Sunday, January 1, 2023

ಕರಾವಳಿ ಪದ್ಮಶಾಲಿಗರಲ್ಲಿ ಗೊಂದಲ ನಿವಾರಣೆಗೆ ಆದಿ ಮೂಲ ಶೋಧನೆ

ಕರಾವಳಿ ಪದ್ಮಶಾಲಿಗರ ಮೂಲದ ಕುರಿತ ದಕ್ಷಿಣ ಕನ್ನಡದ ಸುರತ್ಕಲ್ ನ ಶ್ರೀ ಗೋಪಾಲ ಹರಿಹರಪುರ ಅನಂತ ಶೆಟ್ಟಿಗಾರ್ ಅವರೊಂದಿಗಿನ ಪ್ರಶ್ನೋತ್ತರದ ವಿವರಗಳು.



ಪ್ರಶ್ನೆ:- ನೀವು ಕರಾವಳಿ ಪದ್ಮಶಾಲಿಗರ ಮೂಲ ವನ್ನು ಏಕೆ ಹುಡುಕಲು ಆರಂಭಿಸಿದಿರಿ?

2008ರಲ್ಲಿ ನಾನು ದ ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷನಾಗಿದ್ದಾಗ , ನಮ್ಮ ಸಮಾಜದಲ್ಲಿ ಸ್ವಲ್ಪ ಗೊಂದಲದಿಂದ ಕೂಡಿದ ವಿಷಯಗಳಾದ    ನಮ್ಮ 1)ಗುರು (ಸರಿಯಾದ ಗುರುವಿನ ಆರಾಧನೆ ಇಲ್ಲದಿರುವುದು),  2)ಗೋತ್ರ ( ಮೇಲು ಕೀಳು ಎಂಬ ಆಚರಣೆ, ಇದರಿಂದ ಎರಡು ಗೋತ್ರಗಳು ಅಸ್ತಿತ್ವ ಕಳೆದುಕೊಂಡಿರುವುದು) 3)ಆಹಾರ (ವಿವಾಹದಂತ ಕಾರ್ಯದಲ್ಲಿಯೂ ಮಾಂಸಾಹಾರ ನೀಡುವುದು) , 4) ಆರಾಧನೆ ( ಕುಲದೇವಸ್ಥಾನವಿದ್ದರೂ,ಇಲ್ಲಿ ಆರಾಧಿಸದೆ ಬೇರೆ ದೇವರ ಆರಾಧನೆ) ಮತ್ತು 5) ಪೌರೋಹಿತ್ಯ (ನಮ್ಮ ಕುಲದೇವರಾದ ವೀರಭದ್ರ ದೇವರನ್ನ ನಾವೇ ಏಕೆ ಪೂಜಿಸಬಾರದು). 

ಈ 5 ವಿಷಯಗಳ ಕುರಿತಾದ ಚಿಂತನೆಗಾಗಿ 16 ದೇವಸ್ಥಾನಗಳ ಮುಖ್ಯಸ್ಥರ ನಾಲ್ಲು ಸಭೆಗಳನ್ನು ಕರೆದು ಚರ್ಚೆ ನಡೆಸಲಾಗಿತ್ತು.  ಸನ್ಮಾನ್ಯ ಅಂಬಾತನಯ ಮುದ್ರಾಡಿ ಯವರ ಸಹಕಾರದಿಂದ ನಾವು ಮುಂದುವರೆಯಲು ಸಾಧ್ಯವಾಯಿತು. ಮೇಲಿನ ಎಲ್ಲಾ ವಿಷಯಗಳ ಪೂರ್ಣ ಜ್ಞಾನ ದೊರೆಯ ಬೇಕಾದರೆ ನಮ್ಮ ಆಧಿಮೂಲ ಮತ್ತು ಆಧಿಗುರು ಯಾರೆಂದು ತಿಳಿದರೆ ಇವೆಲ್ಲ ವಿಷಯಗಳ ಗೊಂದಲ ನಿವಾರಿಸಬಹುದು.  ಅಷ್ಟಮಂಗಳ ಪ್ರಶ್ನೆಯಿಂದ  ಮೂಲಸ್ಥಾನವನ್ನು ಮೂಲಗುರು ಯಾರೆಂದು ತಿಳಿಯಬಹುದು ಎಂಬ ಸಲಹೆ ನೀಡಿದರು.

ಈ ಸಮಯದಲ್ಲಿ ನನ್ನ ಮೂರು ವರ್ಷದ ಅಧಿಕಾರವದಿ ಮುಗಿದು ಶ್ರೀಪುರಂದರ ಶೆಟ್ಟಿಗಾರ್ ರವರು ಅಧ್ಯಕ್ಷರಾದರು. ಅವರ ಮುಂದಾಳು ತನದಲ್ಲಿ ಅಷ್ಟಮಂಗಳ ಪ್ರಶ್ನೆ ಏರ್ಪಡಿಸಲಾಯ್ತು.

ಪ್ರಶ್ನೆ:- ಅಷ್ಟಮಂಗಲ ಪ್ರಶ್ನೆಯಲ್ಲಿ ಏನು ಉತ್ತರ ದೊರೆಯಿತು?

ಪದ್ಮಶಾಲೀ ಸಮಾಜದವರು ಸುಮಾರು ಐದು ಶತಮಾನಗಳ ಹಿಂದೆ ಬಾರ್ಕೂರ ಪ್ರದೇಶಕ್ಕೆ ಬಂದವರಾಗಿದ್ದಾರೆ. ಇಲ್ಲಿ ಬ್ರಾಹ್ಮಣಾಶ್ರಯ ಹಾಗೂ ರಾಜಾಶ್ರಯದಲ್ಲಿದ್ದ ಲಕ್ಷಣವಿದೆ. ಇದಕ್ಕೆ ಮೊದಲಾಗಿ ಆಂದ್ರದ ಕೃಷ್ಣಾನದೀ ತಟದ ಅಮರಾವತೀ ಎಂಬ ಪ್ರದೇಶದಲ್ಲಿ ಮೂಲವಾಗಿದ್ದ ಈ ಸಮಾಜದವರು ಸಮಾರು 1400 ವರ್ಷಗಳ ಕಾಲದಲ್ಲಿ ಅಲ್ಲಿಂದ ಹೊರಟು ತಮಿಳುನಾಡಿನ ಕಂಚಿಯಲ್ಲಿ ಬಂದು ನೆಲೆಸಿದರು. ಅಲ್ಲಿ ಕಾಮಾಕ್ಷಿಯ ಆರಾಧನೆ ಹಾಗೂ ಗುರುಗಳ ಆಶ್ರಯದಲ್ಲಿದ್ದ ಲಕ್ಷಣವಿದೆ. ಅಲ್ಲಿ ಕಾಮಾಕ್ಷಿ ದೇವಾಲಯದ ಪರಿಸರದಲ್ಲಿ ಈ ಸಮಾಜ ದವರಿಗೇ (ಕುಲದೇವರಾಗಿ ಆರಾಧಿಸಿದ ) ಸೇರಿದ ಇನ್ನೊಂದು ಕಾಳಿ ಪ್ರಧಾನವಾದ ಕ್ಷೇತ್ರವಿದೆ. ಅದನ್ನು ತಿಳಿದು ಅನುಸ್ಮರಿಸಬೇಕು. ಕಾಮಾಕ್ಷಿಗೆ ವಸ್ತ್ರ ಸಮರ್ಪಿಸುತ್ತಿದ್ದ ಲಕ್ಷಣವಿದೆ. ಅಮರಾವತಿಯಲ್ಲಿ ಈಶ್ವರ ಪ್ರಧಾನ ದೇವಾಲಯ ಹಾಗೂ ದೇವಿ ಸಾನಿಧ್ಯಗಳನ್ನು ಆರಾಧಿಸುತ್ತಿದ್ದ ಲಕ್ಷಣವಿದೆ. ಇದನ್ನು ಕುಲದೇವರಾಗಿ ನಂಬಿದ ಲಕ್ಷಣವಿದೆ. ಶೈವ ವಿಭಾಗದವರಾಗಿದ್ದಾರೆ. ಪದ್ಮಶಾಲಿಗಳ ಆ ವಿಭಾಗಕ್ಕೆ ಒಂದು ಋಷಿ ಹಾಗೂ ಆ ಋಷಿಯ ಎರಡು ಪತ್ನಿಯರ ಕಥೆಯಿದೆ. ಯಜ್ಞ ನಡೆಸಿದ್ದರಿಂದ ವೃದ್ಧಿಯಾದ ಪರಂಪರೆಯಾಗಿದೆ. ಮಾರ್ಕಾಂಡೇಯರ ಸಂಬಂದವಿದೆ. ಈಗಲೂ ಈ ಸಮಾಜದವರು ಇದನ್ನು ಅನುಸ್ಮರಿಸಿ ಬರುವ ಲಕ್ಷಣವಿದೆ. ಕಾಂಚಿಯ ಬಳಿಕ ಮಧುರೆಗೆ ವಲಸೆ ಹೊದ ಈ ಸಮಾಜ ವಿಭಾಗದವರು ಅಲ್ಲಿಂದ ಎರಡು ಎರಡು ಪಂಗಡವಾಗಿ ಒಂದು ಕೇರಳಕ್ಕೂ ಇನ್ನೊಂದು ಕರ್ನಾಟಕಕ್ಕೂ ಬಂದ ಲಕ್ಷಣವಿದೆ. ಹಾಗೆ ಬಂದು ಬಾರ್ಕೂರಿನಲ್ಲಿ ನೆಲೆಸಿದ್ದಾಗಿದೆ. 

ಈ ವಿಷಯಗಳ ಜತೆ ಇನ್ನೂ ಹಲವು ವಿಚಾರಗಳ ಕುರಿತು ಸ್ಪಷ್ಟತೆ ದೊರಕಿತು.

ಪ್ರಶ್ನೆ:- ನಿಮ್ಮ ಪ್ರಶ್ನೆಗಳಿಗೆ ಉತ್ತರ ದೊರೆತ ನಂತರ, ಮತ್ತೇನು, ಮಾಡಿದಿರಿ?

ಅಷ್ಟಮಂಗಳ ಪ್ರಶ್ನೆ ಮುಗಿದ ಮೇಲೆ , ಈ ಪ್ರಶ್ನೆ ಆಧಾರದಲ್ಲಿ ಕಂಚಿಯಲ್ಲಿಯ ನಮ್ಮ ಮೂಲ ಕುಲದೇವರ ಹುಡುಕಾಟದಲ್ಲಿ ತೊಡಗಿದೆವು. ಕಂಚಿ ಮಠದ ಪೋನ್ ನಂ. ಹುಡುಕಿ ಸಂಪರ್ಕ ಬೆಳೆಸಿದೆವು ಸಾಧ್ಯವಾಗಲಿಲ್ಲ. ಬೇರೆ ಮೂಲದ ಹುಡುಕಾಟವೂ ಯಶಸ್ವಿಯಾಗಲಿಲ್ಲ.

ಪ್ರಶ್ನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು ,ಈಗಲೂ ನಿಮ್ಮವರು ಕಂಚಿಯಲ್ಲಿ ಕುಲದೇವರಾಗಿ ದೇವಿಯ ಆರಾಧನೆ ಮಾಡುತ್ತಿದ್ದಾರೆ, ಹೋಗಿ ಹುಡುಕಿದರೆ ಸಿಗುತ್ತದೆ ಎಂದು!  ನಮ್ಮ16 ಕುಲ ದೇವಸ್ಥಾನಗಳ ,ಅನೇಕ ದೇವಸ್ಥಾನಗಳ ಪ್ರಶ್ನೆಯಲ್ಲಿ ಕಾಂಚಿಪುರ ನಿಮ್ಮ ಮೂಲ ಎಂಬ ಬಗ್ಗೆ ತಿಳಿಸಲಾಗಿದೆ. ಆದರೆ ಅವರ್ಯಾರಿಗೂ ಕಂಚಿಯಲ್ಲಿ ಯಾವ ದೇವರು ನಿಮ್ಮ ಕುಲದೇವರು ಎಂದು ತಿಳಿಸದ ಕಾರಣ , ಕಂಚಿಗೆ ಹೋಗಿ ಕಾಮಾಕ್ಷಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ! ಆದರೆ ನಮ್ಮೀ ಪ್ರಶ್ನೆಯಲ್ಲಿಯೂ ಅದೇ ರೀತಿ ತಿಳಿಸುವ ಜೊತೆಗೆ " ಕಾಮಾಕ್ಷಿ ದೇವಿ ನಿಮ್ಮ ಕುಲದೇವರಲ್ಲ. ಅಲ್ಲಿಯೇ ಇರುವ , ಕಾಳಿಯೋ ,ದುರ್ಗೆಯೋ, ಮಹಮ್ಮಾಯಿಯೋ ದೇವಿ ನಿಮ್ಮ ಕುಲದೇವರು ಹೋಗಿ ಹುಡುಕಿದರೆ ಸಿಗುತ್ತದೆ" ಎಂದು ಹೇಳಲಾಗಿತ್ತು.

ಹಾಗಾಗಿ, ನಾವು ಕಂಚಿಗೆ ಹೋಗಿ ಹುಡಿಕಿಕೊಂಡು ಬರಲು 9 ಜನರ ತಂಡ ಸಿದ್ಧರಾದೆವು. ಸರ್ವಶ್ರೀ, ಪುರಂದ ಶೆಟ್ಟಿಗಾರ್, ನಾನು, ಮಂಗಳೂರು ಮತ್ತು ಮಣಿಪಾಲದ ಜಯರಾಮ್, ನೀಲಯ್ಯ ಶೆಟ್ಟಿಗಾರ್ ಉಡುಪಿ, ಸುರೇಂದ್ರ ಶೆಟ್ಟಿ(ಶೆಟ್ಟಿಗಾರ್) ಮಂಗಳೂರು, ಪಿತಾಂಬರಶೆಟ್ಟಿಗಾರ್ ಕಲ್ಲಾಪು ಮತ್ತು ಕಿನ್ನಿಗೋಳಿಯ ತಮಿಳು ತಿಳಿದ ಜಗಧೀಶ್ ಮತ್ತು ವಿಠಲ್ ಶೆಟ್ಟಿಗಾರ್ .

ಪ್ರಶ್ನೆ:- ಕಂಚಿಗೆ ಹೇಗೆ ಹೋದಿರಿ, ಅಲ್ಲಿ ಏನು ಪ್ರಯತ್ನ ಮಾಡಿದಿರಿ?

ಮೂಲ ಸ್ಥಾನದ ದೇವಸ್ಥಾನವಾದ ಬಾರಕೂರಲ್ಲಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿ , ಮಂಗಳೂರಿಂದ ರಾತ್ರಿ ರೈಲಲ್ಲಿ ಪ್ರಯಾಣಿಸಿ, ಕೊನೆಯ ಕೆಲವು ಮೈಲು ಬಸ್ನಲ್ಲಿ ತೆರಳಿ ಕಂಚಿಯನ್ನು , ಮಧ್ಯಾಹ್ಣ 1ಘಂ.ಗೆ ತಲುಪಿದೆವು. ಬಸ್ ಇಳಿದ ತಕ್ಷಣ ಕೆಲವು ರಿಕ್ಷಾದವರು ನಮ್ಮನ್ನು ಮುತ್ತಿಕೊಂಡು ತಮ್ಮ ರಿಕ್ಷಾ ಬಳಸುವಂತೆ ವಿನಂತಿಸಿಕೊಂಡರು. ನಮ್ಮ ತಮಿಳರು ಅವರಲ್ಲೊಬ್ಬನಲ್ಲಿ "ನಾವು ಪದ್ಮಶಾಲಿಗರು , ನಮ್ಮ ಮೂಲಕುಲದೇವಸ್ಥಾನ ಹುಡುಕಲು ಕರ್ನಾಟಕದಿಂದ ಬಂದಿದ್ದೇವೆ ", ಎಂದಾಗ ಆತ ತಾನೂ ಪದ್ಮಶಾಲಿ, ಬನ್ನಿ ನಮ್ಮವರದೇ ಲಾಡ್ಜ್ ಇದೆ ಅಲ್ಲಿ ವಿಚಾರಿಸಿರಿ ಎಂದಾಗ , ಮೂರು ರಿಕ್ಷಾ ಮಾಡಿಕೊಂಡು ಲಾಡ್ಜ್ ಗೆ ಹೋದೆವು ,ಎರಡು ರೂಂ ತೆಗೆದುಕೊಂಡು ಸ್ನಾನಾದಿ ಪೂರೈಸಲು ಕೆಲವರು ತೊಡಗಿದರೆ, ಕೆಲವರು ನಮ್ಮ ಸಮಾಜದ ಸಂಘಟನೆ ಇದೆಯೇ ಇದ್ದರೆ ಅದರ ಕಛೇರಿ ಎಲ್ಲಿದೆ ಎಂಬ ಬಗ್ಗೆ ತಿಳಿಯಲು ಪ್ರಯತ್ನದಲ್ಲಿ ತೊಡಗಿದೆವು. ಹೋಟೆಲ್ ಗೆ ಅರ್ಧ ಕಿ. ಮೀ. ದೂರದಲ್ಲೆ ಸಂಘದ ಕಛೇರಿ ಇದೆ ಎನ್ನುವುದೂ ಹಾಗೂ ಪೋನ್ ನಂ. ಪಡೆಯುವಲ್ಲೂ ಯಶಸ್ವಿಯಾದೆವು. 

        ಸಂಘದ ಅಧ್ಯಕ್ಷರನ್ನು ಸಂಪರ್ಕಿಸಿದಾಗ 3 ಘಂಟೆ ಸಮಯ, ಸಂಜೆ 6 ಘಂಟೆಗೆ ಬರುವಂತೆ ನಮ್ಮನ್ನು ಆಹ್ವಾನಿಸಿದರು. ಸಮಯಕ್ಕೆ ಸರಿಯಾಗಿ ಹೋದೆವು. ಸಂಘದ ಅಧ್ಯಕ್ಷ ಶ್ರೀ ಡಾ:ಸುಮತಿ ಅಯ್ಯ ಕಾರ್ಯದರ್ಶಿ ಮತ್ತು ಖಜಾಂಚಿ ಇದ್ದು, ನಮ್ಮನ್ನು ಸ್ವಾಗತಿಸಿದರು. ಅಲ್ಲಿಯ ಪದ್ಮಶಾಲಿಗರು ವ್ಯಾಪಾರಿ ಉದ್ಧೇಶದಿಂದ ಕನ್ನಡವನ್ನೂ ಕಲಿತಿದ್ದು, ನಮಗೆ ವ್ಯವಹರಿಸಲು ಅನಕೂಲವಾಯ್ತು. 

ಪ್ರಶ್ನೆ: ಕಂಚಿಯಲ್ಲಿ ತಮ್ಮ ಅರಿವಿಗೆ ಬಂದ ವಿಷಯಗಳೇನು?

 ನಾವು ಪ್ರಶ್ನಾವಳಿಯೊಂದನ್ನೇ ತಯಾರಿಸಕೊಂಡು ಹೋಗಿದ್ದೆವು. ಮೊದಲಾಗಿ ನೀವು ಯಾವ ದೇವರನ್ನು ಕುಲದೇವರಾಗಿ ಆರಾಧಿಸುತ್ತೀರಿ, ಹಾಗೂ ನಿಮ್ಮ ಗುರು ಯಾರು? ಪ್ರಶ್ನೆಗೆ," ನಾವು ಯಾವುದೇ ದೇವರನ್ನೂ ಕುಲದೇವರೆಂದು ಆರಾಧಿಸುವುದಿಲ್ಲ. ಇಲ್ಲಿ 5 ಪ್ರಮುಖ ದೇವಸ್ಥಾನಗಳಿವೆ. ಅವುಗಳ ಧ್ವಜಾರೋಹಣ ಸಮಯದಲ್ಲಿ ನಮ್ಮ ಸಮಾಜಕ್ಕೆ ಪ್ರಸಾದ ನೀಡುವ ಕ್ರಮವಿದೆ. ಆಗ ಹೋಗಿ ಪ್ರಸಾದ ಮಾತ್ರ ಪಡೆಯುತ್ತೇವೆ. ಇನ್ನು ಗುರುವಿನ ವಿಷಯದಲ್ಲೂ ಅಷ್ಟೇ, ಲಕ್ಷ-ಲಕ್ಷ ಹಣ ನೀಡಿದರೆ ಮಠದಲ್ಲಿ ಗೌರವವಿದೆ. ಹಾಗಾಗಿ ಗುರುವಿನ ಆರಾಧನೆಯೂ ನಮ್ಮಲ್ಲಿ ಇಲ್ಲ".

ನಮ್ಮಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದ ವಿಷಯವನ್ನು ತಿಳಿಸಿ, ಈಗಲೂ ಕುಲದೇವರ ಆರಾಧನೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ ಎಂಬ ವಿಷಯವನ್ನು ತಿಳಿಸಿದೆವು. 

ಆಗ ಅಧ್ಯಕ್ಷರು, 

ಪದ್ಮಶಾಲಿ ಕುಟುಂಬಗಳು 101 ಮನೆತನಗಳಿಂದ ಕೂಡಿತ್ತು . ಈ ಕುಟುಂಬಗಳು ರೇಷ್ಮ ಸೀರೆ ನೇಕಾರಿಕೆ ಮತ್ತು ಅದರ ವ್ಯಾಪಾರ ಮಾಡುತ್ತಿದ್ದು , ಬಹುತೇಕ ಕುಟುಂಬಗಳು ಶ್ರೀಮಂತವಾಗಿದ್ದವು. ಇವರು ಯಾವುದೇ ದೇವರನ್ನು ಕುಲದೇವರೆಂದು ಆರಾಧಿಸುತ್ತಿರಲಿಲ್ಲ . ಹೀಗಿರುವಾಗ ಒಮ್ಮೆ 'ಘೋರ ' ಮನೆತನದ ಎರಡು ಕುಟುಂಬಗಳಿಗೆ ಅತಿಯಾದ ಸಂಕಟವುಂಟಾಯಿತು. ಆಗ ಆ ಕುಟುಂಬಗಳು ಆ ಊರಿನ ಗ್ರಾಮದೇವತೆ ( ಮಾರಿಯಮ್ಮ) 'ಕಾಳಿ' ಎಂದು ಕರೆಯಲ್ಪಡುತ್ತಿದ್ದ , ಮಹಿಷಾಸುರ ಮರ್ಧಿನಿ ಚರಿತ್ರೆಯನ್ನು ಹೊಂದಿದ ದೇವಿಯಲ್ಲಿ ಮೊರೆ ಹೋಗುತ್ತಾರೆ. ಭಕ್ತ ರಕ್ಷಕಿ ಕಾಳಿಯಿಂದ ಅವರ ಸಂಕಷ್ಟಗಳು ನಿವಾರಣೆಯಾಗುತ್ತದೆ. ಹೀಗಾಗಿ ಆ ಎರಡು ಕುಟುಂಬಗಳು   ಆ ಕಾಳಿದೇವಿಯನ್ನು ಕುಲದೇವರಾಗಿ ಆರಾಧಿಸಲಾರಂಬಿಸಿದರು. ಕಾಲಾನಂತರದಲ್ಲಿ ಈ ಎರಡು ಕುಟುಂಬಗಳು ಹಲವು ಕುಟುಂಬಗಳಾಗಿ ಬೆಳಿಯಿತು. 

ಆ ಕುಟುಂಬದ ತಲೆಮಾರಿನವರು ಪ್ರತಿವರ್ಷ ಆಷಾಡ ಮಾಸದ 2 ನೇ ಭಾನುವಾರ ಇಲ್ಲಿ ಸೇರಿ ದೇವರ ಆರಾಧನೆ ಮಾಡುತ್ತಾರೆ. ನಮ್ಮನ್ನೂ ಕರೆಯುತ್ತಾರೆ ನಾವು ಹೋಗಿ ಪ್ರಸಾದ ಪಡೆಯುತ್ತೇವೆ ಎಂದರು. ಆ ಕುಟುಂಬದ ತಲೆಮಾರಿನವರು, ಈಗ ಕಂಚಿ,ಚನ್ನೈ ಮತ್ತು ಬೆಂಗಳೂರಿನಲ್ಲಿದ್ದಾರೆಂದು ತಿಳಿಸಿದರು.

ಈ ಸಮೂಹದಿಂದ ಕೆಲವು ಕುಟುಂಬಗಳು ಮದುರೈಗೆ ಹೋಗಿ ಅಲ್ಲಿ ಕೆಲವು ಕಾಲ ತಂಗಿದ್ದು, ಅವರೇ ಈಗ್ಗೆ ಸುಮಾರು 500 ವರ್ಷಗಳ ಹಿಂದೆ ಬಾರಕೂರಿಗೆ ಬಂದವರಾಗಿದ್ದಾರೆ

( ಬ್ರಿಟಿಷರ ಕಾಲದಲ್ಲಿ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡವು ತಮಿಳು ಪ್ರದೇಶಗಳೊಂದಿಗೆ ಸೇರಿಕೊಂಡಿತ್ತು. ಈ ಪ್ರದೇಶದಲ್ಲಿ ಸೌರಮಾನ ಪದ್ಧತಿ ಆಚರಣೆ ಇದ್ದು ಈಗಲೂ ಕರ್ನಾಟಕದ ಎಲ್ಲ ಕಡೆ ಚಾಂದ್ರಮಾನ ಬಳಕೆಯಲ್ಲಿದ್ದರೆ, ಕರಾವಳಿಯ ಅನೇಕ ಜಾತಿಯವರು ಸೌರಮಾನ ವನ್ನೇ ಆಚರಿಸುತ್ತಾರೆ. ಹಾಗಾಗಿ ಚಾಂದ್ರಮಾನ ಆಷಾಡವು ಆರಂಭವಾಗಿ 15 ದಿನವಾದ ಮೇಲೆ ಸೌರಮಾನ ಆಷಾಡ ಪ್ರಾರಂಭವಾಗುತ್ತದೆ.)

ಗೋತ್ರ ಪದ್ಧತಿಯ ಬಗ್ಗೆ ನಮ್ಮ ಪ್ರಶ್ನೆಗೆ:- ನಮ್ಮಲ್ಲಿ ಗೋತ್ರ ಪದ್ಧತಿಯ ಆಚರಣೆಯಿಲ್ಲ.  ಮನೆತನದ ಆಚರಣೆ ಇದೆ ನಮ್ಮಲ್ಲಿ 101 ಮನೆ ತನಗಳಿವೆ.ಅದನ್ನೇ  ಬಳಸುತ್ತೇವೆ .  

ವಿವಾಹದ ಕ್ರಮದ ಕುರಿತು ವಿಚಾರಿಸಿದಾಗ:- ನಮ್ಮಲ್ಲಿ "ಶೆಟ್ಟಿಗಾರ್ " ಮನೆಗಳಿವೆ. ಅವರೇ ವಿವಾಹ ಕಾರ್ಯವನ್ನೂ, ಪೂಜೆ ಮೊದಲಾದ ಧಾರ್ಮಿಕ ಕಾರ್ಯಗಳನ್ನೂ ನಡೆಸಿಕೊಡುತ್ತಾರೆ ಎಂದರು. ಶೆಟ್ಟಿಗಾರ್ ಎಂದರೇನರ್ಥವೆಂಬ ನಮ್ಮ ಪ್ರಶ್ನೆಗೆ, " ಧಾರ್ಮಿಕ ಅಧ್ಯಕ್ಷ /ಮುಖ್ಯಸ್ಥ" ಎಂಬ ಅರ್ಥವೆಂದು ತಿಳಿಸಿದರು. ಕರಾವಳಿಯಲ್ಲಿಯ ಗುರಿಕಾರರು ಮತ್ತು ಆಡಳಿತ ಮೊಕ್ತೇಸರ ಪದಗಳಿಗೆಪರ್ಯಾಯ ಅರ್ಥದ ಪದ. ಇಲ್ಲಿ ಮುಂದಾಳತ್ವ ಮಾತ್ರವಹಿಸಿದರೆ, ಅಲ್ಲಿ ಬ್ರಾಹ್ಮಣರು ನಿರ್ವಹಿಸುವ ಎಲ್ಲಾ ಕಾರ್ಯವನ್ನೂ ಕೆಲವು ಶೆಟ್ಟಿಗಾರರು ನಿರ್ವಹಿಸುತ್ತಾರೆ. ಅದಕ್ಕೆ  ತಕ್ಕ ಶಿಕ್ಷಣವನ್ನೂ ಪಡೆದಿರುತ್ತಾರೆ.

ಕಾಂಚಿಪುರದಲ್ಲಿ ಸುಮಾರು 4,000 ಪದ್ಮಶಾಲಿಗಳಿದ್ದಾರೆ. ಅವರ ಮಾತೃ ಭಾಷೆ ತೆಲುಗು. ಮರುದಿನ ಬೆಳಿಗ್ಗೆ ಲಾಡ್ಜ್ ನಿಂದ ಒಂದೂವರೆ ಕಿ. ಮೀ. ದೂರದಲ್ಲಿಯ ದೇವಾಲಯಕ್ಕೆ ಹೋದೆವು. ದೇವಾಲಯದ ದ್ವಾರ ಮುಚ್ಚಿತ್ತು. ವಿಶಾಲವಾದ ಸ್ಥಳವಿದ್ದು ಸುತ್ತ ಗೋಡೆ ಕಟ್ಟಲಾಗಿದೆ. ದಕ್ಷಿಣ ದಿಕ್ಕಿಗೆ ರಸ್ತೆಯಿದ್ದು, ಎತ್ತರವಾದ ಗೋಪುರವಿದೆ. ಈ ಗೋಪುರವನ್ನು ವಿಮಾನವೆಂದು ಕರೆಯಲಾಗುತ್ತದೆ. ಸಂಜೆ 5 ಘಂಟೆಗೆ ಗುಡಿ ತೆರೆಯಲಾಗುತ್ತದೆ ಆಗ ಬನ್ನಿ ಎಂದು ತಿಳಿಸಿದರು. ಆ ಕಾರಣದಿಂದ ಕಾಮಾಕ್ಷಿ ದೇವಸ್ಥಾನಕ್ಕೆ ಬೇಟಿಕೊಟ್ಟು ಪೂಜೆ ಮಾಡಿಸಿಕೊಂಡು, ಸಂಜೆ ಕುಲದೇವಸ್ಥಾನಕ್ಕೆ ಹೋದೆವು.

ದೇವಾಲಯದ ಹೆಸರು "karukkinil amarnthaval amman koil  " ಎಂಬ ನಾಮ ಫಲಕವಿದೆ. koil ಎಂದರೆ ದೇವಾಲಯ. ಕಪ್ಪು ಮರದಡಿ ಕುಳಿತ ಅಮ್ಮನ ದೇವಾಲಯ ಎಂದು ಕನ್ನಡದ ಅರ್ಥ. ಮಹಿಷಾಸುರ ಮರ್ಧಿನ ಕತೆಯನ್ನು ಹೊಂದಿದ ದೇವತೆ. " ಕರುಕ್ಕಿನಿಲ್" ಎಂದರೆ ಕಪ್ಪು ಮರ. ಕರಾವಳಿಯ "ಇರೋಲ್" ಮರ. ಮಹಿಷಾಸುರನನ್ನು ಕೊಂದ ದೇವಿಯು ಈ ಮರದ ಬುಡದಲ್ಲಿ ಕುಳಿತು ಗೋಚರಿಸಿಕೊಂಡ ಕಾರಣ ಆ ಹೆಸರು ಬಂದಿದೆ ಎನ್ನಲಾಗಿದೆ. ಈ ದೇವಾಲಯವು ಕಾಂಚಿಪುರಂ ನ ಗ್ರಾಮ ದೇವತೆ ಅರ್ಥಾತ್ ಮಾರಿಯಮ್ಮ. ಬೆಣಚು ಕಲ್ಲಿನ ವಿಗ್ರಹವು, ತ್ರಶೂಲದಿಂದ ರಾಕ್ಷಸ ವಧೆಯನ್ನು ಮಾಡುವ ಬಂಗಿಯಲ್ಲಿದೆ.  ಬಹಳ ಬಲಿಷ್ಟವಾದ ದೇವರು ಎಂಬ ನಂಬಿಕೆ ಅಲ್ಲಿಯವರದ್ದು. ಮೊದಲಿಯಾರ್ ಕುಟುಂಬ ಅರ್ಚಕರಾಗಿದ್ದಾರೆ. 

ದೇವತೆಗೆ ರಕ್ತಾಹಾರ ಕೊಡಲಾಗುತ್ತಿತ್ತಂತೆ. ತಮಿಳುನಾಡು ಸರ್ಕಾರವು ರಕ್ತಾಹಾರ ನಿಷೇಧಸಿದ ಮೇಲೆ ಅಲ್ಲಿಯೂ ರಕ್ತಾಹಾರವಿಲ್ಲ. ಪೌಳಿ ಇಲ್ಲದ ದೇವಾಲಯವು ಚಿಕ್ಕದಾಗಿದ್ದು ಹೆಚ್ಚೆಂದರೆ 20-30 ಜನ ಒಳಗೆ ನಿಲ್ಲಬಹುದಾಗಿದೆ. ಗುಡಿಯ ಎದುರಿಗೆ ಸಮಾರು 50 ಅಡಿ ದೂರದಲ್ಲಿ ಒಂದು ಕಟ್ಟೆಯಿದ್ದು , ಅಲ್ಲಿ ದೇವಾಲಯಕ್ಕೆ ಮುಖ ಮಾಡಿದ ಎರಡು ಬುದ್ಧನ ವಿಗ್ರಹಗಳಿವೆ.  ಈ ಬುದ್ಧರು ರೌದ್ರ ರೂಪಿಯಾದ ದೇವಿಯನ್ನು ಶಾಂತಗೊಳಿಸಿದ ಕಾರಣ ಅಲ್ಲಿ ಸ್ಥಾಪಿಸಲಾಗಿದೆ. ಈ ವಿಗ್ರಹ ವೀಕ್ಷಣೆಗೆ ಶ್ರೀಲಂಕ ಮೊದಲಾದ ಕಡೆಯಿಂದ ಬೌದ್ಧ ಬಿಕ್ಷುಗಳು ಬರುತ್ತಾರಂತೆ. ಅದರ ದಕ್ಷಿಣಕ್ಕೆ ಮಣಿಮೇಗಳ್ ಹೆಸರಿನ ವಿಗ್ರಹವಿದೆ. ಸುತ್ತಲೂ ಬೇರೆ ಬೇರೆ ವಿಗ್ರಹಗಳಿವೆ. ಅದರಲ್ಲಿ ಕೆಲವು ನಾಗನ ವಿಗ್ರಹವಾದರೆ, ಕೆಲವು ಬೇರೆ. ಮೂಲ ದೇವಿಗೆ ಪೊಂಗಲ್ ನ್ನು, ಆರಾಧನೆಗೆ ಬಂದ ಭಕ್ತರು ಅಲ್ಲಿಯೇ ತಯಾರಿಸಿ ನೈವೇಧ್ಯ ಮಾಡಿಸುತ್ತಾರೆ.  ದೇವಸ್ಥಾನದ ಹೆಸರಲ್ಲಿ youtube ನಲ್ಲಿ ಹುಡುಕಿದರೆ ಬೇರೆ ಬೇರೆ ವೀಡಿಯೋಗಳಿವೆ. ನೋಡಿ ಹೆಚ್ಚಿನ ವಿಷಯ ತಿಳಿಯಬಹುದು.

ಮೂಲ ಕುಲದೇವಸ್ಥಾನದ ಶೋಧನೆ ಮಾಡಿದ ನಂತರ ಗುರುವಿನ ಬಗ್ಗೆ ಅಲ್ಲಿಯವರು ನಡೆದುಕೊಳ್ಳದೇ ಇರುವ ಕಾರಣ ಶಂಕರಾಚಾರ್ಯ ಮಠಕ್ಕೆ ಹೋಗುವುದು ಸರಿಯಲ್ಲವೆಂದು ಹೋಗಲಿಲ್ಲ.

ಪ್ರಶ್ನೆಯ ಬಹು ಮುಖ್ಯ ಕೆಲಸ ಸುಲಭವಾಗಿ ನೆರವೇರಿದ ಬಗ್ಗೆ ಉಲ್ಲಾಸದಿಂದ ಹಿಂದುರುಗಿದೆವು. ಮಾತ್ರವಲ್ಲ "ಶೆಟ್ಟಿಗಾರ್" ಪದದ ಬಗ್ಗೆ ಈ ಹಿಂದೆ ಸಮಾಜದಲ್ಲಿ ಚಿಂತನೆಗಳು ನಡೆದಿದ್ದರೂ ಸರಿಯಾಗಿ ತಿಳಿದಿರಲಿಲ್ಲ. ಆ ಬಗ್ಗೆ ಬಹಳ ತೃಪ್ತಿ ಮತ್ತು ಸಂತೋಷವಿದೆ. ಬೆಂಗಳೂರಲ್ಲಿರುವ ಕಂಚಿ ಮೂಲದ ವರಲ್ಲಿ ಶ್ರೀವೆಂಕಟೇಶ್ ಎನ್ನುವವರು ಬೆಂಗಳೂರಿನ ಶಾಂತಿನಗರ  ಪ್ರದೇಶದಲ್ಲಿದ್ದಾರೆ. ಶ್ರೀಯುತರು ವಯೋವೃದ್ಧರು. ಅವರ ಮಗ ಲಕ್ಷ್ಮಿನಾರಾಯಣ ಹಾಗೂ ಇವರ ಸಹೋದರಿ ಲಕ್ಷ್ಮಿ ಎನ್ನುವವರು ಕಂಚಿಗೆ ಮದುವೆಯಾಗಿದ್ದು ಇವರಿಂದ ಅಗತ್ಯ  ಮಾಹಿತಿ ಪಡೆಯ ಬಹುದಾಗಿದೆ. 

ಪ್ರಶ್ನೆಯಲ್ಲಿ ತಿಳಿಸಲಾದ ಉಳಿದ ವಿಷಗಳ ಬಗ್ಗೆ ಚಿಂತಿಸುತ್ತಾ ಊರಿಗೆ ಮರಳಿದೆವು. 


ಪ್ರಶ್ನೆ: ಬಾರ್ಕೂರಿನಲ್ಲಿ ಪದ್ಮಶಾಲಿಗಳು ನೆಲೆ ನಿಂತ ಬಗ್ಗೆ ವಿವರ ನೀಡಿ

ಕರಾವಳಿ ಪದ್ಮಶಾಲಿಗರ ಮೂಲ ಸ್ಥಾನ ಶೋಧನೆ ಕುರಿತು ಬಾರಕೂರಲ್ಲಿ 2014 ರಲ್ಲಿ ನಡೆಸಿದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಚಿಯಿಂದ ಬಂದ ಪದ್ಮಶಾಲಿಗರಿಗೆ ನೀಡಿದ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಗುಡಿಯ ಸಮೀಪವೇ "ದೇವಿ" ಗುಡಿ ನಿರ್ಮಿಸಿದ ಮಾಹಿತಿ ತಿಳಿಯಿತು.

ಬಾರಕೂರು ಸಾಮಂತರಾಜನ ರಾಜಧಾನಿ. ರಾಜ ವೀರಮರ್ಮ ಬಲ್ಲಾಳ. ಆ ಕಾಲವು (14ನೇ ಶತಮಾನ) ಕರಾವಳಿಯ ಧಾರ್ಮಿಕ ಉನ್ನತಿಯ ಕಾಲ. ರಾಜಧಾನಿಯಲ್ಲಿ 365 ದೇವಾಲಯಗಳು. ದಿನಕ್ಕೊಂದು ದೇವಾಲಯದಲ್ಲಿ ರಾಜನ ಹೆಸರಲ್ಲಿ ಸೇವೆ. ರಾಜ ಭಕ್ತಿಯಿಂದ ಆ ಸೇವೆಯಲ್ಲಿ ಭಾಗವಹಿಸುತ್ತಿದ್ದು , ತನ್ನ ರಾಜ್ಯದ  ಉನ್ನತಿಗೆ ಮತ್ತು ಪ್ರಜೆಗಳ ಕ್ಷೇಮಕ್ಕೆ, ಸದಾ ದೇವರ ಆಶೀರ್ವಾದ ಅಗತ್ಯವೆಂದರಿತು , ದೇವತಾ ಆರಾಧನೆ ಮಾಡುತ್ತಿದ್ದವನು .

ವಿಶಿಷ್ಟವಾದ ಧಾರ್ಮಿಕ ತಳಹದಿಯ ಆಡಳಿತ. 365 ದೇವಾಲಯಗಳ ಸುಗಮ ವ್ಯವಸ್ಥೆಗೆ, ಆ ದೇವಾಲಯಗಳಲ್ಲಿ ಕೆಲವನ್ನು ತನ್ನ ರಾಜ್ಯದ ಒಂದೊಂದು ಕುಲಕ್ಕೆ" ಕುಲದೇವರಾಗಿ", ಒಪ್ಪಿಸುವ ವ್ಯವಸ್ಥೆ. ಆ ದೇವಳಗಳಿಗೆ ಸುಧೀರ್ಘ ವೂ , ಸುಗಮವೂ ಆದ ಆಡಳಿತ ವ್ಯವಸ್ಥೆಗೆ ಆದಾಯ ತರುವ ಭೂದಾನ.! ಅರ್ಥಾತ್ ಉಂಬಳಿ

ಈ 365 ದೇವಳದ ಅರ್ಚಕರಿಗೆ ಮಡಿ ಬಟ್ಟೆ ಒದಗಿಸುವ ವ್ಯವಸ್ಥೆಯಲ್ಲೊಮ್ಮೆ ಅನಾನುಕೂಲ! ಈ ವಸ್ತ್ರಗಳ ಆಯಾತ ತಮಿಳುನಾಡಿಂದ. ಆಯಾತಕ್ಕೇನೊ ಅಡಚಣೆ. ಈ ಅಡಚಣೆಯನ್ನು ಶಾಶ್ವತವಾಗಿ ನಿವಾರಿಸಲು, ನೇಕಾರ ಕುಟಂಬ ಗಳನ್ನೇ ಆಯಾತ ಮಾಡಿಕೊಂಡು ಶಾಶ್ವತ ಪರಿಹಾರ ಕಂಡುಕೊಂಡದ್ದು, ರಾಜನ ಪರಿಪೂರ್ಣ, ದೂರದರ್ಶಿತ್ವದ ಆಡಳಿತಕ್ಕೊಂದು ಉತ್ತಮ ಉದಾಹರಣೆ.!

ಬಾರಕೂರು ಸಂಸ್ಥಾನದಲ್ಲಿ ಪ್ರತಿಯೊಂದು ಜಾತಿಗೂ ಉಪನಾಮ. ಆ ಹೆಸರಿಂದಲೇ ಜಾತಿಯ ಪರಿಚಯ. ಕರಾವಳಿಯಲ್ಲಿ ಸಾಮಾನ್ಯವಾಗಿ ಉಪನಾಮವಿಲ್ಲದ ಜಾತಿಯೇ ಇಲ್ಲ. ಕೆಲವೊಂದು ಜಾತಿಗೆ ಹಲವಾರು ಉಪನಾಮಗಳು. ಉದಾ: ಬಂಟ ಜಾತಿಗೆ ಹತ್ತಾರು ಉಪನಾಮಗಳು, ಶೆಟ್ಟಿ, ರೈ, ಅಜಿಲ , ಹಗಡೆ, ನಾಯಕ್, ಇತ್ಯಾದಿ ಬ್ರಾಹ್ಮಣರಲ್ಲಿ ಭಟ್ಟ, ಅಡಿಗ , ರಾವ್, ಆಚಾರ್ಯ, ಐತಾಳ, ಸೋಮಯಾಜಿ ಮಯ್ಯ, ಇತ್ಯಾದಿ . 

ಕರಾವಳಿಗೆ ಆಗಮಿಸಿದ ಪದ್ಮಶಾಲಿಗರಿಗೆ ಯಾವುದೇ ಉಪನಾಮ ವಿರಲಿಲ್ಲ. ಇಲ್ಲಿಯ ಪದ್ದತಿಗೆ ಹೊಂದಿಕೊಳ್ಳಬೇಕಾಗಿ ಬಂದಾಗ ತಮ್ಮ ಪೂರ್ವಜರು ,ಕಂಚಿಯಲ್ಲಿ ತನ್ನದೇ ಜಾತಿಯ ವಿವಾಹದ ಪೌರೋಹಿತ್ಯ/ಮೇಲ್ವಿಚಾರಣೆ ಕಾರ್ಯವನ್ನು ನಿರ್ವಹಿಸುತ್ತಿದ್ದು , ಅಲ್ಲಿ ಅವರನ್ನು "ಶೆಟ್ಟಿಗಾರ್ " ಎಂದು ಕರೆಯುತ್ತಿದ್ದ ಕಾರಣ ಅದೇ ಕುಟುಂಬದಿಂದ ಬಂದವರಾದ್ದರಿಂದ ಆ ಹೆಸರನ್ನೇ ಉಪನಾಮವನ್ನಾಗಿ ಆಯ್ಕೆ ಮಾಡಿಕೊಂಡು ಬಳಸಲಾರಂಬಿಸಿದರು. ಹೀಗಾಗಿ ಕರಾವಳಿಗೆ ಬಂದ ಪದ್ಮಶಾಲಿಗರು   " ಶೆಟ್ಟಿಗಾರರಾದರು."  ಸಮಾಜದ ಜನಸಂಖ್ಯೆ ಬೆಳೆದಂತೆ ಕರಾವಳಿಯ ಉದ್ದಗಲಕ್ಕೂ ವಿಸ್ತರಿಸಿದರು. ವಿಟ್ಲ ಪ್ರದೇಶಕ್ಕೆ ವಿಸ್ತರಿಸಿದ ಪದ್ಮಶಾಲಿಗರಲ್ಲಿ ಕೆಲವರು "ಶೆಟ್ಟಿ" ಪದವನ್ನೂ ಉಪನಾಮವಾಗಿ ಬಳಸಿದರು. ಹಾಗಾಗಿ ಕರಾವಳಿ ಪದ್ಮಶಾಲಿಗರಲ್ಲಿ ಶೆಟ್ಟಿಗಾರ್ ಮತ್ತು ಶೆಟ್ಟಿ ಎಂಬ ಎರಡು ಉಪನಾಮಗಳಿವೆ.


ರಾಜ ತಾನು ಆರಾಧಿಸುತ್ತಿದ್ದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವನ್ನು ಬಾರಕೂರಿಗೆ ಆಗಮಿಸಿದ ಪದ್ಮಶಾಲಿಗರಿಗೆ ನೀಡುತ್ತಾನೆ. ಬಾರಕೂರಲ್ಲಿ ಕುಲದೇವಸ್ಥಾವನ್ನು ಹೊಂದಿದ ಪದ್ಮಶಾಲಿಗರಿಗೆ ರಾಜಧಾನಿಯಿಂದ ಹೊರಭಾಗದಲ್ಲಿ ಕಾಲಿ ಇದ್ದ ವಿಶಾಲ ಪ್ರದೇಶವನ್ನು ವಾಸ್ತವ್ಯಕ್ಕಾಗಿ ನೀಡುತ್ತಾನೆ.

ಪದ್ಮಶಾಲಿಗರು ನೆಲೆಸಿದ ಆ ಪ್ರದೇಶವೇ, "ಪದ್ಮಶಾಲಿಕೇರಿ" ಇಂದಿನ ಸಾಲಿಕೇರಿ.ದೇವಸ್ಥಾನದ ಆಡಳಿತದ ಮುಖ್ಯಸ್ಥರು ಹಾಗೂ ಒಂದೆರಡು ಪರಿಚಾರಕ ಕುಟುಂಬ ಬಾರಕೂರಿನ ದೇವಸ್ಥಾನದ ಸಮೀಪವೇ ನೆಲೆಸಿದರು. ಅದುವೇ ಪಟಸಾಲಕೇರಿ. ಇದು ಬಾರಕೂರಿನ ಹತ್ತು ಕೇರಿಗಳಲ್ಲೊಂದು. ಹತ್ತೂ ಕೇರಿಗಳಲ್ಲಿ ನಾಲ್ಕಾರು ದೇವಾಲಯಗಳು, ಅದರಲ್ಲೊಂದಕ್ಕೆ ಪ್ರಧಾನ ದೇವರ ಪಟ್ಟ. ಹಾಗೇ ಪಟಸಾಲಕೇರಿಗೆ, ಪದ್ಮಶಾಲಿಗರಿಗೆ ನೀಡಿದ " ಶ್ರೀ ಬ್ರಹ್ಮಲಿಂಗೇಶ್ವರ " ನೇ ಪ್ರಧಾನ ದೇವರು. ಕಾಲಾನುಕ್ರಮದಲ್ಲಿ ಬ್ರಹ್ಮಲಿಂಗೇಶ್ವರನ ಪೀಠದಲ್ಲಿ ವಿರೇಶ್ವರನನ್ನು ಪ್ರತಿಷ್ಟಾಪಿಸಿದ ಕಾರಣ " ಬ್ರಹ್ಮಲಿಂಗವೀರಭದ್ರ " ನೆಂದು ಪುನಃ ನಾಮಕರಣವಾಗುತ್ತದೆ.  

ಪ್ರಶ್ನೆ:- ಕೂಡುಕಟ್ಟು ಮತ್ತು ದೇವಸ್ಥಾನಗಳ ಬಗ್ಗೆ ವಿವರ ನೀಡಿ

ಬಾರಕೂರಿಂದ ಕಾಞಂಗಾಡು ವರೆಗೆ ಹದಿನಾರು ದೇವಸ್ಥಾನಗಳನ್ನು ಹೊಂದಿದ್ದು. ಪ್ರತಿಯೊಂದು ದೇವಸ್ಥಾನವನ್ನು ಒಂದೊಂದು ಕೂಡುಕಟ್ಟು ಎಂದು ಕರೆಯುತ್ತಾರೆ. ಇಲ್ಲಿ ಪ್ರತಿಯೊಬ್ಬ ಪದ್ಮಶಾಲಿಗಳು ಈ ಕೂಡುಕಟ್ಟು ಸೇರಿರುತ್ತಾರೆ. ವಾರ್ಷಿಕ ವಂತಿಗೆಯನ್ನು ಸಲ್ಲಿಸುತ್ತಾರೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪದ್ಮಶಾಲಿಗಳು ವಾಸಿಸುವ ಪ್ರತಿ ಪ್ರದೇಶಗಳಲ್ಲಿ  ದೇವಸ್ಥಾನದ ಗುರಿಕ್ಕಾರರು/ಮಾಗಣೆ ಮುಖ್ಯಸ್ಥರು/ ಮೊಕ್ತೇಸರರು ಇರುತ್ತಾರೆ. ಅವರು ದೇವಸ್ಥಾನ ವಿಧಿ ವಿಧಾನ ಮಾತ್ರವಲ್ಲದೆ,ದೇವಸ್ಥಾನಕ್ಕೆ ಸಂಬಂಧಿಸಿದ ಪ್ರತಿ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಅಥವಾ ಅಶುಭ ಸಮಾರಂಭದಲ್ಲಿ ಆ ಕೂಡುಕಟ್ಟು ದೇವಸ್ಥಾನದ ಗುರಿಕ್ಕಾರರು /ಮಾಗಣೆ ಮುಖ್ಯಸ್ಥರು /ಮೊಕ್ತೇಸರರು/ಹಿರಿಯರು ಕಡ್ಡಾಯ ಉಪಸ್ಥಿತರಿದ್ದು ಪದ್ಮಶಾಲಿಗಳ ಸಮಾಜದ್ದೇ ಆದ ವಿಧಿವಿಧಾನಗಳನ್ನು  ನಡೆಸಿಕೊಡುತ್ತಾರೆ.ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ದೇವಸ್ಥಾನಕ್ಕೆ ಬಂದು ಕಾಣಿಕೆ ಸಲ್ಲಿಸಿ ಪ್ರಾರ್ಥನೆ ಮಾಡುವ ಪದ್ಧತಿ ಇದೆ.


*ತುಳುನಾಡಿನ ಪದ್ಮಶಾಲಿಗಳ ಹದಿನಾರು ದೇವಸ್ಥಾನಗಳು*

ಉಡುಪಿಯ ಜಿಲ್ಲೆಯ ದೇವಸ್ಥಾನಗಳು

ಬ್ರಹ್ಮಲಿಂಗ ವೀರಭಧ್ರ ದುರ್ಗಾಪರಮೇಶ್ವರಿ ದೇವಸ್ಥಾನ ಬಾರಕೂರು 

ಬ್ರಹ್ಮಲಿಂಗ ವೀರಭಧ್ರ ದುರ್ಗಾಪರಮೇಶ್ವರಿ ಸಾಲಿಕೇರಿ 

ಆದಿಶಕ್ತಿ ವೀರಭಧ್ರ ಬ್ರಹ್ಮಲಿಂಗ ದೇವಸ್ಥಾನ ಕಲ್ಯಾಣಪುರ

ಆದಿಶಕ್ತಿ ವೀರಭಧ್ರ ದೇವಸ್ಥಾನ ಕಾರ್ಕಳ

ಆದಿಶಕ್ತಿ ವೀರಭಧ್ರ ದೇವಸ್ಥಾನ ಎರ್ಮಾಳು

ಆದಿಶಕ್ತಿ ವೀರಭಧ್ರ ದೇವಸ್ಥಾನ ಕಾಪು

ಮಹಾಗಣಪತಿ ವೀರಭಧ್ರ ಶಾಂತದುರ್ಗಾ ದೇವಸ್ಥಾನ ಕಿನ್ನಿಮುಲ್ಕಿ

ವೀರಭಧ್ರ ದೇವಸ್ಥಾನ ಪಡುಬಿದ್ರಿ


ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳು

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಬೋಳೂರು ಮಂಗಳೂರು 

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಕಲ್ಲಾಪು ಹಳೆಯಂಗಡಿ 

ವೀರಭಧ್ರ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಹಳೆ ಮಾರಿಯಮ್ಮ ದೇವಸ್ಥಾನ ಸುರತ್ಕಲ್

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಮಾನಂಪಾಡಿ ಮುಲ್ಕಿ

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಸಿದ್ದಕಟ್ಟೆ ಸಂಗಬೆಟ್ಟು* 

ವೀರಭಧ್ರ ದುರ್ಗಾಪರಮೇಶ್ವರಿ ದೇವಸ್ಥಾನ ಉಳ್ಳಾಲ


ಕಾಸರಗೋಡು ಜಿಲ್ಲೆಯ ದೇವಸ್ಥಾನಗಳು

ವೀರಭದ್ರ ಮಹಾಮ್ಮಾಯಿ ದೇವಸ್ಥಾನ ಬಂಗ್ರ ಮಂಜೇಶ್ವರ 

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಹೊಸದುರ್ಗ ಕಾಂಞಗಾಂಡು


ಇವಲ್ಲದೆ ಉಳಿದ ದೇವಸ್ಥಾನಗಳು

ಆದಿಶಕ್ತಿ ದುರ್ಗಾದೇವಿ ಮಹಾಮ್ಮಾಯಿ ದೇವಸ್ಥಾನ ಮಿಜಾರು ದಡ್ಡಿ

ಆದಿಶಕ್ತಿ ದುರ್ಗಾದೇವಿ ಮಹಾಮ್ಮಾಯಿ ದೇವಸ್ಥಾನ ಪಯ್ಯರಬೆಟ್ಟು 

No comments:

Post a Comment