ದುಬೈನಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಜಂಟಿಯಾಗಿ International Awards ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ಪದ್ಮಶಾಲಿ ಸಮಾಜದ ಬಹುಮುಖ ಪ್ರತಿಭೆ ಶ್ರೀ ಮಲ್ಲಯ್ಯ ಜಿ ಗುರುಬಸಪ್ಪನಮಠ ಅವರ ಸಾಧನೆಯನ್ನು ಗುರುತಿಸಿ "Dubai India International Award-2024" ಅನ್ನು ನೀಡುತಿದ್ದಾರೆ
ಗದಗ ಜಿಲ್ಲೆಯ ರೋಣ ಪಟ್ಟಣದ ಶ್ರೀ ಮಲ್ಲಯ್ಯ ಜಿ ಗುರುಬಸಪ್ಪನಮಠ ಅವರದು ಬಹುಮುಖ ಪ್ರತಿಭೆ. ಇವರು, ಕೃಷಿಕರು ಹೌದು ಹಾಗೂ ರೋಣದ ಪುರಸಭೆ ಸದಸ್ಯರು ಕೂಡ ಹೌದು. ಅವರಲ್ಲಿನ ಧಾರ್ಮಿಕ, ಸಾಂಪ್ರದಾಯಿಕ ಪದ್ಧತಿ ಹಾಗೂ ನಿಸರ್ಗದ ಬಗೆಗಿನ ಜ್ಞಾನ ಹಾಗೂ ಸಂಗ್ರಹಿಸಿದ ವಸ್ತುಗಳು ಮತ್ತು ಮಾದರಿಗಳು ನಿಜಕ್ಕೂ ಎಂಥಹವರನ್ನೂ ಅಚ್ಚರಿಗೊಳಿಸುತ್ತಿದೆ.
ಹಳೇಕೃಷಿ ಪದ್ಧತಿ ನೆನಪಿಸುವಂತಹ ನಮ್ಮ ಪಾರಂಪರಿಕ ಕೃಷಿ ಸಲಕರಣೆ, ಮನೆ ಬಳಕೆ ಸಾಮಗ್ರಿಗಳ ಮಾದರಿಗಳನ್ನು ಸಿದ್ದಪಡಿಸಿಕೊಂಡು, ವಿವಿಧ ಕೃಷಿಮೇಳಗಳಲ್ಲಿ ಪ್ರದರ್ಶನ ನೀಡುತ್ತ ಅದರ ಬಗ್ಗೆ ಹಲವಾರು ಮಾಹಿತಿಗಳನ್ನು ಜನರಿಗೆ ನೀಡುತ್ತ ಬಂದಿದ್ದಾರೆ.
ಪೂರ್ವಜನರ ಲಿಪಿ ಹೇಗೆ ಆರಂಭಗೊಂಡಿತು. ನವೀಲು ಗರಿಯಲ್ಲಿ ಋುಷಿಮುನಿಗಳು ಹೇಗೆ ಬರೆಯುತ್ತಿದ್ದರು, 500-600 ವರ್ಷಗಳ ಹಿಂದಿನ ತಾಳೆ ಗರಿಯ ಲಿಪಿ ಹೇಗೆ ಇತ್ತು. ನವೀಲು ಗರಿ ನಂತರ ಗಲಗ (ಮಸಿಯಲ್ಲಿ ಅದ್ದಿ ಬರೆಯುವುದು) ಹೇಗಿತ್ತು, ಹಿಂದಿನ ಕಾಲದಲ್ಲಿ ಕಳ್ಳಕಾಕರಿಂದ ತಮ್ಮ ಆಸ್ತಿಪತ್ರ, ಆಭರಣ, ಹಣವನ್ನು ಇಟ್ಟುಕೊಳ್ಳಲು ಗ್ರಂಥ ಮಾದರಿಯ ಆಭರಣ ಪೆಟ್ಟಿಗೆ (ಗುಪ್ತಿ) ಹೇಗೆ ಇತ್ತು ಹೀಗೆ ಹಲವಾರು ವಿಷಯಗಳ ಮಾದರಿಗಳನ್ನ ಸಿದ್ದ ಪಡಿಸಿ ಜನರಿಗೆ ಅರಿವು ನೀಡುತ್ತ ಬಂದಿದ್ದಾರೆ.
ಕೃಷಿಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಮಾತ್ರ ಜಾಗೃತಿ ಮೂಡಿಸುತ್ತಿಲ್ಲ ಮಲ್ಲಯ್ಯ, ನಮ್ಮ ಪೂರ್ವಜನರ ಜೀವನ ಶೈಲಿ, ಆಚಾರ- ವಿಚಾರ, ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆ- ಅಪನಂಬಿಕೆಗಳ ಬಗ್ಗೆ, ರುದ್ರಾಕ್ಷಿ, ಸಾಲಿಗ್ರಾಮ ಹಾಗೂ ಗಂಟೆಯ ನಾದದ ಬಗ್ಗೆಯೇ ತಿಳಿವಳಿಕೆ ನೀಡುತ್ತಿದ್ದಾರೆ. ಭೂಮಂಡಲದಲ್ಲಿ ಶಾಸ್ತ್ರೋಕ್ತವಾದ 21 ಬಗೆಯ ನಾನಾ ಮುಖಗಳ ರುದ್ರಾಕ್ಷಿಗಳಿವೆ. ಇದರಲ್ಲಿ 12ರವರೆಗೆ ಮುಖಗಳಿರುವ ರುದ್ರಾಕ್ಷಿಗಳನ್ನು ಮನುಷ್ಯ ಧರಿಸಬಹುದು, ಪೂಜಿಸಬಹುದು. ಮುಂದಿನದವು ರಾಕ್ಷಸರು ಧರಿಸಲು ಬಿಟ್ಟುಕೊಟ್ಟಿದ್ದಾರೆ ಹಿರಿಯರು. ಇವು ಹಿಮಾಲಯದಲ್ಲಿ ಮಾತ್ರ ಸಿಗಲಿದೆ. ಇನ್ನು ಯಾವುದೇ ವಿಗ್ರಹಕ್ಕೂ ಸಾಲಿಗ್ರಾಮದ ಸ್ಪರ್ಶವಿದ್ದಾಗ ಮಾತ್ರ ಅದು ಸಾರ್ಥಕ. ನಿಜವಾದ ಸಾಲಿಗ್ರಾಮದ ನೇಪಾಳದ ಗಂಡಿಕಿ ನದಿಯಲ್ಲಿ ಸಿಗಲಿದೆ. ಆದರೆ, ಇಂದು ಸಾಲಿಗ್ರಾಮ ಹಚ್ಚದ ಅಪವಿತ್ರ ಹಲವು ಮೂರ್ತಿಗಳು ತಯಾರಾಗುತ್ತಿವೆ. ಇನ್ನು ಗಂಟೆ ಓಂ ಕಾರ ನಾದ ಹುಟ್ಟಿಸಬೇಕು. ಈಗ ವ್ಯಾಪಾರಕ್ಕಾಗಿ ಸಾಧಾ ಗಂಟೆಗಳ ಮಾರಾಟವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಸಾಂಪ್ರದಾಯಿಕ ಕೃಷಿ ಬಗ್ಗೆ ಪ್ರಚಾರ ನೀಡಲು, ಹಲವಾರು ಮಾದರಿಗಳನ್ನ ಸಿದ್ದಪಡಿಸಿಟ್ಟುಕೊಂಡಿದ್ದಾರೆ. ಈ ಹಿಂದೆ ಇದ್ದ ಕಟ್ಟಿಗೆಯ ಎತ್ತಿನ ಗಾಡಿ, ನೊಗ, ರೆಂಟೆ, ಕೂರಿಗೆ ತಾಳು, ಎಡೆಕೂಟೆ, ಒಕ್ಕಲಿಗನ ಹಂತಿ, ಜತೆಗೆ ಮೇವು ಕತ್ತರಿಸುವ ಇಳಿಗೆ ಮಾತ್ರವಲ್ಲ ಮನೆಯಲ್ಲಿ ಬಳಸುತ್ತಿದ್ದ ಬೀಸುಕಲ್ಲು, ಗಡಿಗೆ, ಎತ್ತಿನ ನಾಲು, ಕೋಡಂಚು, ಚಂಡಾಳಗೊಂಬೆ, ಒಳಕಲ್ಲು ಸೇರಿದಂತೆ ನೂರಾರು ಬಗೆಯ ಕೃಷಿ ಹಾಗೂ ಮನೆಬಳಕೆಯ ವಸ್ತುಗಳ ಮಾದರಿಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಜತೆಗೆ ಇಚ್ಛೆ ಪಟ್ಟವರಿಗೆ ಯಾವುದೇ ಲಾಭ ಇಲ್ಲದೇ ಇದರಲ್ಲಿನ ಎಲ್ಲ ವಸ್ತುಗಳನ್ನು ತಯಾರಿಸಿ ಕೊಡುವುದಾಗಿ ಹೇಳುತ್ತಿದ್ದಾರೆ. ಮಾತ್ರವಲ್ಲ ರಾಜಮಹಾರಾಜರು ಆರೋಪಿಗಳನ್ನು ದಂಡಿಸಲು ಬಳಸುತ್ತಿದ್ದ ಛಾಟಿ, ಕಡ್ಡಿ ಪೊಟ್ಟಣ ಇಲ್ಲದಿದ್ದಾಗ ಬಳಕೆಗೆ ಬಂದ ಚಕಮಗಿ ಮತ್ತಿತರರ ವಸ್ತುಗಳು ಇವರ ಸಂಗ್ರಹದಲ್ಲಿವೆ
ನಾಣ್ಯ, ನೋಟುಗಳ ಸಂಗ್ರಹ:- ಮಲ್ಲಯ್ಯ ಅವರು ಮೆಹಂಜೋದಾರ, ಹರಪ್ಪ ನಾಗರಿಕತೆಯಿಂದ ಹಿಡಿದು ಇಲ್ಲಿಯವರೆಗಿನ ಸುಮಾರು 300 ಬಗೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ.
ಇವರು ಮಾಹಿತಿ ಕಣಜ ಎಂದೇ ಹೇಳಬೇಕು. ಅಪಾರ ಜ್ನಾನವನ್ನು ಸಂಪಾದಿಸಿರುವುದಲ್ಲದೆ, ಜನರಿಗೆ ಅರಿವು ಮೂಡಿಸುತ್ತ ತಮ್ಮ ಕಾಯಕದಲ್ಲಿ ಮಗ್ನರಾಗಿರುವ ಇವರಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದುಬೈ - ಇಂಡಿಯಾ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತಿದ್ದಾರೆ.
ಮಾಹಿತಿ ಕೃಪೆ:- ಮಾರುತಿಶಿವಪ್ಪ ಗರಡಿಮನಿ ರಾಣೆಬೆನ್ನೂರು ಮತ್ತು ವಿಜಯಕರ್ನಾಟಕ, ಕನ್ನಡಪ್ರಭ
No comments:
Post a Comment