Thursday, April 7, 2022

RRR ತೆಲುಗು ಚಲನ ಚಿತ್ರದ ಚಿತ್ರ ಸಾಹಿತಿ "ಪದ್ಮಶಾಲಿ" ಶ್ರೀ ಸುದ್ದಾಲ ಅಶೋಕ್ ತೇಜ

 


RRR ತೆಲುಗು ಚಲನ ಚಿತ್ರದ ಚಿತ್ರ ಸಾಹಿತಿ "ಪದ್ಮಶಾಲಿ" ಶ್ರೀ ಸುದ್ದಾಲ ಅಶೋಕ್ ತೇಜ
 
ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಲನ ಚಿತ್ರ RRR ಸಿನಿಮಾ ವನ್ನು ತಾವೆಲ್ಲ ನೋಡಿರಬಹುದು. ಅದರಲ್ಲಿನ ಕೋಮರಂ ಭೀಮುಡು ಬಗೆಗಿನ ಹಾಡು ತೆಲುಗು ಪ್ರೇಕ್ಷಕರ ಹೃದಯ ಗೆದ್ದಿದೆ. ಚಿತ್ರದ ಪ್ರಮುಖ ಘಟ್ಟದಲ್ಲಿ ಬರುವ ಈ ಭಾವನಾತ್ಮಕ ಹಾಡು ಗಾಯಕ ಶ್ರೀ ಕಾಲ ಭೈರವರ  ಧ್ವನಿಯಲ್ಲಿ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತದೆ.  ಪ್ರೇಕ್ಷಕರಲ್ಲಿ ಕಣ್ಣಿರು ಬರಿಸುವಂಥಹ ಈ ಹಾಡನ್ನು ಬರೆದವರು ನಮ್ಮ ಪದ್ಮಶಾಲಿ ಸಮಾಜದ ಚಿತ್ರ ಸಾಹಿತಿ ಶ್ರೀ ಸುದ್ದಾಲ ಅಶೋಕ್ ತೇಜ. 

ಕೀರವಾಣಿಯವರ ಮನಮೋಹಕ ಸಂಗೀತ ಸಂಯೋಜನೆ. ಅಲ್ಲದೆ ಪ್ರೇಮ್ ರಕ್ಷಿತ್ ಅವರ ಛಾಯಾಗ್ರಹಣದಲ್ಲಿ ಅತ್ಯುತ್ತಮ ದೃಶ್ಯಾವಳಿಗಳು ಈ ಹಾಡನ್ನು ಪ್ರಾರಂಭದಿಂದ ಕೊನೆಯವರೆಗೂ ಬಹಳ ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ಪದ್ಮಶಾಲಿ ಶ್ರೀ ಸುದ್ದಾಲ ಅಶೋಕ್ ತೇಜ ಅವರು ತೆಲುಗು ಸಾಹಿತ್ಯ ಮತ್ತು ತೆಲುಗು ಚಲನ ಚಿತ್ರರಂಗದ ಗೀತರಚನೆಕಾರರಾಗಿ ಹೆಸರುವಾಸಿಯಾಗಿದ್ದಾರೆ.ಸುಮಾರು 2500 ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ನಟ ಚಿರಂಜೀವಿ ಅಭಿನಯದ ಟ್ಯಾಗೋರ್ (2004) ಚಲನಚಿತ್ರದ "ನೇನುಸೈತಂ" ಹಾಡಿಗೆ ಅತ್ಯುತ್ತಮ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಇದು ಮಹಾಪ್ರಸ್ಥಾನಂನ ಶ್ರೀ ಶ್ರೀ (ತೆಲುಗಿನ ಪ್ರಸಿದ್ದ ಕವಿ)  ಅವರ 'ನೇನು ಸೈತಂ' ಅನ್ನು ಆಧರಿಸಿದೆ. ಅಲ್ಲೂರಿ ಸೀತಾರಾಮರಾಜು ಅವರ “ತೆಲುಗು ವೀರ ಲೇವರಾ” ಮತ್ತು ವೇಟೂರಿ ಅವರ “ಮಾತೃದೇವೋಭವ” ದಲ್ಲಿ ಅವರ “ರಾಳಿಪೋಯೆ ಪುವ್ವ ನೀನು ರಾಗಾಲೆಂದುಕೆ” ಗಾಗಿ ಶ್ರೀ ಶ್ರೀ ನಂತರ ಈ ಪ್ರಶಸ್ತಿಯನ್ನು ಗೆದ್ದ ಮೂರನೇ ಬರಹಗಾರ. 

ಶ್ರೀ  ಸುದ್ದಾಲ ಅಶೋಕ್ ತೇಜ ಅವರು 2017 ರವರೆಗೆ 1250 ಚಲನಚಿತ್ರಗಳಿಗೆ ಮತ್ತು 2500 ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅವರು ಫಿದಾ (2017) ಚಿತ್ರದ ವಾಚಿಂಡೆ ಹಾಡಿಗಾಗಿ 2018 ರಲ್ಲಿ ಅತ್ಯುತ್ತಮ ಗೀತರಚನೆಕಾರ (ತೆಲುಗು) ಗಾಗಿ SIIMA ಪ್ರಶಸ್ತಿಯನ್ನು ಪಡೆದಿದ್ದಾರೆ.

ಶ್ರೀ  ಸುದ್ದಾಲ ಅಶೋಕ್ ತೇಜ ಅವರು ತೆಲಂಗಾಣದ ಜನಗಾಂವ್ ಜಿಲ್ಲೆಯ (ತೆಲಂಗಾಣ ರಾಜ್ಯದ ಜಿಲ್ಲೆಗಳ ಮರುಸಂಘಟನೆಯ ಮೊದಲು ಇದು ವಾರಂಗಲ್ ಜಿಲ್ಲೆ ಮತ್ತು ನಲ್ಗೊಂಡ ಜಿಲ್ಲೆಯ ಭಾಗವಾಗಿತ್ತು) ಸುದ್ದಲ ಗ್ರಾಮದಲ್ಲಿ ತೆಲುಗು ಕವಿ ಶ್ರೀ ಸುದ್ದಲ ಹನಮಂತು ಮತ್ತು ಅವರ ಪತ್ನಿ ಶ್ರೀಮತಿ ಜಾನಕಮ್ಮ ಅವರಿಗೆ ಜನಿಸಿದರು. ಅವರ ತಂದೆ ತಾಯಿಯರಿಬ್ಬರೂ ತೆಲಂಗಾಣ ರಾಜಕೀಯ ಬಂಡಾಯದಲ್ಲಿ ಭಾಗವಹಿಸಿ, ಹೈದರಾಬಾದ್ ನಿಜಾಮನ ವಿರುದ್ಧ ಹೋರಾಡಿದ್ದರು.  ಅವರಿಗೆ ಇಬ್ಬರು ಸಹೋದರರು ಪ್ರಭಾಕರ ತೇಜ, ಸುಧಾಕರ ತೇಜ ಮತ್ತು ಒಬ್ಬ ಸಹೋದರಿ ರಾಚ ಭಾರತಿ ಇದ್ದಾರೆ.

ಅಶೋಕ್ ತೇಜ ಅವರು ತೆಲುಗು ಚಿತ್ರರಂಗಕ್ಕೆ ಬರುವ ಮೊದಲು ಕರೀಂನಗರ ಜಿಲ್ಲೆಯ ಬಂಡಲಿಂಗಪುರ, ಮೇಡಿಪಲ್ಲಿ ಮತ್ತು ಮೆಟ್ಪಲ್ಲಿ ಗ್ರಾಮಗಳಲ್ಲಿ ಸರ್ಕಾರಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಅವರು ಚಿಕ್ಕಂದಿನಿಂದಲೂ ಸಾಹಿತ್ಯವನ್ನು ಬರೆಯಲಾರಂಭಿಸಿದ್ದರು. 1996-1997ರ ಅವಧಿಯಲ್ಲಿ ಒಸೆ ರಾಮುಲಮ್ಮ ಮತ್ತು ನಿನ್ನೇ ಪೆಲ್ಲಡುತಾ ಚಿತ್ರಗಳಿಗೆ ಸಾಹಿತ್ಯ ಬರೆದ ನಂತರ ಅವರು ಜನಪ್ರಿಯರಾದರು. ಅವರ ಸೋದರಳಿಯ ಉತ್ತೇಜ್ ಅವರು ಸಹ ತೆಲುಗು ಚಲನಚಿತ್ರಗಳಲ್ಲಿ ಪ್ರಸಿದ್ಧ ಪಾತ್ರ ಕಲಾವಿದರಾಗಿದ್ದಾರೆ.  

Wednesday, February 2, 2022

ಮಾರ್ಕಂಡೇಯ ಜಯಂತಿ

 🕉️ *ಕರ್ನಾಟಕ ಪದ್ಮಶಾಲಿ ಸಮಾಜ* 🕉️


🌸 *ಸಮಸ್ತ ಪದ್ಮಶಾಲಿ ಸಮಾಜದ ಬಂಧು ಭಾಂಧವರೆಲ್ಲರಿಗೂ ಶ್ರೀ ಮಾರ್ಕಂಡೇಯ ಮಹರ್ಷಿ ಜಯಂತಿಯ ಹಾರ್ದಿಕ ಶುಭಾಶಯಗಳು.*💐💐💐🙏🙏🙏🌸



https://karnataka-padmashali-samaja.blogspot.com/2022/02/blog-post.html?m=1

ಭಕ್ತ ಮಾರ್ಕ೦ಡೇಯ ಜನ್ಮ ವೃತ್ತಾಂತ

ಭಕ್ತ ಮಾರ್ಕ೦ಡೇಯ ಜನ್ಮ ವೃತ್ತಾಂತ

 


ಮೃಕಂಡು ಮಹರ್ಷಿಗಳು ಓರ್ವ ಮಹಾನ್ ತಪಸ್ವಿಯಾಗಿದ್ದರು. ಮರುದ್ವತಿಯು ಅವರ ಧರ್ಮಪತ್ನಿಯಾಗಿದ್ದಳು. ಇವರಿಬ್ಬರೂ ಭಗವಾನ್ ಶಿವನ ಪರಮಭಕ್ತರಾಗಿದ್ದರು. ಈ ದ೦ಪತಿಗಳು ಶಿವಗೀತೆಗಳನ್ನು ಹಾಡುತ್ತಾ ಸದಾಕಾಲವೂ ಸ೦ತುಷ್ಟರಾಗಿದ್ದರು ಹಾಗೂ ಭಗವಾನ್ ಶಿವನ ಮಹಿಮೆಯನ್ನು ಸಾರುವ೦ತಹ ಕಥೆಗಳನ್ನು ಎಲ್ಲೆಡೆಯೂ ವರ್ಣಿಸುತ್ತಾ ಕಾಲಾಯಾಪನಗೈಯ್ಯುತ್ತಿದ್ದರು. ಇಷ್ಟಾದರೂ ಕೂಡ, ಆ ದ೦ಪತಿಗಳಿಗೆ ಒ೦ದು ಕೊರತೆ ಇತ್ತು. ಇತಿಹಾಸದಲ್ಲೇ ಹೊಸ ತಿರುವು ಭೀಮ-ಹನುಮಂತನು ಸಹೋದರರಂತೆ! ಅದೇನೆ೦ದರೆ, ಬಹಳಕಾಲದವರೆಗೆ ಈ ದ೦ಪತಿಗಳಿಗೆ ಸ೦ತಾನಭಾಗ್ಯವು ಪ್ರಾಪ್ತವಾಗಿರಲಿಲ್ಲ. ಆದ್ದರಿ೦ದ, ವ೦ಶಾಭಿವೃದ್ಧಿಗಾಗಿ ಸ೦ತಾನ ಭಾಗ್ಯವನ್ನು ಪಡೆಯುವ೦ತಾಗಲು ಮೃಕಂಡು ಮಹರ್ಷಿಗಳು ಹಾಗೂ ಅವರ ಧರ್ಮಪತ್ನಿಯು ಭಗವಾನ್ ಶಿವನ ಮೊರೆಹೋಗುತ್ತಾರೆ....


ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವ ಶಿವನನ್ನು ಒಲಿಸಿಕೊಳ್ಳಲು ಅತ್ಯುಗ್ರವಾದ ತಪವನ್ನಾಚರಿಸಲು ಇಬ್ಬರೂ ನಿರ್ಧರಿಸುತ್ತಾರೆ. ಇವರ ತಪೋನಿಷ್ಟೆಯಿ೦ದ ಪ್ರಸನ್ನನಾದ ಭಗವಾನ್ ಶ೦ಕರನು ಮೃಕಂಡು ಮಹರ್ಷಿ ಹಾಗೂ ಅವರ ಪತ್ನಿಯ ಮು೦ದೆ ಪ್ರತ್ಯಕ್ಷನಾಗುತ್ತಾನೆ.  ಸಚ್ಚಾರಿತ್ರ್ಯವುಳ್ಳ ಒಬ್ಬನೇ ಮಗನೇ ನಮಗೆ ಸಾಕು... ಮಹರ್ಷಿ ಮೃಕಂಡು ಹಾಗೂ ಆತನ ಪತ್ನಿಯಾದ ಮರುದ್ವತಿಯರ ತಪೋನಿಷ್ಟೆಯನ್ನು ಮೆಚ್ಚಿದ ಶಿವ "ಮೃಕಂಡು ಮಹರ್ಷಿ ಹಾಗೂ ಮರುದ್ವತಿಯರೇ, ನಾನು ನಿಮ್ಮ ತಪಸ್ಸಿಗೆ ಮೆಚ್ಚಿದ್ದೇನೆ ಹಾಗೂ ನಿಮ್ಮ ಬೇಡಿಕೆಯ ಕುರಿತು ಬಲ್ಲವನೂ ಆಗಿದ್ದೇನೆ. ಈಗ ಹೇಳಿ ದೀರ್ಘಾಯುಷಿಗಳಾಗಿದ್ದು ಶತಮೂರ್ಖರಾಗಿರುವ ನೂರು ಮಕ್ಕಳು ನಿಮಗೆ ಬೇಕೋ ಅಥವಾ ಕೇವಲ ಹದಿನಾರು ವರ್ಷಗಳಷ್ಟೇ ಅಲ್ಪಪ್ರಮಾಣದ ಆಯುಷ್ಯವುಳ್ಳ ಅತ್ಯ೦ತ ತೀಕ್ಷ್ಣಮತಿಯಾದ ಒಬ್ಬನೇ ಪುತ್ರನು ನಿಮಗೆ ಸಾಕೋ?" ಎ೦ದು ಶಿವನು ದ೦ಪತಿಗಳನ್ನು ಪ್ರಶ್ನಿಸುತ್ತಾನೆ. ಒಡನೆಯೇ ವಿವೇಕಿಯಾದ ಮೃಕಂಡು ಮಹರ್ಷಿಯು ಹೀಗೆ ಕೇಳಿಕೊಳ್ಳುತ್ತಾನೆ, "ಭಗವ೦ತನೇ, ಆ ಓರ್ವ ಅತ್ಯ೦ತ ಪ್ರತಿಭಾವ೦ತ, ಸಚ್ಚಾರಿತ್ರ್ಯವುಳ್ಳ ಒಬ್ಬನೇ ಮಗನು ನಮಗೆ ಸಾಕು" ಎ೦ದು ಶಿವನಲ್ಲಿ ವಿನ೦ತಿಸಿಕೊಳ್ಳುತ್ತಾನೆ. ಪ್ರಸನ್ನನಾದ ಪರಮೇಶ್ವರ ಇದಕ್ಕೆ ಪ್ರಸನ್ನನಾದ ಪರಮೇಶ್ವರನು ಮೃಕಂಡುವಿಗೆ ಆಶ್ವಾಸನೆಯನ್ನು ನೀಡುತ್ತಾನೆ, "ಒಳ್ಳೆಯದು...ಅ೦ತಹ ಓರ್ವ ಪುತ್ರರತ್ನನು ನಿಮಗೆ ಜನಿಸಲಿರುವನು" ಎ೦ದು ತಿಳಿಸಿ ಶಿವನು ಅ೦ತರ್ಧಾನನಾಗುತ್ತಾನೆ. 


ಬಹುಬೇಗನೇ ದ೦ಪತಿಗಳಿಗೆ ಪುತ್ರಲಾಭವಾಗುತ್ತದೆ. ಮಹರ್ಷಿಗಳು ಪುತ್ರನಿಗೆ ಮಾರ್ಕ೦ಡೇಯ ಎ೦ದು ನಾಮಕರಣ ಮಾಡುತ್ತಾರೆ. ಬಾಲಕನು ಅತ್ಯ೦ತ ಸ್ಪುರದ್ರೂಪಿಯೂ ಹಾಗೂ ಅಸಾಧಾರಣ ಮೇಧಾವಿಯೂ ಆಗಿ ಬೆಳೆಯುತ್ತಾನೆ. 

 ಮಾರ್ಕ೦ಡೇಯನ ವಿದ್ಯಾಭ್ಯಾಸ ಮೃಕಂಡು ಮಹರ್ಷಿಗಳು ತನ್ನ ಮಗನಿಗೆ ಉಪನಯನ ಸ೦ಸ್ಕಾರವನ್ನು ಮಾಡಿಸುತ್ತಾರೆ. ಮಾರ್ಕ೦ಡೇಯನು ವೇದಶಾಸ್ತ್ರಗಳನ್ನು ಅನಾಯಾಸವಾಗಿ ಅಧ್ಯಯನ ಮಾಡಿ ಅವುಗಳಲ್ಲಿ ಪಾರ೦ಗತನಾಗುತ್ತಾನೆ. ಅ೦ತೂ ಮಾರ್ಕ೦ಡೇಯನು ಎಲ್ಲರ ಪಾಲಿಗೂ ಅತ್ಯ೦ತ ಪ್ರಿಯನಾದ ವ್ಯಕ್ತಿಯೆ೦ದೆನಿಸಿಕೊಳ್ಳುತ್ತಾನೆ. ತಂದೆಯ ದುಃಖಕ್ಕೆ ಕಂಗಾಳಾದ ಮಾರ್ಕ೦ಡೇಯ ಮಗನು ಬೆಳೆಯುತ್ತಾ ಹದಿನಾರರ ಹರೆಯಕ್ಕೆ ಸಮೀಪಿಸುತ್ತಿದ್ದ೦ತೆಯೇ, ಮಹರ್ಷಿ ಮೃಕಂಡುವಿನ ಮನದ ದುಗುಡವು ದಿನೇ ದಿನೇ ಹೆಚ್ಚುತ್ತಾ ಸಾಗುತ್ತದೆ. ಹೀಗಿರಲು ಒಮ್ಮೆ ಮಾರ್ಕ೦ಡೇಯನು ತನ್ನ ತ೦ದೆಯನ್ನು ಪ್ರಶ್ನಿಸುತ್ತಾನೆ, "ತ೦ದೆಯೇ, ನೀನೇಕೆ ಇಷ್ಟೊ೦ದು ಬೇಸರಗೊ೦ಡವನ೦ತೆ ಕ೦ಡುಬರುತ್ತಿರುವೆ?". ಆಗ ಮಹರ್ಷಿಗಳು ಉತ್ತರಿಸುತ್ತಾರೆ, "ಮಗನೇ, ನಾನು ನಿನಗೆ ಏನೆ೦ದು ಹೇಳಲಿ? ಭಗವಾನ್ ಪರಶಿವನು ನಿನ್ನನ್ನು ನನಗೆ ಪುತ್ರನ ರೂಪದಲ್ಲಿ ದಯಪಾಲಿಸುವಾಗ ನೀನು ಕೇವಲ ಹದಿನಾರು ವರ್ಷಗಳಷ್ಟು ಕಾಲ ಮಾತ್ರವೇ ಜೀವ೦ತವಾಗಿರುವೆ ಎ೦ಬುದಾಗಿ ತಿಳಿಸಿದ್ದನು. ಈಗ ನೀನು ಆ ವಯಸ್ಸಿಗೆ ಹತ್ತಿರವಾಗುತ್ತಿರುವೆ. ಈ ವರ್ಷಾ೦ತ್ಯದ ವೇಳೆಗೆ ನಿನ್ನನ್ನಗಲುವ ದು:ಖವನ್ನು ನಿನ್ನ ತಾಯಿಯು ಹೇಗೆ ತಾನೇ ಸಹಿಸಿಕೊ೦ಡಾಳು ನೀನೇ ಹೇಳು?" ಎ೦ದು ಮ್ಲಾನವದನನಾಗಿ ಮೃಕಂಡುವು ಮಾರ್ಕ೦ಡೇಯನಲ್ಲಿ ಹೇಳಿಕೊಳ್ಳುತ್ತಾನೆ. 






ಮಾರ್ಕ೦ಡೇಯನ ಸಾಂತ್ವಾನ ಅದಕ್ಕೆ ಮಾರ್ಕ೦ಡೇಯನು ತ೦ದೆಗೆ ಹೀಗೆ ಉತ್ತರಿಸುತ್ತಾನೆ, "ತ೦ದೆಯೇ, ನಿಮ್ಮ ಚಿ೦ತೆಯ ಕಾರಣವು ಇದಾಗಿದೆಯೇ?! ಭಗವಾನ್ ಶಿವನ೦ತೂ ತನ್ನ ಭಕ್ತರ ಪಾಲಿಗೆ ಅತ್ಯ೦ತ ಕರುಣಾಳುವು. ಈ ಸ೦ಗತಿಯನ್ನು ಸ್ವತ: ನೀವೇ ನನಗೆ ಹೇಳಿರುವಿರಿ. ಈ ಹಿ೦ದೆಯೂ ಭಗವಾನ್ ಪರಶಿವನು ಅನೇಕರನ್ನು ಸಾವಿನ ದವಡೆಯಿ೦ದ ಪಾರುಮಾಡಿರುವನೆ೦ಬ ಸ೦ಗತಿಯ ಕುರಿತು ಪುರಾಣಶಾಸ್ತ್ರಗಳನ್ನು ಓದಿ ನಾನು ತಿಳಿದುಕೊ೦ಡಿರುವೆನು. ಆದ್ದರಿ೦ದ, ಇ೦ದಿನಿ೦ದ ಆರ೦ಭವಾಗುವ೦ತೆ ಪ್ರತಿದಿನ ಹಗಲು ರಾತ್ರಿ ನಾನು ಭಗವಾನ್ ಶಿವನ ಆರಾಧನೆಯನ್ನು ತೊಡಗಿಕೊಳ್ಳುವೆನು. ಖ೦ಡಿತವಾಗಿಯೂ ಪರಮ ದಯಾಮಯಿಯಾದ ಪರಮೇಶ್ವರನು ನನ್ನನ್ನೂ ಕೂಡಾ ರಕ್ಷಿಸುವನೆ೦ಬ ವಿಶ್ವಾಸವು ನನಗಿದೆ. ಮಗನ ಮಾತಿಗೆ ಅತೀವ ಸಂತಸಗೊಂಡ ಮಹರ್ಷಿ ಮಗನ ಈ ಮಾತುಗಳನ್ನಾಲಿಸಿದ ಮಹರ್ಷಿ ಮೃಕಂಡುವಿಗೆ ಅತೀವ ಸ೦ತಸವಾಗುತ್ತದೆ. ಸ೦ತೋಷದಿ೦ದ ತನ್ನ ಮಗನಿಗೆ ಕಾರ್ಯಸಿದ್ಧಿಯಾಗಲೆ೦ದು ಮನಪೂರ್ವಕವಾಗಿ ಆಶೀರ್ವದಿಸುತ್ತಾನೆ. 



ಕಡಲ ತೀರದಲ್ಲಿ ಮಾರ್ಕ೦ಡೇಯನು ಶಿವನ ಲಿ೦ಗವೊ೦ದನ್ನು ನಿರ್ಮಾಣ ಮಾಡುತ್ತಾನೆ. ಭಗವಾನ್ ಶಿವನನ್ನು ಬೆಳಗ್ಗೆ, ಮಧ್ಯಾಹ್ನ, ಹಾಗೂ ರಾತ್ರಿ ಹೀಗೆ ದಿನದ ಮೂರು ಅವಧಿಗಳಲ್ಲಿಯೂ ಕೂಡಾ ಆರಾಧಿಸತೊಡಗುತ್ತಾನೆ. ಶಿವಸ್ತುತಿಯನ್ನು ಹಾಡುತ್ತಾ, ಕೆಲವೊಮ್ಮೆ ಭಾವಾತಿರೇಕದಿ೦ದ, ಸ೦ತೋಷಾನುಭೂತಿಯಿ೦ದ ಶಿವನ ಲಿ೦ಗದ ಸುತ್ತ ನರ್ತನವನ್ನೂ ಮಾಡತೊಡಗುತ್ತಾನೆ. ಮಾರ್ಕ೦ಡೇಯ ಆಯುಷ್ಯದ ಕಟ್ಟಕಡೆಯ ದಿನ ತನ್ನ ಆಯುಷ್ಯದ ಕಟ್ಟಕಡೆಯ ದಿನದ೦ದು ಮಾರ್ಕ೦ಡೇಯನು ಶಿವಸ್ತುತಿಯನ್ನು ಹಾಡಲು ಮು೦ದಾದಾಗ, ಮೃತ್ಯುದೇವತೆಯಾದ ಯಮನು ಕೋಣನ ಮೇಲೆ ಸವಾರಿ ಮಾಡಿಕೊ೦ಡು ಮಾರ್ಕ೦ಡೇಯನಿದ್ದಲ್ಲಿಗೆ ಬರುತ್ತಾನೆ. ಯಮನ ಆದೇಶ ಯಮನ ಕೈಯಲ್ಲೊ೦ದು ಪಾಶವಿರುತ್ತದೆ. ಯಮನು ಮಾರ್ಕ೦ಡೇಯನನ್ನುದ್ದೇಶಿಸಿ ಹೀಗೆ ಆದೇಶಿಸುತ್ತಾನೆ, "ನಿನ್ನ ಭಜನೆಗಳನ್ನು ಸಾಕು ಮಾಡು. ಇ೦ದಿಗೆ ನಿನಗೆ ಈ ಭೂಮಿಯ ಋಣ ತೀರಿತು.ಮೃತ್ಯುವಶನಾಗಲು ಸಿದ್ಧನಾಗು" ಎ೦ದು ಯಮನು ಮಾರ್ಕ೦ಡೇಯನನ್ನು ಅವಸರಿಸುತ್ತಾನೆ. 


ಆದರೆ ಇದನ್ನಾಲಿಸಿದ ಮಾರ್ಕ೦ಡೇಯನು ಭಯವಿಹ್ವಲಗೊಳ್ಳುವುದಿಲ್ಲ. ಅದಕ್ಕೆ ಬದಲಾಗಿ, ಶಿವಲಿ೦ಗವನ್ನು ಅತ್ಯ೦ತ ಬಿಗಿಯಾಗಿ ತಬ್ಬಿಕೊ೦ಡು ಕುಳಿತುಬಿಡುತ್ತಾನೆ. ಶಿವಲಿ೦ಗವನ್ನು ಸೀಳಿಕೊ೦ಡು ಹೊರಬಂದ ಶಿವ...! ಬೇರೆ ದಾರಿಕಾಣದೆ ಯಮನು ಮಾರ್ಕ೦ಡೇಯನ ಕೊರಳಿನತ್ತ ಪಾಶವನ್ನು ಎಸೆದು ಪಾಶದ ಮತ್ತೊ೦ದು ತುದಿಯನ್ನು ತನ್ನತ್ತ ಸೆಳೆಯಲಾರ೦ಭಿಸುತ್ತಾನೆ. ಮಾರ್ಕ೦ಡೇಯನು ಶಿವಲಿ೦ಗವನ್ನು ಗಟ್ಟಿಯಾಗಿ ತಬ್ಬಿಕೊ೦ಡಿದ್ದ ಕಾರಣ, ಪಾಶವು ಮಾರ್ಕ೦ಡೇಯನೊ೦ದಿಗೆ ಶಿವಲಿ೦ಗವನ್ನೂ ಆವರಿಸಿಕೊ೦ಡು, ಯಮನು ಪಾಶವನ್ನೆಳೆಯತೊಡಗಿದಾಗ ಮಾರ್ಕ೦ಡೇಯನೊ೦ದಿಗೆ ಶಿವಲಿ೦ಗವೂ ಎಳೆಯಲ್ಪಡುತ್ತದೆ. ಇದರಿ೦ದ ತೀವ್ರವಾಗಿ ಕೋಪೋದ್ರಿಕ್ತನಾದ ಪರಶಿವನು ಶಿವಲಿ೦ಗವನ್ನು ಸೀಳಿಕೊ೦ಡು ಲಿ೦ಗದಿ೦ದ ಹೊರಬರುತ್ತಾನೆ. ಶಿವನ ಅಜ್ಞೆ ಭಗವಾನ್ ಶಿವನು ಯಮನನ್ನು ತನ್ನ ಕಾಲಕೆಳಗೆ ಕೆಡವಿಕೊ೦ಡು ಆತನ ಎದೆಯ ಮೇಲೆ ತನ್ನ ಪಾದವನ್ನಿರಿಸುತ್ತಾನೆ ಹಾಗೂ ಯಮನನ್ನುದ್ದೇಶಿಸಿ ಹೀಗೆ ಅಬ್ಬರಿಸುತ್ತಾನೆ, "ಯಮನೇ, ನೀನು ಮೊದಲು ಇಲ್ಲಿ೦ದ ತೊಲಗು. ಈ ಬಾಲಕನನ್ನು ಮುಟ್ಟಬೇಡ. ಈತನು ನನ್ನ ಅತ್ಯ೦ತ ಪ್ರೀತಿಪಾತ್ರನಾಗಿರುವ ಭಕ್ತನು. ಇವನು ಚಿರ೦ಜೀವಿಯಾಗಿರುತ್ತಾನೆ" ಎ೦ದು ಕಡ್ಡಿಮುರಿದ೦ತೆ ಯಮನಿಗೆ ಶಿವನು ಹೇಳುತ್ತಾನೆ. 



ಬರಿಗೈಯಲ್ಲಿ ಹಿ೦ತಿರುಗಿದ ಯಮ ನಿರಾಸೆ, ಹತಾಶೆಗಳಿ೦ದ ಖಿನ್ನನಾದ ಯಮಧರ್ಮನು ಬೇರೆ ದಾರಿಕಾಣದೆ ಬರಿಗೈಯಲ್ಲಿ ಹಿ೦ತಿರುಗಿ ಹೋಗುತ್ತಾನೆ. ಈಗ೦ತೂ ಮಾರ್ಕ೦ಡೇಯನು ಹಿ೦ದೆ೦ದಿಗಿ೦ತಲೂ ಅತೀವವಾದ ಭಕ್ತಿಭಾವದಿ೦ದ ಭಗವಾನ್ ಶಿವನ ಕುರಿತು ಪ್ರಾರ್ಥಸತೊಡಗುತ್ತಾನೆ. ಈ ಪ್ರಾರ್ಥನೆಯ ಪ್ರತೀ ಚರಣದ ಅ೦ತಿಮ ಸಾಲಿನ ಭಾವಾನುವಾದವು ಈ ರೀತಿಯಾಗಿದೆ, "ಮೃತ್ಯುವು ನನಗೇನು ಮಾಡಬಲ್ಲದು ?". ಇ೦ದಿಗೂ ಕೂಡ ಅನೇಕರು ಈ ಪ್ರಾರ್ಥನಾ ಮ೦ತ್ರವನ್ನು ಪಠಿಸುತ್ತಾರೆ. ಚಿರ೦ಜೀವಿಯಾಗಿ ಬಾಳ್ವೆ ನಡೆಸಿದ ಮಾರ್ಕಂಡೇಯ ಮಾರ್ಕ೦ಡೇಯನು ಮನೆಗೆ ಹಿ೦ತಿರುಗಿ ಬ೦ದು ತನ್ನ ಮಾತಾಪಿತೃಗಳ ಚರಣಸ್ಪರ್ಶ ಮಾಡುತ್ತಾನೆ. ಅವರ೦ತೂ ಮಾರ್ಕ೦ಡೇಯನನ್ನು ಬಾಚಿ ತಬ್ಬಿಕೊ೦ಡು ಆನ೦ದಭಾಷ್ಪವನ್ನು ಸುರಿಸುತ್ತಾರೆ. ಮಾರ್ಕ೦ಡೇಯನು ಮು೦ದೆ ಜೀವನದಲ್ಲಿ ಓರ್ವ ಮಹರ್ಷಿಯೆನಿಸಿಕೊ೦ಡು ದೀರ್ಘಾವಧಿಯವರೆಗೆ ಬಾಳ್ವೆ ನಡೆಸುತ್ತಾನೆ.

Tuesday, January 25, 2022

ಕಥೆ:- ಸೀರೆ ಕಪ್ಪ




ಕಾರ್ ಬಂದ ಸದ್ದಾಯಿತು. ಪತಿ ಬಂದರು ಅಂತ ಗೇಟ್ ಬಳಿ ಬಂದ  ಪತ್ನಿ ಸುನಂದಮ್ಮ ಕಾರ್ ಒಳಗೆ ಬರಲು ಗೇಟ್ ಅನ್ನು ತೆರೆದಳು. ಕಾಂಪೌಂಡ್ ನಲ್ಲಿ ಕಾರ್ ಅನ್ನು  ನಿಲ್ಲಿಸಿದ ಆನಂದ ಮೂರ್ತಿ, ಕಾರಿನಲ್ಲಿದ್ದ ಬ್ಯಾಗ್ ಅನ್ನು ಹೆಂಡತಿ ಕೈಗೆ ಕೊಟ್ಟು ಅಲ್ಲಿಯೇ ಇದ್ದ ನಲ್ಲಿಯ ನೀರಿನಲ್ಲಿ ಕಾಲನ್ನು ತೊಳೆದುಕೊಂಡ. ಮನೆಯೊಳಗೆ ಬರುತಿದ್ದಂತೆ, ಏನ್ರೀ!!! ನಾವು ದುರ್ಗಕ್ಕೆ ಬಂದು ಒಂದು ವರ್ಷ ಆಯಿತು ಆದರೂ ಇದುವರೆಗೂ ಒಂದೂ ಮೊಳಕಾಲ್ಮೂರು ಸೀರೆಯನ್ನು ತಗಂಡು ಬರಲಿಲ್ಲ, ಅದೂ ಅಲ್ಲದೆ ಮಗಳ ಮದುವೆ ಸೀರೆಗಳನ್ನ ನೋಡಲಿಕ್ಕೆ ಹೋಗಲೇ ಇಲ್ಲ. ದಿನಗಳು ಹತ್ತಿರ ಬರುತ್ತಿವೆ, ನೀವು ಇಷ್ಟು ತಡ ಮಾಡಿದ್ರೆ ಹೆಂಗೆ? ಮೀನಾಕ್ಷಮ್ಮನವರ ಮನೆಗೆ ಹೋಗಿದ್ದೆ. ಅವರು ಮೊನ್ನೆ ಮೊಳಕಾಲ್ಮೂರುಗೆ ಹೋಗಿ ಸೀರೆ ತಂದಿದ್ರು. ಅದನ್ನ ನೋಡಿಕೊಂಡು ಬಂದೆ. ಸೀರೆಗಳು ತುಂಬಾ ಚೆನ್ನಾಗಿವೆ. ಆದಷ್ಟು ಬೇಗ ನಾವು ಸಹ ಒಂದ್ಸಾರಿ ಹೋಗಿಬರೋಣಾರಿ ಎಂದಳು.  ಮೂರ್ತಿಗೂ ಹೌದೆನ್ನಿಸಿತು. ಕೆಲಸದಲ್ಲಿ ಬಿಜಿಯಾಗಿದ್ದರಿಂದ ಸೀರೆ ನೋಡಲಿಕ್ಕೆ ಹೋಗಲೇ ಇಲ್ಲ. ಮಗಳ ಮದುವೆಗೆ ಸೀರೆಗಳನ್ನ ತರಬೇಕಿತ್ತು. ಸರಿ, ಈ ವಾರ ಹೋಗೋಣ ಎಂದು ಮಡದಿಗೆ ಹೇಳಿದ. ತಕ್ಷಣ ತನ್ನ ಸಹಾಯಕನಿಗೆ ಗೋವಿಂದಪ್ಪನಿಗೆ ಫೋನ್ ಮಾಡಿ,  ಮೊಳಕಾಲ್ಮೂರು ಸಿದ್ದಣ್ಣನಿಗೆ ಫೋನ್ ಮಾಡಿ ಹೇಳ್ರಿ ಈ ಶನಿವಾರ ನಾನು ಮತ್ತು ನಮ್ಮ ಫ್ಯಾಮಿಲಿ ಮೊಳಕಾಲ್ಮೂರುಗೆ ಸೀರೆಗಳನ್ನ ನೋಡಕ್ಕೆ ಬರ್ತಾಯಿದ್ದೀವಿ ಅಂತ. 

ಆಯ್ತು ಸರ್ ಎಂದು ಆ ಕಡೆಯಿಂದ ಗೋವಿಂದಪ್ಪ ಹೇಳಿದ. ಮಗಳಿಗೆ ಅಮೇರಿಕದ ಅಳಿಯ ಸಿಕ್ಕಿದ್ದ. ಮದುವೆಯನ್ನ ಅದ್ದೂರಿಯಾಗಿ ಮಾಡಬೇಕು ಎನ್ನುವ ಆಸೆ ಮಡದಿಗೆ. ಸರ್ಕಾರಿ ಅಧಿಕಾರಿಯಾಗಿದ್ದ ಆನಂದ ಮೂರ್ತಿ ಬಹಳಷ್ಟು ಆಸ್ತಿ ಮಾಡಿದ್ದ, ಯಾವುದೇ ಮಿತಿಯಿಲ್ಲದೆ ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದ. 

ಸಾಹೇಬರು ಮೊಳಕಾಲ್ಮೂರುಗೆ ಬರುತ್ತಾರೆ ಎಂದು ಸಿದ್ದಣ್ಣನಿಗೆ ಫೋನ್ ಬಂತು. ತಕ್ಷಣವೇ ಮೊಳಕಾಲ್ಮೂರುವಿನಲ್ಲಿದ್ದ ಸೀರೆವ್ಯಾಪಾರಿಗಳು, ಕೈ ಮಗ್ಗ ನೇಕಾರರನ್ನ ಸಂಪರ್ಕಿಸಿ, ಸಾಹೇಬರು ಬರ್ತಾರೆ, ಒಳ್ಳೆ ಚೆನ್ನಾಗಿರುವ ಸೀರೆಗಳನ್ನ ರೆಡಿಯಾಗಿಟ್ಟುಕೊಂಡಿರಿ ಎಂದು ಹುಕುಂ ಹೊರಡಿಸಿದ. ಚಿತ್ರದುರ್ಗ ಮತ್ತು ಸುತ್ತ ಮುತ್ತಲಿನ ತಾಲೂಕಿನ ಅಧಿಕಾರಿಗಳು ಮೊಳಕಾಲ್ಮೂರುವಿಗೆ ಭೇಟಿ ಇತ್ತು, ಅತ್ಯುತ್ತಮ ಸೀರೆಗಳನ್ನ ಕೊಂಡು ಕೊಳ್ಳುವುದು ಇಲ್ಲವೆ ಉಡುಗೊರೆಯಾಗಿ ಪಡೆಯುವುದು ಹಲವಾರು ವರ್ಷಗಳಿಂದ ನಡೆದು ಬಂದಿತ್ತು. ಕೆಲವರಂತೂ ತಮ್ಮ ಮೇಲಧಿಕಾರಿಗಳನ್ನ ಮೆಚ್ಚಿಸಲು ಲಾಟ್ ಗಟ್ಟಲೆ ಸೀರೆಗಳನ್ನ ಕಳುಹಿಸುತಿದ್ದರು. ಅದರಲ್ಲೂ ಮದುವೆ, ಮತ್ತಿತರ ಸಂಧರ್ಭದಲ್ಲಿ, ದಂಡಿಯಾಗಿ ಸೀರೆಗಳ ವಹಿವಾಟು ನಡೆಯುತಿದ್ದವು. ಈ ವ್ಯವಹಾರದಲ್ಲಿ ಕೆಲವೊಮ್ಮೆ ಹಣ ಪಾವತಿಯಾಗುವುದು ಅಷ್ಟೊಂದು ಸಲೀಸಾಗಿರಲಿಲ್ಲ. ಯಾರಾದರು ಅಧಿಕಾರಿಗಳು ಸೀರೆ ತಗಳ್ಳೋಕೆ ಬರ್ತಾರೆ ಅಥವ ಸೀರೆಗಳು ಕಳುಹಿಸಬೇಕು  ಅಂದರೆ, ಇದೊಳ್ಳೆ ತಲೆನೋವಾಯ್ತಲ್ಲ ಎಂದು ವ್ಯಾಪಾರಿಗಳು ಗೋಳಿಡುವುದಕ್ಕೆ ಶುರು ಮಾಡುತಿದ್ದರು. ಯಾಕೆಂದರೆ ಸಿಕ್ಕಾಬಟ್ಟೆ ಚೌಕಾಶಿ ಮಾಡಿ ಮಾಲು ತೆಗೆದು ಕೊಂಡು ಹೋಗ್ತಿದ್ದರು, ಸರಿಯಾಗಿ ದುಡ್ಡು ಕೊಡ್ತಿರಲಿಲ್ಲ. ಕೆಲ ವ್ಯಾಪಾರಿಗಳಿಗಂತೂ, ಇನ್ನೂ ಹಳೆ ಬಾಕಿ ಸಂದಾಯ ಆಗಿರಲಿಲ್ಲ. ಲಾಭ ಅಷ್ಟಕ್ಕಷ್ಟೆ, ಅದೂ ಅಲ್ಲದೆ ಬಾಕಿ ದುಡ್ಡು ಕೊಡಿ ಅಂತ ಹಿಂದೆ ಅಲೆಯೋದು ದೊಡ್ಡ ಕರ್ಮ, ಈ ಅಧಿಕಾರಿ ವರ್ಗದವರಿಂದ ನಮ್ಮಂತ ನೇಕಾರರು ನ್ಯಾಯವಾಗಿ ದುಡಿದು ತಿನ್ನುವುದು ಬಹಳ ಕಷ್ಟ ಎಂದು ಮನಸ್ಸಿನಲ್ಲಿಯೇ ಸಂಕಟ ಪಡುತಿದ್ದರು. 

  

ಅಂದುಕೊಂಡಂತೆ, ಶನಿವಾರ ಕುಟುಂಬ ಸಮೇತ ಮೊಳಕಾಲ್ಮೂರುಗೆ ಸೀರೆ ನೋಡಲು ಬಂದರು. ಸಿದ್ದಣ್ಣ ಅಂಗಡಿಗೆ ಕರೆದುಕೊಂಡು ಹೋದ. ಒಂದು ಅಂಗಡಿ ಬಾಗಿಲು ಹಾಕಿತ್ತು. ಸರಿ ಇನ್ನೊಂದು ಅಂಗಡಿಗೆ ಹೋದರೆ ಅದೂ ಸಹ ಬಾಗಿಲು ಹಾಕಿತ್ತು. ಕೆಲ ಅಂಗಡಿಯಲ್ಲಿ ಒಂದೆರೆಡು ಕೆಲಸಗಾರರಿದ್ದರೆ, ಇನ್ನು ಕೆಲವು ಕಡೆ ಮಕ್ಕಳು ಅಂಗಡಿಯನ್ನು ನೋಡಿಕೊಳ್ಳುತಿದ್ದರು. ಆನಂದಮೂರ್ತಿಗೆ ಬಹಳ ಬೇಸರವಾಯಿತು. ಮನೆಯವರ ಮುಂದೆ ಮುಜುಗರ ಅನ್ನಿಸುವಂತ ಸನ್ನಿವೇಶಗಳು.  ಸಿದ್ದಣ್ಣನಿಗೆ ಮಂಗಳಾರತಿ ಮಾಡಿದರು, ಏನ್ರೀ ಇದು ದುರ್ಗದಿಂದ ಬಂದಿದ್ದಕ್ಕೆ ನನಗೆ ಅವಮಾನ ಮಾಡ್ತಿದ್ದೀರ. ಎಲ್ಲಿಗೆ ಹೋಗಿದ್ದಾರೆ ಎಲ್ಲರೂ? ಸಾರ್, ಫೋನ್ ಮಾಡಿ ವಿಚಾರ್ಸ್ತಿನಿ ಸ್ವಲ್ಪ ಸಮಾಧಾನ ಮಾಡಿಕೊಳ್ಳಿ. ಸಿದ್ದಣ್ಣನಿಗೆ ಕೆಟ್ಟ ಕೋಪ ಬಂದಿತ್ತು. ಈ ವ್ಯಾಪಾರಿಗಳು ಕೈಗೆ ಸಿಕ್ಕಿದರೆ  ಒಬ್ಬೊಬ್ಬರನ್ನ ಹುಟ್ಟಲಿಲ್ಲ ಅನ್ನಿಸಿಬಿಡ್ತೀನಿ ಎಂದು ಹಲ್ಲು ಮಸೆದ. ಅಷ್ಟರಲ್ಲಿ ಒಂದು ಆಲೋಚನೆ ಬಂತು. ನೇರವಾಗಿ ನೇಕಾರರ ಬಳಿ ಕರೆದು ಕೊಂಡು ಹೋಗೋಣ ಎಂದು ಆಲೋಚಿಸಿ, ಹಲವಾರು ಮನೆಗಳಿಗೆ ಎಡತಾಕಿದ. ಪಕ್ಕದಲ್ಲಿನ ಕೆಲ ಊರುಗಳಲ್ಲಿನ ನೇಕಾರರ ಮನೆಗಳಿಗೂ ಬೇಟಿ ನೀಡಿದರು. 


ಹೀಗೆ ಅಲ್ಲಲ್ಲಿ ಅವರಿಗಿಷ್ಟವಾದ ಡಿಸೈನ್ ಗಳ ಸೀರೆಗಳನ್ನ ಕೊಂಡು ಕೊಂಡರು. ಸಿದ್ದಣ್ಣ, ಸಾಹೇಬರ ಪರವಾಗಿ ಚೌಕಾಶಿ ಮಾಡುತಿದ್ದ. ಪಕ್ಕಕ್ಕೆ ಕರೆದು ಉದ್ರೆ ಕೊಡಿ, ದುಡ್ಡನ್ನ ಆದಷ್ಟು ಬೇಗ ಮರಳಿಸುತ್ತೇನೆ. ಅವಶ್ಯ ಬಿದ್ದರೆ, ಆಫೀಸಿನ ಬಳಿ ಬಂದು ತೆಗೆದು ಕೊಂಡು ಹೋಗಬಹುದು ಎಂದು ಬಲವಂತ ಮಾಡುತಿದ್ದ. ಆಗ ನೇಕಾರರು "ಸಾರ್, ಈ ಸೀರೆ ನೇಯ್ಗೆಯಿಂದ ನಮ್ಮ ಜೀವನ ನಡೆಯುತ್ತಿದೆ. ನಾವು ಅವರಿವರ ಬಳಿಯಿಂದ ಸಾಲ ತಂದು ನೇಯುವ ಕೆಲಸ ಮಾಡುತಿದ್ದೇವೆ. ವ್ಯವಹಾರದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರು ಸಹ ನಮಗೆ ಬಹಳ ತೊಂದರೆಯಾಗುತ್ತದೆ, ಬೇಕಾದರೆ ಒಂದು ನೂರೋ ಅಥವ ಇನ್ನೂರೋ ಕಡಿಮೆ ಕೊಡಿ, ಉದ್ರೆ ಮಾತ್ರ ಬೇಡ ಸಾರ್ ಎಂದು ಅವಲತ್ತು ಕೊಳ್ಳುತಿದ್ದರು.  ಸಿದ್ದಣ್ಣನಿಗೆ ಜವಳಿ ವ್ಯಾಪಾರಿಗಳ ಮೇಲೆ ಬಹಳ ಕೋಪ ಬಂದಿತ್ತು, ಸಾಹೇಬರು ಬಂದಾಗ ಬೇಕು ಅಂತಲೇ ಕೈ ಕೊಟ್ಟರಲ್ಲ ಇವರು. ನಾಳೆ ವಿಚಾರಿಸಿಕೊಳ್ಳೋಣ ಎಂದು ಮನಸ್ಸಿನಲ್ಲಿ ಎಣಿಸಿದ. ಸಂಜೆ ಆಗುತ್ತ ಬಂತು, ಸಾಹೇಬರು ಬಂದ ಕೆಲಸ ಆಯಿತು, ಎಂದು ಹೊರಡಲು ಅನುವಾದರು. ಸಿದ್ದಣ್ಣನಿಗೆ ಧನ್ಯವಾದಗಳನ್ನು ಅರ್ಪಿಸಿ ಅಲ್ಲಿಂದ ಹೊರಟು ಹೋದರು. 


ಮರುದಿನ ಕಛೇರಿಗೆ ಬಂದ ಸಿದ್ದಣ್ಣ, ತನ್ನ ಸಹಾಯಕರನ್ನ ಕಳುಹಿಸಿ ಜವಳಿ ಅಂಗಡಿಯಲ್ಲಿ ವ್ಯಾಪಾರಿಗಳು ಇರುವಿಕೆಯನ್ನ ಖಚಿತ ಪಡಿಸಿಕೊಂಡ. ತಡ ಮಾಡದೆ ನೇರವಾಗಿ ಅಂಗಡಿಗೆ  ಹೊರಟೇ ಬಿಟ್ಟ, ನಿನ್ನೆ ಸಾಹೇಬರ ಮುಂದೆ ಆಗಿದ್ದ ಅವಮಾನವನ್ನ ಇಂದು ವ್ಯಾಪಾರಿಗಳಿಗೆ ತಕ್ಕ ಶಾಸ್ತಿ ಮಾಡ ಬೇಕು ಎಂದು ನಿರ್ಧರಿಸಿದ್ದ. ಅಲ್ಲಿಗೆ ಹೋಗಿ ಜವಳಿ ವ್ಯಾಪಾರಿಯನ್ನ ಏರುದನಿಯಲ್ಲಿ ಜಗಳವಾಡಲು ತೊಡಗಿದ. ಮತ್ತೆಲ್ಲರನ್ನ ಅಲ್ಲಿಗೆ ಈ ಕೂಡಲೆ ಬರಬೇಕೆಂದು ಕರೆಯಿಸಿದ.  ಸ್ವಲ್ಪ ಹೊತ್ತಿನಲ್ಲಿ ಎಲ್ಲ ಜವಳಿ ವ್ಯಾಪಾರಿಗಳು ಜಮಾಯಿಸಿದರು. ಸಿದ್ದಣ್ಣ ಸಹ ತನ್ನ ಕಛೇರಿಯ ಸಿಬ್ಬಂದಿಗಳಿಗೆ ಬರ ಹೇಳಿದ್ದ, ಎಲ್ಲರೂ ಮಾತುಕತೆಗೆ ಕುಳಿತು ಕೊಂಡರು. ಮತ್ತದೇ ಏರುದನಿಯಲ್ಲಿ ಮಾತನಾಡಲು ಶುರು ಮಾಡಿದ. ನನ್ನ ಮಾತಿಗೆ ಬೆಲೆ ಕೊಡದೆ ನೀವೆಲ್ಲ ನಿನ್ನೆ ಪಲಾಯನ ಗೈದಿದ್ದೀರಿ. ಕೆಲವರು ಫೋನ್ ಸ್ವಿಚ್ ಮಾಡಿದ್ರೆ, ಇನ್ನೂ ಕೆಲವರು ನಾಟ್ ರೀಚಬಲ್, ಮತ್ತೆ ಕೆಲವರು ತಿರುಪತಿ, ಬೆಂಗಳೂರು ನಲ್ಲಿದ್ದೀನಿ ಎಂದು ಉತ್ತರ ಕೊಡ್ತೀರಿ. ಸರಕಾರಿ ಅಧಿಕಾರಿ ಮಾತಿಗೆ ಬೆಲೆ ಇಲ್ಲವೇ, ನಾನು ಮನಸ್ಸು ಮಾಡಿದ್ರೆ ಏನೆಲ್ಲ ಮಾಡಬಹುದು ಗೊತ್ತೆ? ಯಾವ್ಯಾವುದೋ ಕೇಸ್ ಗಳನ್ನ ಹಾಕಿಸಿ ಬಿಡ್ತೀನಿ. ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಿಬಿಡ್ತೀನಿ. ನನ್ನನ್ನ ಏನೆಂದು ಕೊಂಡಿದ್ದೀರಿ. ನನ್ನಂತ ಅಧಿಕಾರಿಯನ್ನ ಎದುರು ಹಾಕಿ ಕೊಂಡರೆ ಪರಿಸ್ಥಿತಿ ನೆಟ್ಟಗಿರಲ್ಲ. ಹೀಗೆ ಆವೇಶದಿಂದ ಮಾತನಾಡ ತೊಡಗಿದ್ದ.


ಎಲ್ಲವನ್ನ ಕೇಳಿಸಿಕೊಂಡ ಹಿರಿಯ ವ್ಯಾಪಾರಿಯೊಬ್ಬರು, ನೋಡಿ ಸರ್ ತಮ್ಮಲ್ಲಿ ಅಧಿಕಾರ ಇದೆ ಅಂತ ಏನೆಲ್ಲ ಮಾಡಬಹುದು ಎಂದು ತಾವು ಹೇಳಿದ್ದೀರಿ. ಸಂತೋಷ ಸರ್. ಆದರೆ ಸರಕಾರಿ ಅಧಿಕಾರಿಗಳು ಜನರ ಸೇವೆ ಮಾಡುವುದಿಕ್ಕೆ ಇದ್ದಾರೆ ಅಂತ ನಾವು ತಿಳಿದು ಕೊಂಡಿದ್ದಿವಿ. ಬಹುಶಃ ನಮ್ಮದು ತಪ್ಪು ಗ್ರಹಿಕೆ ಅಂತ ಈಗ ಅರಿವಾಗ್ತಯಿದೆ. ಎಂದರು.


ಸಿದ್ದಣ್ಣ ನಿಗೆ ಈ ಮಾತಿನಿಂದ ಸ್ವಲ್ಪ ಇರಿಸುಮುರುಸಾಯಿತು. ನಿಮ್ಮ ಕಥೆ ನಮ್ಮತ್ರ ಬೇಡ ಸ್ವಾಮಿ. ನೀವೆಲ್ಲ ನಿನ್ನೆ ಯಾಕೆ ಓಡಿ ಹೋಗಿದ್ದು ಅಂತ ಗೊತ್ತಿದೆ. ಸ್ವಲ್ಪ ಕಾಯಿರಿ, ನಾನು ಹೇಗೆ ಉತ್ತರ ಕೊಡ್ತೀನಿ ಅಂದರೆ ಮೈ ಮುಟ್ಟಿ ನೋಡಿ ಕೊಳ್ಳಬೇಕು ಹಂಗೆ ಉತ್ತರ ಕೊಡ್ತೀನಿ. 


ಸರಿ ಸಾರ್, ಶ್ರೀನಿವಾಸನ ಹಳೆ ಬಾಕಿ ಏನಾಯ್ತು? ಇನ್ನೂ ಎಷ್ಟು ದಿನ ಕಾಯಬೇಕು? ಬಾಕಿ ಹಣಕ್ಕೆ ಬಡ್ಡಿ ಸೇರಿಸಿ ಕೊಡ್ತೀರಾ?  ನಿಮ್ಮ ಇಲಾಖೆ ಮಾತ್ರ ಅಲ್ಲ, ಇದೇ ರೀತಿ ಬೇರೆ ಬೇರೆ ಡಿಪಾರ್ಟ್ ಮೆಂಟ್ ನವರು ಎಷ್ಟೊಂದು ಬಾಕಿ ಉಳಿಸಿಕೊಂಡಿದ್ದಾರೆ ಗೊತ್ತಾ. ಕೆಲವರು ಟ್ರಾನ್ಸ್ ಫರ್ ಆಗಿ ಹೋಗಿದ್ದಾರೆ ಅವರನ್ನಹುಡುಕಿ ಹಣ ವಸೂಲಿ ಮಾಡುವುದು ಎಷ್ಟು ಕಷ್ಟ ಆಗಿದೆ ನಿಮಗೆ ಗೊತ್ತಾ? ನಮ್ಮ ನೇಕಾರರು, ಜವಳಿ ಅಂಗಡಿಯವರನ್ನ ನೀವೆಲ್ಲಏನು ಅಂದು ಕೊಂಡಿದ್ದೀರಿ. ನಮಗೆ ದುಡ್ಡು ಆಕಾಶ ದಿಂದ ಉದರಲ್ಲ ಸಾರ್, ನಾವು ಲಕ್ಷಾಂತರ ರೂಪಾಯಿಯನ್ನ ಸಾಲ ಮಾಡ್ತೀವಿ, ಆ ಹಣಕ್ಕೆ ಬಡ್ಡಿ ಸಹ ಕಟ್ತೀವಿ, ವ್ಯಾಪಾರ ಆದಮೇಲೆ ತೀರಿಸ್ತೀವಿ. ಕೆಲಸಗಾರರಿಗೆ ಕೂಲಿ ಕೊಡ್ತೀವಿ. ಮಾಲು ಕೊಟ್ಟವರಿಗೆ ಹಣ ಮರಳಿ ಹಿಂತಿರುಗಿಸ್ತಿವಿ. ಅಂಗಡಿ ಬಾಡಿಗೆ ಕಟ್ತೀವಿ. ಜಿಎಸ್ಟಿ, ಕಟ್ತೀವಿ, ಲೈಟ್ ಬಿಲ್, ಕಂದಾಯ, ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಮನೆಯ ಹಿರಿಯರ ಆಸ್ಪತ್ರೆ, ಔಷದ ಖರ್ಚು ಹೀಗೆ ಹಲವಾರು ಖರ್ಚುವೆಚ್ಚ ಎಲ್ಲವನ್ನ ಈ ಸೀರೆ ವ್ಯವಹಾರದಿಂದ ನಡೆಸಿಕೊಂಡು ಬರ್ತೀವಿ, ಅಂತಹದ್ರಲ್ಲಿ, ನೀವು ತಿಂಗಳು ಗಟ್ಟಲೆ ದುಡ್ಡು ಕೊಡದೆ ಸತಾಯಿಸಿದ್ರೆ, ನಾವು ಏನ್ ಮಾಡ ಬೇಕು ಸಾರ್? ನೇಕಾರರು, ಜವಳಿ ವ್ಯಾಪಾರಿಗಳು ಅಂದರೆ ಅಷ್ಟು ನಿಮಗೆಲ್ಲ ಅಷ್ಟೊಂದು ಸದರಾನ? 

ಹಿಂದೆ ರಾಜ ಮಹರಾಜರು, ನೇಕಾರರಿಗೆ ಕಷ್ಟ ಆಗಬಾರದು ಅಂತ ಎಷ್ಟೊಂದು  ಅನುಕೂಲ ಮಾಡಿಕೊಟ್ಟಿದ್ದರು ಅಂತ ನಿಮಗೆ ಗೊತ್ತಿದೆಯೇ? ರಾಜ್ಯ ಸರ್ಕಾರ ಗಳು ಮತ್ತು ಕೇಂದ್ರ ಸರ್ಕಾರಗಳು ಸಹ ನೇಕಾರರ ಏಳಿಗೆಗೆ ಏನೆಲ್ಲ ಯೋಜನೆ ಹಾಕಿಕೊಡ್ತಾಯಿದ್ದಾರೆ, ಅವರೆಲ್ಲ ನಿಮ್ಮ ಹಾಗೆ ತೊಂದರೆ ಕೊಡ್ತಾರಾ? ನಾವು ಮಾಡುವ ನೇರವಾದ ವ್ಯಾಪಾರದ ಹಣ ಕೇಳಿದರೆ ನಿಮಗೆ ಕೋಪ ಬರುತ್ತೆ ಅಲ್ಲವೇ. ಅದಕ್ಕೆ ಈ ಸಹವಾಸವೇ ಬೇಡ ಅಂತ, ನಾವು ನಿಮ್ಮ ಆಫೀಸರ್ ಗಳು ಸೀರೇ ನೋಡೋಕೆ ಬರ್ತಾರೆ ಅಂದರೆ ನಾವೆಲ್ಲ ಅಷ್ಟೊಂದು ಆಸಕ್ತಿ ತೋರಿಸಲ್ಲ. ನಮಗೆ ನಿಮ್ಮಗಳ ವ್ಯವಹಾರ ಬೇಡ, ಸಾಕಾಗಿ ಹೋಗಿದೆ ಸ್ವಾಮಿ.


ಸಿದ್ದಣ್ಣ ಎಲ್ಲ ಮಾತುಗಳನ್ನ ಕೇಳಿಸಿಕೊಂಡು, ಉಡಾಫೆ ಯಿಂದ, ರೀ ಸುಮ್ನಿರಿ. ನಿಮ್ಮ ಕಾಗಕ್ಕ ಗೂಬಕ್ಕ ಕಥೆಗಳನ್ನ ಕೇಳಕ್ಕೆ ನಾನು ಬಂದಿಲ್ಲ. ನಾನು ಏನು ಅಂತ ಇನ್ನು ಸ್ವಲ್ಪ ದಿನದಲ್ಲಿ ತೋರಿಸ್ತೀನಿ, ನೋಡ್ತೀರಿ... ಎಂದು ಅವಾಜು ಹಾಕಿದ.


ಆಗ ಆ ಹಿರಿಯರು, ಸ್ವಾಮಿ ನಾವು  ಇಷ್ಟೆಲ್ಲಾ ಹೇಳಿದರು ನಿಮಗೆ ಅರ್ಥ ಆಗಿಲ್ಲ ಅಂದ್ರೆ, ನಿಮಗೆ ದೇವರು ಬಂದು ಬುದ್ದಿ ಹೇಳಿದರು ಅರ್ಥ ಆಗಲ್ಲ ಬಿಡಿ. ಕರ್ಮ ಅಂದರೆ ಗೊತ್ತಲ್ಲ. ಅದು ಏನು ಅಂತ ಅರ್ಥ ಮಾಡಿಕೊಳ್ಳಿ. ಆವಾಗ ನಿಮಗೆ ಇದೆಲ್ಲ ಅರ್ಥ ಆಗುತ್ತೆ. ಆದರೆ, ನಾವು ಮಾಡಿದ ಕರ್ಮ ಅನುಭವಿಸಲೇ ಬೇಕು. ಆ ದೇವರು ಅದನ್ನ ತಪ್ಪಿಸಿಕೊಳ್ಳುವುದಿಕ್ಕೆ ಬಿಡುವುದಿಲ್ಲ. ನಮ್ಮ ಜನರ ನಿಟ್ಟುಸಿರು, ಶಾಪ, ಬೈಗುಳ ಒಂದಲ್ಲ ಒಂದು ರೂಪದಲ್ಲಿ ನಮಗೆ ಅನ್ಯಾಯ ಮಾಡಿದವರಿಗೆ ತಟ್ಟದೇ ಬಿಡಲ್ಲ. ಯಾರ್ಯಾರೋ ಏನೇನೋ ಆಗಿ ಹೋಗಿದ್ದನ್ನ ನಾನು ನನ್ನ ಕಣ್ಣಾರೆ ನೋಡಿದ್ದೀನಿ. ಬದುಕಿದ್ದಾಗ ನಾಲ್ಕು ಜನರ ಕೈಲಿ ಒಳ್ಳೆಯ ಮನುಷ್ಯ ಅಂತ ಬಾಳಿ ಬದುಕಿದರೆ ಅವನ ಜೀವನಕ್ಕೊಂದು ಅರ್ಥ ಇರುತ್ತೆ. ಅದು ಬಿಟ್ಟು, ಅವನು ಲಫಂಗ, ಲುಚ್ಚಾ, ಭ್ರಷ್ಟ, ಸುಳ್ಳುಗಾರ, ಹೀಗೆ ದಿನಂಪ್ರತಿ ಬೈಗುಳಗಳಿಂದ, ನೂರಾರು ಜನರ ಶಾಪದಿಂದ ಎಷ್ಟು ದಿನ ಬದುಕಬಲ್ಲ. ಅವನ ಬದುಕೇ ವ್ಯರ್ಥ.  ಒಮ್ಮೊಮ್ಮೆ ಆ ಶಾಪ ಅವರ ಮನೆಯವರನ್ನ ಸಹ ಬಿಡಲ್ಲವಂತೆ. ಎಲ್ಲವನ್ನ ದೇವರೇ ನೋಡಿಕೊಳ್ತಾನೆ ಬಿಡಿ. ನೀವೆಲ್ಲಾ ಇಷ್ಟೊಂದು ಸತಾಯಿಸಿದ್ದೀರಿ, ಆ ನೋವು ಸಂಕಟ ನಮಗೆ ಗೊತ್ತಿದೆ.  ಒಂದು ಸೀರೆ ನೇಯುವುದರ ಹಿಂದೆ ನೇಕಾರರ ಸಾಕಷ್ಟು ಶ್ರಮ ಇರುತ್ತದೆ. ಎಷ್ಟೊಂದು ಜನರ ಮನೆ ಬೆಳಗುವ ಕೆಲಸ ಈ ನೇಕಾರಿಕೆಯಿಂದ ನಡೆಯುತ್ತಿದೆ. ಅವರ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕರೆ ಅದಕ್ಕಿಂತ ಬೇರೆಯದನ್ನೇನು ಯಾರೂ ಬಯಸುವುದಿಲ್ಲ. ಆದರೆ, ಶ್ರಮಜೀವಿಗಳಾದ, ರೈತರನ್ನ ನೇಕಾರರನ್ನ ಜತೆಗೆ  ಜವಳಿ ವ್ಯಾಪಾರಿಗಳನ್ನ ಹೀಗೆ ಶೋಷಿಸುವುದು ಎಷ್ಟು ಸರಿ? ನಮ್ಮ ಕಣ್ಣೀರು, ನಮ್ಮ ನಿಟ್ಟುಸಿರು ನಿಮಗೆ ತಟ್ಟ ಬಾರದು ಸಾರ್. ನೀವು ಸಹ ಚೆನ್ನಾಗಿ ಬಾಳಿ ಬದುಕಿ, ಈ ತರಹ ವ್ಯವಹಾರ ಬೇಡ ಸರ್. 


ಸಿದ್ದಣ್ಣ ನಿಗೆ ಈ ಮಾತುಗಳನ್ನ ಕೇಳಿ ಕಸಿವಿಸಿ ಉಂಟಾಯಿತು. ಹೌದಲ್ವೇ, ನನ್ನ ಹಿಂದೆ ಎಷ್ಟು ಜನ ಬೈದಾಡಿಕೊಂಡಿದ್ದಾರೋ? ಎಷ್ಟು ಜನ ಶಾಪ ಹಾಕಿದ್ದಾರೋ, ಏನೋ? ಇಂತಹ ವ್ಯವಹಾರ ನನಗ್ಯಾಕೆ ಬೇಕು, ನಾನ್ಯಾಕೆ ಇದರ ಬಲೆಯಲ್ಲಿ ಸಿಲುಕಲಿ. ಆದರೆ ಇವರಿಗೆ ಏನು ಉತ್ತರ ಕೊಡಲಿ ಎಂದು ಯೋಚಿಸುತ್ತಾ..... ಆಯ್ತು, ನಿಮ್ಮ ಬಾಕಿ ಏನಿದೆಯೋ ಅದನ್ನೆಲ್ಲ ನಾನು ವಸೂಲಿ ಮಾಡಿಸಿಕೊಡ್ತೀನಿ. ಇನ್ನೊಂದು ಸಾರಿ ನೀವು ಹೀಗೆಲ್ಲ ಮಾಡಬೇಡಿ. ನಮ್ಮ ಕಡೆ ರೇಶ್ಮೆ ಸೀರೆಗಳಿಗೆ ಒಳ್ಳೆ ಹೆಸರಿದೆ. ಎಂದು ಅಲ್ಲಿಂದ ಹೊರಟು ಹೋದ.


ಆಯ್ತು ಸಾರ್, ನಮ್ಮ ಹಳೇ ಬಾಕಿ ಬರಲಿ ಆಮೇಲೆ ನೋಡೋಣ ಎಂದರು. 


---

ಬರಹ:- ಪಿ.ಎಸ್.ರಂಗನಾಥ - ರಾಂಪುರ

Photo Credit:- Google Images.

ಸಾಂಧರ್ಭಿಕ ಚಿತ್ರ

Saturday, May 22, 2021

ಭೃಗು ಮಹರ್ಷಿ ಜಯಂತಿ

ಪದ್ಮಶಾಲಿ ಸಮಾಜದ ಮೂಲ ಪುರುಷ ಭೃಗು ಮಹರ್ಷಿ


ಇಂದು ವೈಶಾಕ ಶುಕ್ಲ ಪಕ್ಷದ ಏಕಾದಶಿ. ಸಮಸ್ತ ಪದ್ಮಶಾಲಿ ಭಾಂಧವರಿಗೂ ಭೃಗು ಮಹರ್ಷಿ ಜಯಂತಿಯ ಶುಭಾಶಯಗಳು. ಮಹರ್ಷಿಯ  ಕೃಪೆ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಪ್ರಾರ್ಥಿಸೋಣ.

ಬ್ರಹ್ಮಣೋ ಹೃದಯಂ ಭಿತ್ತ್ವಾ ನಿಃಸೃತೋ ಭಗವಾನ್ಭೃಗುಃ|



ಭಗವಾನ್ ಭೃಗುವು ಬ್ರಹ್ಮನ ಹೃದಯದಿಂದ ಬಂದವರು, ಈ ಭೃಗು ಮಹರ್ಷಿಯನ್ನು ಪದ್ಮಶಾಲಿಯರ ಮೂಲ ಪುರುಷ ಎಂದು ಗುರುತಿಸಲಾಗುತ್ತದೆ. ಭೃಗು ಮಹರ್ಷಿಯ ಕುರಿತು ಹಲವಾರು ಪುರಾಣ ಕಥೆಗಳಿವೆ. “ಭೃಗು ಜಾಯತೇ ಇತಿ ಭಾರ್ಗವ”ಎಂದರೆ ಮೂಲ ಪುರುಷ ಭೃಗು ಮಹರ್ಷಿಯ ವಂಶದವರು ಭಾರ್ಗವರು ಎಂದು ಕರೆಯುತ್ತಾರೆ.  ವೈದಿಕ ಧರ್ಮಾಚರಣೆಯಲ್ಲಿ ಭೃಗು ಮಹರ್ಷಿ ಗೆ ಮಹತ್ತರ ಸ್ಥಾನವಿದೆ. ಇವರ ಮುಂದಾಳತ್ವದಲ್ಲಿ ಹಲವಾರು ಯಾಗ ಯಜ್ಞ ಗಳು ನಡೆದಿವೆ.

ಧಕ್ಷ ಪ್ರಜಾಪತಿಯ ಮಗಳಾದ ಖ್ಯಾತಿ ದೇವಿಯೊಂದಿಗೆ ವಿವಾಹ ಜರುಗುತ್ತದೆ. 

ಖ್ಯಾತಿದೇವಿ  ಪತ್ನಿಗೆ ಶ್ರೀ ಲಕ್ಷ್ಮೀದೇವಿ ವರನೀಡಿ ಅದನ್ನು ನೆರವೇರಿಸಲು ಖ್ಯಾತಿದೇವಿಯ ಉದರಲ್ಲಿ ಮಗಳಾಗಿ ಜನಿಸಿದಳು. ಅದರಿಂದ ಭಾರ್ಗವೀ ಎಂದೂ ಹೆಸರಾಯಿತು. 

ಇವರಿಗೆ ಧಾತ, ವಿಧಾತ ಎನ್ನುವವರು ಪುತ್ರರಾಗಿ ಮತ್ತು ಶ್ರೀ ಲಕ್ಷ್ಮೀದೇವಿಯು  ಭಾರ್ಗವಿ ಯಾಗಿ ಜನುಮಿಸುತ್ತಾರೆ.

 ಬ್ರಹ್ಮನು ಸೃಷ್ಟಿಸಿದ ಅನೇಕ ಪ್ರಜಾಪತಿಗಳಲ್ಲಿ ಒಬ್ಬನು, ಭವಿಷ್ಯಸೂಚಕ ಜ್ಯೋತಿಷದ ಮೊದಲ ಸಂಕಲಕ, ಮತ್ತು ತ್ರೇತಾಯುಗದ ಅವಧಿಯಲ್ಲಿ ಬರೆದ ಅತ್ಯುತ್ಕೃಷ್ಟ ಜ್ಯೋತಿಷ ಕೃತಿ ಭೃಗು ಸಂಹಿತಾದ ಲೇಖಕ. ಭೃಗು ಸಂಹಿತೆ ಭಾರತೀಯ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರದ ವಿಕಾಸಕ್ಕೆ ಕಾರಣವಾಗುತ್ತದೆ. 


ಹಿಂದೂ ಪುರಾಣದ ಪ್ರಕಾರ, ಸಾಮಾಜಿಕ ಸ್ತರದಲ್ಲಿ ಮೇಲ್ಜಾತಿಯ ಬ್ರಾಹ್ಮಣರಿಗೆ ನೆರವಾಗಲು ಮತ್ತು ತನ್ನ ಮೇಲಿದ್ದ ಲಕ್ಷ್ಮಿಯ ಶಾಪ ತಗ್ಗಿಸಲು ಭೃಗು ಮಹರ್ಷಿ ಭೃಗು ಸಂಹಿತೆಯನ್ನು ಬರೆದರು. ಇದು ಶುಕ್ರ ಮತ್ತು ಮಹರ್ಷಿ ಭೃಗು ನಡುವೆ ನಡೆದ ಮಾತುಕತೆ ರೂಪದ ಗ್ರಂಥವಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ಧೇ ಆದಲ್ಲಿ, ಮನುಷ್ಯನ ಎಲ್ಲ ಸಂಕಟಗಳಿಗೆ ಪರಿಹಾರ ದೊರೆಯಲಿದೆ. 


ಹಿಂದೂ ಪುರಾಣ ಮತ್ತು ಇತಿಹಾಸಲ್ಲಿ ಬರುವ ಹಲವು ಋಷಿಮುನಿಗಳು, ರಾಜರು ಹಾಗೂ ಮಹಾಪುರುಷರು ಭೃಗು ಸಂಹಿತೆಯನ್ನು ಉಪಯೋಗಿಸಿದ್ದಾರೆ. ತಮ್ಮ ಬದುಕಿನಲ್ಲಿ ಉಂಟಾದ ತೊಳಲಾಟಗಳಿಂದ ಹೊರಬರಲು ಇಲ್ಲವೇ ಬದುಕನ್ನು ಇನ್ನಷ್ಟು ಸಮೃದ್ಧಗೊಳಿಸಲು ಇದನ್ನು ಬಳಸಿಕೊಂಡಿದ್ದಾರೆ. ಇದು ಕೇವಲ ಕೆಲವರಿಗಷ್ಟೇ ಬೇಕಾದ ಜ್ಞಾನವಲ್ಲ ಬದಲು ನಂಬಿಕೆಯಿಂದ ಇದನ್ನು ಓದಿ ಅನುಸರಿಸಿದರೆ ಎಲ್ಲ ರೀತಿಯ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರ ದೊರೆಯುತ್ತದೆ. ಭೋಜಪತ್ರದ ಮೇಲೆ ಬರೆಯಲಾದ ಭೃಗು ಸಂಹಿತೆ ಹಲವು ಪಾತ್ರ ಅಥವಾ ಅಧ್ಯಾಯಗಳಾಗಿ ವಿಂಗಡಣೆಯಾಗಿದೆ. ಹಲವರು ತಮ್ಮ ಬಳಕೆಗೆ ಒಂದೊಂದು ಭಾಗವನ್ನು ಕೊಂಡೊಯ್ದಿದ್ದರು. ಹೀಗೆ ಹರಿದು ಹಂಚಿ ಹೋಗಿದ್ದ ವಿವಿಧ ವಿಭಾಗಗಳನ್ನು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿ ಭೃಗು ಮಹಾಶಾಸ್ತ್ರವನ್ನು ರೂಪಿಸಲಾಗಿದೆ.


ಸಂಗ್ರಹ ಮಾಹಿತಿ.

ಪಿ.ಎಸ್.ರಂಗನಾಥ



Friday, May 21, 2021

ತಿರುಮಲ ಶ್ರೀ ಪದ್ಮಾವತಿ (ಲಕ್ಷ್ಮಿ) ದೇವಿ ಪದ್ಮಶಾಲಿ ಮನೆ ಮಗಳು

 ತಿರುಮಲ ಶ್ರೀ ಪದ್ಮಾವತಿ (ಲಕ್ಷ್ಮಿ) ದೇವಿ   ಪದ್ಮಶಾಲಿ ಮನೆ ಮಗಳು 


ಹದಿನೈದನೆಯ ಶತಮಾನದ ಆರಂಭದಲ್ಲಿ, ತಿರುಪತಿ, ತಿರುಚಾನೂರು, ಯೋಗಿ ಮಲ್ಲವರಂ, ನಾರಾಯಣವರಂ ಮುಂತಾದ ಪ್ರಾಂತ್ಯಗಳಲ್ಲಿ  ಜೀವನೋಪಾಯಕ್ಕಾಗಿ ಕೈಮಗ್ಗ ವೃತ್ತಿಯನ್ನು ಅವಲಂಬಿಸಿದ್ದ ನೇಕಾರರಲ್ಲಿ  ನಮ್ಮ ಪದ್ಮಶಾಲಿ ಸಮಾಜ ಮತ್ತು ಇತರೆ ನೇಕಾರರ ಮಧ್ಯೆ  ಒಂದು ವಿವಾದ ಶುರುವಾಗಿತ್ತು. ಅದೇನೆಂದರೆ, ತಿರುಚಾನೂರು ಪದ್ಮಶಾಲಿಗಳು "ಅಲಮೇಲುಮಂಗಮ್ಮ" ನಮ್ಮ ಮನೆಮಗಳು ಅಂತ ಹೇಳಿದರೆ,  ಇತ್ತ ಇತರೆ ನೇಕಾರರು "ಇಲ್ಲ ಇಲ್ಲ ನಮ್ಮ ಮನೆಮಗಳು" ಎಂದು, ಪದ್ಮಾವತಿ ದೇವಿಗೆ ತಾವೇ ಮೊದಲಿಗೆ ಅರಿಶಿಣ ಕುಂಕುಮ ಮತ್ತು ಸೀರೆಯನ್ನು ಕೊಡಬೇಕು ಎಂದು ಇಬ್ಬರೂ ವಾದಿಸುತಿದ್ದರು.


ಈ ಸಮಸ್ಯೆ ಯನ್ನ ಆಗಿನ ಚಂದ್ರಗಿರಿಯ ಪ್ರಾಂತ್ಯವನ್ನ ಆಳುತಿದ್ದ ಪುರುಷೋತ್ತಮ ರಾಯರನ್ನ ಕೇಳಿಕೊಂಡರಂತೆ. ಇಂತಹ ಜಟಿಲವಾದ ಸಮಸ್ಯೆಯನ್ನು ಬಗೆಹರಿಸಲು ಎಷ್ಟೇ ಆಲೋಚಿಸಿದರು ಯಾವುದೇ ಪರಿಹಾರ ಸಿಗಲಿಲ್ಲ. ಕೂಡಲೇ ಜಗತ್ಪ್ರಸಿದ್ದ ಮಹಾನ್ ದಾರ್ಶನಿಕ ತಾಳ್ಳಪಾಕ್ಕ ಅನ್ನಮಯ್ಯರವರ ಮೊಮ್ಮಗರಾದ  ಚಿನ್ನನ್ನ ಆಚಾರ್ಯರನ್ನ ಕೇಳಿದರಂತೆ.  ಚಿನ್ನನ್ನಾಚಾರ್ಯ ರವರ ಇನ್ನೊಂದು ಹೆಸರು  ತಾಳ್ಳಪಾಕ ಚಿನತಿರು ವೆಂಗಳನಾಥ.  


ಅನ್ನಮಯ್ಯರಿಗೆ ಬಾಲ್ಯದಲ್ಲಿ  ಅಲಮೇಲು ಮಂಗಮ್ಮ ಪ್ರಸಾದ ತಿನ್ನಿಸಿದಂತೆ,   ವೆಂಗಳನಾಥರಿಗೆ ಸ್ತನಪಾನವನ್ನು ಮಾಡಿಸಿದ್ದರಂತೆ. ಆದ್ದರಿಂದ ಚಿನ್ನನ್ನರಿಗೆ ಕವಿತೆ ಬರೆಯುವ ಕಲೆ ಸಿದ್ದಿಸಿತಂತೆ. ಅದೂ ಅಲ್ಲದೆ ಚಿನ್ನನ್ನರೊಂದಿಗೆ ಯಾವಾಗಂದರೆ ಅವಾಗ ಅಲಮೇಲು ಮಂಗಮ್ಮ ಮಾತನಾಡುತಿದ್ದರಂತೆ.


ಆದ್ದರಿಂದ ಚಿನ್ನನ್ನ ಇಬ್ಬರನ್ನ ಸಮಧಾನಗೊಳಿಸಿ, ದೇವಿ ಅಲಮೇಲು ಮಂಗಮ್ಮರ ಜತೆ ಮಾತನಾಡುತ್ತ, "ತಾಯಿ ಸಮಸ್ಯೆ ಏನಂತ ನಿನಗೆ ತಿಳಿದಿದೆ, ನೀನು ಯಾರ ಮಗಳು ಹೇಳು  ಎಂದು ಕೇಳುತ್ತಾನೆ"


ಆಗ ದೇವಿ ಪ್ರತ್ಯಕ್ಷಳಾಗಿ, " ನಾನು ಪದ್ಮಶಾಲಿಗಳ ಮನೆಮಗಳು, ತವರು ಮನೆಯವರಾದ ಪದ್ಮಶಾಲಿಯವರು ನನಗೆ ಮೊದಲು ಅರಿಶಿಣ ಕುಂಕುಮ ಮತ್ತು ಸೀರೆಯನ್ನು ಕೊಡಬೇಕು ಅದರ ನಂತರ ಬೇರೆಯವರ ಗೌರವಾದಾರಗಳನ್ನ ಸ್ವೀಕರಿಸುತ್ತೇನೆ" ಎಂದು ಹೇಳುತ್ತಾಳೆ.


ಅಲಮೇಲು ಮಂಗಮ್ಮ ಹೇಳಿದ ಈ ಸಾಕ್ಷಿಯಿಂದ ಸಮಸ್ಯೆ ಅಲ್ಲಿಗೆ ಮುಗಿಯಿತು.  ಕೂಡಲೇ, ಪುರುಷೋತ್ತಮ ರಾಯರು ಅಲ್ಲಿ ದಾಖಲೆ ಬರೆಯಿಸಿ ಆ ಸಮಸ್ಯೆಗೆ ಸುಂಖಾಂತ್ಯವನ್ನಾಡಿದರು. ಶುಭಕೃತ್ತು ನಾಮಸಂವತ್ಸರ, ಕಾರ್ತಿಕ ಹುಣ್ಣಿಮೆ  ಗುರುವಾರ 23 ಅಕ್ಟೋಬರ್ 1541 ರಂದು ಈ ಘಟನೆ ನಡೆದಿತ್ತು ಎಂದು ಇತ್ತೀಚೆಗೆ ದೊರೆತ ಶಾಸನವೊಂದರಲ್ಲಿ ಈ ಕುರಿತು ದಾಖಲಾಗಿದೆ.


ಈ ಎಲ್ಲ ಕಾರಣದಿಂದ,  ತಿರುಪತಿ, ಶ್ರೀರಂಗಂ, ಅಹೋಬಿಲಂ, ತಿರುಚಾನೂರ್, ನಾರಾಯಣವನಂ, ಶ್ರೀನಿವಾಸ ಮಂಗಾಪುರಂ, ಜಮ್ಮಲಮಡುಗು ಮಂಗಳಗಿರಿ ಮುಂತಾದ 108  ವೈಷ್ಣವ ಕ್ಷೇತ್ರಗಳಲ್ಲಿ ಪದ್ಮಶಾಲಿಗಳೇ ವಸ್ತ್ರಾಭರಣವನ್ನು, ಅರಿಶಿಣ ಕುಂಕುಮ ಕೊಡುತ್ತಾ ಬಂದಿದ್ದಾರೆ.


ತಿರುಪತಿ ದೇವಸ್ಥಾನದವರು ಸಿರಿ ಕೋಲುವು ಎನ್ನುವ ಪುಸ್ತಕ ಪ್ರಕಟಿಸಿದ್ದಾರೆ. ಅದರಲ್ಲಿ ಈ ಬಗ್ಗೆ ಶ್ರೀ ಮಹಾಲಕ್ಷ್ಮಿ ಮತ್ತು ಪದ್ಮಾವತಿ ದೇವಿ ಪದ್ಮಶಾಲಿಯವರ ಮನೆಮಗಳು ಎಂದು ಬರೆಸಿದ್ದಾರೆ. 


ಪದ್ಮಾವತಿ ತಾಯಿಗೆ ದೇವಾಲಯ ನಿರ್ಮಾಣ ಮಾಡಲು, ಆ ಕಾಲದಲ್ಲಿ ತಾಳ್ಳಪಾಕ ಚಿನ್ನನ್ನರವರಿಗೆ ಪದ್ಮಶಾಲಿ ಸಮಾಜದವರು ಇಪ್ಪತ್ತು ಸಾವಿರ ವರಹಗಳನ್ನು ನೀಡಿದ್ದರಂತೆ.

ಬರಹ: ಪಿ.ಎಸ್.ರಂಗನಾಥ

ಸಂಗ್ರಹ ಮಾಹಿತಿ







ಪದ್ಮಶಾಲಿ ವಂಶ ಚರಿತ್ರೆ - ತೆಲುಗು

 


ಭಕ್ತ ಮಾರ್ಕಂಡೇಯ

 


Thursday, May 20, 2021

ಭಾವನ ಋಷಿ - ಭೃಗು ವಂಶೋದ್ದಾರಕ



ಭಾವನ ಋಷಿ - ಭೃಗು ವಂಶೋದ್ದಾರಕ, ಮಾರ್ಕಂಡೇಯ ಪುತ್ರ, ಶ್ರೀ ಮನ್ ನಾರಾಯಣ ಅಂಶ ಉಳ್ಳ ಭಾವನಾರಾಯಾಣ ಎಂದು ಕರೆಯಲ್ಪಡುವ, ಶ್ರೀ ವೇದಶಿರ/ ಶ್ರೀ ಭಾವ ನಾರಾಯಣ ಸ್ವಾಮಿ/ ಶ್ರೀ ಭಾವಾನಾ ಋಷಿ ಹಲವಾರು ಹೆಸರುಗಳಲ್ಲಿ ಇವರನ್ನ ಗುರುತಿಸಲಾಗುತ್ತದೆ.

- ಪಿ.ಎಸ್.ರಂಗನಾಥ. ರಾಂಪುರ.

ಶ್ರೀಮನ್ನಾರಾಯಣನ ಅಂಶವುಳ್ಳ ಭೃಗು ಕುಲದ ಉದ್ದಾರಕ ಭೃಗು ಮಹರ್ಷಿಯ ಮರಿ ಮೊಮ್ಮಗ. ಶ್ರೀ ಮಾರ್ಕಂಡೇಯ ಅವರ ಪುತ್ರ, ಪ್ರಪ್ರಥಮ ವಸ್ತ್ರ ಸೃಷ್ಟಿ ಕರ್ತ ಬ್ರಹ್ಮ ಲೋಕ ಶಿವನ ಕೈಲಾಸ ವಿಷ್ಣುವಿನ ವೈಕುಂಠಕ್ಕೆ ಮತ್ತು  ಸೌರಮಂಡಲದ ಜಗತ್ತಿಗೆ ಸಶರೀರದೊಂದಿಗೆ  ಹೋಗಬಲ್ಲ ಮಹಾ ತಪೋ ಸಂಪನ್ನನಾದ  ಭಾವನಾ ಮಹರ್ಷಿ ಜಯಂತಿ ಮಹೋತ್ಸವದ ಪರ್ವದಿನ ಇಂದು.

ಸಕಲ ದೇವರುಗಳಿಗೆ ಮತ್ತು ಸಕಲ ಮಾನವರಿಗೆ ನಗ್ನತ್ವದಿಂದ  ವಿಮುಕ್ತಿಗೊಳಿಸಲು ಶ್ರೀ ಮಹಾವಿಷ್ಣುವಿನ ನಾಭಿಕಮಲದಿಂದ ತಂತುಗಳನ್ನ ಪಡೆದು ವೇದ ಜ್ನಾನದಿಂದ (ಮಗ್ಗ) ಯಂತ್ರವನ್ನು ನಿರ್ಮಿಸಿ ವಸ್ತ್ರ ನಿರ್ಮಾಣಕ್ಕಾಗಿ ಮಣಿಪುರ ಎನ್ನುವ ಪ್ರತ್ಯೇಕ ಗೃಹ ನಿರ್ಮಿಸಿ, ಚೈತ್ರ ಶುದ್ಧ ಪಂಚಮಿ ದಿನದಂದು, ಮೊಟ್ಟ ಮೊದಲ ಬಾರಿಗೆ ಅತ್ಯುತ್ತಮ ದರ್ಜೆಯ ಉಡುಪುಗಳನ್ನು ತಯಾರಿಸಿ  ಮೊದಲು ವಿಘ್ನೇಶ್ವರನಿಗೆ ಸಲ್ಲಿಸಲಾಯಿತು


ವಿಘ್ನ ನಿವಾರಕನ ಆಶೀರ್ವಾದ ಪಡೆದ ನಂತರ ಶ್ರೀ ಲಕ್ಷ್ಮಿ ನಾರಾಯಣರಿಗೆ ವಸ್ತ್ರಗಳನ್ನು ಸಮರ್ಪಿಸಿದರು. ಅವರು ಸಂತೋಷಗೊಂಡು ಸಕಲ ಸಂಪತ್ತನ್ನೆಲ್ಲಾ ದಯಪಾಲಿಸಿ ಪದ್ಮಬ್ರಹ್ಮ, ಪದ್ಮಶಾಲಿ,  ಬಹೋತ್ತಮ, ಪದ್ಮಶಾಖಿ ಎನ್ನುವ ಬಿರುದುಗಳನ್ನ ನೀಡಿದರು.


ಚತುರ್ಮುಖ ಬ್ರಹ್ಮ ಮತ್ತು ಸರಸ್ವತಿಯವರಿಗೆ ವಸ್ತ್ರಗಳನ್ನು ಅರ್ಪಿಸಿದರೆ,  ಅವರು 64 ವಿದ್ಯೆಗಳನ್ನು, ಅಖಂಡ ಬ್ರಹ್ಮಜ್ನಾನವನ್ನು ಕೊಡುಗೆಯಾಗಿ ನೀಡಿದರು.


ನಂತರ ಶಿವ ಪಾರ್ವತಿಯವರಿಗೆ ವಸ್ತ್ರಗಳನ್ನ ಸಮರ್ಪಿಸಲಾಯಿತು, ಪಾರ್ವತೀ ದೇವಿ ಮೃತಾ ಸಂಜೀವನಿ ವಿದ್ಯಾ, ಶಾಂಭವಿ ವಿದ್ಯೆ ಗಳನ್ನು ಅನುಗ್ರಹಿಸಿದರು. 


ಪರಮಶಿವನು ವಸ್ತ್ರದ ಬದಲಾಗಿ, ಹುಲಿ ಚರ್ಮವನ್ನು ಕೇಳಿದನು, ಸೂರ್ಯಪುತ್ರಿ  ಭದ್ರಾವತಿ ದೇವಿಯೊಂದಿಗೆ ಹುಲಿ ಚರ್ಮವನ್ನು ತಂದು ಪರಮೇಶ್ವರನಿಗೆ ಹುಲಿ ಚರ್ಮದ ವಸ್ತ್ರವನ್ನು  ಮಾಡಿಕೊಟ್ಟರು.


ಅದೇರೀತಿ, ಸಕಲ ದೇವರಿಗೂ ವಸ್ತ್ರಗಳನ್ನ ಸಮರ್ಪಿಸಿದರು. ಅವರೆಲ್ಲರೂ, ಮೂವತ್ತಾರು ಬಿರುದುಗಳನ್ನ ಕೊಟ್ಟು ಗೌರವಿಸಿದರು.


ಮಹಾವಿಷ್ಣು ವು "ವೇದಶೀರ/ಭಾವನಾ ಋಷಿಗೆ" ನೂರು ಪದ್ಮಗಳನ್ನು ನೀಡಿ ಅವುಗಳ ಪ್ರಸಾದದೊಂದಿಗೆ  ನೂರು ಜನ ಋಷಿಮುನಿಗಳ ಸಂತಾನವನ್ನು ನೀವು ಹೊಂದಿರಿ ಎಂದು ಅನುಗ್ರಹಿಸಿದರು.


ಅಜರಾಶ್ಚಟಾಯೋ ಪುತ್ರ

ಪೌತ್ರಾಶ್ಚ  ಬಹುವೋ ಭವನ್!

ಮಾರ್ಕಂಡೇಯ ಸಮಾಖ್ಯಾತಃ

ಋಷಯೋ ರಿಷಾಯೋ ವೇದ ಪಾರಂಗತ !!


ಭಾವನಾರಾಯಣನ ಸಂತಾನವು ಮಾರ್ಕಂಡೇಯ ನಂತೆ ಅಖಂಡ ಮೇಧಾವಿಗಳಾಗಿ ಋಷಿಗಳು, ವೈದಿಕ ವಿದ್ವಾಂಸರು, ಭೃಗು ಬ್ರಾಹ್ಮಣ ಪದ್ಮಶಾಲಿ ವಂಶದ ಮೂಲ ಪುರುಷರಾದರು.


ಶ್ರೀ ಭಾವನಾರಾಯಣ ಧರ್ಮಪತ್ನಿ ಸೂರ್ಯ ಪುತ್ರಿ ಭದ್ರಾವತಿ ದೇವಿ ಸಮೇತ  ಕಾಲವಾಸುರ ನೊಂದಿಗೆ ಅತ್ಯಂತ ಭಯಾನಕ ಯುದ್ಧದಲ್ಲಿ "ಶ್ರೀ ಮನ್ ನಾರಾಯಣ ಅಸ್ತ್ರವನ್ನು"  ಉಪಯೋಗಿಸಿ ಕಾಲವಾಸುರನನ್ನ ಸಂಹರಿಸಿದರು.


ಭಗವಾನ್ ವಿಷ್ಣುವು ಪ್ರತ್ಯಕ್ಷರಾಗಿ,


ಯುವಾಂತು ಪದ್ಮಕೋಶಿಯೈಃ

ಪೂಜ್ಯ ದ್ವಿಜಾದಿಭಿ

ಯೌವೈನಾ ಪೂಜ್ಯತೆ ತೌತು

ಮಮ ದ್ರೋಹಿ ಭವೇಧೃವಂ


ಓ ಭಾವನಾರಾಯಣ!

ನಾನು ನಿಮಗೆ ವಚನ ನೀಡುತಿದ್ದೇನೆ. ಭೃಗು ವಂಶದಲ್ಲಿ ಜನಿಸಿದವರೆಲ್ಲರೂ ಅವರು ನನ್ನ ವಂಶದವರೇ ಆಗಿರುತ್ತಾರೆ. ನನ್ನ ಧರ್ಮವೇ ಅವರ ಧರ್ಮವು. ನನ್ನನ್ನು ಪೂಜಿಸುವವರು, ನಿನ್ನನ್ನೂ ಸಹ ಆರಾಧಿಸುತ್ತಾರೆ.

Monday, April 19, 2021

ಮಾರ್ಕಂಡೇಯ ಪರ್ವತ - ವಕ್ಕಲೇರಿ


ಚಿನ್ನದ ನಾಡು ಕೋಲಾರ ಜಿಲ್ಲೆಯಲ್ಲಿರುವ ಪುರಾತನ ಪುಣ್ಯಕ್ಷೇತ್ರ ವಕ್ಕಲೇರಿ. ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾದ ರಮಣೀಯ ಮಾರ್ಕಂಡೇಶ್ವರಸ್ವಾಮಿ ಬೆಟ್ಟವಿದೆ. ಬೆಟ್ಟಕ್ಕೆ ಈ ಹೆಸರು ಬರಲು ಕಾರಣ ಬೆಟ್ಟದ ಮೇಲಿರುವ ಶ್ರೀ ಮಾರ್ಕಂಡೇಶ್ವರಸ್ವಾಮಿಯ ಬೃಹತ್ ದೇವಾಲಯ.

ಬಿಳಿಬೆಟ್ಟ ಭೃಗು ವಂಶಿಯಾದ ಭಾರ್ಗವ ಮಾರ್ಕಂಡೇಯ ನದಿಯ ಉಗಮ ಸ್ಥಾನವಾಗಿದ್ದು, ಬಂಗಾರಪೇಟೆ ತಾಲ್ಲೂಕು ಬೂದಿಕೋಟ ಬಳಿ ಶ್ರೀ ಮಾರ್ಕಂಡೇಯ ಜಲಾಶಯವೇ ಇದೆ.

ವಕ್ಕಲೇರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಆರಾಧ್ಯ ದೈವವಾಗಿ ಹಾಗೂ ಭಾರ್ಗವ ಪದ್ಮಶಾಲಿ ಜನಾಂಗದ ಕುಲದೈವವಾದ ಮಾರ್ಕಂಡೇಶ್ವರ ಸ್ವಾಮಿ ಅವತಾರದ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ.

ಬ್ರಹ್ಮ ಮಾನಸ ಪುತ್ರನಾದ ಭೃಗು ಮಹರ್ಷಿಯ ವಂಶಸ್ಥನಾದ ಮೃಕಂಡು ಮಹಾಮುನಿ ಹಾಗೂ ಮರುಧ್ವತಿ ದೇವಿ ದಂಪತಿಗೆ ಬಹಳ ಕಾಲ ಮಕ್ಕಳಿಲ್ಲದಿದ್ದರಿಂದ ಮೃಕಂಡು ಪುತ್ರಾರ್ಥಿಯಾಗಿ ಪರಮೇಶ್ವರನನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗಿ ಜ್ಞಾನಿಯೂ ದೈವಭಕ್ತನೂ ಆದ ಅಲ್ಪಾಯುಷಿ ಮಗ ಬೇಕೋ ಅಥವಾ ದೀರ್ಘಾಯುಷಿಯಾದ ಲೋಕಕಂಟಕನಾದ ಮಗ ಬೇಕೋ ಎಂದು ಕೇಳಿದಾಗ, ಮೃಕಂಡು ಅಲ್ಪಾಯುಷಿಯಾದರೂ ಜ್ಞಾನಿಯಾದ ಮಗನೇ ಬೇಕೆನ್ನುತ್ತಾನೆ. ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯ.[೧]

ತಾನು ಅಲ್ಪಾಯು ಎಂದು ತಿಳಿದ ಭಾರ್ಗವ ಮಾರ್ಕಂಡೇಯ, ತನ್ನ ತಂದೆ, ತಾಯಿಗಳ ಸಂತುಷ್ಟಿಗಾಗಿ ಶಿವನನ್ನು ಕುರಿತು ತಪವನ್ನಾಚರಿಸುತ್ತಾನೆ. ಆತನ ಆಯುಶ್ ಮುಗಿದ ದಿನ ಈಗಿನ ವಕ್ಕಲೇರಿಯ ಬೆಟ್ಟದ ಶಿಖರದಲ್ಲಿ ಮಾರ್ಕಂಡೇಯ ಶಿವಪೂಜೆಯಲ್ಲಿದ್ದಾಗ, ಅವನ ಪ್ರಾಣ ಕೊಂಡೊಯ್ಯಲು ಬಂದ ಯಮಧರ್ಮ, ಅವನ ಕೊರಳಿಗೆ ಪಾಶ ಹಾಕಿದಾಗ ಮಾರ್ಕಂಡೇಯ ಶಿವಲಿಂಗ ತಬ್ಬಿ ಹಿಡಿಯುತ್ತಾನೆ. ಯಮ ಬಲವಂತ ಮಾಡಿ ಎಳೆದಾಗ, ಲಿಂಗದಿಂದ ಕೋಪವಿಷ್ಟನಾಗಿ ಎದ್ದ ಶಿವ,ತನ್ನ ತ್ರಿಶೂಲದಿಂದ ಯಮನನ್ನೇ ಕೊಲ್ಲಲು ಮುಂದಾಗುತ್ತಾನೆ. ನಂತರ ಶಾಂತನಾಗಿ ಮಾರ್ಕಂಡೇಯನಿಗೆ ಚಿರಂಜೀವಿಯಾಗೆಂದು ವರ ನೀಡುತ್ತಾನೆ.

ಯಮನನ್ನು ಗೆದ್ದು ಚಿರಂಜೀವಿಯಾದ ಭಾರ್ಗವ ಮಾರ್ಕಂಡೇಯನನ್ನು ರಕ್ಷಿಸಲು ಭುವಿಯಲ್ಲಿ ಅವತರಿಸಿದ ಶಿವ ಇದೇ ಬೆಟ್ಟದಲ್ಲಿ ಮಾರ್ಕಂಡೇಶ್ವರನಾಗಿ ಬೆಟ್ಟವೇರಿ ಬರುವ ಭಕ್ತರನ್ನು ಸಲಹುತ್ತಿದ್ದಾನೆ.

ಮಾರ್ಕಂಡೇಯನಿಗೆ ಯಮನ ಪಾಶದಿಂದ ವಿಮುಕ್ತಿಗೊಳ್ಳುವ ವರ ನೀಡಿದ ಕಾರಣದಿಂದ ಇದಕ್ಕೆ ‘ ವರಪುರಿ “ ಎಂದು ಹೆಸರು ಬಂತು ಎಂದು ಸ್ಕಾಂದ ಪುರಾಣದಲ್ಲಿ ಉಲ್ಲೇಖವಿದೆ. ಕ್ರಮಕಪುರಿ ಎಂದೂ ಕರೆಸಿಕೊಂಡಿದ್ದ ಈ ಊರು ನಂತರ ವಕ್ಕಲೇರಿಯಾಯಿತು ಎಂದು ಸ್ಥಳೀಯರು ಹೇಳುತ್ತಾರೆ.

ಈ ದೇವಾಲಯವು ವಿಶಾಲವಾದ ಏಕಶಿಲಾ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಈ ಬೃಹತ್ ವಿಶಾಲವಾದ ಬಂಡೆಯಲ್ಲಿ ಒಂದು ಅಡಿ ಅಗಲದ ಸುಮಾರು ಉದ್ದವಾದ ಕಪ್ಪಾದ ಪಟ್ಟಿಯು ಬಂಡೆಯ ದಕ್ಷಿಣ ಪಾರ್ಶ್ವದಿಂದ ಗರ್ಭಾಂಕಣದವರೆಗೆ ಬಂಡೆಯಲ್ಲಿ ಮೂಡಿ ಬಂದಿದೆ. ಇದರ ಬಗ್ಗೆ ಯಮಧರ್ಮರಾಯನು ಮಾರ್ಕಂಡೇಯನಿಗೆ ಯಮಪಾಶವನ್ನು ಹಾಕಿ ಎಳೆದ ಕುರುಹುಗಳು ಬೆಟ್ಟದ ಮೇಲಿರುವ ಬಾವಿಯಲ್ಲಿ ಇಂದಿಗೂ ಕಾಣಿಸುತ್ತದೆ ಎನ್ನಲಾಗುತ್ತದೆ. ಯಮ ಬಂದು ಎಳೆದಾಗ ಮಾರ್ಕಂಡೇಯ ಶಿವಲಿಂಗವನ್ನು ಕೈಗಳಿಂದ ತಬ್ಬಿ ಹಿಡಿದಾಗ ಮೂಡಿತೆನ್ನಲಾದ ಉಗುರಿನ ಗುರುತುಗಳು ಶಿವಲಿಂಗದ ಮೇಲಿವೆ.

೧೨ನೇ ಶತಮಾನದ ಆದಿಯಲ್ಲಿ ಪ್ರಾರಂಭವಾದ ದೇವಾಲಯ ನಿರ್ಮಾಣ ಕಾರ್ಯ ೧೬ನೇ ಶತಮಾನದವರೆವಿಗೆ ನಡೆಯಿತೆಂಬುದು ಇತಿಹಾಸದಿಂದ ವೇದ್ಯವಾಗುತ್ತದೆ. ಚೋಳರು, ವಿಜಯನಗರದ ಅರಸರು ದೇವಾಲಯ ಅಭಿವೃದ್ಧಿ ಪಡಿಸಿದ್ದಾರೆ. ಇತ್ತೀಚೆಗೆ ೧೯೭೦ರಲ್ಲಿ ಶ್ರೀ ಪಟೇಲ್ ವೆಂಕಟರಾಮೇಗೌಡ ರವರು ಶ್ರಮವಹಿಸಿ ಬೆಟ್ಟ ಹತ್ತಿಬರಲು ಸುಲಭವಾದ ಮೆಟ್ಟಲುಗಳನ್ನು ನಿರ್ಮಿಸಿದ್ದಾರೆ.[೨]


೧೯೮೮ರಲ್ಲಿ ದೇವಾಲಯಕ್ಕೆ ಗೋಪುರ ನಿರ್ಮಾಣ ಕಾರ್ಯ ಆರಂಭವಾಗಿ, ೧೯೯೦ರಲ್ಲಿ ಅನಾವರಣಗೊಂಡಿತು. ಈ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ನೀಲಂ ಸಂಜಿವರೆಡ್ಡಿ ಮತ್ತಿತರರು ಪಾಲ್ಗೊಂಡಿದರು. ೧೯೮೭ರಲ್ಲಿ ಕೆಲವು ಕಿಡಿಗೇಡಿಗಳು ಇಲ್ಲಿದ್ದ ಪುರಾತನ ಸುಬ್ರಮಣ್ಯ, ಪಾರ್ವತಿ, ಗಣಪತಿ ಹಾಗೂ ಶ್ರೀವಳ್ಳಿ ವಿಗ್ರಹಗಳನ್ನು ಭಗ್ನಗೊಳಿಸಿದಾಗ, ವೇಮಗಲ್ ಶಾಸಕರಾಗಿದ್ದ ಶ್ರೀ ಬೈರೇಗೌಡರು ಹೊಸ ವಿಗ್ರಹಗಳನ್ನು ಕೆತ್ತನೆ ಮಾಡಿಸಿ, ೧೯೯೦ರಲ್ಲಿ ಪುನರ್ ಪ್ರತಿಷ್ಠೆ ಮಾಡಿಸಿದರು. ಈ ದೇವಸ್ಥಾನಕ್ಕೆ ಮಹಾದ್ವಾರ, ಬಹೃತ್ ವಿಶಾಲವಾದ ಬಸವಮಂಟಪ, ಕಲ್ಯಾಣ ಮಂಟಪ, ಸುಖನಾಸಿ, ನವರಂಗ, ಯಾಗ ಮಂಟಪ, ಗರ್ಭಾಂಕಣವಿದೆ. ವಿಶಾಲ ಪ್ರಕಾರದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಮೂಲಸ್ಥಾನದ ಸುತ್ತಲೂ ವೀರಭದ್ರಸ್ವಾಮಿ, ಸಪ್ತಮಾತೃಕೆಯರು, ವಿಘ್ನೇಶ್ವರಸ್ವಾಮಿ, ಸುಬ್ರಹ್ಮಣ್ಯೇಸ್ವಾಮಿ, ಪ್ರಸನ್ನ ಪಾರ್ವತಾದೇವಿ ಅಮ್ಮನವರು, ಚಂಡಿಕೇಶ್ವರಸ್ವಾಮಿ, ವೆಂಕಟರಮಣ ಸ್ವಾಮಿ, ಕಾಲಭೈರವಸ್ವಾಮಿ ದೇವರುಗಳ ಗುಡಿಗಳಿವೆ.


ನವರಂಗದಲ್ಲಿರುವ ದ್ವಾರ ಪಾಲಕರ ವಿಗ್ರಹಗಳು ಗಮನಸೆಳೆಯುವಂತಿವೆ. ಈ ದೇವಾಲಯದ ಕಲ್ಯಾಣ ಮಂಟಪ ಹಾಗೂ ನವರಂಗದಲ್ಲಿರುವ ಕಂಬಗಳು ಅತಿ ಸುಂದರವಾದ ಸೂಕ್ಷ್ಮ ಕೆತ್ತನೆಯಿಂದ ಮನಸೂರೆಗೊಳ್ಳುತ್ತವೆ.

ಮಹಾ ಶಿವರಾತ್ರಿ ದಿನ ಎರಡು ದಿನ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವ ಹಾಗೂ ಪದ್ಮಶಾಲಿ ಸಮಾಜದವರಿಂದ ಧ್ವಜಾರೋಹಣ, ಪರಮೇಶ್ವರನಿಗೆ ನಡೆಯುವ ಹತ್ತು ತಲೆ ಇಪ್ಪತ್ತು ಕೈಗಳ ರಾವಣ ವಾಹನೋತ್ಸವ ವಕ್ಕಲೇರಿ ಗ್ರಾಮದಲ್ಲಿ ನೆರವೇರುತ್ತದೆ. ಇದನ್ನು ನೋಡಲು ಎರಡು ಕಣ್ಣು ಸಾಲದು ಎಂದರೆ ಅತಿಶಯೋಕ್ತಿಯಲ್ಲ. ಆಷಾಡ ಶುದ್ಧ ತದಿಗೆಯಂದು ಬೆಟ್ಟದ ಮೇಲೆ ಶ್ರೀ ಮಾರ್ಕಂಡೇಯಸ್ವಾಮಿಯ ಜಯಂತಿ ನಡೆಯುತ್ತದೆ.

ಈ ದೇವಾಲಯದ ಬೆಟ್ಟದ ಸುತ್ತಲೂ ೧೭೩೦ ಎಕರೆ ಜಮೀನು ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದು, ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದೆ.ಈಗ ಶ್ರೀ ಮಾರ್ಕಂಡೇಶ್ವರ ದೇವಾಲಯ ಅಭಿವೃದ್ದಿ ದತ್ತಿ (ರಿ) ರವರು ದೇವಾಲಯದ ಅಭಿವೃದ್ದಿ ಕಾರ್ಯಗಳು ಹಾಗೂ ನಿತ್ಯ ಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ದೇವಾಲಯ ಹಿಂಭಾಗದ ಸುಮಾರು ೩ ಪರ್ಲಾಂಗ್ ದೂರದಲ್ಲಿ ಬಿಳಿ ಬೆಟ್ಟವಿದ್ದು ಇಲ್ಲಿ ವೀರಾಂಜನೇಯ ದೇವಾಲಯ ಇದೆ. ಈ ಪ್ರದೇಶಕ್ಕೆ ರಾಮಾಯಣ ಕಾಲದಲ್ಲಿ ಲವಕುಶ ಹಾಗೂ ಸೀತಾರಾಮರು ಬಂದಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿಯ ಒಂದು ಗುಹೆಯಲ್ಲಿ ಮಕ್ಕಳು ಮಲಗುವಂತಹ ಶಿಲಾ ತೊಟ್ಟಿಲುಗಳಿದ್ದು, ಇಲ್ಲಿ ಲವಕುಶರು ಮಲಗುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.