Friday, July 15, 2022

ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಪದ್ಮಶಾಲಿ ಸಮಾಜದ ಹೆಮ್ಮೆ

ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಪದ್ಮಶಾಲಿ ಸಮಾಜದ ಹೆಮ್ಮೆ


ಕನ್ನಡ ಚಿತ್ರ ರಸಿಕರ ಮನಸೂರೆಗೊಂಡಿರುವ ಕವಿರತ್ನ ಶ್ರೀ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ನಮ್ಮ ಪದ್ಮಶಾಲಿ ಸಮಾಜದ ಹೆಮ್ಮೆಯ ಪ್ರತಿಭಾನ್ವಿತರು. ದೇವಿ ಶಾರದೆಯ ಕೃಪೆ ಇವರ ಮೇಲಿರುವುದರಿಂದ ಸಂಗೀತ ಸಾಹಿತ್ಯ, ಚಿತ್ರ ನಿರ್ದೇಶನ ಜತೆಗೆ ಮತ್ತು ನಟನೆಯಲ್ಲೂ ಸೈ ಎನಿಸಿಕೊಂಡಿರುವ ಪದ್ಮಶಾಲಿ ಸಮಾಜದಲ್ಲಿನ ಅಪರೂಪದ ಪ್ರತಿಭೆ. 

ನೇಕಾರ ಮನೆತನದಲ್ಲಿ ಹುಟ್ಟಿ ಬೆಳೆದು ಇಂದು ಸಮಾಜದಲ್ಲಿ ಅತ್ಯುತ್ತಮ ಸ್ಥಾನಗಳಿಸಿರುವ ಇವರು ತುಂಬಾ  ಸರಳವ್ಯಕ್ತಿತ್ವದವರು. ಕೇವಲ ಸಾಹಿತ್ಯ ಸಂಗೀತ ಎನ್ನದೇ ಸಾಮಾಜಿಕ ಜವಬ್ದಾರಿಯನ್ನು ಹೊತ್ತು ಕವಿರತ್ನ ಟ್ರಸ್ಟ್ ಮೂಲಕ ಸಮಾಜಸೇವೆ ಮಾಡುತ್ತಿರುವ ಹೃದಯ ವೈಶಾಲವುಳ್ಳವರು. ಕೋವಿಡ್ ಸಮಯದಲ್ಲಿ ನೂರಾರು ಜನರಿಗೆ ಫುಡ್ ಕಿಟ್ ಅನ್ನು ಹಂಚಿದ್ದಾರೆ. ಕೆಲಸವಿಲ್ಲದೆ ಇದ್ದವರಿಗೆ, ಕೌಶಲ್ಯ ತರಬೇತಿ ನೀಡಿ ಖಾಸಗಿಸಂಸ್ಥೆಗಳಲ್ಲಿ ಉದ್ಯೋಗ ದೊರೆಯುವಂತೆ ಮಾಡಿದ್ದಾರೆ. ಇವರ ಕೆಲಸಗಳು ಒಂದೇ ಎರಡೇ, ಬಹಳಷ್ಟಿವೆ. 

ಇವರ ತಂದೆ ಎಂ ವಿ ವೆಂಕಟರಮಪ್ಪ, ತಾಯಿ ಚಂದ್ರಮ್ಮ. ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲ ಘಟ್ಟ ಎಂಬ ಪುಟ್ಟ ಊರಿನಲ್ಲಿ ಡಿಸೆಂಬರ್ 03, 1975 ರಂದು ಜನಿಸಿದರು.  ಶಾಲಾ ಶಿಕ್ಷಣವನ್ನು ದೊಡ್ಡಬಳ್ಳಾಪುರದಲ್ಲಿ ಮುಗಿಸಿ, ಮೈಸೂರು ಯೂನಿವರ್ಸಿಟಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. 

ನೇಕಾರ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರಿಗೆ, ನೇಕಾರ ಕಷ್ಟ ನಷ್ಟಗಳ ಅರಿವಿದೆ. ಸೂಕ್ತ ಅವಕಾಶ, ರಾಜಕೀಯ ಸ್ಥಾನಮಾನ  ದೊರೆತರೆ ಮುಂದೊಂದು ದಿನ ಸಮಾಜದ ಮುಖಂಡರಾಗಿ ಕೆಲಸ ಮಾಡುವ ದಿನಗಳು ದೂರವಿಲ್ಲ.

ಚಂದನವನದಲ್ಲಿ ನಟ, ಗೀತ ರಚನೆಕಾರ, ಸಂಗೀತಗಾರ, ನಿರ್ದೇಶಕ, ಸಂಭಾಷಣೆಕಾರ.. ಹೀಗೆ ವಿಭಿನ್ನ ಜವಬ್ದಾರಿಗಳನ್ನ ಹೊತ್ತು ನಿಭಾಯಿಸಿ ಇಂದು ಕರ್ನಾಟಕದ ಕನ್ನಡಿಗರ ಹೃದಯಗೆದ್ದಿದ್ದಾರೆ. ಕನ್ನಡ ಚಲನಚಿತ್ರರಂಗ ಕಂಡ ಹೆಮ್ಮೆಯ ಗೀತರಚನೆಕಾರರಾದ ಇವರು ಬಹಳ ವರ್ಷದಿಂದ ಚಿತ್ರರಂಗದಲ್ಲಿ ಸಾಧನೆ ಮಾಡಿ ಕನ್ನಡದಲ್ಲಿ ಅದ್ಭುತ ಹಾಡುಗಳನ್ನು ರಚಿಸಿದ್ದಾರೆ.  1000 ಕ್ಕೂ ಹೆಚ್ಚಿನ ಚಿತ್ರಗಳಿಗೆ 3000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಶ್ರೀ ಮಂಜುನಾಥ, ಸ್ವಾತಿಮುತ್ತು, ಶಿವಲಿಂಗ ಸಿನಿಮಾ ಸೇರಿದಂತೆ 20 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಬಾಷಣೆ ಬರೆದಿದ್ದಾರೆ

‘ಗಾಜಿನ ಮನೆ’ ಚಿತ್ರದ ಮೂಲಕ 23 ವರ್ಷಗಳ ಹಿಂದೆ ಚಿತ್ರೋದ್ಯಮ ಪ್ರವೇಶಿಸಿದ ಡಾ. ನಾಗೇಂದ್ರ ಪ್ರಸಾದ್ ಅವರು ಚಂದನವನದಲ್ಲಿ ನಟ, ಗೀತ ರಚನೆಕಾರ, ಸಂಗೀತಗಾರ, ನಿರ್ದೇಶಕ, ಸಂಭಾಷಣೆಕಾರ.. ಹೀಗೆ ಇನ್ನೂ ನಾನಾ ಅವತಾರಗಳಲ್ಲಿ ಮಿಂಚಿ, ಕನ್ನಡಿಗರ ಹೃದಯಗೆದ್ದಿದ್ದಾರೆ.

ಮೊದಲು ಇವರು ಗುರುತಿಸಿಕೊಂಡಿದ್ದು ಸಂಗೀತ ಕ್ಷೇತ್ರದಲ್ಲಿ. ನಂತರ ಇವರು ಕಿಚ್ಚ ಸುದೀಪ್​ ಅಭಿನಯದ 'ನಲ್ಲ' ಸಿನಿಮಾ ಮೂಲಕ ನಿರ್ದೇಶನಕ್ಕೂ ಸೈ ಎಂದರು.

ಇವರು ಪೆನ್ ಹಿಡಿದರೆ ಸಾಕು ಅಲ್ಲೊಂದು ಅದ್ಭುತವಾದ ಹಾಡು ಹುಟ್ಟಿತೆಂದೇ ಅರ್ಥ. ಭಕ್ತಿಗೀತೆ, ಪ್ರಣಯಗೀತೆ ಎಲ್ಲಾ ರೀತಿ ಯ ಹಾಡುಗಳನ್ನು ರಚಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಗೀತ ರಚನೆ, ನಿರ್ದೇಶನ, ನಾಟಕ ರಚನೆ, ಸಂಭಾಷಣೆ ಎಲ್ಲದಕ್ಕೂ ಜೈ ಎನ್ನುವ  ಪ್ರತಿಭಾನ್ವಿತ. 

ಶ್ರೀ ಮಂಜುನಾಥ ಸಿನಿಮಾದ ’ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ.... ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ಹಾಡು ಎಲ್ಲರ ಮನೆಯ ಸುಪ್ರಭಾತ ಎಂದರೆ ತಪ್ಪಾಗಲಿಕ್ಕಿಲ್ಲ.  ಧಮ್ ಚಿತ್ರದ ’ ಈ ಟಚ್ಚಲಿ ಏನೋ ಇದೆ... ಎಂದು ಕಚಗುಳಿ ಇಟ್ಟರೆ, ಕರಿಯಾ ಚಿತ್ರದ ’ಕೆಂಚಾಲೋ ಮಂಚಾಲೋ...’ ಎಂದು ಹುಡುಗರ ಪಾಲಿನ ರಾಷ್ಟ್ರಗೀತೆಯನ್ನು ಬರೆಯುತ್ತಾರೆ. 

ಕುರುಕ್ಷೇತ್ರ ಚಿತ್ರದ  ಸಾಹೋರೆ ಹಾಡು. ಸ್ವಾತಿ ಮುತ್ತು ಚಿತ್ರದಲ್ಲಿ ’ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ... ಎಂದು ಲಾಲಿ ಹಾಡಿದ್ರೆ ಆಪ್ತಮಿತ್ರದಲ್ಲಿ ’ ಪಟಪಟ ಗಾಳಿಪಟ... ಎಂದು ಗಾಳಿ ಪಟ ಹಾರಿಸುತ್ತಾರೆ. ಇತ್ತೀಚಿಗೆ ಬಂದ ಕೆಜಿಎಫ್ -1 ರಲ್ಲಿ ಸಲಾಂ ರಾಕಿ ಭಾಯ್... ಎಂದು ಯಶ್ ಗೆ ಎಲ್ಲರೂ ಸಲಾಂ ಹೊಡೆಯುವಂತೆ ಮಾಡಿದರು. 

ಸಂಗೀತಕ್ಕೆ ಯಾವುದೇ ಹಂಗಿಲ್ಲ. ಹಾಗೇ ನಾಗೇಂದ್ರ ಪ್ರಸಾದ್ ಅವ್ರು ಇಂತದ್ದೇ ಹಾಡು ಅಂತ ಎಂದಿಗೂ ಫಿಕ್ಸ್ ಆದವರಲ್ಲ. ಕಮರ್ಷಿಯಲ್ ಹಾಡು ಎಂದಾಗ ಸಲಾಂ ರಾಕಿ ಬಾಯ್ ಅಂತಾರೆ. ಟಗರು ಬಂತು ಟಗರು ಹಾಗೂ ಕೋಟಿಗೊಬ್ಬ ಕೋಟಿಗೊಬ್ಬ ಟೈಟಲ್ ಸಾಂಗ್ ಕೂಡ ಇವ್ರ ಕೈನಲ್ಲೇ ಮೂಡಿರೋ ಹಾಡುಗಳು. ಇನ್ನೂ ಫೀಲಿಂಗ್ ಅಂದ ತಕ್ಷಣ ‘ಅಪ್ಪ ಐ ಲವ್ ಯು ಪಾ...’ ಅಂತ ಎಲ್ಲರ ಕಣ್ಣಲ್ಲಿ ನೀರು ತರಿಸುವಂತ ಸಾಹಿತ್ಯ ಬರೆದವರು ಇವರೇ. 

ಅದರ ಜೊತೆಯಲ್ಲಿ ಮನಸ್ಸಿನಲ್ಲೇ ಕೃಷ್ಣನ ನೆನೆಯುವ ‘ನೀನೇ ರಾಮ ನೀನೇ ಶಾಮ... ಅಂತನೂ ಬರೆದಿದ್ರು. ಪ್ರತಿ ವರ್ಷವೂ ಹಿಟ್ ಲೀಸ್ಟ್ ಸೇರುವಂತ ಹಾಡುಗಳು ಇವರ ಬತ್ತಳಿಕೆಯಿಂದ ಬರುತ್ತಲೇ ಇರುತ್ತವೆ. ಅದೇ ರೀತಿ ಇಂದಿಗೂ ಯುವ ಪ್ರೇಮಿಗಳನ್ನ ಕಾಡುವ ಹಾಡುಗಳು ಅಂದ್ರೆ ಶಾಂಕುತ್ಲೆ ಸಿಕ್ಕಳು...ಒಂದು ಮಳೆ ಬಿಲ್ಲು ..ಒಂದು ಮಳೆ ಮೋಡ ಹಾಡು. 

ಕಿರುತೆರೆಯಲ್ಲೂ ಮಿಂಚಿರುವ ಡಾ. ನಾಗೇಂದ್ರ ಪ್ರಸಾದ್ ಅವರದು ನಾಟಕ, ಬೀದಿ ನಾಟಕಗಳಲ್ಲೂ ಎತ್ತಿದ ಕೈ. ಸಾವಿರಾರು ಚಲನಚಿತ್ರಗಳಲ್ಲಿ 3,000ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಭಕ್ತಿಗೀತೆ, ದೇಶಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ, ಧಾರಾವಾಹಿ, ಆಲ್ಬಂಗಳಿಗೆ ಹಾಡು ಬರೆದಿದ್ದಾರೆ.

ಕೆ ವಿ ಜಯರಾಮ್ ನಿರ್ದೇಶನದ ಗಾಜಿನ ಮನೆ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಾಗೇಂದ್ರ ಪ್ರಸಾದ್ ಹಿಂತಿರುಗಿ ನೋಡಿದ್ದೇ ಇಲ್ಲ. ಇವರು ಮೊಟ್ಟ ಮೊದಲ ಬಾರಿಗೆ 'ಶಿಷ್ಯ' ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸಂಗೀತ ನಿರ್ದೇಶಕರಾದರು. 2018 ರಲ್ಲಿ ಅವರು ಗೂಗಲ್ ಚಿತ್ರದಲ್ಲಿ ಪ್ರಮುಖ ನಟನಾಗಿ ಪಾದಾರ್ಪಣೆ ಮಾಡಿದರು ಮತ್ತು ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಪಡೆದರು.

ಡಾ.ವಿ.ನಾಗೇಂದ್ರ ಪ್ರಸಾದ್ ಅವರು 1000 ಕ್ಕೂ ಹೆಚ್ಚು ಚಲನಚಿತ್ರಗಳು, 100 ರ ಭಕ್ತಿ, ಜಾನಪದ, ಶಾಸ್ತ್ರೀಯ, ದೇಶಭಕ್ತಿ, ಪ್ರಚಾರ ಆಲ್ಬಂಗಳು ಮತ್ತು 50 ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಿಗೆ 3000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ.  

ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 150 ಕ್ಕೂ ಹೆಚ್ಚು ಕನ್ನಡ ಸಿನೆಮಾ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. 

ಡಾ. ನಾಗೇಂದ್ರ ಪ್ರಸಾದ್ ಅವರು ಸ್ವಯಂಕೃಷಿಯಿಂದ ಆಯುರ್ವೇದ ವೈದ್ಯ ಪದ್ದತಿ ವ್ಯಾಸಂಗ ಮಾಡಿ, ಚಿತ್ರರಂಗಕ್ಕೆ ಬರುವ ಮುನ್ನ ಬೆಂಗಳೂರಿನ ಕುರುಬರಹಳ್ಳಿಯಲ್ಲಿ `ಭಾವನಾ ಆಯುರ್ವೇದಿಕ್ ಸೆಂಟರ್’ ನಡೆಸ್ತಾ ಇದ್ದರು. 1999 ರಲ್ಲಿ ಕೆ.ವಿ. ಜಯರಾಂ ನಿರ್ದೇಶನದ ‘ಗಾಜಿನ ಮನೆ’ ಚಿತ್ರಕ್ಕೆ `ಬೇವು ಬೆಲ್ಲ ಹಂಚಿಕೊಂಡೆ’ ಎಂಬ ಹಾಡು ಬರೆಯುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 

ಸದ್ಯ ವಿ ನಾಗೇಂದ್ರ ಪ್ರಸಾದ್ ಅವ್ರ ಕುರುಕ್ಷೇತ್ರದ ಹಾಡುಗಳು ಸಖತ್ ಸೌಂಡ್ ಮಾಡ್ತಿದೆ. ಸಾಹೋರೆ ಅಂತ ದುರ್ಯೋಧನನ ಪೌರುಷವನ್ನ ವರ್ಣಿಸೋ ಹಾಡು ಕಳೆದ ವಾರ ಬಿಡುಗಡೆ ಆಗಿದ್ದು ಈಗ 'ಜಾರು ತಂತಿ ನಿಮ್ಮ ಭುಜವು.. ಹಾಡು ಎಲ್ಲರ ಮನಸ್ಸು ಕದ್ದಿದೆ. ಈ ಮೂಲಕ ಸಾಕಷ್ಟು ವರ್ಷಗಳ ನಂತರ ಪೌರಾಣಿಕ ಹಾಡನ್ನು ಕೇಳುವ ಸದಾವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. 

ಅವರು 20 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 2 ಟೆಲಿವಿಷನ್ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ

ಶ್ರೀ ಮಂಜುನಾಥ ಸಿನಿಮಾದ ’ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ....

ಧಮ್ ಚಿತ್ರದ ’ ಈ ಟಚ್ಚಲಿ ಏನೋ ಇದೆ..

ಕರಿಯಾ ಚಿತ್ರದ ’ಕೆಂಚಾಲೋ ಮಂಚಾಲೋ

*ಸ್ವಾತಿಮುತ್ತು ಚಿತ್ರದಲ್ಲಿ ’ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ... *

*ಆಪ್ತಮಿತ್ರದಲ್ಲಿ ’ ಪಟಪಟ ಗಾಳಿಪಟ... *

*ಕೆಜಿಎಫ್ -1 ರಲ್ಲಿ ಸಲಾಂ ರಾಕಿ ಭಾಯ್... *

*ಚೌಕ ಚಿತ್ರದ.... ಅಪ್ಪ ಐ ಲವ್ ಯು ಪಾ...’ ಅಂತ ಎಲ್ಲರ ಕಣ್ಣಲ್ಲಿ ನೀರು ತರಿಸುವಂತ ಸಾಹಿತ್ಯ ಬರೆದವರು ಇವರೇ. *

ಚಿತ್ರನಿರ್ದೇಶನ:- 

ಅಷ್ಟೇ ಅಲ್ಲದೆ, ಚಿತ್ರನಿರ್ದೇಶಕನಾಗಿ ಹಲವಾರು ಚಿತ್ರ ಗಳನ್ನ ಸಹ ನಿರ್ದೇಶಿಸಿದ್ದಾರೆ. 

ಸುದೀಪ್ ಅಭಿನಯದ ನಲ್ಲಾ(2004),

ಆದಿತ್ಯ ಅಭಿನಯದ ಅಂಬಿ(2006),

ಮೇಘವೆ ಮೇಘವೆ(2009)

ವಿಜಯ್ ರಾಘವೇಂದ್ರ, ನವೀನ್ ಕೃಷ್ಣ ಅಭಿನಯದ ವಿನಾಯಕ ಗೆಳೆಯರ ಬಳಗ(2011)

ಶುಭ ಪೂಂಜ ಅಭಿನಯದ ಗೂಗಲ್ (ಚಲನಚಿತ್ರ)



ನಾಟಕ :-

ಡಾ. ವಿ. ನಾಗೇಂದ್ರ ಪ್ರಸಾದ್ ಅವರು  ನಾಲ್ಕು ರಂಗ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ. ಅವರು ಹತ್ತು ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಆಕಾಶವಾಣಿಗಾಗಿ ಅವರು 15 ರೇಡಿಯೋ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.

ಬೋಧನೆ:-

ವಿ.ನಾಗೇಂದ್ರ ಪ್ರಸಾದ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಅಸೆಕ್ಷನ್ ಚಲನಚಿತ್ರ ಸಂಸ್ಥೆಯ ಕಾರ್ಯದರ್ಶಿಯಾಗಿ ಚಲನಚಿತ್ರ ನಿರ್ದೇಶನದಲ್ಲಿ ತರಬೇತಿ ಕೋರ್ಸ್‌ಗಳನ್ನು ನಡೆಸುತ್ತಾರೆ. ವಿಜಯಾ ಫಿಲ್ಮ್ ಇನ್ಸ್ಟಿಟ್ಯೂಟ್, ಶ್ರುತಿ ಫಿಲ್ಮ್ ಇನ್ಸ್ಟಿಟ್ಯೂಟ್ ಮತ್ತು ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಷನ್ ಇತರ ಸಂಸ್ಥೆಗಳಲ್ಲಿ ಅತಿಥಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೂರಾರು ಪ್ರಶಸ್ತಿಗಳು ಮತ್ತು ಬಿರುದುಗಳನ್ನ ಅಭಿಮಾನಿಗಳಿಂದ ಪಡೆದಿದ್ದಾರೆ.

ವಿ.ನಾಗೇಂದ್ರ ಪ್ರಸಾದ್ ಸತತ ಎರಡನೇ ಬಾರಿಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾವು ಮಾಡಿದ ಸಾಧನೆ ಅಥವಾ ತಮ್ಮ ಕೊಡುಗೆ ಗುರುತಿಸಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವ ಉದಾಹರಣೆಗಳಿವೆ.

ಆದರೆ, ಶ್ರೀ ನಾಗೇಂದ್ರ ಪ್ರಸಾದ್ ಅವರು ವಿದ್ಯಾರ್ಥಿಯಂತೆ ಸಂಶೋಧನೆ ನಡೆಸಿ ಮಹಾಪ್ರಬಂಧ ರಚಿಸಿ ಅದಕ್ಕೆ ಪದವಿ ಪಡೆದಿರುವುದು ನಿಜಕ್ಕೂ ಶ್ಲಾಘನೀಯ.

‘ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ’ ಎಂಬ ವಿಷಯ ಕುರಿತು ಸಂಶೋಧನೆ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿ. ನಾಗೇಂದ್ರ ಪ್ರಸಾದ್ ಸಲ್ಲಿಸಿದ್ರು.  ಅವರ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ತನ್ನ 29ನೇ ಘಟಿಕೋತ್ಸವದಲ್ಲಿ ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿ ನೀಡಿದೆ.



ಬರಹ:- ಪಿ.ಎಸ್.ರಂಗನಾಥ 

ಲೇಖಕರು ಮತ್ತು ಭಾರತೀಯ ಸಾಮಾಜಿಕ ವೇದಿಕೆಯ ಮಾಜಿ ಕಾರ್ಯದರ್ಶಿಗಳು.

ಒಮಾನ್ ರಾಷ್ಟ್ರ - ಮಸ್ಕತ್

1 comment:

  1. ಹೆಚ್ಚು ಹೆಚ್ಚು ಗೀತೆಗಳನ್ನು ಬರೆಯುತ್ತಾ ನಮ್ಮ ಸಮಾಜ ಹೆಮ್ಮೆಯ ಪುತ್ರನಾದ ಕವಿರತ್ನ ಡಾಕ್ಟರ ವಿ ನಾಗೇಂದ್ರಪ್ರಸಾದ್ ಅವರಿಗೆ ತುಂಬಾ ತುಂಬಾ ಅಭಿನಂದನೆಗಳು

    ReplyDelete