Saturday, February 24, 2024

ಹುಲಿ ಚಿತ್ರವಿರುವ ಧ್ವಜ ಹಾರಿಸುವ ಉದ್ದೇಶವೇನು?

ಮಾರ್ಕಂಡೇಯ ಮಹರ್ಷಿಗಳ ಜಯಂತಿ, ಕುಲದೇವರಾದ ಭಾವನಾ ಋಷಿ ಮತ್ತು ಭದ್ರಾವತಿ ದೇವಿಯವರ ಕಲ್ಯಾಣ ಮಹೋತ್ಸವವನ್ನು ಪದ್ಮಶಾಲಿಗಳು ಎಲ್ಲೆಡೆ ಆಚರಿಸುತ್ತಿರುವುದು ಬಹಳ ಖುಷಿಯ ವಿಚಾರ. ಇತ್ತೀಚೆಗೆ ಕೆಲವೆಡೆ ಹುಲಿ ಚಿತ್ರವಿರುವ ಧ್ವಜವನ್ನು ಹಾರಿಸುತ್ತಿದ್ದಾರೆ. ಈ ಆಚರಣೆಯನ್ನು ಯಾರು ಜಾರಿಗೆ ತಂದರು? ಯಾಕೆ ಜಾರಿಗೆ ತಂದರು ಎಂದು ಬಹಳಷ್ಟು ಜನರಿಗೆ ಮಾಹಿತಿಯಿಲ್ಲ. ಇದರ ಕುರಿತು ಮಾಹಿತಿ ನೀಡುವ ಮುಂಚೆ ನಮ್ಮ ಪದ್ಮಶಾಲಿ ಸಮಾಜದೊಳಗಿನ ವೈವಿಧ್ಯತೆಯನ್ನು ತಿಳಿದುಕೊಳ್ಳೋಣ

ಪದ್ಮಶಾಲಿ ಸಮಾಜಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿದೆ. ನೇಕಾರಿಕೆ ಬಹುತೇಕ ಕುಲ ಕಸುಬಾದರು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ವಿವಿಧ ವೃತ್ತಿಗಳನ್ನು ಆಯ್ದುಕೊಂಡಿದ್ದಾರೆ. ಪದ್ಮಶಾಲಿಗಳು ತಮ್ಮ ಆಚಾರ ವಿಚಾರ ಮತ್ತು ಸಂಪ್ರದಾಯಗಳಲ್ಲಿ ವೈದಿಕ ಹಿಂದೂ ಧರ್ಮದ ಆಚರಣೆಗಳನ್ನು ಅಳವಡಿಸಿಕೊಂಡಿದ್ದಾರೆ. ಸನಾತನ ಧರ್ಮದ ಚತುರ್ವಣಗಳಾದ ಬ್ರಾಹ್ಮಣ್ಯ, ವೈಶ್ಯ, ಕ್ಷತ್ರಿಯ ಮತ್ತು ಶೂದ್ರ ವರ್ಗಗಳನ್ನು ಪದ್ಮಶಾಲಿಗಳಲ್ಲಿ ಕಾಣಬಹುದು. ಬ್ರಾಹ್ಮಣ ಸಂಪ್ರದಾಯಂತೆ, ಕೆಲವರು ವೈದಿಕ ವೃತ್ತಿಯನ್ನು ಅಪ್ಪಿಕೊಂಡಿದ್ದು, ವೇದೋಪನಿಷತ್ ಪಾರಂಗತರಾಗಿ ಪೌರೋಹಿತ್ಯವನ್ನು ನಡೆಸುತ್ತ ಬಂದಿದ್ದಾರೆ. ಜವಳಿ ವ್ಯಾಪಾರ ಸೇರಿದಂತೆ ಹಲವಾರು ಉಧ್ಯಮಗಳಲ್ಲಿ ವೈಶ್ಯರಂತೆ ತೊಡಗಿಸಿಕೊಂಡಿದ್ದಾರೆ, ತೆಲಂಗಾಣದ ಕೆಲಭಾಗದಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ಕೆಲ ಪದ್ಮಶಾಲಿಗಳು ತಮ್ಮನ್ನ ಕ್ಷತ್ರಿಯರೆಂದು ಗುರುತಿಸಿಕೊಳ್ಳಲು ಇಚ್ಚಿಸುತ್ತಾರೆ. ನೇಕಾರಿಕೆ, ಕೃಷಿ ಮತ್ತಿತರ ಕೆಲಸಗಳಲ್ಲಿ, ಶೂದ್ರರಂತೆ ದುಡಿಯುವ ವರ್ಗದಲ್ಲಿ ಕೆಲ ಪದ್ಮಶಾಲಿಗಳು ತೊಡಗಿಸಿಕೊಂಡಿದ್ದಾರೆ. 

ಸಮಾಜದಲ್ಲಿ ವಿವಿಧ ಗುಂಪುಗಳಾಗಿ ರೂಪುಗೊಂಡು ತಮ್ಮದೇ ಆದ ಐತಿಹ್ಯವನ್ನು ಸ್ಥಾಪಿಸಿಕೊಂಡು ಪದ್ಮಶಾಲಿಗಳು ಬಂದಿದ್ದಾರೆ. ಕೆಲವರು ಶೈವ ಮತ್ತು ವೈಷ್ಣವ ಎಂದು, ಬಿಳಿ ಪತ್ತಲ ಮತ್ತು ಹಳದಿ ಪತ್ತಲ ಎಂದು, ನಾಮಧಾರಿ ಮತ್ತು ಮೋಡಿಯವರು ಎಂದು ತಮ್ಮದೇ ಆದ ಪದ್ದತಿಗಳು, ಆಚಾರ ವಿಚಾರ, ಸಂಪ್ರದಾಯವನ್ನು ರೂಡಿಸಿಕೊಂಡಿದ್ದಾರೆ. ಇದೆಲ್ಲದರ ಮಧ್ಯೆ, ಸಸ್ಯಹಾರಿ ಬ್ರಾಹ್ಮಣ ಸಂಪ್ರದಾಯವಾದಿ ಪದ್ಮಶಾಲಿಗಳು ಮತ್ತು ಮಾಂಸಹಾರಿ ಪದ್ಮಶಾಲಿಗಳು ಎನ್ನುವ ಪಂಗಡಗಳು ರೂಪುಗೊಂಡಿವೆ. ಜೀವನ ಪೂರ್ತಿ ಸಂಪ್ರದಾಯಬದ್ದವಾಗಿ ಜನಿವಾರ ಧರಿಸಿ ಪೂಜೆ ಪುನಸ್ಕಾರ ಮಾಡುವವರು ಒಂದೆಡೆಯಾದರೆ, ಇನ್ನೊಂದೆಡೆ ಮದುವೆ ಸಮಯದಲ್ಲಿ ಜನಿವಾರ ಹಾಕಿಕೊಂಡು, ಮದುವೆ ಕಾರ್ಯಕ್ರಮ ಮುಗಿದಮೇಲೆ ಜನಿವಾರ ಕಿತ್ತೆಸೆಯುವವರು ಇದ್ದಾರೆ. ಕರಾವಳಿ ಮತ್ತು ಕೇರಳ ಪದ್ಮಶಾಲಿಗಳ ಆಚಾರ ಸಂಪ್ರದಾಯಗಳು ಬೇರೆಯವೇ ಇವೆ. ಈ ಎಲ್ಲಾ ವಿಚಾರಗಳು ಬಹಳಷ್ಟು ಜನಕ್ಕೆ ಗೊತ್ತಿಲ್ಲ. 

ಒಂದೊಂದು ಪ್ರಾಂತ್ಯದಲ್ಲಿ  ಒಂದೊಂದು ಆಚರಣೆ ಜಾರಿಯಲ್ಲಿವೆ. ಈ ಆಚರಣೆ ಯಾಕೆ ಬಂತು, ಅದರ ಹಿನ್ನೆಲೆ ಏನು? ಬಹಳಷ್ಟು ಜನರಲ್ಲಿ ಮಾಹಿತಿಯಿಲ್ಲ. ಕೆಲವರ ಪ್ರಕಾರ ಇದನ್ನು ನಮ್ಮ ತಾತ ಮುತ್ತಾತರ ಕಾಲದಿಂದ ಮಾಡಿಕೊಂಡು ಬಂದಿದ್ದೇವೆ, ಇದು ನಮ್ಮ ಪದ್ದತಿ, ನಮ್ಮ ಕಡೆ ಹೀಗೆ ಮಾಡಬೇಕು, ಎಂದೆಲ್ಲಾ ಸಮರ್ಥನೆ ನೀಡುತ್ತಾರೆ ವಿನಃ, ಅವರ ವಾದದಲ್ಲಿ ಯಾವುದೇ ತರ್ಕವಿರುವುದಿಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ' ಎಂಬ ನುಡಿಗಟ್ಟುವಿನಂತೆ ಇಂದಿಗೂ ಅವರು ನಂಬಿದ ಆಚರಣೆ ಮಾಡುತ್ತಾ ಬಂದಿದ್ದಾರೆ. 

ಹನ್ನೊಂದನೇ ಶತಮಾನದಲ್ಲಿ ಪದ್ಮಶಾಲಿ ಸಮಾಜದಲ್ಲಿ ಮಹತ್ತರ ಬದಲಾವಣೆ ಕಂಡಿತು ಎಂದು ಇತಿಹಾಸಕಾರರು ಸಂಶೋಧಿಸಿದ್ದಾರೆ.  ಬಹುಷಃ ಇದೇ ಸಮಯದಲ್ಲಿ ಪುರಾಣಗಳನ್ನ ಬರೆಸಿರಬಹುದು ಎನ್ನಲಾಗಿದೆ.  ಮದ್ಯ ಸೇವನೆ, ಮಾಂಸಹಾರ ಸೇವನೆ, ಜೂಜು ಇತ್ಯಾದಿ ದುಶ್ಚಟಗಳಿಗೆ ಜನರು ನಿಧಾನಕ್ಕೆ ದಾಸರಾಗುತಿದ್ದದ್ದನ್ನ ಕಂಡ ಅಂದಿನ ಹಿರಿಯರು ಧರ್ಮಾಚರಣೆಗೆ ಒತ್ತು ನೀಡಲಾರಂಭಿಸಿದರು.  ಅಂದಿನ ಕಾಲದ ಹೆಸರಾಂತ ಕವಿಗಳಿಂದ ಸಂಸ್ಕೃತ ಮತ್ತು ತೆಲುಗಿನಲ್ಲಿ ಪುರಾಣಗಳನ್ನ ಕಥೆಗಳನ್ನ ಬರೆಯಿಸಿದರು. ಆ ಪುರಾಣಗಳನ್ನು ಜನಮಾನಸಕ್ಕೆ ತೆಗೆದುಕೊಂಡು ಹೋಗಲು ಅದಕ್ಕಾಗಿಯೇ ಕೆಲವರನ್ನ ನೇಮಿಸಿದರು. ಉದಾಹರಣೆಗೆ ಕೂನಪುಲಿಯವರು ಅಥವ ಪಡಗರಾಜು, ಅಥವ ಪೊಗಡರಾಜು. ಇವರು ಕೇವಲ ಪುರಾಣವನ್ನು ಹೇಳುವುದು ಮಾತ್ರವಲ್ಲ, ಪದ್ಯರೂಪದಲ್ಲಿ ಹಾಡುತಿದ್ದರು. ಇವರು ಪದ್ಮಶಾಲಿಯವರ ಆಶ್ರಿತಕುಲದವರು. ಪದ್ಮಶಾಲಿ ಸಮಾಜದವರು ನೀಡುವ ಹಣ, ಧವಸ ಧಾನ್ಯ ಇವೇ ಇವರ ಸಂಪಾದನೆ. 

ಕೂನಪುಲಿಯವರು ಇವರು ಹೋಗುವ ಊರಿಗೆ ಹುಲಿಧ್ವಜ, ವಾದ್ಯಗಳು, ಚಾಮರಗಳಿಂದ ಗ್ರಾಮದಲ್ಲಿನ ಪದ್ಮಶಾಲಿ ಸಮಾಜದ ಮುಖಂಡರು ಮತ್ತು ಹಿರಿಯರ ಬಳಿಗೆ ಹೋಗಿ ಪಟ ಪ್ರದರ್ಶನಕ್ಕೆ ಅನುಮತಿಯನ್ನು ಕೇಳುತ್ತಾರೆ. ಅವರು ಒಪ್ಪಿಗೆ ಸೂಚಿಸಿದ ನಂತರ  ಮೊದಲಿಗೆ "ಹುಲಿ ಧ್ವಜ" ನೆಟ್ಟು ಊರಿನ ಹಿರಿಯ ಪದ್ಮಶಾಲಿ ಮುಖಂಡರಿಂದ ಪೂಜೆ ಮಾಡಿಸುತ್ತಾರೆ. ಅಂದು ಧ್ವಜ ನೆಟ್ಟಿದ್ದಾರೆಂದರೆ, ಆ ಊರಿಗೆ ಪೊಗಡರಾಜು ಬಂದಿದ್ದಾರೆ,  ಅಂದು ಮಾರ್ಕಂಡೇಯ ಪುರಾಣ ಕಥೆಯನ್ನ ಹೇಳುತ್ತಾರೆ ಎಂದು ಊರಿಗೆಲ್ಲ ಪ್ರಚಾರವಾಗುತಿತ್ತು. ಊರಿನಲ್ಲಿರುವ ಎಲ್ಲರೂ ಶಾಸ್ತ್ರೋಕ್ತವಾಗಿ ಸಿದ್ದರಾಗಿ ಬಂದು ಪುರಾಣಕಥೆಯನ್ನು ಕೇಳಲು ಕುಳಿತುಕೊಳ್ಳುತಿದ್ದರು.  ಮಾರ್ಕಂಡೇಯ ಕುಲ ಪುರಾಣ ಕಥೆಯನ್ನು ಪ್ರಸ್ತುತ ಪಡಿಸುವ ಮುಂಚೆ ಸಂಪ್ರದಾಯಬದ್ದವಾಗಿ ಪೂಜಾ ಕೈಂಕರ್ಯ ನಡೆಯುತಿತ್ತು.

ಪುರಾಣ ಹೇಳುವುದಿಕ್ಕಾಗಿ, ಅಲ್ಲಿ ಆ ವರ್ಣ ರಂಜಿತ ಪಟ ಪ್ರದರ್ಶನವಾಗುತಿತ್ತು. ಪುರಾಣದ ಕಥೆಯಲ್ಲಿ ಪ್ರಮುಖ ಘಟನಾವಳಿಗಳ ಚಿತ್ರಗಳಿರುತ್ತವೆ ಅವೆಲ್ಲವನ್ನೂ ಅದ್ಭುತವಾಗಿ  ವಿವರಿಸುತ್ತ ಹೋಗುತ್ತಾರೆ. ಇದರಲ್ಲಿ ಮುಖ್ಯವಾಗಿ ಮಾರ್ಕಂಡೇಯನ ಜನನದಿಂದ ಹಿಡಿದು, ಭಾವನಾಋಷಿ ಕಾಲುವಾಸುರನನ್ನ ಸಂಹರಿಸುವ ಕಥೆ ಮತ್ತು ಭಾವನಾಋಷಿ ಮತ್ತು ಭದ್ರಾವತಿಯವರ ಕಲ್ಯಾಣ ಕಥೆಯೂ ಇರುತ್ತದೆ. ಈ ಸಂಪೂರ್ಣ ಕಥೆಯನ್ನು ಹೇಳಲು ಎರಡು ಮೂರು ದಿನಗಳನ್ನು ತೆಗೆದುಕೊಳ್ಳುತಿದ್ದರಂತೆ.   ಈ ಪಟ ಪ್ರದರ್ಶನದಲ್ಲಿ ಐದು ಜನ ಭಾಗವಹಿಸುತ್ತಾರೆ. ಪುರಾಣ ಹೇಳುವಾಗ ತಬಲಾ, ಹಾರ್ಮೋನಿಯಂ, ತಾಳ, ಢಂಕಾ, ವಾದ್ಯಗಳನ್ನು ಉಪಯೋಗಿಸುವರು. ಪ್ರಧಾನ ಕಥೆಗಾರ ಎಡಗೈಯಿಂದ ಚಿಕ್ಕಮರದ ಹಲಗೆಗಳಿಂದ ವಾದನ ಮಾಡುತ್ತಾ ಬಲಗೈ ತೋರುಬೆರಳಿಂದ ಪಟದಲ್ಲಿನ ಬೊಂಬೆಗಳನ್ನು ತೋರಿಸುತ್ತಾ ಅಭಿನಯಾತ್ಮಕವಾಗಿ ಕಥೆಯನ್ನು ಹೇಳುತ್ತಾರೆ. ಕಥಾನುಸಾರವಾಗಿ ವಚನ, ಪದ್ಯ, ಗೇಯರೂಪದಲ್ಲಿ ಕಥೆಯನ್ನು ಹೇಳುತ್ತಾರೆ. ಅನಂತರ ಕೂನ ಪುಲಿಯವರು ಮನೆಮನೆಗೆ ಹೋಗಿ ಅವರನ್ನು ಆಶೀರ್ವದಿಸಿ ಅವರು ಕೊಟ್ಟ ಭತ್ಯೆಯನ್ನು ಸ್ವೀಕರಿಸಿ ಹೊರಟುಹೋಗುತ್ತಾರೆ.

ಈ ಸಮಯದಲ್ಲಿ ಯಾವುದೇ ರೀತಿ ಮಾಂಸಾಹಾರ, ಮದ್ಯ ಸೇವನೆ ನಿಷಿದ್ದವಾಗಿರುತಿತ್ತು. ಸಮಾಜದ ಜನರಿಗೆ ಪದ್ಮಶಾಲಿ ಸಮಾಜದ ಐತಿಹಾಸಿಕ ಹಿನ್ನೆಲೆ ಸಾರುವುದರ ಜತೆಗೆ, ಮದ್ಯ, ಮಾಂಸ, ದುಶ್ಚಟಗಳಿಂದ ದೂರವಿರಲು ಜನರನ್ನು ಪ್ರೇರೇಪಿಸುತಿದ್ದರು. ಹಾಗೂ ಪ್ರತಿನಿತ್ಯ, ಸಂಧ್ಯಾವಂದನೆ, ಪೂಜೆ ಇತ್ಯಾದಿಗಳನ್ನ ತಪ್ಪದೇ ಮಾಡಬೇಕೆಂದು ಜನರನ್ನ ಮನವೊಲಿಸುತಿದ್ದರು.  ತೆಲಂಗಾಣ ಭಾಗದಲ್ಲಿ ಅತಿ ಹೆಚ್ಚು ವಾಸವಿದ್ದ ಪದ್ಮಶಾಲಿಗಳ ಹಳ್ಳಿಗಳಲ್ಲಿ ಈ ಕೆಲಸ ಅತಿ ಹೆಚ್ಚು ನಡೆಯಿತು ಎನ್ನಲಾಗಿದೆ. ತದನಂತರ, ಆಂಧ್ರದ ಗ್ರಾಮಾಂತರ ಭಾಗಗಳಲ್ಲಿ ಇದು ಮುಂದುವರೆಯಿತು. 

ಕೂನಪುಲಿಗಳು ಭಾವನಾ ಋಷಿ ಬೆವರಿನಿಂದ ಉದ್ಭವಿಸಿದರೆಂದು ಪುರಾಣ ಕಥೆಯಲ್ಲಿ ಹೇಳಲಾಗುತ್ತದೆ. ಭಾವನಾ ಋಷಿಯು ಕೂನಪುಲಿ ಮೂಲಪುರುಷನನ್ನು ಉದ್ದೇಶಿಸಿ “ನೀನು ಪದ್ಮಶಾಲಿಯರ ಜನ್ಮ ವೃತ್ತಾಂತವನ್ನು ಕಥೆಯಾಗಿ ಹೇಳಬೇಕು. ಪದ್ಮಶಾಲಿಯರು ಕೊಡುವ ಬಟ್ಟೆಗಳನ್ನು ಉಟ್ಟುಕೊಂಡು, ಅವರು ಕೊಡುವ ಆಹಾರದಿಂದ ಜೀವಿಸಬೇಕು” ಎಂದು ಶಾಸನ ಮಾಡುತ್ತಾನೆ. ಅಂದಿನಿಂದ ಪದ್ಮಶಾಲಿಯರು ಕೂನಪೂಲಿಯವರನ್ನು ಆದರಿಸುತ್ತಿದ್ದಾರೆ. ಕೂನಪುಲಿಯವರು ಕೂಡ ಮಾರ್ಕಂಡೇಯ ಪುರಾಣ ಕಥೆಯನ್ನು ಚಿತ್ರಿಸಿದ ಪಟವನ್ನು ಪ್ರದರ್ಶಿಸುತ್ತಾ ಆನುವಂಶಿಕವಾಗಿ ಬರುತ್ತಿರುವ ತಮ್ಮ ಮಿರಾಸಿ (ವಂಶಪಾರಂಪರ್ಯ ಹಕ್ಕು) ಹಕ್ಕುಗಳಿಂದ, ಪದ್ಮಶಾಲಿಯರು ಕೊಡುವ ಪದಾರ್ಥಗಳಿಂದ ಬದುಕುತ್ತಿದ್ದರು. ಈ ಕೂನಪುಲಿಗಳ ಇನ್ನೊಂದು ಮಹತ್ಕಾರ್ಯವೇನೆಂದರೆ, ಇವರು  ಊರೂರು ತಿರುಗುತಿದ್ದರಿಂದ, ಸಾವಿರಾರು ಜನರ ಪರಿಚಯವಿರುತಿತ್ತು. ವಂಶವೃಕ್ಷವನ್ನು ದಾಖಲಿಸುವ ಕೆಲಸವನ್ನು ಮಾಡುತಿದ್ದರು. ಇವರ ಬಳಿ, ಐದಾರು ನೂರು ವರ್ಷಗಳ ವಂಶವೃಕ್ಷವೂ ಸಿಗುತಿತ್ತು. ಈಗ ಕೂನಪುಲಿಗಳ ಕಣ್ಮರೆಯಾಗುತ್ತ ಬಂದಿದ್ದಾರೆ, ಎಲ್ಲರಂತೆ. ಅವರು ಬೇರೆ ಬೇರೆ ಕೆಲಸಗಳನ್ನ ಮಾಡಿಕೊಂಡು ಜೀವನ ನಡೆಸುತಿದ್ದಾರೆ. 

ಒಂಬೈನೂರು ವರ್ಷಗಳ ಹಿಂದೆ ಸಮಾಜದ ಒಳಿತಿಗಾಗಿ ಇಂತಹ ಮಹತ್ಕಾರ್ಯವನ್ನು ಮಾಡಿದ ಅಂದಿನ ಹಿರಿಯರ ಕಾಲು ಧೂಳಿಗೂ ನಾವ್ಯಾರೂ ಸಮಾನರಲ್ಲ ಬಿಡಿ.  ಮಾರ್ಕಂಡೇಯ ಋಷಿಮುನಿಗಳ ವಂಶಸ್ಥರಾದ ಜನರು ಇಂದು ಮಾಂಸದಡುಗೆಯನ್ನು ಪ್ರತಿಯೊಂದು ಕಾರ್ಯಕ್ರಮದಲ್ಲಿ ತಯಾರು ಮಾಡಿಸಿ ಉಣಬಡಿಸುತ್ತಿರುವುದು  ದುರಂತ.  ನಮ್ಮ ಜನರಿಗೆ ಭೃಗು ವಂಶಸ್ಥರು ಎಂದರೆ ಗೊತ್ತಿಲ್ಲ. ಭೃಗುವಿಗೆ ಮಾರ್ಕಂಡೇಯ ಏನು ಸಂಭಂದ ಅಂದರೆ ಗೊತ್ತಿಲ್ಲ. ಋಷಿಮುನಿಗಳ ವಂಶಸ್ಥರಾಗಿ, ಅವರ ಆಚಾರ ವಿಚಾರಗಳನ್ನ ಜಾರಿಗೆ ತರದೆ, ಅರೆಬರೆ ಜ್ನಾನದೊಂದಿಗೆ ತಮಗೆ ಬಂದಂತಹ ರೀತಿರಿವಾಜುಗಳನ್ನ ನಡೆಸಿಕೊಂಡು ಹೋಗುತ್ತಿರುವುದು ವಿಷಾದನೀಯ. ಮಾಂಸ, ಮದ್ಯ ಸೇವನೆ, ಜೂಜಾಟ, ಬಡ್ಡಿ ಹಣದಿಂದ ಜೀವನ ನಡೆಸುವುದು, ಇವೆಲ್ಲವೂ ತಪ್ಪು ಎಂದು ಸಮಾಜದ ಜನರನ್ನು ಸರಿದಾರಿಗೆ ತಂದು ಬುದ್ದಿ ಹೇಳಬೇಕಾದ ಗುರು ಹಿರಿಯರೇ ಕಣ್ಣು ಮುಚ್ಚಿ ಕುಳಿತಿರುವಾಗ ಎಂತಹ ಆಚರಣೆ ಮಾಡಿದರೂ ಅದಕ್ಕೆ ಅರ್ಥವಿಲ್ಲ.

No comments:

Post a Comment