Monday, April 19, 2021

ಪದ್ಮಪುರಾಣ, ಭಾವನಾಮಹರ್ಷಿ ಪುರಾಣ

 ಮಾರ್ಕಂಡೇಯ ಪುರಾಣವು ಪದ್ಮಶಾಲಿಯವರ ಕುಲಪುರಾಣಕ್ಕೆ ಪದ್ಮಪುರಾಣ, ಮಾರ್ಕಂಡೇಯ ಪುರಾಣ, ಭಾವನಾರ್ಷಿ ಪುರಾಣ, ಭಾವನಾಮಹರ್ಷಿ ಪುರಾಣ, ಮಾರ್ಕಂಡೇಯೋಪಾಖ್ಯಾನ ಎಂಬ ಪರ್ಯಾಯ ಪದಗಳಿವೆ. ಭಾವನಾ ಋಷಿ ಪದ್ಮಶಾಲಿಯವರ ಕುಲದ ೧೦೧ ಗೋತ್ರದವರಿಗೂ ಮೂಲಪುರುಷ. ಇವರ ಕಥೆಯನ್ನು, ಮಹಿಮೆಯನ್ನು, ಪದ್ಮಶಾಲೆ ಕುಲೋತ್ಪತ್ತಿ ವಿಧಾನವನ್ನು, ಕುಲಪ್ರಾಧಾನ್ಯವನ್ನು ವರ್ಣಿಸುವುದೇ ಮಾರ್ಕಂಡೇಯ ಪುರಾಣಕಥೆಯ ಮುಖ್ಯೋದ್ದೇಶ. ಮಾರ್ಕಂಡೇಯ ಪುರಾಣ ಕಥೆಯನ್ನು ಪದ್ಮಶಾಲಿಯವರ ಆಶ್ರಿತಕುಲವಾದ ಕೂನಪುಲಿಯವರು ಪಟದ ಕಥೆಯಂತೆ (ಬಟ್ಟೆಯ ಮೇಲೆ ಚಿತ್ರಗಳ ಮೂಲಕ ತೋರಿಸುವುದು) ಪುರಾಣ ಪ್ರವಚನದಂತೆ ನಿರೂಪಿಸುತ್ತಾರೆ. ಪದ್ಮಶಾಲಿ ಕುಲಪುರಾಣಕ್ಕೆ ಮೂಲ ‘ಮಾರ್ಕಂಡೇಯಪುರಾಣ’ ಎಂದು ಕೂನಪುಲಿ (ಕೂನಹುಲಿ) ಯವರು (ಕಲಾವಿದರು) ವಿವರಿಸುತ್ತಾರೆ.

ಕಥಾವಸ್ತು : ಆದಿಶಕ್ತಿ ಸಕಲಚರಾಚರ ಸೃಷ್ಟಿಯ ಜೊತೆಯಲ್ಲಿ ತ್ರಿಮೂರ್ತಿಗಳನ್ನು ಕೂಡ ಸೃಷ್ಟಿಸುತ್ತಾಳೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನು ಭೃಗು ಮಹರ್ಷಿಯನ್ನು ಸೃಷ್ಟಿಸಿದರೆ, ಅವನಿಗೆ ಕರ್ದಮ ಪ್ರಜಾಪತಿ ಮಗಳಾದ ಖ್ಯಾತಿಯಿಂದ ಧಾತ, ವಿಧಾತ ಎಂಬ ಪುತ್ರರು ಮತ್ತು ಶ್ರೀದೇವಿ ಮಗಳಾಗಿ ಜನಿಸುತ್ತಾರೆ. ಶ್ರೀದೇವಿ ವಿಷ್ಣುವಿಗೆ ಅರ್ಧಾಂಗಿಯಾಗುತ್ತಾಳೆ. ಭೃಗನ ದೊಡ್ಡಮಗ ಧಾತುವಿಗೆ ಮೃಕಂಡನು ಹುಟ್ಟುತ್ತಾನೆ. ಅವನಿಗೆ ಮಾರ್ಕಂಡೇಯ ಜನಿಸುತ್ತಾನೆ. ಮಾರ್ಕಂಡೇಯ ಅಲ್ಪಾಯುಷ್ಯನಾದರೂ ತನ್ನ ಭಕ್ತಿ ತತ್ಪರತೆಯಿಂದ ಶಿವನ ಅನುಗ್ರಹದಿಂದ ದೀರ್ಘಾಯುಷ್ಯನಾಗುತ್ತಾನೆ.


ಸೃಷ್ಟ್ಯಾದಿಯಲ್ಲಿ ಮಾನವರು, ದೇವತೆಗಳು ದಿಗಂಬರರಾಗಿದ್ದರು. ಆ ಕಾಲದಲ್ಲೇ ಕಾಲುವಾಸುರನೆಂಬ ರಾಕ್ಷಸನು ದೇವತೆಗಳನ್ನು ಮಾನವರನ್ನೂ ಹಿಂಸಿಸುತ್ತಿದ್ದನು. ಅವರೆಲ್ಲಾ ಸೇರಿ ಬ್ರಹ್ಮನನ್ನು ಬೇಡಿಕೊಂಡಾಗ, ಬ್ರಹ್ಮ ವಿಷ್ಣುವನ್ನು ಸಲಹೆ ಕೇಳುತ್ತಾನೆ. ವಿಷ್ಣುವು ಮಾರ್ಕಂಡೇಯನಿಗೆ ಧೂಮ್ರಾವತಿಯೊಡನೆ ವಿವಾಹ ಮಾಡಿದರೆ ಅವರಿಗೆ ಹುಟ್ಟುವ ಮಗನೇ ದೇವತೆಗಳಿಗೂ ಮಾನವರಿಗೂ ಉಡುಪುಗಳನ್ನು ತಯಾರಿ ಮಾಡಿಕೊಡುವನೆಂದೂ, ಕಾಳಾಸುರನನ್ನು ಸಂಹರಿಸುವನೆಂದೂ ಹೇಳುತ್ತಾನೆ.

ದೇವತೆಗಳು, ಮಾರ್ಕಂಡೇಯನಿಗೂ, ಧೂಮ್ರವತಿಗೂ ಮದುವೆ ಮಾಡಿಸುತ್ತಾರೆ. ಆ ದಂಪತಿಯರಿಗೆ ಪಂಚವಟಿ, ಭಾವನಾರಾಯಣನೆಂಬ ಕುಮಾರರು ಹುಟ್ಟುತ್ತಾರೆ.

ಭಾವನಾರಾಯಣನೇ ಬೆಳೆದು ದೊಡ್ಡವನಾಗಿ ಶಿವಾನುಗ್ರಾಹದಿಂದ ವಸ್ತ್ರನಿರ್ಮಾಣ ವಿದ್ಯೆಯನ್ನು ಕಲಿಯುತ್ತಾನೆ. ವಿಷ್ಣುವಿನ ನಾಭಿ ಕಮಲದಿಂದ ನೂಲನ್ನು ಗ್ರಹಿಸಿ ದೇವತೆಗಳೆಲ್ಲರಿಗೂ ರೇಷ್ಮೆವಸ್ತ್ರಗಳನ್ನೂ ತಯಾರು ಮಾಡಿಕೊಳ್ಳುತ್ತಾನೆ. ಶಿವನು ಮಾತ್ರ ತನಗೆ ವಸ್ತ್ರಗಳು ಅಗತ್ಯವಿಲ್ಲವೆಂದು ಹುಲಿಚರ್ಮಬೇಕೆಂದು ಕೇಳುತ್ತಾನೆ. ಭಾವನಾರ್ಷಿ ಭದ್ರಾವತೀದೇವಿ (ಭಾರ್ಗವೀದೇವಿ) ಬಳಿ ಇರುವ ಹುಲಿಗಳನ್ನು ತಂದು, ಹುಲಿಚರ್ಮವನ್ನು ಶಿವನಿಗೆ ಅರ್ಪಿಸಿ ಭದ್ರಾವತಿಯನ್ನು ಪರಿಣಯವಾಗುತ್ತಾನೆ. ಸಂತಾನಕ್ಕಾಗಿ ಪುತ್ರ ಕಾಮೇಷ್ಟಿ ಯಾಗ ಮಾಡಿ ೧೦೧ ಜನ ಪುತ್ರರನ್ನು ಪಡೆಯುತ್ತಾನೆ. ಭೂಲೋಕದಲ್ಲಿರುವರಿಗೆಲ್ಲ ಸರಿಹೋಗುವ ವಸ್ತ್ರಗಳಿಗಾಗಿ ಪದ್ಮತಂತಿಗಳನ್ನು ಪ್ರಸಾದಿಸು ಎದು ವಿಷ್ಣುವನ್ನು ಬೇಡಿಕೊಳ್ಳುತ್ತಾನೆ. ವಿಷ್ಣುಭಗವಾನನು ‘ಪದ್ಮತಂತೀ ಬೀಜಗಳನ್ನು’ ಪ್ರಸಾದಿನಿ ಹತ್ತಿಬೆಳೆಸಿ ಅದರಿಂದ ಎಳೆಗಳನ್ನು ತಯಾರಿಸಿ ವಸ್ತ್ರಗಳನ್ನು ತಯಾರಿಸಬೇಕೆಂದು ಆದೇಶಿಸುತ್ತಾನೆ. ಆ ಬೀಜಗಳನ್ನು ಕಾಳುವಾಸುರನು ಅಪಹರಿಸುತ್ತಾನೆ. ಭಾವನಾರ್ಷಿ ‘ಪದ್ಮವಂತುಬೀಜಗಳಿ’ಗಾಗಿ ಕಾಳವಾಸುರನ ಮೇಲೆ ದಾಳಿ ಮಾಡುತ್ತಾನೆ. ಯುದ್ಧದಲ್ಲಿ ಎಷ್ಟು ಸಾರಿ ಭಾವನಾರ್ಷಿ ಕಾಳಾಸುರನನ್ನು ಕೊಂದರೂ ಅವನ ರಕ್ತಬಿಂದುಗಳು ನೆಲದ ಮೇಲೆ ಬಿದ್ದಾಕ್ಷಣ ಪುನರ್ಜೀವಿತನಾಗುತ್ತಿರುತ್ತಾನೆ. ಭದ್ರಾವತಿ ಹತ್ತಿರ ಇರುವ ಹುಲಿಗಳನ್ನು ಯುದ್ಧರಂಗಕ್ಕೆ ಭಾವನಾರ್ಷಿ ಕರೆತಂದಾಗ ಅವು ರಾಕ್ಷಸನ ರಕ್ತವನ್ನು ಭೂಮಿಯ ಮೇಲೆ ಬೀಳದಂತೆ ಕುಡಿಯುತ್ತವೆ. ಕಡೆಗೂ ಕಾಳಾಸುರನನ್ನು ಭಾವನಾರ್ಷಿ ಸಂಹರಿಸಿ, ಅವನ ಶರೀರಾವಯವಗಳಿಂದ ವಸ್ತ್ರಗಳನ್ನು ನೇಯಲಿಕ್ಕೆ ಅಗತ್ಯವಾದ ಸಾಮಗ್ರಿಯನ್ನು ತಯಾರು ಮಾಡಿ ಅವುಗಳನ್ನು ತನ್ನ ೧೦೧ ಜನ ಪುತ್ರರಿಗೊಪ್ಪಿಸಿ ಹೆಂಡತಿಯೊಂದಿಗೆ ತಪಸ್ಸು ಮಾಡಲಿಕ್ಕೆ ಹೋಗುತ್ತಾನೆ. ಅಂದಿನಿಂದ ಭಾವನಾರ್ಷಿ ಸಂತತಿಯವರೇ ವಸ್ತ್ರಗಳನ್ನು ತಯಾರು ಮಾಡುತ್ತಿದ್ದಾರೆ.

ವಿಷ್ಣುನಾಭಿ ಪದ್ಮತಂತುಗಳಿಂದ ವಸ್ತ್ರಗಳನ್ನು ಮಾಡುವುದನ್ನೇ ಕುಲವೃತ್ತಿಯನ್ನಾಗಿಸಿ ಕೊಂಡವರನ್ನು ಪದ್ಮಶಾಲಿಯವರೆಂದು, ಪದ್ಮ ಬ್ರಾಹ್ಮಣರೆಂದು ಕರೆಯುತ್ತಾರೆ. ಮಾರ್ಕಂಡೇಯನ ವಂಶಕ್ಕೆ ಸೇರಿದವರಾಗಿದ್ದರಿಂದ ಮಾರ್ಕಂಡೇಯ ವಂಶಸ್ಥರಾದರು. ಭಾವನಾರ್ಷಿ ೧೦೧ ಪುತ್ರರೊಡನೆ ೧೦೧ ಗೋತ್ರಗಳು ಹುಟ್ಟಿವೆ. ಅವರಿಂದಲೇ ಪದ್ಮಸಾಲಿಯರ ಕುಲವು ಕೂಡ ಅಭಿವೃದ್ದಿಯಾಗಿದೆ.

ಮಾರ್ಕಂಡೇಯ ಪುರಾಣದ ಕಥೆಗಾರರಾದ ಕೂನವುಲಿಯವರ ಪ್ರದರ್ಶನಾ ಪದ್ಧತಿ : ಭಾವನಾರ್ಷಿ ತನ್ನ ಬೆವರಿನಿಂದ ಉದ್ಭವಿಸಿದ ಕೂನಪುಲಿ ಮೂಲಪುರುಷನನ್ನು ಉದ್ದೇಶಿಸಿ “ನೀನು ಪದ್ಮಶಾಲೆಯರ ಜನ್ಮ ವೃತ್ತಾಂತವನ್ನು ಕಥೆಯಾಗಿ ಹೇಳಬೇಕು. ಹೆಡೆಗಳನ್ನೆತ್ತಿಕೊಂಡು ಶಾಸ್ತ್ರವನ್ನು ತಿಳಿಸುತ್ತಾ ‘ಹೆಡೆಯರಾಜನಂತೆ’ ಪದ್ಮಶಾಲಿಯರು ಕೊಡುವ ಬಟ್ಟೆಗಳನ್ನು ಉಟ್ಟುಕೊಂಡು, ಅವರು ಕೊಡುವ ಆಹಾರದಿಂದ ಜೀವಿಸಬೇಕು” ಎಂದು ಶಾಸನ ಮಾಡುತ್ತಾನೆ. ಅಂದಿನಿಂದ ಪದ್ಮಶಾಲಿಯರು ಕೂನಪೂಲಿಯವರನ್ನು ಆದರಿಸುತ್ತಿದ್ದಾರೆ. ಕೂನಪುಲಿಯವರು ಕೂಡ ಮಾರ್ಕಂಡೇಯ ಪುರಾಣ ಕಥೆಯನ್ನು ಚಿತ್ರಿಸಿದ ಪಟವನ್ನು ಪ್ರದರ್ಶಿಸುತ್ತಾ ಆನುವಂಶಿಕವಾಗಿ ಬರುತ್ತಿರುವ ತಮ್ಮ ಮಿರಾಸಿ (ವಂಶಪಾರಂಪರ್ಯ ಹಕ್ಕು) ಹಕ್ಕುಗಳಿಂದ, ಪದ್ಮಶಾಲಿಯರು ಕೊಡುವ ಪದಾರ್ಥಗಳಿಂದ ಬದುಕುತ್ತಿದ್ದಾರೆ.

ಪಟ ಪ್ರದರ್ಶನ : ‘ಕೂನಪುಲಿ’ಯ ಹುಲಿಧ್ವಜ, ವಾದ್ಯಗಳು, ಚಾಮರಗಳಿಂದ ಗ್ರಾಮದಲ್ಲಿನ ಪದ್ಮಶಾಲಿಯ ಕುಲ ನಾಯಕನ ಬಳಿಗೆ ಹೋಗಿ ಪಟ ಪ್ರದರ್ಶನಕ್ಕೆ ಅನುಮತಿಯನ್ನು ಕೇಳುತ್ತಾರೆ. ಪಟಪ್ರದರ್ಶನದಲ್ಲಿ ಐದು ಜನ ಭಾಗವಹಿಸುವರು. ತಬಲಾ, ಹಾರ್ಮೋನಿಯಂ, ತಾಳ, ಢಂಕಾ, ವಾದ್ಯಗಳನ್ನು ಉಪಯೋಗಿಸುವರು. ಪ್ರಧಾನ ಕಥೆಗಾರ ಎಡಗೈಯಿಂದ ಚಿಕ್ಕಮರದ ಹಲಗೆಗಳಿಂದ ವಾದನ ಮಾಡುತ್ತಾ ಬಲಗೈ ತೋರುಬೆರಳಿಂದ ಪಟದಲ್ಲಿನ ಬೊಂಬೆಗಳನ್ನು ತೋರಿಸುತ್ತಾ ಅಭಿನಯಾತ್ಮಕವಾಗಿ ಕಥೆಯನ್ನು ಹೇಳುತ್ತಾರೆ. ಕಥಾನುಸಾರವಾಗಿ ವಚನ, ಪದ್ಯ, ಗೇಯರೂಪದಲ್ಲಿ ಕಥೆಯನ್ನು ಹೇಳುತ್ತಾರೆ. ಕಥಾ ಪರದರ್ಶನದ ಅನಂತರ ಕೂನ ಪುಲಿಯವರು ಮನೆಮನೆಗೆ ಹೋಗಿ ಅವರನ್ನು ಆಶೀರ್ವದಿಸಿ ಅವರು ಕೊಟ್ಟ ಭತ್ಯೆಯನ್ನು ಸ್ವೀಕರಿಸಿ ಹೊರಟುಹೋಗುತ್ತಾರೆ.

ಮಾರ್ಕಂಡೇಯ ಪುರಾಣ ಮೌಖಿಕ ರೂಪದಲ್ಲೇ ಅಲ್ಲದೇ ಲಿಖಿತರೂಪದಲ್ಲಿಯೂ ಲಭ್ಯವಾಗುತ್ತದೆ. ‘ಭಾರ್ಗವೀ ಪರಿಣಯಂ’ ‘ಪದ್ಮಪುರಾಣ’ ಪದ್ಮಶಾಲೀಯರ ಕುಲಯಾಚಕ ಪುರಾಣ’ ಎಂಬ ಹೆಸರುಗಳಿಂದ ಲಿಖಿತ ಪುರಾಣಗಳು ದೊರಕುತ್ತವೆ.

No comments:

Post a Comment