Thursday, April 13, 2023

ಸಮಸ್ಯೆಗಳನ್ನ ಮೆಟ್ಟಿ ನಿಂತು ವಿಜಯ ಸಾಧಿಸಿದ ಮಹಾರಾಷ್ಟ್ರದ ಭಿವಂಡಿಯ ಪದ್ಮಶಾಲಿಗಳು

"ಕ್ವಿಟ್ ಭಿವಂಡಿ, ನಮ್ಮ ಭಿವಂಡಿಯನ್ನ ಬಿಟ್ಟು ತೊಲಗಿ" ಎಂದು ಪದ್ಮಾಶಾಲಿಗಳನ್ನ ಹೊರಹಾಕುವ ಹಿಂಸಾತ್ಮಕ
ಅಭಿಯಾನವನ್ನ ಆದಿನಗಳಲ್ಲಿ ಅಲ್ಲಿನ ಸ್ಥಳೀಯರು ನಡೆಸಿದ್ದರು. ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಮನೆ ಬಿಟ್ಟು
ಹೊರಬರದ ಪರಿಸ್ಥಿತಿ ಪದ್ಮಶಾಲಿಗರಿಗೆ ಎದುರಾಗಿತ್ತು. ಪದ್ಮಶಾಲಿ ಹೆಣ್ಣುಮಕ್ಕಳಿಗೆ ಬೀದಿಗಳಲ್ಲಿ ಕಿರುಕುಳ ನೀಡಿದ್ದರು.
ಶಾಲೆಗಳಿಂದ ಹೊರ ಬರುತಿದ್ದ ಮಕ್ಕಳು ಎಂದು ನೋಡದೆ ಕಲ್ಲಿನಿಂದ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದ್ದರು. ಇದು
ಸುಮಾರು 1965ರ ಸಮಯದಲ್ಲಿ ನಡೆದಿದ್ದ ಘಟನೆ.


ಅದಾದ ನಂತರ ಭಿವಂಡಿಯಲ್ಲಿ, 1970ರಲ್ಲಿ ದೊಡ್ಡದಾದ ಕೋಮುಗಲಭೆ ನಡೆದಿತ್ತು. ಸಾವಿರಾರು ಜನರ
ಮಾರಣಹೋಮ ಅಂದು ನಡೆದಿತ್ತು. ಮನೆಗಳು, ಅಂಗಡಿಗಳು ಮಗ್ಗಗಳು, ಕಚ್ಚಾ ವಸ್ತುಗಳು, ಸಿದ್ದಪಡಿಸಿದ ಜವಳಿ
ಉತ್ಪನ್ನಗಳು ಕೋಮು ದಳ್ಳುರಿಗೆ ಭಸ್ಮವಾಗಿದ್ದವು. ಊಹಿಸದೇ ಇದ್ದ ಅನಾಹುತಕ್ಕೆ ಬಹಳಷ್ಟು ಪದ್ಮಶಾಲಿಗಳು
ಎಲ್ಲವನ್ನ ಕಳೆದುಕೊಂಡು ಬೀದಿಗೆ ಬಂದಿದ್ದರು. ಪದ್ಮಶಾಲಿಗಳು ಹೀಗೆ ಹಲವಾರು ಭಾರಿ ಹಿಂಸೆಗೆ ಒಳಗಾಗಿ ನೊಂದು ಬೆಂದು
ಹೋಗಿದ್ದರು.
ತೆಲುಗು ಸಮುದಾಯ ಅದರಲ್ಲೂ ತೆಲಂಗಾಣದಿಂದ ವಲಸೆ ಬಂದಿದ್ದ ಪದ್ಮಶಾಲಿ ನೇಕಾರರು ಈ ಹಲ್ಲೆ, ಹಿಂಸೆ, ನೋವು
ಸಹಿಸಿಕೊಂಡಿದ್ದು ಇದೇ ಮೊದಲಲ್ಲ, ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ತೆಲಂಗಾಣ ವನ್ನು ಆಳಿದ ರಜಾಕಾರು
ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಗೊಳಿಸಲು ಯತ್ನಿಸುತಿದ್ದರು. ಮತಾಂತರವನ್ನ ಒಪ್ಪದವರಿಗೆ ಭಾರೀ ಹಿಂಸೆ
ಕಿರುಕುಳ ನೀಡುತಿದ್ದರು. ಈ ಧಾರ್ಮಿಕ ಮತಾಂತರದ ಭಯದಿಂದ ಪದ್ಮಶಾಲಿ ಸಮುದಾಯ ಸೇರಿದಂತೆ ವಿವಿಧ ತೆಲುಗು
ಹಿಂದೂ ಸಮುದಾಯಗಳಿಗೆ ಸೇರಿದ ಜನರು ದೇಶದ ವಿವಿಧ ಭಾಗಗಳಿಗೆ ವಲಸೆ ಹೋದರು. ರಜಾಕರ ದೌರ್ಜನ್ಯಕ್ಕೆ ಹೆದರಿ
ದೊಡ್ಡ ಸಂಖ್ಯೆಯಲ್ಲಿ ಪದ್ಮಶಾಲಿಗಳು ಮಹಾರಾಷ್ಟ್ರ ರಾಜ್ಯದಾದ್ಯಂತ ಸೊಲ್ಲಾಪುರ, ಪರ್ಬನಿ, ನಾಂದೇಡ್,
ಅಹ್ಮದ್‌ನಗರ, ಇಚ್ಚಲಕರಂಜಿ, ಮಾಲೆಗಾಂವ್, ಪುಣೆ ಮತ್ತು ಮುಂಬೈ ಮುಂತಾದ ಸ್ಥಳಗಳಿಗೆ ವಲಸೆ ಹೋಗಿದ್ದರು.
ಒಂದು ವಿಷಯ ಗಮನಿಸಬೇಕಿದೆ. ವಲಸೆ ಹೋಗುವುದರಿಂದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದು ಬಹಳಷ್ಟು
ಸಾರಿ ನಿಜವಾಗುವುದಿಲ್ಲ. ಹೊಸ ಸಮಸ್ಯೆಗಳು ಉದ್ಭವವಾಗಬಹುದು, ಬದುಕುವುದಕ್ಕೋಸ್ಕರ ಅವೆಲ್ಲವನ್ನ ಮೆಟ್ಟಿ
ನಿಲ್ಲುವಂತಹ ಸಾಹಸವನ್ನ ಸಹ ಮಾಡಬೇಕಾಗುತ್ತದೆ. ನೇಕಾರರು ವಲಸೆ ಹೋಗುವುದಿಕ್ಕೆ ಕಾರಣವೇನು ಎನ್ನುವುದನ್ನ
ಹಿಂದಿನ ಲೇಖನದಲ್ಲಿ ತಿಳಿಸಿದ್ದೇನೆ. ಈ ಬಾರಿ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದ ನೇಕಾರರ ಏಳು ಬೀಳುಗಳ ಕುರಿತು
ತಿಳಿಯೋಣ.


ಆಗ ಭಾರತದೇಶಕ್ಕೆ ಸ್ವಾತಂತ್ರ್ಯ ದೊರಕಿತ್ತು. 1947 ರ ಸಮಯ. ನೇಯ್ಗೆ ತಂತ್ರಜ್ಞಾನದಲ್ಲಿ ಕೌಶಲ್ಯವನ್ನ ಹೊಂದಿದ್ದ
ಪದ್ಮಶಾಲಿ ನೇಕಾರರು, ವೃತ್ತಿಯಲ್ಲಿ ಏಕತಾನತೆಯಿಂದ ಬೇಸತ್ತಿದ್ದರು. ಅಲ್ಲದೆ ಮಗ್ಗದ ಕೈಗಾರಿಕೆಗಳಲ್ಲಿ ಯಾವುದೇ
ತಾಂತ್ರಿಕ ಬೆಳವಣಿಗೆಯಿರಲಿಲ್ಲ. ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಮಗ್ಗಗಳಲ್ಲಿ ದುಡಿಯುತಿದ್ದ ಕಾರ್ಮಿಕರು ಹತ್ತು
ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರೂ ಸರಿಯಾದ ಸಂಭಾವನೆ ಸಿಗುತ್ತಿರಲಿಲ್ಲ. ಆದ್ದರಿಂದ, ದುಡಿಮೆಗೆ ತಕ್ಕಂತೆ
ಸೂಕ್ತ ವೇತನ ಪಡೆಯಲು ಅವರು ತೆಲಂಗಾಣವನ್ನು ತೊರೆದು ದೇಶದ ವಿವಿಧ ಭಾಗಗಳಿಗೆ ವಲಸೆ ಹೋದರು, ಅವರಲ್ಲಿ
ಹೆಚ್ಚಿನವರು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಾರೆ. ಸೀರೆಗಳು ಮತ್ತು ಧೋತಿಗಳು ಮತ್ತು ರೇಷ್ಮೆ ನೇಯ್ಗೆ ಯಲ್ಲಿ
ವಿಶೇಷ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯಲ್ಲಿ ನೆಲೆಸಿದ್ದ ನೇಕಾರರು ಮುಂಬೈ
ಮತ್ತು ಮಹಾರಾಷ್ಟ್ರದ ಇತರ ಸ್ಥಳಗಳಾದ ಸೊಲ್ಲಾಪುರ, ಪರ್ಬಾನಿ, ನಾಂದೇಡ್, ಅಹಮದ್‌ನಗರ, ಇಚ್ಚಲಕರಂಜಿ,
ಮಾಲೆಗಾಂವ್ ಮತ್ತು ಪುಣೆಗೆ ಕೆಲಸಕ್ಕಾಗಿ ವಲಸೆ ಬಂದರು. ಈ ಎಲ್ಲಾ ವಾಣಿಜ್ಯ ಕೇಂದ್ರಗಳು ರೇಷ್ಮೆ ಮತ್ತು ಹತ್ತಿ
ಮಾರುಕಟ್ಟೆಗಳಲ್ಲಿ ಹೆಸರುವಾಸಿ ಯಾಗಿರುವುದರಿಂದ, ಪದ್ಮಶಾಲಿ ನೇಕಾರರು ಈ ಪ್ರದೇಶದತ್ತ ಸಹಜವಾಗಿ
ಆಕರ್ಷಿತರಾದರು. ಮುಂಬೈಗೆ ವಲಸೆ ಬಂದ ಪದ್ಮಶಾಲಿ ನೇಕಾರರು ಪವರ್ ಲೂಮ್ ಮಿಲ್‌ಗಳಲ್ಲಿ ಬಟ್ಟೆ ತಯಾರಿಸಿ ದಿನ
ವೇತನವನ್ನ ಪಡೆಯುತ್ತಿದ್ದರು. ಉದ್ದವಾದ ಸೀರೆಗಳು ಮತ್ತು ಧೋತಿಗಳು, ಪ್ಯಾಂಟ್‌ಗಳು, ಶರ್ಟ್‌ಗಳ ಬಟ್ಟೆ ಮತ್ತು
ಕರವಸ್ತ್ರಗಳನ್ನ ತಯಾರಿಸುವ ಕಲಾತ್ಮಕ ಸಾಮರ್ಥ್ಯವನ್ನು ಹೊಂದಿದ್ದರಿಂದ ಅವರು ಮುಂಬೈನ ನೂಲಿನ ಗಿರಣಿಗಳಲ್ಲಿ
ತಮ್ಮನ್ನ ತೊಡಗಿಸಿಕೊಂಡರು. ಜವಳಿ ಕ್ಷೇತ್ರದಲ್ಲಿ ಹಿಡಿತವನ್ನ ಹೊಂದಿದ್ದ ಪದ್ಮಶಾಲಿ ನೇಕಾರ ಸಮುದಾಯ, ಅವರ ಜ್ಞಾನ
ಮತ್ತು ಕೌಶಲ್ಯ ದ ನೆರವಿನಿಂದ ಬಟ್ಟೆ ತಯಾರಿಕೆಯಲ್ಲಿ ಅಲ್ಲಿನ ಉದ್ಯಮ ಅತಿವೇಗವನ್ನ ಪಡೆದುಕೊಂಡಿತು. ಪದ್ಮಶಾಲಿ
ನೇಕಾರರ ಕಲಾಕೃತಿಯಲ್ಲಿನ ಕೌಶಲ್ಯ ಮತ್ತು ನವೀನತೆಯು ಅವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ
ಹೆಚ್ಚಿತು. ಇದರ ಪರಿಣಾಮವಾಗಿ ಗಿರಣಿಗಳ ಮಾಲೀಕರು ತಮ್ಮ ಉದ್ಯಮವನ್ನ ವಿಸ್ತರಿಸಿದರು. ಹೆಚ್ಚಿದ ಮಾರುಕಟ್ಟೆಯ
ಬೇಡಿಕೆ, ಹೊಸದಾಗಿ ನಿರ್ಮಾಣಗೊಂಡ ಜವಳಿ ಗಿರಣಿಗಳು, ನೇಕಾರರು, ಕಾರ್ಮಿಕರನ್ನ ಹೊಸ ಉದ್ಯಮ ಕೈಬೀಸಿ
ಕರೆಯುತಿತ್ತು. ಕಾರ್ಮಿಕರ ಬೇಡಿಕೆಯು ಹೆಚ್ಚಾಯಿತು. ಆಗಿನ ಆಂಧ್ರಪ್ರದೇಶದ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ.
ರಜಾಕರ್ ಬೆದರಿಕೆ, ರಾಜಕೀಯ ಅಭದ್ರತೆಯ ಕಾರಣದಿಂದಾಗಿ ಕೆಲಸ ಮಾಡಲು ಹೆಚ್ಚು ಅನುಕೂಲಕರವಾಗಿರಲಿಲ್ಲ.
ಮುಂಬಯಿಯ ಹೊಸ ಉದ್ಯೋಗವಕಾಶಗಳನ್ನ ಸದುಪಯೋಗಪಡಿಸಿಕೊಳ್ಳುವ ಪ್ರಯತ್ನದಲ್ಲಿ, ಈಗಾಗಲೇ
ಮುಂಬೈನಲ್ಲಿದ್ದ ಪದ್ಮಶಾಲಿಗಳು ತಮ್ಮ ಮೂಲ ಸ್ಥಳಗಳಿಂದ ತಮ್ಮ ಸಂಬಂಧಿಕರನ್ನು ಇಲ್ಲಿಗೆ ಕರೆತಂದರು. ಈ ಮೂಲಕ
ಮುಂಬೈಗೆ ವಲಸೆ ಬಂದ ಲಕ್ಷಾಂತರ ತೆಲುಗರಲ್ಲಿ ಪದ್ಮಶಾಲಿಗಳು ಪ್ರಬಲ ವರ್ಗವಾದರು. ಅವರು ವರ್ಲಿ, ಗಾಂಧಿನಗರ,
ಬೆಂಗಾಲ್ ಕ್ಯಾಂಪ್, ದಾದರ್, ಘಾಟ್ಕೋಪರ್, ಧಾರಾವಿ, ಸಿಯಾನ್, ಅಂಧೇರಿ, ಕುರ್ಲಾ, ಜೋಗೇಶ್ವರಿ ಮತ್ತು ಇತರ
ಅನೇಕ ಸ್ಥಳಗಳಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಂಡು ಆ ಪ್ರದೇಶಗಳಲ್ಲಿ ನೆಲೆಸಿದರು.


ಮಹಾರಾಷ್ಟ್ರದ ಹೆಸರಾಂತ ಯೂನಿಯನ್ ನಾಯಕ ದತ್ತಾ ಸಾಮಂತ್ ರ ಪ್ರವೇಶ: 1965 ರವರೆಗೂ ಎಲ್ಲವೂ ಸುಗಮವಾಗಿ
ನಡೆಯುತ್ತಿತ್ತು. ಉದ್ಯೋಗ ಭದ್ರತೆ, ಬೋನಸ್, ಆರೋಗ್ಯ ಭತ್ಯೆ ಮುಂತಾದ ವಿಷಯಗಳ ಕುರಿತು ಮಿಲ್ ಗಳಲ್ಲಿ
ದುಡಿಯುತಿದ್ದ ನೇಕಾರರು, ಕಾರ್ಮಿಕರು ಹೋರಾಟ ಶುರುವಿಟ್ಟುಕೊಂಡರು. ಆಗ ಮಿಲ್ ಗಳ ಕಾರ್ಮಿಕರ ಪರವಾಗಿ
ಮಹಾರಾಷ್ಟ್ರದ ಯೂನಿಯನ್ ನಾಯಕ ದತ್ತಾ ಸಾಮಂತ್ ರ ಪ್ರವೇಶವಾಯಿತು. ಅವರು ಇದ್ದಕ್ಕಿದ್ದಂತೆ ಕಾರ್ಮಿಕರ
ವೇತನವನ್ನು ಹೆಚ್ಚಿಸುವಂತೆ ಧರಣಿ, ಮುಷ್ಕರ ನಡೆಸಲು ಪ್ರಾರಂಭಿಸಿದರು. ಮಾಲೀಕರ ಬಳಿ ಹೊಸ ಹೊಸ
ಬೇಡಿಕೆಗಳನ್ನಿಟ್ಟರು. ಈ ಬೇಡಿಕೆಗಳನ್ನು ಈಡೇರಿಸಲು ಗಿರಣಿಗಳ ಮಾಲೀಕರು ನಿರಾಕರಿಸಿದರು. ದತ್ತಾ ಸಾಮಂತ್ ಹಠ ಬಿಡದೆ
ಮಿಲ್ ಗಳನ್ನ ಮುಚ್ಚುವ ತನಕ ಮುಷ್ಕರ ನಡೆಸಿದರು. ಮಾಲೀಕರು ಬಗ್ಗಲೇ ಇಲ್ಲ. ಇದರ ಪರಿಣಾಮ ಮಿಲ್ ಗಳು ಮುಚ್ಚಿ
ಹೋದವು ಸಾವಿರಾರು ಕಾರ್ಮಿಕರು ಬೀದಿ ಪಾಲಾದರು. ಅಪಾರ ನಷ್ಟ ಅನುಭವಿಸಿದ ಮಾಲೀಕರು ಮಿಲ್ ಗಳನ್ನ
ಮಾರಿದ್ದಲ್ಲದೆ, ಅಲ್ಲಿದ್ದ ಯಂತ್ರೋಪಕರಣಗಳು, ವಿದ್ಯುತ್ ಮಗ್ಗಗಳನ್ನ ಸಹ ಮಾರಿ ಕಾರ್ಮಿಕರಿಗೆ ಕೊಡಬೇಕಾಗಿದ್ದ
ಬೋನಸ್, ಮೆಡಿಕ್ಲೈಮ್, ಬಾಕಿ ರಜೆಯ ವೇತನಗಳನ್ನ ಪಾವತಿಸಿದರು, ಬ್ಯಾಂಕ್ ಸಾಲಗಳನ್ನ ತೀರಿಸಲು
ಪರದಾಡಬೇಕಾಯಿತು, ಕೊನೆಗೆ ಮಾಲೀಕರು ದಿವಾಳಿ ಎಂದು ಘೋಷಿಸಿಕೊಂಡರು. ದತ್ತಾ ಸಾಮಂತರ ಈ ಹೋರಾಟದಿಂದ
ಕಾರ್ಮಿಕರಷ್ಟೇ ಅಲ್ಲದೇ, ಮಾಲೀಕರು ಸಹ ಬೀದಿಗೆ ಬರುವಂತಾಯಿತು.


ಭಿವಂಡಿಯಲ್ಲಿ ಪದ್ಮಶಾಲಿಗರ ಸಾಹಸಗಾಥೆ: ಯಾವಾಗ ಮಾಲೀಕರು ಯಂತ್ರೋಪಕರಣಗಳು, ವಿದ್ಯುತ್ ಮಗ್ಗಗಳನ್ನ
ಮಾರಾಟ ಮಾಡಲು ಪ್ರಾರಂಬಿಸಿದರೋ, ವಿಶೇಷವಾಗಿ ಪದ್ಮಶಾಲಿ ನೇಕಾರರು, 10, 20, 25 ಜನರ ಗುಂಪುಗಳನ್ನು ರಚಿಸಿ
ಕೊಂಡು, ತಮ್ಮಲ್ಲಿದ್ದ ಬೋನಸ್‌ ಹಣ, ಉಳಿತಾಯದ ಹಣ ಮತ್ತಿತರ ಮೂಲಗಳಿಂದ ಸಂಗ್ರಹಿಸಿದ ಹಣದಿಂದ
ಮಾರಾಟಕ್ಕಿದ್ದ ಮಗ್ಗಗಳನ್ನು ಖರೀದಿಸಿ, ಮುಂಬೈನಿಂದ ನಲವತ್ತು ಮೈಲಿ ದೂರದಲ್ಲಿರುವ ಭಿವಂಡಿ ಎಂಬ ಸಣ್ಣ
ಹಳ್ಳಿಯಂತಹ ಹಿಂದುಳಿದ ಪಟ್ಟಣಕ್ಕೆ ತಂದರು. ಆ ಸಮಯದಲ್ಲಿ ಭಿವಂಡಿಯಲ್ಲಿ ಕೆಲವೇ ಪದ್ಮಶಾಲಿಗಳು ಇದ್ದರು ಮತ್ತು
ಅವರಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರಾಗಿ ತೊಡಗಿಸಿಕೊಂಡಿದ್ದರೆ, ಬೆರಳೆಣಿಕೆಯಷ್ಟು ಮಂದಿ ಮುಸ್ಲಿಮರಿಗೆ ಸೇರಿದ ಸಣ್ಣ
ಕೈಮಗ್ಗ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಈಗಾಗಲೇ ಭಿವಂಡಿಯಲ್ಲಿ ವಾಸಿಸುತ್ತಿರುವ ಪದ್ಮಶಾಲಿಗಳು
ಹೊಸದಾಗಿ ವಲಸೆ ಬಂದ ಪದ್ಮಶಾಲಿಗಳ ಬಡಾವಣೆಗಳ ನಿರ್ಮಾಣಕ್ಕೆ, ಹಾಗೂ ಮಗ್ಗಗಳನ್ನ ಸ್ಥಾಪಿಸುವುದಿಕ್ಕೆ ಸಹಾಯ
ಮಾಡಿದರು. 1960 ರ ಸಮಯದಲ್ಲಿ ಭಿವಂಡಿಯು ಮರಾಠರು, ಮುಸ್ಲಿಮರು ಮತ್ತು ಕೊಂಕಣಿಗಳ ಪ್ರಾಬಲ್ಯವನ್ನು
ಹೊಂದಿತ್ತು. ಪದ್ಮಶಾಲಿಗಳು ಅಲ್ಲಲ್ಲಿ ಭೂಮಿಯನ್ನು ಖರೀದಿಸಿ ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಿದರು, ಆ
ಮನೆಗಳಲ್ಲಿ ಪವರ್ ಲೂಮ್‌ಗಳಿಗೆ ಜಾಗ ಮತ್ತು ಅವುಗಳನ್ನು ನಿರ್ವಹಿಸಲು ಸ್ಥಳಾವಕಾಶವಿರುವ ರೀತಿಯಲ್ಲಿ
ಕಟ್ಟಡಗಳನ್ನ ನಿರ್ಮಿಸಿದರು. ತಮ್ಮ ಕೌಶಲ್ಯತೆ ಉಪಯೋಗಿಸಿಕೊಂಡು ಮತ್ತು ಗುಣಮಟ್ಟದ ಬಟ್ಟೆಯನ್ನು ಅವರು
ತಯಾರಿಸಲು ಪ್ರಾರಂಭಿಸಿದರು.

ಮುಂಬಯಿಯಲ್ಲಿ ಗಿರಣಿಗಳು ಮುಚ್ಚಲ್ಪಟ್ಟಿದ್ದರಿಂದ ಮತ್ತು ಬಟ್ಟೆಯ ಉತ್ಪಾದನೆಯು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ
ಕುಸಿದಿತ್ತು. ಅಲ್ಲಿನ ವ್ಯಾಪಾರಿಗಳು ಭಿವಂಡಿಗೆ ಹೋಗಿ ನೇಕಾರರನ್ನ ಭೇಟಿ ಮಾಡಿ, ತಮಗೆ ಬೇಕಾದ ವಿನ್ಯಾಸ ಮತ್ತು
ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ವ್ಯವಹಾರ ಕುದುರಿಸಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಪದ್ಮಶಾಲಿ ನೇಕಾರರ
ಬಟ್ಟೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿತು. ವಾಸ್ತವವಾಗಿ, ಬಟ್ಟೆಯ ಗುಣಮಟ್ಟ ಚೆನ್ನಾಗಿದ್ದಿದ್ದರಿಂದ ವ್ಯಾಪಾರಿಗಳು
ತುಂಬಾ ಸಂತೋಷ ದಿಂದಲೇ ತಮ್ಮ ಉತ್ಪನ್ನದ ಪ್ರಮಾಣವನ್ನು ಹೆಚ್ಚಿಸಲು ಹೆಚ್ಚಿನ ಹಣವನ್ನು ನೀಡಿದರು. ಅದರ
ನಂತರ, ಭಿವಂಡಿಯಲ್ಲಿ ಹೆಚ್ಚುವರಿ ಮಗ್ಗಗಳನ್ನು ಸ್ಥಾಪಿಸಲಾಯಿತು. ಹೀಗಾಗಿ ಭಿವಂಡಿಯಲ್ಲಿ ವಿದ್ಯುತ್-ಮಗ್ಗದ
ವ್ಯಾಪಾರವು ಬಹಳ ಅಭಿವೃದ್ಧಿಯನ್ನ ಹೊಂದಿತು.

ಭಿವಂಡಿಯಲ್ಲಿ ಕಿರುಕುಳ ಶುರುವಾಯಿತು: ಕುತೂಹಲಕರ ವಿಷಯವೇನೆಂದರೆ, ಆ ಸಮಯದಲ್ಲಿ ಭಿವಂಡಿಯಲ್ಲಿ
ವಾಸಿಸುತ್ತಿದ್ದ ಇತರ ಸಮುದಾಯದ ಜನರು ತೆಲುಗು ಸಮುದಾಯದ, ವಿಶೇಷವಾಗಿ ಪದ್ಮಶಾಲಿಗಳ ಪ್ರಗತಿಯನ್ನು
ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಡಿಮೆ ಸಮಯದಲ್ಲಿ ಅಭಿವೃದ್ದಿ ಹೊಂದಿದ ವಿಧಾನ ಸ್ಥಳೀಯರಿಗೆ ಕಣ್ಣುಕುಕ್ಕುವಂತೆ
ಮಾಡಿತ್ತು. ಹೀಗಾಗಿ ಪದ್ಮಶಾಲಿ ನೇಕಾರರನ್ನ ಊರಿನಿಂದ ಹೊರಹಾಕ ಬೇಕು ಎಂದು ಕ್ವಿಟ್ ಭಿವಂಡಿ, ನಮ್ಮ ಭಿವಂಡಿಯನ್ನ
ಬಿಟ್ಟು ತೊಲಗಿ ಎನ್ನುವ ಹಿಂಸಾತ್ಮಕ ಅಭಿಯಾನವನ್ನ ಶುರು ಮಾಡಿದರು. ಮಕ್ಕಳು, ಹೆಂಗಸರು ಎನ್ನದೇ ಎಲ್ಲರಿಗೂ
ಕಿರುಕುಳ ಕೊಡಲು ಪ್ರಾರಂಭಿಸಿದರು. ಒಂದು ಸಮಯದಲ್ಲಿ, ಪದ್ಮಶಾಲಿ ಸಮುದಾಯದ ಶಾಲಾ ಮಕ್ಕಳ ಮೇಲೆ ಕಲ್ಲಿನಿಂದ
ಹಲ್ಲೆ ಮಾಡುವ ಮಟ್ಟಕ್ಕೆ ಸಹ ಅವರು ಹೋದರು. ಮಹಿಳೆಯರಿಗೆ ಬೀದಿಗಳಲ್ಲಿ ಕಿರುಕುಳ ನೀಡಿದರು. ಗಂಡಸರು ಮನೆ
ಬಿಟ್ಟು ಹೊರಬರದಂತಹ ಸನ್ನಿವೇಶ ನಿರ್ಮಾಣವಾಯಿತು. ಈ ಎಲ್ಲಾ ಅಹಿತಕರ ಘಟನೆಗಳು ಭಿವಂಡಿಯಲ್ಲಿ ಪದ್ಮಶಾಲಿ
ಸಮುದಾಯದ ಉಳಿವಿಗೆ ಆತಂಕವನ್ನ ತಂದೊಡ್ಡಿದವು.


ಇದುವರೆವಿಗೂ ಯಾವುದೇ ಪ್ರತಿರೋಧ ಒಡ್ಡದೆ ಸುಮ್ಮನಿದ್ದ ಸಮುದಾಯದ ಹಿರಿಯರು, ಚಿಂತಕರು ಎಲ್ಲರೂ ಒಗ್ಗೂಡಿ
ಸ್ಥಳೀಯರ ವಿರುದ್ಧ ಸಂಘಟಿತರಾಗಿ ಪ್ರತಿಭಟಿಸಲು ನಿಂತರು. ಅಖಿಲ ಭಾರತ ಪದ್ಮಶಾಲಿ ಸಮಾಜ ಎನ್ನುವ
ಸಂಘಟನೆಯನ್ನು ಸ್ಥಾಪಿಸಿದರು. ಭಿವಂಡಿಯಲ್ಲಿ ನೆಲೆಸಿದ್ದ ಪದ್ಮಶಾಲಿಗಳೆಲ್ಲರೂ ಈ ಸಂಸ್ಥೆಯ ಸದಸ್ಯರಾದರು. ಇನ್ನು
ಮುಂದೆ ಯಾವುದೇ ಸಮಸ್ಯೆ ಬಂದರೆ ಪೊಲೀಸ್ ದೂರು ದಾಖಲಿಸಲಾಗುವುದು ಎಂದು ಭಿವಂಡಿ ಯಲ್ಲಿನ ಜನರಿಗೆ
ಮನದಟ್ಟು ಮಾಡಿದರು. ಭಾರತದ ಪ್ರಜೆಯಾಗಿ ಎಲ್ಲಿ ಬೇಕಾದರು ನೆಲೆಸಬಹುದು ಎನ್ನಿವ ಸಂವಿಧಾನದ ಆಶಯವನ್ನ
ಸ್ಪಷ್ಟಪಡಿಸಿದರು. ಈ ಎಲ್ಲ ಘಟನೆಗಳು ಭಿವಂಡಿಯ ಮೂಲ ನಿವಾಸಿಗಳು ಸುಮ್ಮನೆ ಇರುವಂತೆ ಮಾಡಿದವು. ಕೆಲವು
ವಿದ್ಯಾವಂತ ಪದ್ಮಶಾಲಿಗಳು ಪದ್ಮಶಾಲಿ ತೆಲುಗು ಸಮಾಜ ಶಿಕ್ಷಣ ಸಂಸ್ಥೆ ಎಂಬ ಮತ್ತೊಂದು ಸಂಸ್ಥೆಯನ್ನು ರಚಿಸಿದರು,


ಅಲ್ಲಿ ತೆಲುಗು, ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಇತರ ವಿಷಯಗಳನ್ನು ಶಾಲೆಯಲ್ಲಿ ಕಲಿಸಲು ಪ್ರಾರಂಭಿಸಿದರು.
ಪದ್ಮಶಾಲಿಗಳ ಹಿತದೃಷ್ಟಿಯಿಂದ ಈ ಸಮಯದಲ್ಲಿ ಸುಮಾರು ಹತ್ತರಿಂದ ಹನ್ನೆರಡು ತೆಲುಗು ಶಾಲೆಗಳು ಭಿವಂಡಿ ಪುರಸಭೆ
ವ್ಯಾಪ್ತಿಯಲ್ಲಿ ಉದ್ಘಾಟನೆಗೊಂಡವು. ಪದ್ಮಶಾಲಿ ಪುರೋಹಿತ ಸಂಘ ಎನ್ನುವ ಮತ್ತೊಂದು ಸಂಘಟನೆಯನ್ನ ಶುರು
ಮಾಡಿದರು, ಈ ಮೊದಲು ಮದುವೆ ಕಾರ್ಯಗಳಿಗೆ ತಮ್ಮ ಮೂಲಊರುಗಳಲ್ಲಿ ನಡೆಸುತಿದ್ದರು. ಈ ಘಟನೆಗಳ ನಂತರ
ಮದುವೆಗಳು ಸಹ ಭಿವಂಡಿಯಲ್ಲಿಯೇ ನಡೆದವು. "ಪದ್ಮ-ಬ್ರಾಹ್ಮಣರು" ಎಂದು ಕರೆಯಲ್ಪಡುವ ಪದ್ಮಶಾಲಿ
ಪುರೋಹಿತರು ಭಿವಂಡಿಯಲ್ಲಿಯೇ ವಿವಾಹ ವಿಧಿ ವಿಧಾನಗಳನ್ನು ನೆರವೇರಿಸುತಿದ್ದಾರೆ.



ಯಾವಾಗ ಪದ್ಮಶಾಲಿ ಸಂಘಟನೆಗಳು ಬಲಶಾಲಿಗೊಂಡವೋ, ಶಾಸಕರು, ಸಂಸದರು, ಮತ್ತಿತರ ರಾಜಕೀಯ ನಾಯಕರು ಪೆದ್ದ
ಮನಿಷಿ ಎಂದು ಕರೆಯಲ್ಪಡುವ ಸಮಾಜದ ಹಿರಿಯರನ್ನ ಭೇಟಿ ಮಾಡಲು ಪ್ರಾರಂಬಿಸಿದರು. ಪದ್ಮಶಾಲಿಗಳಿಗೆ ಭದ್ರತೆ ಮತ್ತು
ರಕ್ಷಣೆಯ ದೃಷ್ಟಿಯಿಂದ ಈ ಹಿರಿಯರು ಹೇಳಿದಂತೆ ಯಾರಿಗೆ ಮತ ಹಾಕಬೇಕೋ ಅವರಿಗೆ ಸಮುದಾಯದ ಮತಗಳು
ಬೀಳುತಿದ್ದವು. ಹೀಗಾಗಿ ರಾಜಕೀಯ ಬೆಂಬಲವೂ ಪದ್ಮಶಾಲಿ ಸಮುದಾಯಕ್ಕೆ ಸಿಗಲು ಸಾಧ್ಯವಾಯಿತು. ಕೇವಲ ಆರೇಳು
ವರ್ಷಗಳಲ್ಲಿ ಈ ಸಂಘಟನೆಗಳ ಸಹಾಯದಿಂದ ಪದ್ಮಶಾಲಿ ಸಮುದಾಯ ಉತ್ತಮ ಅಭಿವೃದ್ದಿ ಕಂಡಿತು.
ಹಿಂದೂ ಮುಸ್ಲಿಂ ಕೋಮುಗಲಭೆ: ಸಮಸ್ಯೆ ಅಲ್ಲಿಗೆ ಬಗೆಹರಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ
ಉದ್ಭವವಾಯಿತು. 1970 ರಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಕೋಮು ಗಲಭೆ ಏರ್ಪಟ್ಟಿತು. ಈ
ಸಮಯದಲ್ಲಿ ಸಮುದಾಯಕ್ಕೆ ಅಪಾರವಾದ ನಷ್ಟವಾಯಿತು. ಮನೆಗಳು, ಅಂಗಡಿಗಳು, ಮಗ್ಗಗಳು, ಕಚ್ಚಾ ವಸ್ತುಗಳು,
ಸಿದ್ದಪಡಿಸಿದ ಜವಳಿ ಉತ್ಪನ್ನಗಳು ಕೋಮು ದಳ್ಳುರಿಗೆ ಭಸ್ಮವಾದವು. ಈ ಗಲಭೆಯಲ್ಲಿ ಸುಮಾರು ಜನ ಮರಣ
ಹೊಂದಿದರು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿತ ಸ್ಥಳೀಯ ಇತರೆ ಹಿಂದೂಗಳು ಈ ಗಲಭೆಯ ನಂತರ ಪದ್ಮಶಾಲಿಗಳ
ಜತೆ ಒಗ್ಗಟ್ಟಾದರು. ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತರು. ಕೋಮು ಗಲಭೆ ತಣ್ಣಗಾಯಿತು.



 ಆಗಿನ ಭಾರತದ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ದಿವಂಗತ ಇಂದಿರಾ ಗಾಂಧಿಯವರು ಭಿವಂಡಿಗೆ ಭೇಟಿ ನೀಡಿ ನಷ್ಟದ ಪ್ರಮಾಣವನ್ನು ಪರಿಶೀಲಿಸಿದರು. ಅವರು ಎಲ್ಲಾ ಸಮುದಾಯಗಳ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿದರು. ಕುಟುಂಬದ ಸದಸ್ಯರು ಮತ್ತು ಆಸ್ತಿಗಳನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಪ್ರತ್ಯೇಕವಾಗಿ ಪರಿಹಾರ ಧನ ವನ್ನು ಘೋಷಿಸಿದರು.
ಭಿವಂಡಿಯಲ್ಲಿ ಲಘು ಉದ್ಯೋಗ್ ಸಂಸ್ಥೆ ಅಂದರೆ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿರುವವರಿಗೆ
ಸಬ್ಸಿಡಿಗಳನ್ನು ಒದಗಿಸಲಾಗುವುದು ಎಂದು ಅವರು ಘೋಷಿಸಿದರು. ಈ ಸುದ್ದಿಯು ದೇಶದಾದ್ಯಂತ ಹರಡಿತು ಮತ್ತು
ಭಿವಂಡಿಯಲ್ಲಿ ಹೊಸದಾಗಿ ಸಣ್ಣ ಕಾರ್ಖಾನೆಗಳು ಮತ್ತು ವಿದ್ಯುತ್ ಮಗ್ಗಗಳು ಪ್ರಾರಂಭವಾದವು, ಇದರ ಪರಿಣಾಮವಾಗಿ
ಮತ್ತೊಮ್ಮೆ ಜನಸಂಖ್ಯೆಯು ಹೆಚ್ಚಾಯಿತು. ಇಷ್ಟೆಲ್ಲಾ ನಡೆಯುತ್ತಿರುವಾಗ, ಭಿವಂಡಿಯಲ್ಲಿ ಭೂಮಾಲೀಕರಾಗಿದ್ದ ಕೆಲವು
ಪದ್ಮಶಾಲಿಗಳು ಒಟ್ಟು ಗೂಡಿ ಕಟ್ಟಡಗಳು ಮತ್ತು ಮನೆಗಳನ್ನು ನಿರ್ಮಿಸುವ ಕೆಲಸವನ್ನು ಕೈಗೆತ್ತಿಕೊಂಡರು, ಇದರಿಂದ
ತೆಲುಗು ಸಮುದಾಯದ ಎಲ್ಲಾ ಜನರು ಅಲ್ಲಿ ಮನೆಗಳನ್ನ ಕಟ್ಟಿಸಿಕೊಂಡು ವಾಸಿಸುತ್ತಾರೆ. ಮುಂದೆ ಈ ಪ್ರದೇಶವು ;ಪದ್ಮ
ನಗರ; ಎನ್ನುವ ಹೆಸರನ್ನ ಪಡೆಯುತ್ತದೆ.

ನೋಡಿದ್ರಲ್ಲ!!! ವಲಸೆ ಹೋಗುವುದರಿಂದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದು ಬಹಳಷ್ಟು ಸಾರಿ
ನಿಜವಾಗುವುದಿಲ್ಲ. ಹೊಸ ಸಮಸ್ಯೆಗಳು ಉದ್ಭವವಾಗಬಹುದು, ಬದುಕುವುದಕ್ಕೋಸ್ಕರ ಅವೆಲ್ಲವನ್ನ ಮೆಟ್ಟಿ
ನಿಲ್ಲುವಂತಹ ಸಾಹಸವನ್ನ ಸಹ ಮಾಡಬೇಕಾಗುತ್ತದೆ.
------
ಪಿ.ಎಸ್.ರಂಗನಾಥ
ಲೇಖಕರು,
ಸಂಚಾಲಕರು - ಒಮಾನ್ ಕನ್ನಡಿಗರ ವೇದಿಕೆ
ಮತ್ತು ಮಾಜಿ ಕಾರ್ಯದರ್ಶಿ.
ಭಾರತೀಯ ಸಾಮಾಜಿಕ ವೇದಿಕೆ - ಮಸ್ಕತ್ ಒಮಾನ್

1 comment:

  1. ಓಳ್ಳೆಯ ವಿಚಾರಗಳನ್ನು ಮಂಡಿಸುತ್ತಿರುವುದಕ್ಕೆ ನಮಸ್ಕಾರಗಳು ಸಾರ್‍.. ಇನ್ನೂ ಹೆಚ್ಚಿನ ವಿಚಾರಗಳನ್ನು ನಮ್ಮ ಪದ್ಮಶಾಲಿ ಜನಾಂಗದವರಿಗೆ ತಿಳಿಯುವಂತೆ ವಿಷಯಗಳನ್ನು ತಿಳಿಸುವುದು ಓಳ್ಳೆಯದು ಸಾರ್‍

    ReplyDelete