Tuesday, November 8, 2022

ಪದ್ಮಶಾಲಿ ಪ್ರತಿಭೆ ಅಂತರಾಷ್ಟ್ರೀಯ ಕ್ರೀಡಾಪಟು "ಹೆಚ್.ಎಮ್.ಜ್ಯೋತಿ"

 

ಭಾರತದ ಅಥ್ಲೆಟಿಕ್ಸ್‌ ಕ್ರೀಡಾ ಲೋಕದಲ್ಲಿ ನಮ್ಮ ಪದ್ಮಶಾಲಿ ಸಮಾಜದ ಹೆಮ್ಮೆಯ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಎಚ್‌.ಎಂ.ಜ್ಯೋತಿ ಯವರ ಸಾಧನೆ ಗಮನಾರ್ಹವಾದುದು.  ಇವರು ಹುಟ್ಟಿ ಬೆಳೆದಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ, ಶ್ರೀ ಮಂಜುನಾಥ್‌ ಮತ್ತು ಶ್ರೀಮತಿ ತಿಪ್ಪಮ್ಮ ದಂಪತಿಗಳ  ಪುತ್ರಿ. ತಂದೆ ಕೃಷಿಕರು, ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಜ್ಯೋತಿಯವರ ಸಾಧನೆ ಅಪಾರ ಮತ್ತು ಇತರರಿಗೂ ಮಾದರಿ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಲವಾರು ಟೂರ್ನಿಗಳಲ್ಲಿ ಜಯಗಳಿಸಿ ಹಲವು ಪದಕಗಳನ್ನ ಗಳಿಸಿದ್ದಾರೆ.

ಬಹಳ ಮುಖ್ಯವಾಗಿ 2005 ರ ಏಶಿಯನ್ ಟ್ರಾಕ್ ಮತ್ತು ಫೀಲ್ಡ್ ನಲ್ಲಿ ಚಿನ್ನದ ಪದಕ, 2009 ರ ಏಶಿಯನ್ ಗೇಮ್ಸ್ ಕಂಚಿನ ಪದಕ, ಏಶಿಯನ್ ಆಲ್ ಸ್ಟಾರ್ಸ್ ನಲ್ಲಿ ಚಿನ್ನದ ಪದಕ ಮತ್ತು 2010ರಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕಗಳಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ. ಇವರು, 100, 200, 400 ಮೀಟರ್ಸ್‌ ಓಟ ಮತ್ತು 4 x100 ಮೀಟರ್ಸ್‌ ರಿಲೇಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿರುವ ಕೀರ್ತಿಗೂ ಭಾಜನರಾಗಿದ್ದಾರೆ. 100 ಮತ್ತು 200 ಮೀಟರ್ಸ್‌ ಓಟಗಳಲ್ಲಿ ಕ್ರಮವಾಗಿ 11.30 ಹಾಗೂ 23.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕರ್ನಾಟಕದ ಮಟ್ಟಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. 2016ರ ಬೆಸ್ಟ್‌ ಅಥ್ಲೀಟ್‌ ಪ್ರಶಸ್ತಿಯೂ ದೊರೆತಿದೆ. ಭಾರತದ ವೇಗದ ಮಹಿಳೆ ಎಂಬ ಬಿರುದು ಕೂಡ ಜ್ಯೋತಿಯವರಿಗಿದೆ.

ಜ್ಯೋತಿಯವರು ಚಿಕ್ಕವರಿದ್ದಾಗ ಅವರ ಅಕ್ಕ ಸರಿತಾ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆಗ ಅವರಿಗೆ ಸಾಕಷ್ಟು ಬಹುಮಾನಗಳು ದೊರೆಯುತಿದ್ದದನ್ನು ಕಂಡು, ಇವರಲ್ಲೂ ಸಹ ಅಕ್ಕನ ಹಾಗೆ ಬಹುಮಾನ ಗೆಲ್ಲಬೇಕೆಂಬ ಆಸೆ ಚಿಗುರೊಡೆದಿತ್ತು. ಒಮ್ಮೆ ಅವರು ಅಕ್ಕನ ಜತೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅಕ್ಕನನ್ನೇ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಅಲ್ಲಿ ಅವರ ಸಾಮರ್ಥ್ಯ ಕಂಡು ಬಹಳಷ್ಟು ಜನ ಪ್ರಶಂಸೆಯ ಮಾತುಗಳನ್ನಾಡಿದ್ದರು. ಅವರ ಮೆಚ್ಚುಗೆಯೇ ಜೀವನದ ಮುಂದಿನ ಗುರಿಗೆ ಸ್ಫೂರ್ತಿಯಾಯಿತು. 8ನೇ ತರಗತಿಗೆ ಮನೆಯವರು ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಹಾಸ್ಟೆಲ್‌ಗೆ ಸೇರಿಸಿದರು. ಅಲ್ಲಿಂದ ಕ್ರೀಡಾ ಬದುಕಿನ ಪಯಣ ಆರಂಭವಾಯಿತು.

ಕ್ರೀಡಾ ನಿಲಯದಲ್ಲಿದ್ದ ಮಂಜುನಾಥ್‌ ಎನ್ನುವ ಕೋಚ್‌  ಅವರು ಜ್ಯೋತಿಯವರ ಪ್ರತಿಭೆಗೆ ಸಾಣೆ ಹಿಡಿದವರು. ಬಳಿಕ ರವಿ ಅವರೂ ಕೂಡಾ ಹಲವು ಕೌಶಲ್ಯಗಳನ್ನು ಹೇಳಿಕೊಟ್ಟಿದ್ದರು. ಹೀಗೆ ಎಲ್ಲರ ಮಾರ್ಗದರ್ಶನ ದಲ್ಲಿ ಓಟದಲ್ಲಿ ನೈಪುಣ್ಯತೆಯನ್ನ ಸಂಪಾದಿಸಿ ಜೂನಿಯರ್‌ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿದರು. ಕ್ರಮೇಣ ಇವರು ಸೀನಿಯರ್‌ ತಂಡದ ತರಬೇತಿ ಶಿಬಿರಕ್ಕೂ ಆಯ್ಕೆಯಾದರು. 2004ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ ನ 4‌‍X400 ಮೀಟರ್ಸ್‌ ರಿಲೇಯಲ್ಲಿ ಭಾಗವಹಿಸಿ ಚಿನ್ನ ಗೆದ್ದರು. ಅಲ್ಲಿಂದ ಅವರ ಕ್ರೀಡಾ ಬದುಕಿಗೆ ಹೊಸ ತಿರುವು ಸಿಕ್ಕಿತು. ಶಾಲಾ ದಿನಗಳಲ್ಲಿ ಟ್ರಿಪಲ್‌ ಜಂಪ್‌ ಸೇರಿದಂತೆ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದರು. ತುಂಬಾ ಚೆನ್ನಾಗಿ ಓಡುತ್ತಿದ್ದುದರಿಂದ ಇದರಲ್ಲಿಯೇ ಮುಂದುವರಿಯುವಂತೆ ಕೋಚ್‌ಗಳು ಸಲಹೆ ನೀಡಿದ್ದರು. ಹೀಗಾಗಿ ಓಟದಲ್ಲಿ ಗಮನ ಕೇಂದ್ರೀಕರಿಸಿದರು. “100, 200, 400 ಮತ್ತು 4x100 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ. ನಾಲ್ಕೂ ಸ್ಪರ್ಧೆಗಳಲ್ಲೂ ಕಣಕ್ಕಿಳಿಯುವುದು ಆರಂಭದಲ್ಲಿ ತುಂಬಾ ಕಷ್ಟ ಅನಿಸುತ್ತಿತ್ತು ಆದರೆ ಸಾಧನೆಯ ಹಸಿವು ಬಡಿದೆಬ್ಬಿಸುತಿದ್ದರಿಂದ ಕ್ರಮೇಣ ಕಠಿಣ ತಾಲೀಮು ನಡೆಸುವುದಕ್ಕೆ ಒತ್ತು ನೀಡಿದೆ. ಈಗ ಯಾವುದೂ ಸವಾಲು ಅನಿಸುವುದೇ ಇಲ್ಲ. 100 ಮೀಟರ್ಸ್‌ ಓಟ ನನ್ನ ಅಚ್ಚುಮೆಚ್ಚಿನ ವಿಭಾಗ. ಜೊತೆಗೆ ಅಷ್ಟೇ ಭಯ ಕೂಡ. ಬೇರೆ ವಿಭಾಗಗಳಲ್ಲಾದರೆ ಸ್ವಲ್ಪ ಯೋಚಿಸುವುದಕ್ಕಾದರೂ ಸಮಯ ಇರುತ್ತೆ. ಆದರೆ 100 ಮೀಟರ್ಸ್‌ನಲ್ಲಿ ಹಾಗಲ್ಲ. ಈ ವಿಭಾಗದಲ್ಲಿ ಓಡಲು ಗಂಡೆದೆ ಬೇಕು. ಆ ಕ್ಷಣದಲ್ಲಿ ಕ್ಷಿಪ್ರಗತಿಯಲ್ಲಿ ಓಡಿದರಷ್ಟೇ ಪದಕ ಗೆಲ್ಲಲಾಗುತ್ತದೆ.” ಎನ್ನುತ್ತಾರೆ ಜ್ಯೋತಿ.

ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹಾಗೂ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಕಿರಿಯರ ಹಾಗೂ ಹಿರಿಯರ ಅಂತರ್‌ ಜಿಲ್ಲಾ ಅಥ್ಲೆಟಿಕ್‌ ಕ್ರೀಡಾಕೂಟ ಬಾಗಲಕೋಟೆಯಲ್ಲಿ ನಡೆದಿತ್ತು. ಆ ಕ್ರೀಡಾಕೂಟದಲ್ಲಿ ಕಿರಿಯರನ್ನು ಹುರಿದುಂಬಿಸುವುದಕ್ಕಾಗಿ ಆಗ ಪಾಟಿಯಾಲಾದಿಂದ ಮಗಳು ಧೃತಿಯೊಂದಿಗೆ ಆಗಮಿಸಿದ್ದ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿ 100 ಮೀ. ಓಟದಲ್ಲಿ ನಿರೀಕ್ಷೆಯಂತೆ ಚಿನ್ನ ಗೆದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಮಕ್ಕಳಾದ ಮೇಲೆ ಕ್ರೀಡಾಪಟುಗಳು ಸಾಧನೆ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ನನಗೆ ಮಗಳು ಜನಿಸಿದ ನಂತರ ಎರಡು ಪದಕ ಗೆದ್ದಿದ್ದೇನೆ. ಸದ್ಯ ಏಶಿಯನ್‌ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌, ಏಶಿಯನ್‌ ಗೇಮ್ಸ್‌ಗಾಗಿ ಸಜ್ಜಾಗುತ್ತಿದ್ದೇನೆ. ನಮ್ಮಲ್ಲಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ‌ವಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ' ಎಂದರು

ತಂದೆ ಶ್ರೀ ಮಂಜುನಾಥ್‌ ಮತ್ತು ತಾಯಿ ತಿಪ್ಪಮ್ಮ ಅವರ ಬೆಂಬಲದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಇವತ್ತು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇನೆ. ಅವರಿಗೆ ಮಗಳು ದೊಡ್ಡ ಸಾಧನೆ ಮಾಡಬೇಕೆಂಬ ಹಂಬಲ ಇತ್ತು, ಎನ್ನುತ್ತಾರೆ ಜ್ಯೋತಿ. ಪತಿ ಶ್ರೀನಿವಾಸ್‌ ಸಹ ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತ. ಮಾಜಿ ರಾಷ್ಟ್ರೀಯ ಚಾಂಪಿಯನ್! ರಿಲೇ ರಾಷ್ಟ್ರೀಯ ದಾಖಲೆ ಹೊಂದಿದವರು. ಅವರು ಅಥ್ಲೆಟಿಕ್-ಓಟದ ಕೋಚ್‌ ಆಗಿ ಪತ್ನಿಯನ್ನು ಬೆಂಬಲಿಸಿದ್ದಾರೆ. ದಂಪತಿಗೆ ಒಂದು ಚಿಕ್ಕ ಮಗಳಿದ್ದಾಳೆ, ಜ್ಯೋತಿಯವರ ಕ್ರೀಡಾ ಸಾಧನೆಯಸಮಯದಲ್ಲಿ, ಪತ್ನಿಗೆ ಬೆಂಬಲವಾಗಿ ನಿಂತು ಮಗಳನ್ನ ನೋಡಿಕೊಂಡಿದ್ದಾರೆ.  ಸದ್ಯ ಜ್ಯೋತಿಯವರು ಕೆನರಾ ಬ್ಯಾಂಕ್‌ ನಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕ್ರೀಡೆಯಿಂದ ನೀವು ಕಲಿತ ಪಾಠ ಏನು ಎಂದು ಕೇಳಿದರೆ,  ಎಂತಹ ಕಠಿಣ ಸ್ಪರ್ಧೆಯಿದ್ದರೂ ಎಲ್ಲಾ ಸಮಯದಲ್ಲೂ ಧನಾತ್ಮಕವಾಗಿರಬೇಕು,  ಏಕಾಗ್ರತೆ, ಬದ್ಧತೆ, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನ ಕಲಿತಿದ್ದೇನೆ ಎನ್ನುತ್ತಾರೆ.  ಅಕ್ಷರಶಃ ಈ ಮಾತುಗಳು ನಿಜ, ಈ ಮಾತುಗಳು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗುವಂತಹದ್ದು.

















#H.M.Jyothi #Jyothi.H.M #ಹೆಚ್.ಎಮ್.ಜ್ಯೋತಿ #ಜ್ಯೋತಿ #padmashali #jyothisrinivas #Karnataka_Padmashali_Samaja





No comments:

Post a Comment