು ಪ್ರದರ್ಶಿಸುವವರು. ಪದ್ಮಶಾಲಿ ಸಮಾಜವನ್ನು ಆಶ್ರಯಿಸಿ  ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಅಲೆದಾಡುವ ಅವರು ಪ್ರತಿ ಹಳ್ಳಿಯ ಪದ್ಮಶಾಲಿಗಳ ಅನುಮತಿಯೊಂದಿಗೆ ಊರಿನ ಎಲ್ಲ ಜನರಿಗಾಗಿ ಇಂದ್ರ ಜಾಲವಿದ್ಯೆಯ ಪ್ರದರ್ಶನ  ನೀಡುತ್ತಾರೆ.  ಇವರು ನೀಡುವ ಪ್ರದರ್ಶನವನ್ನ ಗ್ರಾಮ್ಯ ಭಾಷೆಯಲ್ಲಿ ಕಣಿಕಟ್ಟು ಅಂತಲೂ ಕರೆಯುತ್ತಾರೆ. ಪದ್ಮಶಾಲಿಗಳನ್ನು ಆರಾಧಿಸುವವರನ್ನ ಮಾತ್ರ ಸಾಧನಾ ಶೂರರು ಎಂದು ಕರೆಯಲಾಗುತ್ತದೆ. ಸಾಧನೆಯಲ್ಲಿ ಯಾರಿಗೂ ಕಮ್ಮಿಯಿಲ್ಲ ಎನ್ನುವ ಅರ್ಥದಲ್ಲಿ, ಇವರನ್ನೂ ಇನ್ನೊಂದು ರೀತಿಯಲ್ಲಿ ಸಾಧನಾಸುರುಲು ಎಂದು ಸಹ ಕರೆಯುತ್ತಾರೆ. ಅಂದರೆ, ಸಾಧನ+ಅಸುರರು.

ಈ ಕಲಾವಿದರು, ಕಣ್ಣಿಗೆ ಕಾಣುವ ವಸ್ತುವನ್ನು ಮಾಯ ಮಾಡಿ ಅದರ ಜಾಗದಲ್ಲಿ ಇನ್ನೊಂದು ವಸ್ತುವನ್ನು ಸೃಷ್ಟಿಸಿ, ಪ್ರೇಕ್ಷಕರನ್ನು ರಂಜಿಸುವುದು, ಪ್ರೇಕ್ಷಕರನ್ನ ಕಾರ್ಯಕ್ರಮದ ಭಾಗವಾಗಿಸಿ, ಅವರೊಂದಿಗೆ ಅಚ್ಚರಿ ಮೂಡಿಸುವ ಕೆಲಸಗಳನ್ನು ಮಾಡಿ, ಮಾಟ ಮಂತ್ರಗಳಿವೆ ಎಂದು ಜನರಲ್ಲಿ ಭ್ರಮೆ ಉಂಟು ಮಾಡುವುದರಲ್ಲಿ ಇವರು ನಿಪುಣರು. ಇವರ ಕುರಿತ ಉಲ್ಲೇಖ ತೆಲುಗಿನ ಕೆಲ ಪ್ರಸಿದ್ಧ ಕಾವ್ಯಗಳಲ್ಲಿ ದಾಖಲಾಗಿದೆ.

ಮಲ್ಲವಿದ್ಯೆ ಯಲ್ಲಿ ಪರಿಣಿತಿ ಪಡೆದು ಧೈರ್ಯದಿಂದ, ಶಕ್ತಿ ಬಲದಿಂದ ಶತ್ರುಗಳನ್ನ ಹಿಮ್ಮೆಟ್ಟಿಸುವವರು ಎನ್ನುವ ಅರ್ಥದಲ್ಲಿ ತೆಲುಗಿನಲ್ಲಿ ಸಾಧನಾಶೂರುಲು ಎನ್ನುವ ಹೆಸರು ಚಾಲ್ತಿಯಲ್ಲಿದೆ.  ನಿಜಾರ್ಥದಲ್ಲಿ ಇವರು ಬಹು ಧೈರ್ಯವಂತರು, ಆಗಿನಕಾಲದಲ್ಲಿ ಪದ್ಮಶಾಲಿ ಜನಾಂಗವನ್ನು ರಕ್ಷಿಸುವುದಕ್ಕೊಸ್ಕರ ಧೈರ್ಯ, ಶೌರ್ಯದಿಂದ ಹೋರಾಡಿ ಪದ್ಮಶಾಲಿಗಳನ್ನ ಹಿಂಸಿಸಿದ ರಾಜನೊಬ್ಬನನ್ನ ಸಂಹರಿಸಿದ ಕಾರಣಕ್ಕಾಗಿ ಅಂದಿನ ಪದ್ಮಶಾಲಿಗಳು ಇವರಿಗೆ ಸಾಧನಾ ಶೂರರು ಎನ್ನುವ ಬಿರುದು ಕೊಟ್ಟಿದ್ದರು. ಈ ಸಾಧನಾ ಶೂರರು ತಮಗೆ ಹೆಸರು ಹೇಗೆ ಬಂತು ಅಂತ ಒಂದು  ಕಥೆಯ ಮುಖಾಂತರ ವಿವರಿಸುತ್ತಾರೆ.

ತುಂಬಾ ವರ್ಷಗಳ ಹಿಂದೆ ತೆಲಂಗಾಣ ಪ್ರಾಂತ್ಯದಲ್ಲಿ, ಶ್ರೀ ಕೃಷ್ಣ ಗಂಧರ್ವರಾಜು ಎನ್ನುವ ಆಡಳಿತಗಾರ ಪೊಟ್ಲು ಚೆರುವು ಎನ್ನುವಲ್ಲಿ ಸುಮಾರು ಐವತ್ತಾರು ಪಾಳ್ಯಗಳಿಗೆ ರಾಜನಾಗಿ ಆಡಳಿತ ನಡೆಸುತಿದ್ದ. ತನಗೆ ಯಾರಿಂದಲೂ ಮರಣ ಬರಬಾರದು ಎಂದು ಕಾಳಿಕಾದೇವಿಯನ್ನು ಪೂಜಿಸುತ್ತಾನೆ. ರಾಜನಿಗೆ ನಿನ್ನ ಆಶೆ ನೆರವೇರಬೇಕೆಂದರೆ ಪ್ರತಿದಿನ ಒಬ್ಬ ವ್ಯಕ್ತಿಗೆ ಹೊಸ ಬಟ್ಟೆಯನ್ನು ಕಟ್ಟಿ ಅವನ ತಲೆಯನ್ನು ಕತ್ತರಿಸಿ ಅದರ ಮೇಲೆ ಕುಳಿತು 12 ವರ್ಷಗಳ ಕಾಲ ಪೂಜಿಸು ಎಂದು ಹೇಳುತ್ತಾಳೆ ಅಂತೆ. ಅದಕ್ಕೆ ರಾಜ ಒಪ್ಪಿ, ರಾಜ್ಯದ ಪ್ರಜೆಗಳಿಗೆ ಈ ಮಾಹಿತಿ ತಿಳಿಸದೆ, ಪದ್ಮಶಾಲಿಗಳಿಗೆ ಪ್ರತಿದಿನ ಹೊಸ ಬಟ್ಟೆ ಕಳುಹಿಸಬೇಕು, ಮತ್ತುಬೇರೆ ಕುಲದವರು ಪ್ರತಿಮನೆಯಿಂದ ಒಬ್ಬರನ್ನ ಅರಮನೆಗೆ ಕಳುಹಿಸಬೇಕೆಂದು ಆಜ್ನೆ ಹೊರಡಿಸುತ್ತಾನೆ. ರಾಜಾಜ್ನೆಯಂತೆ ಪದ್ಮಶಾಲಿ ಜಾತಿಯನ್ನು ಹೊರತುಪಡಿಸಿ ಸಾಮ್ರಾಜ್ಯದ ಇತರೆ ಎಲ್ಲಾ ಜಾತಿಗಳ ಜನರು ಒಬ್ಬೊಬ್ಬರಾಗಿ ಅರಮನೆಗೆ ಹೋಗುತ್ತಾರೆ. ಆದರೆ, ಹೀಗೆ ಹೋದವರ ಸುಳಿವು ಎಲ್ಲಿಯೂ ಇರುವುದಿಲ್ಲ. ರಾಜ್ಯದ ಜನರಿಗೆ ಈ ಬಗ್ಗೆ ಭಯವುಂಟಾಗುತ್ತದೆ.

ಮುಂದಿನ ವರ್ಷ ಪೂಜಾಸಮಯದಲ್ಲಿ ಅದೇ ಪದ್ದತಿಯನ್ನು ರಾಜ ಮರಳಿ ಜಾರಿಗೆ ತರುತ್ತಾನೆ.  ಉಳಿದ ಜಾತಿಯ ಜನಗಳು ಒಗ್ಗೂಡಿ ಈ ಬಾರಿ ಹೊಸ ಬಟ್ಟೆಗಳನ್ನು ನಾವು ನೀಡುತ್ತೇವೆ. ಮನೆಗೊಬ್ಬರನ್ನ ಕಳುಹಿಸಲು ಪದ್ಮಶಾಲಿಗಳಿಗೆ ಹೇಳಿ ಎಂದು ಕೇಳುತ್ತಾರೆ. ಆಗ  ರಾಜ ಆಜ್ನೆಯನ್ನ ಪರಿಷ್ಕರಿಸಿ ಪ್ರತಿದಿನ ಮನೆಗೊಬ್ಬ ಪದ್ಮಶಾಲಿಗಳು ಬರಬೇಕೆಂದು ಹೇಳುತ್ತಾನೆ. ಆಗಲೇ ರಾಜ್ಯದಲ್ಲಿ ಭಯದ ವಾತಾವರಣವಿದ್ದಿದ್ದರಿಂದ, ಪದ್ಮಶಾಲಿಗಳು ದುಗುಡದಿಂದಲೇ ವಿರೋಧಿಸುತ್ತಾರೆ. ಮೊದಲು, ಈ ಹಿಂದೆ ತೆಗೆದುಕೊಂಡು ಹೋದ ಜನರನ್ನ ಏನು ಮಾಡಿದಿರಿ ಎಂದು ಹೇಳಿ ಆನಂತರ ನಾವು ನಮ್ಮ ಮನೆಯವರನ್ನ ಕಳುಹಿಸುತ್ತೇವೆ ಎಂದು ಎದುರು ನಿಲ್ಲುತ್ತಾರೆ. ಆಗ ರಾಜ ಪ್ರತಿಭಟಿಸಿದವರನ್ನ ಬಂಧಿಸಿ ಕಾರಾಗೃಹದಲ್ಲಿಡುತ್ತಾನೆ. ಐದು ದಿನಗಳು ಕಳೆದ ನಂತರ, ನಾವು ಸ್ನಾನ, ಸಂಧ್ಯಾವಂದನೆ, ಪೂಜೆ ಇಲ್ಲದೆ ಸೆರೆವಾಸದಲ್ಲಿದ್ದೇವೆ. ಹೀಗಾಗಿ, ಈ ಎಲ್ಲವನ್ನ ಮುಗಿಸಿಕೊಂಡು ಸೆರೆವಾಸಕ್ಕೆ ಮರಳಿ ಬರುತ್ತೇವೆ, ನಮ್ಮನ್ನ ಬಿಡಿ ಎಂದು ಕಾವಲುಗಾರರನ್ನ ಬೇಡಿಕೊಳ್ಳುತ್ತಾರೆ. ಕಾವಲುಗಾರರು ಅದನ್ನ ನಂಬಿ ಅವರನ್ನ ಬಿಟ್ಟು ಕಳುಹಿಸುತ್ತಾರೆ. ಪದ್ಮಶಾಲಿಗಳು ಪ್ರತಿದಿನ ಪೂಜೆ ಮಾಡುವ ಮಾರ್ಕಂಡೇಯ ದೇವಸ್ಥಾನದಲ್ಲಿ ಎಲ್ಲರೂ ಸೇರಿ, ನೋಡಿ ರಾಜ ನಮ್ಮ ವಂಶವನ್ನ ನಿರ್ವಂಶವನ್ನಾಗಿ ಮಾಡಲು ಪಣ ತೊಟ್ಟಂತಿದೆ. ಹೀಗಾಗಿ ನಾವು ರಾಜನನ್ನ ಸಂಹರಿಸದೆ ಬದುಕಲಾರೆವು. ಹೇಗಾದರು ಮಾಡಿ ರಾಜನನ್ನ ಸಂಹರಿಸಬೇಕು ಎಂದು ಪಣತೊಡುತ್ತಾರೆ. ರಾಜ ಇರುವುದು ಉಕ್ಕಿನ ಕೋಟೆಯಲ್ಲಿ, ಮಧ್ಯದಲ್ಲಿ ಒಂಟಿ ಸ್ಥಂಭದ ಮಹಡಿ. ಆ ಮಹಡಿಯ ಸುತ್ತ ಮುಸ್ಸಾನದಿ, ಕಾವಲಾಗಿ ಕಾಳಿಕಾದೇವಿ ಇರುತ್ತಾಳೆ. ಆ ರಾಜನ ಕೈಯಲ್ಲಿರುವ ಕತ್ತಿಯಿಂದ ಸಾಯಿಸಿದರೆ ರಾಜ ಸತ್ತುಹೋಗುತ್ತಾನೆ, ಆಗ ನಮ್ಮ ವಂಶ ಉಳಿಯುವುದು ಎಂದು ತೀರ್ಮಾನಿಸುತ್ತಾರೆ. ಊರಿನ ಕೆಲ ಕುಟುಂಬಗಳು ಪದ್ಮಶಾಲಿ ಕುಲದವರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಅವರ ಧೈರ್ಯವನ್ನ ಮೆಚ್ಚಿ ಊರಿನ ಪದ್ಮಶಾಲಿ ಕುಲದವರು, ಇನ್ನು ಮುಂದೆ ನಮ್ಮ ಮದುವೆಗಳಲ್ಲಿ ಇವರಿಗೆ ಮೊದಲ ಬೊಟ್ಟು ಇಡಬೇಕು ಮತ್ತು ವಿಜಯಶಾಲಿಯಾಗಿ ಬಂದವರಿಗೆ ಪ್ರತಿ ವರ್ಷ ಅವರವರ ಗ್ರಾಮಗಳಿಗೆ ಕರೆದು ಸತ್ಕರಿಸಿ ಒಂದೊಂದು ಮನೆಯಿಂದ ಒಂದು ರೂಪಾಯಿ ಇಪ್ಪತ್ತೈದು ಪೈಸೆ ಯಂತೆ, 1016 ರೂ. ಗಳನ್ನ ಕೊಡಬೇಕು ಎಂದು ಎಲ್ಲಾ 56 ಪಾಳ್ಯಗಳ ಪದ್ಮಶಾಲಿಗಳ ಮುಂದೆ ತೀರ್ಮಾನವಾಗುತ್ತದೆ.

ಅವರಿಗೆ ಆ ಕ್ಷಣದಿಂದಲೇ, ಕತ್ತಿವರಸೆ, ಮುಂತಾದ ಶಸ್ತ್ರಭ್ಯಾಸ ಜತೆಗೆ ಮಂತ್ರ ತಂತ್ರವಿದ್ಯೆಯನ್ನು ಆ ಸ್ಥಳದಲ್ಲಿನ ಗೊಲ್ಲ ಕೇತಮ್ಮ ಎನ್ನುವವರ ಬಳಿ ಆ ವಿದ್ಯೆಗಳನ್ನು ಕಲಿಸಲಾಗುತ್ತದೆ. ತರಬೇತಿ ಮುಗಿದ ತಕ್ಷಣ ಗೊಲ್ಲ ಕೇತಮ್ಮ ರ ಬಳಿಯಿರುವ ಮಂತ್ರದಂಡವನ್ನ ಪಡೆದುಕೊಂಡು ರಾಜನನ್ನ ಸಂಹರಿಸಲು ಹೊರಡುತ್ತಾರೆ.

ಮುಸ್ಸಾನದಿ ದಾಟಿ ಕೋಟೆಯನ್ನು ಪ್ರವೇಶಿಸುವಾಗ, ಕಾಳಿಕಾದೇವಿ ಇವರನ್ನ ಅಡ್ಡಗಟ್ಟಿ, ಹಲವಾರು ಬೇಡಿಕೆಗಳನ್ನ ಇಡುತ್ತಾಳಂತೆ. ಆ ಪ್ರಕಾರವಾಗಿ, ಅವರು ಕಾಳಿಕಾದೇವಿ ಹೇಳಿದ ಹಾಗೆ ನಡೆದುಕೋಳ್ಳುತ್ತಾರೆ, ಆಗ ಅರಮನೆಗೆ ಪ್ರವೇಶ ಸಿಗುತ್ತದೆ. ಒಂಟಿ ಸ್ತಂಭದ ಮೇಲಿರುವ ಮಹಡಿಯನ್ನು ತಲುಪಿ, ತಾವು ಕಲಿತ ಶಕ್ತಿ ಯುಕ್ತಿಯಿಂದ ಅರಮನೆಯಲ್ಲಿದ್ದ ರಾಜನನ್ನ ಸಂಹರಿಸುತ್ತಾರೆ. ಈ ಯುದ್ದದಲ್ಲಿ ಪ್ರಚಂಡ ವಿಜಯಶಾಲಿಗಳಾಗಿ ಮರಳಿ ಬರುತ್ತಾರೆ.

ವಿಜಯದ ನಂತರ ಮಾಮೂಲಿಯಾಗಿ ತೆರಳದೆ, ಇವರು ಕಲಿತ ಮಂತ್ರ ತಂತ್ರ ಶಸ್ತ್ರವಿದ್ಯೆಗಳನ್ನ ಸಮುದಾಯದ ಮುಂದೆ ಪ್ರದರ್ಶಿಸುತ್ತಾರೆ. ಇವರ ಧೈರ್ಯ ಶೌರ್ಯಕಂಡ ಊರಿನವರು ಇವರಿಗೆ ಸತ್ಕರಿಸಿ ಸಾಧನಾಶೂರರು ಎನ್ನುವ ಬಿರುದು ನೀಡುತ್ತಾರೆ.  ಪದ್ಮಶಾಲಿಗಳ ಜತೆ ಮುಂಚಿತವಾಗಿ ಆದ ಒಪ್ಪಂದದಂತೆ, ಸತ್ಕಾರ ಪಡೆಯುತ್ತಾರೆ. ಪ್ರತಿ ವರ್ಷ ಅವರವರ ಗ್ರಾಮಗಳಿಗೆ ತೆರಳಿ ತಾವು ಕಲಿತ ಎಲ್ಲಾ ವಿದ್ಯೆಗಳನ್ನ ಪ್ರದರ್ಶಿಸಿ ಊರಿನವರ ಸತ್ಕಾರ ಪಡೆಯಲು ಆರಂಭಿಸುತ್ತಾರೆ. ಅಂದಾಜು ಎರಡನೇ ಶತಮಾನದಿಂದ ಈ ಆಚರಣೆ ತೆಲಂಗಾಣದಲ್ಲಿದೆ ಎಂದರೆ ನಂಬಲಸಾಧ್ಯ. ಅದೇ ರೀತಿ ಇಂದೂ ಸಹ ಕೆಲ ಕುಟುಂಬದವರು ಈ ಇಂದ್ರಜಾಲ ವಿದ್ಯೆಯಿಂದಲೇ ಜೀವನವನ್ನ ನಡೆಸುತಿದ್ದಾರೆ.  ನೂರಾರು ಜನಸಂಖ್ಯೆಯಲ್ಲಿದ್ದ ಇವರು ಬದಲಾದ ಕಾಲಘಟ್ಟದಲ್ಲಿ ಇಂದು ಬೆರಳಣಿಕೆಯಷ್ಟು ಜನ ಮಾತ್ರ ಉಳಿದಿದ್ದಾರೆ




ಇಂದಿಗೂ ಹಲವೆಡೆ ಪ್ರೇಕ್ಷಕರ ಮುಂದೆ, ಜಲಸ್ಥಂಭನ, ವಾಯು ಸ್ಥಂಭನ, ಅಗ್ನಿ ಸ್ಥಂಭನದ ಜತೆಗೆ ಮತ್ತಿತರ ವಿದ್ಯೆಗಳನ್ನ ಪ್ರದರ್ಶಿಸುತ್ತಾರೆ. ಈ ವಿದ್ಯೆಗಳ ಪ್ರದರ್ಶನ ಮಾಡುವಾಗ, ಕಲಾವಿದರು ನಾಟಕೀಯ, ಹಾಸ್ಯ, ಮತ್ತು ಭಯಾನಕ ಮುಂತಾದ ಅಂಶಗಳನ್ನು ಒಳಗೊಂಡ ರೂಪಕಗಳನ್ನ ಪ್ರದರ್ಶಿಸಿ ಪ್ರೇಕ್ಷಕರನ್ನ ರಂಜಿಸುತ್ತಾರೆ.  ಪ್ರದರ್ಶನದ ಪ್ರಾರಂಭದಲ್ಲಿ, ಕಾಳಿಕಾದೇವಿಯನ್ನ ಪೂಜಿಸಿದ ಗುರುವೊಬ್ಬರು, ವೃಂದದಲ್ಲಿನ ಎಲ್ಲರಿಗೂ ಮಂತ್ರಿಸಿದ ತಾಯತಗಳನ್ನ ಕಟ್ಟುತ್ತಾರೆ. ನಂತರ ಅಷ್ಟದಿಕ್ಪಾಲಕರನ್ನ ಬಂಧಿಸಿ ಪ್ರದರ್ಶನವನ್ನು ನೀಡುತ್ತಾರೆ. ಪ್ರಾರಂಭದಲ್ಲಿ ನಗಾರಿಗಳನ್ನ ಬಾರಿಸುತ್ತ ವೃಂದದಲ್ಲಿನ ಕಲಾವಿದರು ಒಬ್ಬೊಬ್ಬರಾಗಿ ಗುರುವಿನ ಆದೇಶದಂತೆ ಕರ್ರಸಾಮು (ಕೋಲುಗಳನ್ನ ತಿರುಗಿಸುತ್ತ, ಶತ್ರುಗಳ ಮೇಲೆ ಆಕ್ರಮಣಮಾಡುವ ವಿದ್ಯೆ) ಪ್ರದರ್ಶನ ನೀಡುತ್ತಾರೆ. ಜಲಸ್ಥಂಭ ವಿದ್ಯೆಯಲ್ಲಿ ನೀರನ್ನು ಸ್ತಂಭಿಸಿ ತಮ್ಮ ನಿಯಂತ್ರಣಕ್ಕೆ ತಂದುಕೊಂಡು ಪ್ರದರ್ಶನಕ್ಕೆ ಅನುಕೂಲವಾಗಿ ಬದಲಾಯಿಸುತ್ತಾರೆ. ಇದನ್ನ ಜಲಸ್ಥಂಭನ ಎಂದು ಕರೆಯುತ್ತಾರೆ. ಮೂಗಿನ ಒಂದು ರಂಧ್ರದ ಮುಖಾಂತರ ನೀರನ್ನು ಹಾಕಿ ಮತ್ತೊಂದು ಹೊಳ್ಳೆಯಲ್ಲಿ ಹೊರತೆಗೆಯುತ್ತಾರೆ. ಅರಿಶಿನ ಮತ್ತು ಕುಂಕುಮವನ್ನ ನೀರಲ್ಲಿ ಹಾಕಿ ಕಲಿಸಿ ಮತ್ತೆ ಯಥಾವತ್ತಾಗಿ ಅರಿಶಿನ ಕುಂಕುಮವನ್ನ ಹೊರತೆಗೆದು ಪ್ರೇಕ್ಷಕರನ್ನ ಆಶ್ಚರ್ಯಚಕಿತರನ್ನಾಗಿಸುತ್ತಾರೆ.

ಅದೇ ರೀತಿ ಈ ಕಲಾವಿದರು ಅಗ್ನಿಯನ್ನು ಸ್ಥಂಭಿಸಿ ಪ್ರದರ್ಶನ ನೀಡುತ್ತಾರೆ. ಇದೇ ರೀತಿ ಹಲವಾರು ರೀತಿಯ ಕಣಕಟ್ಟು ಮುಂತಾದ ಇಂದ್ರಜಾಲ ವಿದ್ಯೆಯನ್ನ ಜನರ ಮುಂದೆ ಪ್ರದರ್ಶನ ನೀಡುತ್ತಾರೆ.

ಪದ್ಮಶಾಲಿಗಳು ಕೊಟ್ಟ ದಕ್ಷಿಣೆ ಪಡೆದು ಮತ್ತೊಂದು ಗ್ರಾಮಕ್ಕೆ ಹೊರಡುತ್ತಾರೆ. ತೆಲಂಗಾಣದ ಒಂದೆರೆಡು ಜಿಲ್ಲೆಗಳಲ್ಲಿ ಬೆರಳಣಿಕೆಯಷ್ಟು ಕುಟುಂಬಗಳು ಈ ವಿದ್ಯೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪದ್ಮಶಾಲಿಗಳ ಆಶ್ರಯದಲ್ಲಿ ಇವರ ಜೀವನ ನಡೆಯುವುದರಿಂದ ಆರ್ಥಿಕವಾಗಿ ಇವರು ಅಷ್ಟೊಂದು ಸಬಲರಾಗಿಲ್ಲ. ಮುಂದಿನ ಜನಾಂಗಕ್ಕೆ ಇಂತಹ ಅವಲಂಬಿತ ಕುಟುಂಬಗಳಿದ್ದವು ಎಂದು ಹೇಳಲು ಅವರ ವಿಡಿಯೋಗಳು, ಪುಸ್ತಕಗಳು, ಲೇಖನಗಳು ಮಾತ್ರ ಉಳಿದಿರುತ್ತವೆ. ಬದಲಾದ ಜಗತ್ತು ಎಲ್ಲವನ್ನು ನುಂಗಿಹಾಕುತ್ತ ಹೊಸತನ್ನು ನೋಡಲು ಕಾದುಕುಳಿತಿದೆ. ಸಾಧನಾಶೂರರು ಪ್ರದರ್ಶಿಸುವ ಎಲ್ಲಾ ವಿದ್ಯೆಗಳು ಮತ್ತು ರೂಪಕಗಳನ್ನ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ನಲ್ಲಿ ಆಸಕ್ತಿಯಿದ್ದವರು ನೋಡಬಹುದು.



No comments:

Post a Comment