Wednesday, March 27, 2024

ಪದ್ಮಶಾಲಿ ಸಮಾಜದ ಬಹುಮುಖ ಪ್ರತಿಭೆ ಶ್ರೀ ಮಲ್ಲಯ್ಯ ಜಿ ಗುರುಬಸಪ್ಪನಮಠ ರೋಣ



 ದುಬೈನಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಜಂಟಿಯಾಗಿ International Awards ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ಪದ್ಮಶಾಲಿ ಸಮಾಜದ ಬಹುಮುಖ ಪ್ರತಿಭೆ ಶ್ರೀ ಮಲ್ಲಯ್ಯ ಜಿ ಗುರುಬಸಪ್ಪನಮಠ ಅವರ ಸಾಧನೆಯನ್ನು ಗುರುತಿಸಿ "Dubai India International Award-2024"  ಅನ್ನು ನೀಡುತಿದ್ದಾರೆ

    ಗದಗ ಜಿಲ್ಲೆಯ ರೋಣ ಪಟ್ಟಣದ   ಶ್ರೀ ಮಲ್ಲಯ್ಯ ಜಿ ಗುರುಬಸಪ್ಪನಮಠ ಅವರದು ಬಹುಮುಖ ಪ್ರತಿಭೆ. ಇವರು, ಕೃಷಿಕರು ಹೌದು ಹಾಗೂ ರೋಣದ ಪುರಸಭೆ ಸದಸ್ಯರು ಕೂಡ ಹೌದು. ಅವರಲ್ಲಿನ ಧಾರ್ಮಿಕ, ಸಾಂಪ್ರದಾಯಿಕ ಪದ್ಧತಿ ಹಾಗೂ ನಿಸರ್ಗದ ಬಗೆಗಿನ ಜ್ಞಾನ ಹಾಗೂ ಸಂಗ್ರಹಿಸಿದ ವಸ್ತುಗಳು ಮತ್ತು ಮಾದರಿಗಳು ನಿಜಕ್ಕೂ ಎಂಥಹವರನ್ನೂ ಅಚ್ಚರಿಗೊಳಿಸುತ್ತಿದೆ.


    ಹಳೇಕೃಷಿ ಪದ್ಧತಿ ನೆನಪಿಸುವಂತಹ ನಮ್ಮ ಪಾರಂಪರಿಕ ಕೃಷಿ ಸಲಕರಣೆ, ಮನೆ ಬಳಕೆ ಸಾಮಗ್ರಿಗಳ ಮಾದರಿಗಳನ್ನು ಸಿದ್ದಪಡಿಸಿಕೊಂಡು, ವಿವಿಧ ಕೃಷಿಮೇಳಗಳಲ್ಲಿ ಪ್ರದರ್ಶನ ನೀಡುತ್ತ ಅದರ ಬಗ್ಗೆ ಹಲವಾರು ಮಾಹಿತಿಗಳನ್ನು ಜನರಿಗೆ ನೀಡುತ್ತ ಬಂದಿದ್ದಾರೆ.

    ಪೂರ್ವಜನರ ಲಿಪಿ ಹೇಗೆ ಆರಂಭಗೊಂಡಿತು. ನವೀಲು ಗರಿಯಲ್ಲಿ ಋುಷಿಮುನಿಗಳು ಹೇಗೆ ಬರೆಯುತ್ತಿದ್ದರು, 500-600 ವರ್ಷಗಳ ಹಿಂದಿನ ತಾಳೆ ಗರಿಯ ಲಿಪಿ ಹೇಗೆ ಇತ್ತು. ನವೀಲು ಗರಿ ನಂತರ ಗಲಗ (ಮಸಿಯಲ್ಲಿ ಅದ್ದಿ ಬರೆಯುವುದು) ಹೇಗಿತ್ತು,  ಹಿಂದಿನ ಕಾಲದಲ್ಲಿ ಕಳ್ಳಕಾಕರಿಂದ ತಮ್ಮ ಆಸ್ತಿಪತ್ರ, ಆಭರಣ, ಹಣವನ್ನು ಇಟ್ಟುಕೊಳ್ಳಲು ಗ್ರಂಥ ಮಾದರಿಯ ಆಭರಣ ಪೆಟ್ಟಿಗೆ (ಗುಪ್ತಿ) ಹೇಗೆ ಇತ್ತು ಹೀಗೆ ಹಲವಾರು ವಿಷಯಗಳ ಮಾದರಿಗಳನ್ನ ಸಿದ್ದ ಪಡಿಸಿ ಜನರಿಗೆ ಅರಿವು ನೀಡುತ್ತ ಬಂದಿದ್ದಾರೆ.

ಕೃಷಿಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಮಾತ್ರ ಜಾಗೃತಿ ಮೂಡಿಸುತ್ತಿಲ್ಲ ಮಲ್ಲಯ್ಯ, ನಮ್ಮ ಪೂರ್ವಜನರ ಜೀವನ ಶೈಲಿ, ಆಚಾರ- ವಿಚಾರ, ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆ- ಅಪನಂಬಿಕೆಗಳ ಬಗ್ಗೆ, ರುದ್ರಾಕ್ಷಿ, ಸಾಲಿಗ್ರಾಮ ಹಾಗೂ ಗಂಟೆಯ ನಾದದ ಬಗ್ಗೆಯೇ ತಿಳಿವಳಿಕೆ ನೀಡುತ್ತಿದ್ದಾರೆ. ಭೂಮಂಡಲದಲ್ಲಿ ಶಾಸ್ತ್ರೋಕ್ತವಾದ 21 ಬಗೆಯ ನಾನಾ ಮುಖಗಳ ರುದ್ರಾಕ್ಷಿಗಳಿವೆ. ಇದರಲ್ಲಿ 12ರವರೆಗೆ ಮುಖಗಳಿರುವ ರುದ್ರಾಕ್ಷಿಗಳನ್ನು ಮನುಷ್ಯ ಧರಿಸಬಹುದು, ಪೂಜಿಸಬಹುದು. ಮುಂದಿನದವು ರಾಕ್ಷಸರು ಧರಿಸಲು ಬಿಟ್ಟುಕೊಟ್ಟಿದ್ದಾರೆ ಹಿರಿಯರು. ಇವು ಹಿಮಾಲಯದಲ್ಲಿ ಮಾತ್ರ ಸಿಗಲಿದೆ. ಇನ್ನು ಯಾವುದೇ ವಿಗ್ರಹಕ್ಕೂ ಸಾಲಿಗ್ರಾಮದ ಸ್ಪರ್ಶವಿದ್ದಾಗ ಮಾತ್ರ ಅದು ಸಾರ್ಥಕ. ನಿಜವಾದ ಸಾಲಿಗ್ರಾಮದ ನೇಪಾಳದ ಗಂಡಿಕಿ ನದಿಯಲ್ಲಿ ಸಿಗಲಿದೆ. ಆದರೆ, ಇಂದು ಸಾಲಿಗ್ರಾಮ ಹಚ್ಚದ ಅಪವಿತ್ರ ಹಲವು ಮೂರ್ತಿಗಳು ತಯಾರಾಗುತ್ತಿವೆ. ಇನ್ನು ಗಂಟೆ ಓಂ ಕಾರ ನಾದ ಹುಟ್ಟಿಸಬೇಕು. ಈಗ ವ್ಯಾಪಾರಕ್ಕಾಗಿ ಸಾಧಾ ಗಂಟೆಗಳ ಮಾರಾಟವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. 

    ಸಾಂಪ್ರದಾಯಿಕ ಕೃಷಿ ಬಗ್ಗೆ ಪ್ರಚಾರ ನೀಡಲು, ಹಲವಾರು ಮಾದರಿಗಳನ್ನ ಸಿದ್ದಪಡಿಸಿಟ್ಟುಕೊಂಡಿದ್ದಾರೆ. ಈ ಹಿಂದೆ ಇದ್ದ ಕಟ್ಟಿಗೆಯ ಎತ್ತಿನ ಗಾಡಿ, ನೊಗ, ರೆಂಟೆ, ಕೂರಿಗೆ ತಾಳು, ಎಡೆಕೂಟೆ, ಒಕ್ಕಲಿಗನ ಹಂತಿ, ಜತೆಗೆ ಮೇವು ಕತ್ತರಿಸುವ ಇಳಿಗೆ ಮಾತ್ರವಲ್ಲ ಮನೆಯಲ್ಲಿ ಬಳಸುತ್ತಿದ್ದ ಬೀಸುಕಲ್ಲು, ಗಡಿಗೆ, ಎತ್ತಿನ ನಾಲು, ಕೋಡಂಚು, ಚಂಡಾಳಗೊಂಬೆ, ಒಳಕಲ್ಲು ಸೇರಿದಂತೆ ನೂರಾರು ಬಗೆಯ ಕೃಷಿ ಹಾಗೂ ಮನೆಬಳಕೆಯ ವಸ್ತುಗಳ ಮಾದರಿಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಜತೆಗೆ ಇಚ್ಛೆ ಪಟ್ಟವರಿಗೆ ಯಾವುದೇ ಲಾಭ ಇಲ್ಲದೇ ಇದರಲ್ಲಿನ ಎಲ್ಲ ವಸ್ತುಗಳನ್ನು ತಯಾರಿಸಿ ಕೊಡುವುದಾಗಿ ಹೇಳುತ್ತಿದ್ದಾರೆ. ಮಾತ್ರವಲ್ಲ ರಾಜಮಹಾರಾಜರು ಆರೋಪಿಗಳನ್ನು ದಂಡಿಸಲು ಬಳಸುತ್ತಿದ್ದ ಛಾಟಿ, ಕಡ್ಡಿ ಪೊಟ್ಟಣ ಇಲ್ಲದಿದ್ದಾಗ ಬಳಕೆಗೆ ಬಂದ ಚಕಮಗಿ ಮತ್ತಿತರರ ವಸ್ತುಗಳು ಇವರ ಸಂಗ್ರಹದಲ್ಲಿವೆ

    ನಾಣ್ಯ, ನೋಟುಗಳ ಸಂಗ್ರಹ:- ಮಲ್ಲಯ್ಯ ಅವರು ಮೆಹಂಜೋದಾರ, ಹರಪ್ಪ ನಾಗರಿಕತೆಯಿಂದ ಹಿಡಿದು ಇಲ್ಲಿಯವರೆಗಿನ ಸುಮಾರು 300 ಬಗೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ.

    ಇವರು ಮಾಹಿತಿ ಕಣಜ ಎಂದೇ ಹೇಳಬೇಕು. ಅಪಾರ ಜ್ನಾನವನ್ನು ಸಂಪಾದಿಸಿರುವುದಲ್ಲದೆ, ಜನರಿಗೆ ಅರಿವು ಮೂಡಿಸುತ್ತ ತಮ್ಮ ಕಾಯಕದಲ್ಲಿ ಮಗ್ನರಾಗಿರುವ ಇವರಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದುಬೈ - ಇಂಡಿಯಾ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತಿದ್ದಾರೆ.



















ಮಾಹಿತಿ ಕೃಪೆ:- ಮಾರುತಿಶಿವಪ್ಪ ಗರಡಿಮನಿ ರಾಣೆಬೆನ್ನೂರು ಮತ್ತು ವಿಜಯಕರ್ನಾಟಕ, ಕನ್ನಡಪ್ರಭ  

ಮಾಹಿತಿ ಸಂಗ್ರಹ ಮತ್ತು ನಿರೂಪಣೆ
ಪಿ.ಎಸ್.ರಂಗನಾಥ ರಾಂಪುರ
ಮಸ್ಕತ್ - ಒಮಾನ್

Monday, March 25, 2024

ಶ್ರೀ ರಮೇಶ್ ಸಂಗಾ, ಪದ್ಮಶಾಲಿ ಸಮಾಜದ ಹೆಮ್ಮೆ.



ಸರ್ಕಾರದ ಉನ್ನತ ಹುದ್ದೆಗಳಲ್ಲಿ ಪದ್ಮಶಾಲಿ ಸಮಾಜದ ವ್ಯಕ್ತಿಗಳು ಬೆರಳೆಣಿಕೆಯಷ್ಟಿದ್ದಾರೆ. ಅವಕಾಶಗಳು ಮತ್ತು ಪ್ರತಿಭೆಯಿದ್ದರೂ ಸಹ IAS, KAS, IPS ನಂತಹ ಉನ್ನತ ಹುದ್ದೆ ಪಡೆಯಲು ಜನ ನಿರಾಸಕ್ತಿ ತೋರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ  ಕಂಡು ಬರುತ್ತಿದೆ. ಪದ್ಮಶಾಲಿ ಸಮಾಜದ ಶ್ರೀ ರಮೇಶ್ ಸಂಗಾ ರವರು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಈ ದಿನ ಜನರು ಗುರುತಿಸುವ ಮಟ್ಟಕ್ಕೆ ಬೆಳೆದಿದ್ದಲ್ಲದೆ ತಮಗೆ ದೊರೆತ ಯಾವುದೇ ಹುದ್ದೆಯನ್ನು ಸರಿಯಾಗಿ ನಿಭಾಯಿಸುತ್ತ ಅಲ್ಲಿ ಸಾಧನೆ ಮಾಡುತ್ತ, ತಮ್ಮ ಹೆಜ್ಜೆಗುರುತನ್ನ ಮೂಡಿಸುತ್ತ ಮುನ್ನೆಡೆದಿದ್ದಾರೆ. 
     ಶ್ರೀ ರಮೇಶ್ ಸಂಗಾ ರವರು ಪ್ರಸ್ತುತ ರಾಜ್ಯ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಮತ್ತು ಒಕ್ಕಲಿಗರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತಿದ್ದಾರೆ. ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ  ಜಿಲ್ಲಾ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಳೆದ ಹದಿನೈದಕ್ಕೂ ಹೆಚ್ಚಿನ ವರ್ಷಗಳಿಂದ ಸರಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು‌ ತಮ್ಮ ಸರಳ ಸಜ್ಜನಿಕೆಗೆ‌ಮತ್ತು ಎಲ್ಲರೊಂದಿಗೆ ಬೆರೆಯುವ ಇವರ ಸ್ವಭಾವಕ್ಕೆ ಬಹಳ ಹೆಸರುವಾಸಿ. ಮೂಲತಃ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನವರಾದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಗೊಂಡಿದ್ದು, ವಿಧಾನಸೌದ ದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ.

    ಜನ ಸಾಮಾನ್ಯರು, ತಮ್ಮ ಸಮಸ್ಯೆಯನ್ನು ಹೊತ್ತು ಇವರ ಬಳಿ ಬಂದಾಗ, ಸೂಕ್ತ ಪರಿಹಾರಕ್ಕಾಗಿ ಸಕಲ ಪ್ರಯತ್ನವನ್ನು ಮಾಡುವ ಇವರು ಜನಪರ ಅಧಿಕಾರಿಯಾಗಿ  ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ. ಶ್ರೀಯುತರು  ಪದ್ಮಶಾಲಿ ಸಮಾಜದ ಹೆಮ್ಮೆ ಎಂದು ಹೇಳುವುದಿಕ್ಕೆ ಬಹಳ ಸಂತೋಷವಾಗುತ್ತಿದೆ.

    ಈ ಹಿಂದೆ ಗುಲ್ಬರ್ಗದಲ್ಲಿ BCM ಆಫಿಸರ್ ಆಗಿದ್ದಾಗ, ಅಂದಿನ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಿದ ಇವರ ಕಾರ್ಯವೈಖರಿ ಬಹಳ ಜನರ ಮೆಚ್ಚುಗೆಗೆ  ಪಾತ್ರವಾಗಿತ್ತು. ಉನ್ನತ ಮಟ್ಟದ ಅಧಿಕಾರಿಯಾಗಿದ್ದರೂ ಸಹ, ನೊಂದವರ ನಡುವೆಯೆ ನಿಲ್ಲುವ ವ್ಯಕ್ತಿ ಎಂದು ಶ್ರೀ ರಮೇಶ್.ಜಿ.ಸಂಗಾರವರು ತಮ್ಮ ಜನಪರ ಕೆಲಸಗಳಿಂದ ಸಾಬೀತು ಪಡಿಸಿದ್ದಾರೆ. 

ಸರ್ಕಾರಿ ನೌಕರರಾಗಿ ಅತಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಪದ್ಮಶಾಲಿ ಸಮಾಜದವರು ಬಹಳ ಕಡಿಮೆ. ಹೀಗಾಗಿ, ಯುವಕರು ಸರ್ಕಾರಿ ಹುದ್ದೆ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಪಡಬೇಕು ಎಂದು ಅವರು ಆಶಿಸುತ್ತಾರೆ.



    ಯಾವುದೇ ಸಮಾಜವು  ಸರ್ವತೋಮುಖ ಅಭಿವೃದ್ದಿಯಾಗಬೇಕಾರೆ, ಬದಲಾವಣೆಯಾಗಬೇಕಾದರೆ,  ಸರ್ಕಾರಿ ವ್ಯವಸ್ಥೆಯೊಳಗೆ ಬರುವಂತಹ ಕೆಲಸ ಮಾಡಬೇಕು, ಆಗ ಮಾತ್ರ ಬದಲಾವಣೆ ಸಾಧ್ಯ. ಸರ್ಕಾರದ ಮುಖ್ಯ ಮೂರು ಸ್ಥಂಭಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ವ್ಯವಸ್ಥೆಯೊಳಗೆ ಬರುವ ಕೆಲಸ ಮಾಡಬೇಕು.  IAS KAS, ಅಥವ ಇತರೆ ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಇಲ್ಲವೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಅಥವ ನ್ಯಾಯಾಂಗದ ವ್ಯವಸ್ಥೆಯಲ್ಲಿ ನ್ಯಾಯವಾದಿ ಅಥವ ನ್ಯಾಯಾದೀಶರಾಗಿ ಕೆಲಸ ಮಾಡಿದರೆ ಮಾತ್ರ ಸಮಾಜವು ಬದಲಾವಣೆ ಕಾಣಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ.



    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ, ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಪದ್ಮಶಾಲಿ ಸಮಾಜದ ವಿದ್ಯಾರ್ಥಿಗಳು, ಯುವಕ ಯುವತಿಯರು, ಮಾಡಬೇಕಿದೆ ಹಾಗೂ ಪೋಷಕರು ಸಹ ಈ ಯೋಜನೆಗಳ ಫಲಾನುಭವಿಗಳಾಬೇಕು ಎನ್ನುತ್ತಾರೆ.

    ಪದ್ಮಶಾಲಿ ಸಮಾಜದ ಬಾಂಧವರು ಸರ್ಕಾರದ ಉನ್ನತ ಹುದ್ದೆಯಲ್ಲಿಯಿರುವುದು ಬಹಳ ವಿರಳ. ಈ ಹಿಂದೆ ಉನ್ನತ ಹುದ್ದೆ ನಿರ್ವಹಿಸಿದ ಬಹುತೇಕರು ಇಂದು ನಿವೃತ್ತಿಯಾಗಿದ್ದಾರೆ. ಇತ್ತೀಚಿನ ಯುವ ಜನತೆ ಸರ್ಕಾರಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ  ಹಿಂಜರಿಯುತ್ತಿರುವುದಕ್ಕೆ ಹಲವಾರು ಕಾರಣಗಳು ಇವೆ. ರಾಜಕೀಯ ಒತ್ತಡ, ಹಿರಿಯ ಅಧಿಕಾರಿಗಳ ಕಿರುಕುಳ, ಕಡಿಮೆ ಸಂಭಳ, ಹೀಗೆ ಇತ್ಯಾದಿ ಕಾರಣಗಳು. ವಿಶಾಲ ಮನೋಭಾವದಿಂದ ಯುವ ಜನತೆ ಆಲೋಚಿಸಿ ಸರ್ಕಾರದ ಮೂರು ಅಂಗಗಳಲ್ಲಿ ಬರುವ ಕೆಲಸವನ್ನು ಮಾಡಬೇಕಾಗಿದೆ.

  ಸರ್ಕಾರದಿಂದ ಏಕಾಏಕಿ ವರ್ಗಾವಣೆ ಆದೇಶ ಬಂದಾಗ ಕೆಎಟಿ ನ್ಯಾಯಾಧಿಕರಣ ಮೊರೆಹೋಗಿ ಗೆಲುವನ್ನು ದಕ್ಕಿಸಿಕೊಂಡಿದ್ದಾರೆ. ಸರ್ಕಾರಿ ಹುದ್ದೆಯಲ್ಲಿದ್ದಾಗ, ಆರೋಪಗಳು ಸಹಜ.  ದಿಟ್ಟತನದಿಂದ ಅವೆಲ್ಲವನ್ನು ಎದುರಿಸಿ ಸವಾಲುಗಳನ್ನು ಸ್ವೀಕರಿಸುವುದು ಇವರಿಗೆ ಅಭ್ಯಾಸವಾಗಿ ಹೋಗಿದೆ. ಏನೇ ಬಂದರೂ ಎದುರಿಸಿತ್ತೇನೆ ಎನ್ನುವ ಧೈರ್ಯ ಇವರಲ್ಲಿದೆ. 

    ಉತ್ತಮ ರೀತಿಯಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಿ ಪದ್ಮಶಾಲಿ ಸಮಾಜದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ಯುವ ಪ್ರಯತ್ನವನ್ನು ಶ್ರೀಯುತರು ಮಾಡುತ್ತಾರೆನ್ನುವ ಆಶಾವಾದ ಸಮಾಜದ ಬಾಂಧವರಲ್ಲಿದೆ. ಕುಲದೇವರುಗಳಾದ ಶ್ರೀ ಮಾರ್ಕಂಡೇಯ ಋಷಿಗಳು ಮತ್ತು ಶ್ರೀ ಭಾವನಾ ಮಹರ್ಷಿಗಳು ಇವರಿಗೆ ಇನ್ನೂ ಹೆಚ್ಚಿನ ಯಶಸ್ಸನ್ನು ಕೊಡಲಿ ಎಂದು ನಾವೆಲ್ಲರೂ ಹಾರೈಸೋಣ








Saturday, March 16, 2024

ವಿಜ್ರಂಭಣೆಯಿಂದ ನಡೆದ "ಕೊಡಿಯಾಲದವರ ಪದ್ಮಶಾಲಿ ಸಂಘ"ದ 63ನೇ ವರ್ಷದ ಶ್ರೀ ಭಾವನಾ ಮಹರ್ಷಿ ಕುಲದೇವರ ಪೂಜಾ ಕಾರ್ಯಕ್ರಮ.



ಇತ್ತೀಚೆಗೆ ನಡೆದ 63ನೇ ವರ್ಷದ ಶ್ರೀ ಭಾವನಾ ಮಹರ್ಷಿ ಕುಲದೇವರ ಪೂಜಾ ಕಾರ್ಯಕ್ರಮ ತುಂಬಾ ವಿಜ್ರಂಭಣೆಯಿಂದ ನಡೆಯಿತು. ಅಂದಿನ ಕಾರ್ಯಕ್ರಮದಲ್ಲಿ ಏನಿತ್ತು ಎಂದು ಕೇಳುವುದಕ್ಕಿಂತ ಏನಿರಲಿಲ್ಲ ಎಂದು ಕೇಳಿ. ಒಂದು ಔತಣದ ಊಟದ ಎಲೆಯಲ್ಲಿ, ತರಹೇವಾರು ತಿಂಡಿ ತಿನಿಸುಗಳು ಬಡಿಸಿ ಅದನ್ನು ಸವಿಯುತ್ತ ಹೋದಂತೆ ಆನಂದಿಸುವ ಆ ಕ್ಷಣವಿದೆಯಲ್ಲ, ಅಂತಹುದೇ ಅನುಭೂತಿ ಆ ಕಾರ್ಯಕ್ರಮದಲ್ಲಿ ನಡೆಯಿತು. 

ಕುಲದೇವರ ಪೂಜೆ, ಪ್ರತಿಭಾವಂತ ಮಕ್ಕಳಿಂದ ಭಕ್ತಿಗೀತೆ ಗಾಯನ, ಸಾಧಕರಿಗೆ ಪದ್ಮರತ್ನ ಪ್ರಶಸ್ತಿ, SSLC  ಮತ್ತು PUC ಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಧನ ಮತ್ತು ಪ್ರತಿಭಾ ಪುರಸ್ಕಾರ, ಮುಖ್ಯ ಅಥಿತಿಗಳಿಂದ ಭಾಷಣ, ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೆ ರುಚಿಕರವಾದ ಉಪಹಾರ ಮತ್ತು ಭೋಜನ, ಸಂಘದ ಪಧಾದಿಕಾರಿಗಳು ಮತ್ತು ಗಣ್ಯ ಅಥಿತಿಗಳಿಂದ ಭಾಷಣ, ಇದೆಲ್ಲದರ ಮಧ್ಯೆ ಆಗಾಗ್ಗೆ, ಲಾಟರಿಯನ್ನು ಎತ್ತಿ, ಅದೃಷ್ಟಶಾಲಿಗಳಿಗೆ ಬಹುಮಾನ ವಿತರಣೆ, ಒಗಟುಗಳಿಗೆ ಉತ್ತರ ಹೇಳಿದವರಿಗೆ ಸೀರೆ ಉಡುಗೊರೆ. ಹಿರಿಯ ದಂಪತಿಗಳಿಗೆ ಬಹುಮಾನ. ಬುಸ್ಸಾ ರಂಗಸ್ವಾಮಿಯವರಿಂದ ಗೀತಗಾಯನ, ಜೂನಿಯರ್. ಡಾ.ರಾಜ್ ಕುಮಾರ್, ಜೂನಿಯರ್. ವಿಷ್ಣುವರ್ಧನ್ ರವರ  ಮನರಂಜನಾ ಕಾರ್ಯಕ್ರಮ, ಕಾರ್ಯಕ್ರಮದ ಕೊನೆಗೆ ವಂದನಾರ್ಪಣೆ. ದಿನಪೂರ್ತಿ ನಡೆದ ಕಾರ್ಯಕ್ರಮದ ಬಗ್ಗೆ ಹೇಳುತ್ತಾ ಹೋದರೆ ಹತ್ತಾರು ಪುಟಗಳ ಲೇಖನ ಬರೆಯ ಬೇಕಾಗಬಹುದು. ಆಶ್ಚರ್ಯಕರ ಸಂಗತಿಯೇನೆಂದರೆ, ಈ ಎಲ್ಲಾ ಕಾರ್ಯಕ್ರಮಗಳನ್ನ ಎಲ್ಲೂ ಲೋಪಬರದಂತೆ ಅಚ್ಚುಕಟ್ಟಾಗಿ ಆಯೋಜಿಸಿದ್ದು ಇವರ ಅನುಭವಕ್ಕೆ ಕನ್ನಡಿ ಹಿಡಿದಂತಿತ್ತು.

ಒಂದು ಸಾಮಾಜಿಕ ಸಂಸ್ಥೆ ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ನಮ್ಮ "ಕೊಡಿಯಾಲದವರ ಪದ್ಮಶಾಲಿ ಸಂಘ, ಬೆಂಗಳೂರು"  ಉತ್ತಮ ಉದಾಹರಣೆ. ಈ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲ ತುಂಬಾ ಅನುಭವಸ್ಥರು, ಅದರಲ್ಲೂ ಸಂಘದ ಮುಖ್ಯ ಸ್ಥಾನದಲ್ಲಿರುವ ಪ್ರಮುಖರಾದ, ಶ್ರೀ. ನ್ಯಾಯಂ ಸಿ. ನಾರಾಯಣಯ್ಯ, , ಗುರುಶ್ರೀ ಶ್ರೀನಿವಾಸ್, ಶ್ರೀರಾಮ ರಂಗಸ್ವಾಮಿ ಹೀಗೆ ಮಿಕ್ಕುಳಿದ ಕಾರ್ಯಕಾರಿಸಮಿತಿಯವರೆಲ್ಲರೂ ಅರವತ್ತು ವರ್ಷಕ್ಕೂ ಮೇಲ್ಪಟ್ಟವರು. ಪೂಜಾ ಕಾರ್ಯಕ್ರಮದ ರೂಪು ರೇಷೆಯಿಂದ ಹಿಡಿದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಇವರೆಲ್ಲರ ಶ್ರಮ ಶ್ಲಾಘನೀಯ. ಅತ್ಯಂತ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮ ಇವರ ಈ ಕಾರ್ಯಾನುಭವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಯಾವುದೇ ಕೆಲಸ ಮಾಡಲು ಮತ್ತು ಅದು ಯಶಸ್ಸು ಕಾಣಲು ಮುಖ್ಯವಾಗಿರಬೇಕಾಗಿದ್ದದ್ದು ಇಚ್ಚಾಶಕ್ತಿ ಮತ್ತು ಒಗ್ಗಟ್ಟು, ಅದೆಲ್ಲವನ್ನು ಈ ಹಿರಿಯರಲ್ಲಿ ನಾನು ಕಂಡೆ. ಎಲ್ಲಾ ಯುವಕರಿಗೆ ಮತ್ತು ಇತರೆ ಸಂಘಸಂಸ್ಥೆಗಳಿಗೆ ಅವರು ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಪುರೋಹಿತರಾದ ಬಾಪು ಎನ್. ವೆಂಕಟೇಶ್  ಅವರು ಮೊದಲಿಗೆ ಅಚ್ಚುಕಟ್ಟಾಗಿ ದೇವರ ಪೂಜೆ ನಡೆಸಿಕೊಟ್ಟರು, ಮಂಗಳಾರತಿಯನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಭಗವಂತನಿಗೆ ಎಲ್ಲರೂ ಪ್ರಾರ್ಥನೆ ಸಲ್ಲಿಸುವ ವೇಳೆಗೆ ಉಪಹಾರ ಸಿದ್ದವಾಗಿದೆ ಎನ್ನುವ ಸಂದೇಶ ಬಂತು, ಎಲ್ಲರು ಭೋಜನಶಾಲೆಯತ್ತ ಹೊರಟರು. ನೂರಾರು ಜನರು ಬೆಳಿಗ್ಗೆಯೇ ಆಗಮಿಸಿದ್ದರು, ಅವರೆಲ್ಲರಿಗೂ ಉಪಹಾರ ನೀಡಲಾಯಿತು. 

ರುಚಿಯಾದ ಉಪಹಾರ ಸವಿದ ನಂತರ, ದೀಪ ಬೆಳಗುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪದ್ಮಶಾಲಿ ಪ್ರತಿಭಾನ್ವಿತ ಮಕ್ಕಳಿಂದ ವಾದ್ಯಸಂಗೀತ ಮತ್ತು ಭಕ್ತಿಗೀತೆ ಗಾಯನ ಕಾರ್ಯಕ್ರಮ ನೀಡಲು ವೇದಿಕೆ ಸಿದ್ದವಾಗಿತ್ತು. ನಮ್ಮ ಪದ್ಮಶಾಲಿ ಪ್ರತಿಭಾವಂತ ಮಕ್ಕಳು ಯಾರಿಗೂ ಕಮ್ಮಿಯಿಲ್ಲ ವೆಂಬಂತೆ ಅದ್ಭುತವಾಗಿ ಭಕ್ತಿಗೀತೆ ಗಳನ್ನ ಹಾಡಿ ಸಭಿಕರ ಮನರಂಜಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿವಿಧ ಭಕ್ತಿಗೀತೆಗಳನ್ನು ಆಲಿಸಿದ ಸಭಿಕರು ಭಕ್ತಿ ಪರವಶರಾಗಿ ತಲೆದೂಗುತಿದ್ದುದು ಕಂಡು ಬಂತು. 





ಸಂಗೀತ ಕಾರ್ಯಕ್ರಮದ ನಂತರ,  ಡಾ. ಶಾಂತಲ ಅರುಣ್ ಕುಮಾರ್, ಎಂ.ಡಿ.ಎಸ್. Associate Professor SDM Dental College & Hospital, Sattur, Dharwad,  ಶ್ರೀ ಪಿ.ಎಸ್. ರಂಗನಾಥ್ ಸಾಹಿತಿಗಳು-ಮಸ್ಕಟ್ ಮತ್ತು ಕನಮಾಕಲು ಎನ್. ಗಣೇಶ್ ಸಮಾಜ ಸೇವಕರು ಇವರಿಗೆ ಪದ್ಮರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

ಅಥಿತಿಯಾಗಿದ್ದ ಶ್ರೀ ಸರಸ್ವತಮ್ಮ ನವರು, ತಮ್ಮ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತೇನೆ ಎಂದು ಹೇಳಿದರು. ವಿದ್ಯಾದಾನ ಎಲ್ಲದಕ್ಕಿಂತ ಶ್ರೇಷ್ಟವಾದದ್ದು, ಆಸ್ತಿ ಹಣ, ಅಂತಸ್ತು ಎಲ್ಲವೂ ಕಳೆದು ಹೋಗುವಂತಹದ್ದು, ಆದರೆ ವಿದ್ಯೆಯನ್ನು ಯಾರು ಕಸಿದುಕೊಳ್ಳಲಾರರು. ಒಬ್ಬರೇ ಪೋಷಕರಿರುವ ಕುಟುಂಬದವರು ತಮ್ಮಲ್ಲಿ ಬಂದರೆ ಅವರಿಗೆ ಅಗತ್ಯವಾದ ಸಹಾಯ ಮಾಡುವುದಾಗಿ ಹೇಳಿದರು.

ಮುಖ್ಯ ಅಥಿತಿಯಾದ ಶ್ರೀ ರಮೇಶ್ ಸಂಗಾ ಅವರು ಮಾತನಾಡಿ, ಪದ್ಮಶಾಲಿ ಸಮಾಜದ ವಿದ್ಯಾರ್ಥಿಗಳು, ಯುವಕರು ಸರ್ಕಾರದ ವಿವಿಧ ಯೋಜನೆಗಳನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ. ಯಾವುದಾದರು ಸಮಾಜವು  ಸರ್ವತೋಮುಖ ಅಭಿವೃದ್ದಿಯಾಗಬೇಕಾರೆ, ಬದಲಾವಣೆಯಾಗಬೇಕಾದರೆ,  ಸರ್ಕಾರಿ ವ್ಯವಸ್ಥೆಯೊಳಗೆ ಬರುವ ಕೆಲಸ ಮಾಡಬೇಕು, ಆಗ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು. ಸರ್ಕಾರದ ಮುಖ್ಯ ಮೂರು ಸ್ಥಂಭಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ವ್ಯವಸ್ಥೆಯೊಳಗೆ ಬರುವ ಕೆಲಸ ಮಾಡಬೇಕು.  IAS KAS, ಅಥವ ಇತರೆ ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಇಲ್ಲವೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಅಥವ ನ್ಯಾಯಾಂಗದ ವ್ಯವಸ್ಥೆಯಲ್ಲಿ ನ್ಯಾಯವಾದಿ ಅಥವ ನ್ಯಾಯಾದೀಶರಾಗಿ ಕೆಲಸ ಮಾಡಿದರೆ ಮಾತ್ರ ಸಮಾಜವು ಬದಲಾವಣೆ ಕಾಣಲು ಸಾಧ್ಯ ಎಂದು ಹೇಳಿದರು. ಕೊನೆಯಲ್ಲಿ ಸಮಾಜದ ಪ್ರತಿಭಾವಂತರನ್ನು ಶ್ಲಾಘಿಸಿದರು.

ನಂತರ ಮಾತನಾಡಿದ, ಸನ್ಮಾನ್ಯ ಶ್ರೀ ಜಿಂಕಾ ಎನ್.ಡಿ ಶ್ರೀಹರಿಪ್ರಸಾದ್ ಅಧ್ಯಕ್ಷರು.ಶ್ರೀ ಭಾವನಾಋಷಿ ಪದ್ಮಪೀಠ ಮಹಾಸಂಸ್ಥಾನ, ಅವರು, 63 ವರ್ಷದ ಹಿಂದೆ ಚಿಕ್ಕದಾಗಿ ಪ್ರಾರಂಭಿಸಿದ ಕುಲದೇವರ ಪೂಜೆ ಇಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಖುಷಿಯ ವಿಚಾರ. ನೇಕಾರ ಅಭಿವೃದ್ದಿ ನಿಗಮ ಆದಷ್ಟು ಬೇಗ ಸ್ಥಾಪಿತವಾಗಬೇಕಿದೆ ಇದಕ್ಕಾಗಿ ಪ್ರತಿ ಜಿಲ್ಲಾ ಮಟ್ಟದಲ್ಲಿ ಮೆಮೊರಂಡಮ್ ಕೊಟ್ಟಿರುವುದನ್ನು ಪ್ರಸ್ತಾಪಿಸಿದರು. ಪದ್ಮಶಾಲಿ ಸಮಾಜ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿರುವುದನ್ನ ನಾನು ಕಂಡಿದ್ದೇನೆ, ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸಿಸುತಿದ್ದ ಜನ ಇಂದು ಉತ್ತಮ ಸ್ಥಿತಿಯಲ್ಲಿರುವುದನ್ನ ಕಂಡಿದ್ದೇನೆ. ಜತೆಗೆ ತಮ್ಮ ಗಳಿಕೆಯ ಸ್ವಲ್ಪ ಹಣವನ್ನು ಸಹ ಸಮಾಜದ ಅಭಿವೃದ್ದಿಗೆ ವಿನಿಯೋಗಿಸಿ. ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಮರಳಿಸಿ ಎನ್ನುವ ಕಿವಿಮಾತನ್ನು ಹೇಳಿದರು. 

ಸನ್ಮಾನ್ಯ ಶ್ರೀ ಜರುಗು ಡಿ. ಕೃಷ್ಣಯ್ಯ ಗೌರವಾಧ್ಯಕ್ಷರು. ಶ್ರೀ ಭಾವನಾಋಷಿ ಪದ್ಮಪೀಠ ಮಹಾಸಂಸ್ಥಾನ, ಅವರು ಮಾತನಾಡಿ, ಕೊಡಿಯಾಲದವರ ಸಂಘ ಡೈಮೆಂಡ್ ಜುಬಿಲಿಯ ಹತ್ತಿರ ಸಾಗುತ್ತಿರುವುದು ಖುಷಿಯ ವಿಚಾರ. ಅರವತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕಾಗಿ ಕೊಡಿಯಾಲದಿಂದ ಬಂದ ಸಮಾಜದವರು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನೆಲೆನಿಂತು ಒಬ್ಬರನ್ನೊಬ್ಬರು ಭೇಟಿಯಾಗದಂತೆ ಇರುವ ಸಂಧರ್ಭ ಸೃಷ್ಟಿಯಾಗಿತ್ತು, ಅದನ್ನು ಮನಗಂಡ ಕೆಲ ಹಿರಿಯರು ಕುಲದೇವರ ಪೂಜೆಯ ನಿಮಿತ್ತ ಎಲ್ಲರು ಒಟ್ಟಾಗಿ ಒಂದೆಡೆ ಸೇರಿ ಉಭಯಕುಶಲೋಪರಿಯನ್ನು ವಿಚಾರಿಸಿಕೊಳ್ಳುವ ವಾತಾವರಣವನ್ನು ಏರ್ಪಡಿಸಿ, ಇಂದು ಅರವತ್ಮೂರು ವರ್ಷಕ್ಕೆ ದಾಪುಗಾಲಿಟ್ಟುರುವುದು ಸಂತೋಷ ವಿಚಾರ, ಹೀಗೆ ಪ್ರತಿವರ್ಷ ಈ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಲಿ, ಪ್ಲಾಟಿನಂ ಜುಬಿಲಿಯನ್ನು ಈ ಸಂಘ ಆಚರಿಸಲಿ ಎಂದು ಹಾರೈಸಿದರು.



ಸನ್ಮಾನ್ಯ ಶ್ರೀ ನ್ಯಾಯಂ ಸಿ. ನಾರಾಯಣಯ್ಯ, ಅಧ್ಯಕ್ಷರು. ಕೊಡಿಯಾಲದವರ ಪದ್ಮಶಾಲಿ ಸಂಘ, ಬೆಂಗಳೂರು ಅವರು, ಕೊಡಿಯಾಲದವರ ವಲಸೆ ಮತ್ತು ಸಂಘವು ಹೇಗೆ ರೂಪುಗೊಂಡಿತು ಎನ್ನುವುದನ್ನ ವಿವರಿಸಿದರು.  ಕೊಡಿಯಾಲ ಗ್ರಾಮದಿಂದ ಬೆಂಗಳೂರಿನ ಕಬ್ಬನ್ ಪೇಟೆಗೆ ವಲಸೆ ಬಂದು ನೇಯ್ಗೆ ಕೆಲಸ ಮಾಡಿಕೊಂಡು ಇಲ್ಲಿ ನೆಲೆನಿಂತ ಪದ್ಮಶಾಲಿ ಕುಲಭಾಂದವರು ಚಿಕ್ಕಪೇಟೆಯ ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ಆಚರಿಸುತಿದ್ದರು. ಅಂದಿನಕಾಲದಲ್ಲಿ ನಾಲ್ಕಾಣೆ ಚಂದ ಎತ್ತಿ ಹೆಸರುಬೇಳೆ ಪಾನಕ ಮಾಡಿ ಪ್ರಸಾದವಾಗಿ ಕೊಡುತಿದ್ದರು, ಅಂತಹ ಸಂಘ ಇಂದು ವಿಜ್ರಂಭಣೆಯಿಂದ ಕಾರ್ಯಕ್ರಮ ನಡೆಸುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು. ಅಂದಿನ ಗಣ್ಯ ಹಿರಿಯರ ಹೆಸರನ್ನೆಲ್ಲ ಸ್ಮರಿಸಿಕೊಂಡರು.

ಶ್ರೀ ಸುಲ್ತಾನ್ ರವಿ ಕುಮಾರ್ ರವರು ಮಾತನಾಡಿ ಸಂಘದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಯಾವುದೇ ಪ್ರಯತ್ನವಿಲ್ಲದೆ ಯಶಸ್ಸು ಅಸಾಧ್ಯ. ನನಗೆ ಮೂರು ಡಾಕ್ಟರೇಟ್ ಮತ್ತು ಹಲವಾರು ಪ್ರಶಸ್ತಿಗಳು ದೊರಕಿವೆ. ಇದಕ್ಕೆಲ್ಲ ಕಾರಣ ನನ್ನ ಹೆತ್ತವರು. ಬಡವರಿಗಾಗಿ ಒಂದು ಫೌಂಡೇಶನ್ ಪ್ರಾರಂಭಿಸುತಿದ್ದೇನೆ. ನನ್ನ ಗಳಿಕೆಯ 18-20% ಹಣವನ್ನು ಸಮಾಜದ ಉನ್ನತಿಗಾಗಿ ಮೀಸಲಿಟ್ಟಿದ್ದೇನೆ. ಯಾವುದಾದರು ಸಹಾಯ ಬೇಕಿದ್ದಲ್ಲಿ ನನ್ನನ್ನ ಸಂಪರ್ಕಿಸಿ, ನನ್ನ ಕೈಲಾದ ಮಟ್ಟಿಗೆ ಸಹಾಯ ನೀಡಲು ನಾನು ಸಿದ್ದನಿದ್ದೇನೆ ಎಂದು ಹೇಳಿ ಮಾತು ಮುಗಿಸಿದರು.

ಚಲನಚಿತ್ರ ಮತ್ತು ಧಾರವಾಹಿಗಳಲ್ಲಿ ನಟಿಸುತ್ತಿರುವ ಬಾಲಕಲಾವಿದೆ ಕು. ಆರಾಧ್ಯ ಅವರಿಗೆ ಸನ್ಮಾನಿಸಿ, ಅವರಿಂದ ನೃತ್ಯ ಪ್ರದರ್ಶನವನ್ನು ಪ್ರಸ್ತುತ ಪಡಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಜೂನಿಯರ್ .ಡಾ.ರಾಜ್ ಕುಮಾರ್, ಜೂನಿಯರ್. ವಿಷ್ಣುವರ್ಧನ್ ರವರ  ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೀಗೆ  ದಿನಪೂರ್ತಿ ನಡೆದ ಎಲ್ಲಾ ವಿವಿಧ ಕಾರ್ಯಕ್ರಮಗಳು ತುಂಬಾ ಅದ್ಭುತವಾಗಿ ಮೂಡಿ ಬಂದವು. ವಾರದ ಮೊದಲಲ್ಲಿ ಅದೂ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುವ ಮಂಗಳವಾರದಂದು ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘದ ಕೆಲಸಗಳಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಿದ್ದು ವಿಶೇಷವಾಗಿತ್ತು. 

ಬಾಪು ಶ್ರೀ ಆರ್.ಎನ್. ರಂಗಸ್ವಾಮಿ ಉಪಾಧ್ಯಕ್ಷರು, ನ್ಯಾಯಂ ಡಾ. ಎನ್. ರಾಧಾಕೃಷ್ಣ ಉಪಾಧ್ಯಕ್ಷರು. ಕೊಡಿಯಾಲದವರ ಪದ್ಮಶಾಲಿ ಸಂಘ, ಬೆಂಗಳೂರು, ಮತ್ತಿತರ ಪಧಾದಿಕಾರಿಗಳು ಪಾಲ್ಗೊಂಡಿದ್ದರು.

ಸಂಘವು ಕೇವಲ ಕುಲದೇವರ ಪೂಜೆಗೆ ಮಾತ್ರ ಸೀಮಿತವಾಗದೆ, ಅವರ ಕಾರ್ಯಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿರುವುದು ಸಂತಸದ ಸಂಗತಿ. ಕಳೆದ ವರ್ಷದ ವಿವಿಧ ಕಾರ್ಯಕ್ರಮಗಳು ನಡೆದವು, ಅವುಗಳ ವಿವರ ಈ ಕೆಳಗಿನಂತಿದೆ. 

1.  ಉಳ್ಳಾಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಒಂದು ದಿನದ ಮಂಡಲ ಪೂಜೆ ಸುಮಾರು 250 ಜನ ಭಾಗವಹಿಸಿದ್ದರು  ಪೂಜೆಯೊಂದಿಗೆ ಬೆಳಗಿನ ತಿಂಡಿಯನ್ನು ಒದಗಿಸಲಾಯಿತು

2.  ಪದ್ಮಶಾಲಿ ಜನಾಂಗದ ಒಬ್ಬ ಹೆಣ್ಣುಮಗಳಿಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು  50  ಸಾವಿರ ರೂಪಾಯಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು

3. ಸಂಘದ  ಸದಸ್ಯರಿಗೆ ಸಹಾಯವಾಗಲೆಂದು ಒಂದು ಹಣಕಾಸಿನ ನಿಧಿಯನ್ನು ಸ್ಥಾಪಿಸಲಾಯಿತು.

4. ವಿಶೇಷ ಕಾರ್ಯಕ್ರಮ ಕಿದ್ವಾಯಿ ಆಸ್ಪತ್ರೆಯಲ್ಲಿನ  ಕ್ಯಾನ್ಸರ್ ಪೀಡಿತ 

400 ಬಡ ರೋಗಿಗಳಿಗೆ ಒಂದು ದಿನದ ಬೆಳಗಿನ ತಿಂಡಿ ಹಾಗೂ ಹಣ್ಣು ಹಂಪಲುಗಳನ್ನು ನೀಡಲಾಯಿತು

ಸಮಾಜದ ಅಭಿವೃದ್ದಿಗಾಗಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಉತ್ಸುಕರಾಗಿರುವ ಸಂಘದ ಪಧಾದಿಕಾರಿಗಳು ಮುಂಬರುವ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು, ಪದ್ಮಶಾಲಿ ಜನಾಂಗದ ಐಎಎಸ್ ಮತ್ತು ಕೆಎಎಸ್ ಆಸಕ್ತರಿಗೆ ಹಣಕಾಸಿನ ಸಹಾಯ ನೀಡುವುದು, ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾದವರಿಗೆ ವಿಶೇಷ ಪ್ರೋತ್ಸಾಹ ಧನ ನೀಡುವುದು ಮತ್ತು ಹೆಚ್ಚಿನ ವಿದ್ಯಾಭ್ಯಾಸ ನಡೆಸಲು ಆರ್ಥಿಕವಾಗಿ ಸಹಾಯ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ.



63ನೇ ವರ್ಷದ ಶ್ರೀ ಭಾವನಾ ಮಹರ್ಷಿ ಕುಲದೇವರ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ನೂರಾರು ಜನರು ಕಾರಣಕರ್ತರಾಗಿದ್ದಾರೆ. ಇವರೆಲ್ಲರ ಸಹಾಯವಿಲ್ಲದೆ ಕಾರ್ಯಕ್ರಮ ಇಷ್ಟೊಂದು ವಿಜ್ರಭಂಣೆಯಿಂದ ನಡೆಯಲು ಸಾಧ್ಯವಾಗುತ್ತಿರಲಿಲ್ಲ. 

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಕೊಡುಗೆ ಯನ್ನು ಜಿಂಕಾ ಎನ್. ಎಸ್. ಬ್ರಹ್ಮಾನಂದ, ಜಿಂಕಾ ದಿ|| ಸಿ.ಎನ್. ಶ್ಯಾಂಸುಂದರ್ ರವರ ಮಕ್ಕಳು (ಮೆ. ಶ್ಯಾಮ್ ಜ್ಯೂಯಲರ್ಸ್ ಕೊಡಿಯಾಲದವರ ಚಿಕ್ಕಸಾಪ್ರಕಾರ್ ಅಂಗಡಿ) ಶ್ರೀ ಕೆ.ಪಿ.ಎಂ. ನಂಜಪ್ಪನವರ ನೆನಪಿಗಾಗಿ ಅವರ ಮಗ ಶ್ರೀ ಎನ್. ಗಣೇಶ್ ರವರು ಶ್ರೀ ಪೊಬ್ಬತಿ ವಿಜಯ್‌ ಕುಮಾರ್, (ದಿ॥ ಪೊಬ್ಬತಿ ಶಿವಣ್ಣನವರ ಮಕ್ಕಳು) ಅವರು ಪ್ರಾಯೋಜಕತ್ವ ನೀಡಿದ್ದರು.

ವಿದ್ಯಾರ್ಥಿಗಳಿಗೆ ಪುಸ್ತಕಗಳ ಕೊಡುಗೆ ಯನ್ನು, ದಿ| ಕೆ.ಪಿ.ಎಂ. ನಂಜಪ್ಪನವರ ಮಕ್ಕಳಾದ ಶ್ರೀ ಎನ್. ಗಣೇಶ್ ಹಾಗೂ ದಿ।। ಜಿಂಕಾ ಬಿ. ರಂಗಸ್ವಾಮಿ ಇವರ ನೆನಪಿಗಾಗಿ ಇವರ ಧರ್ಮಪತ್ನಿ ಜಿಂಕಾ ಶ್ರೀಮತಿ ಸುಲೋಚನ ರಂಗಸ್ವಾಮಿಯವರು  ಪ್ರಾಯೋಜಕತ್ವ ನೀಡಿದ್ದರು.

ಅಡುಗೆ ಮೇಲ್ವಿಚಾರಣೆ ಮತ್ತು ಊಟೋಪಚಾರ ವನ್ನು ಶ್ರೀರಾಮ ಬಳ್ಳೆಕೆರೆ ರಂಗಸ್ವಾಮಿ, ಶ್ರೀರಾಮ ಚಿಕ್ಕ ರಂಗಸ್ವಾಮಿ, ಶ್ರೀರಾಮ ರವಿಕುಮಾರ್, ಬಾಪು ಬಿ.ಜಿ. ವೆಂಕಟೇಶ್, ನ್ಯಾಯಂ ಎಸ್.ಆರ್. ಶಿವಕುಮಾರ್, ನೀಲಾ ಶೇಖರ್ ಬಾಬು, ಕಮ್ಮಾ ಪಿ. ಶ್ರೀನಿವಾಸ್ ಅವರು ವಹಿಸಿಕೊಂಡಿದ್ದರು.

ಪುಸ್ತಕಗಳ ವಿತರಣೆಗಳ ಮೇಲ್ವಿಚಾರಣೆ ಯನ್ನು ಶ್ರೀರಾಮ ಬಿ.ಟಿ. ಬಾಬು, ನ್ಯಾಯಂ ರಾಜಾರಾಮ್, ಬಿಕ್ಕಾ ನರಸರಾಜು ಅವರು ವಹಿಸಿಕೊಂಡಿದ್ದರು.  

ಈ ಎಲ್ಲಾ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಜಿಂಕಾ ಶಂಕರ್‌ಬಾಬು, ನ್ಯಾಯಂ ರಾಧಾಕೃಷ್ಣ, ಬಾಪು ಆರ್.ಎನ್. ರಂಗಸ್ವಾಮಿ, ನ್ಯಾಯಂ ಗೋವರ್ಧನ್, ಬಾಪು ಪ್ರಕಾಶ್ ನ್ಯಾಯಂ ವೇಣುಗೋಪಾಲ್, ಸಾಮದೇಶಿ ರವಿ, ಸಾಮದೇಶಿ ನರಸಿಂಹಮೂರ್ತಿ, ಗೋಪು ಲೇಕೇಶ್, ಬಾಪು ರಾಮಸ್ವಾಮಿ ಯವರು ವಹಿಸಿಕೊಂಡಿದ್ದರು.

ಪೂಜಾ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಶ್ರೀಮತಿ ಶಾಂತ ಶ್ರೀನಿವಾಸಲು, ಶ್ರೀಮತಿ ವರಲಕ್ಷ್ಮೀ ರಂಗಸ್ವಾಮಿ, ಶ್ರೀಮತಿ ತ್ರಿವೇಣಿ ಶಂಕರ್ ಬಾಬು, ಶ್ರೀಮತಿ ಗೌರಮ್ಮ ಶ್ರೀಮತಿ ಚಂದ್ರಕಲಾ, ಶ್ರೀಮತಿ ಸುಲೋಚನ ರಂಗಸ್ವಾಮಿಯವರದಾಗಿತ್ತು.

ಸಾರಿಗೆ ವ್ಯವಸ್ಥೆ ಮತ್ತು ಮೇಲ್ವಿಚಾರಣೆಯನ್ನು ಜಿಂಕಾ ರಾಘವೇಂದ್ರ (ದೀಪು), ಕೊಡಿಯಾಲ ಅವರು ವಹಿಸಿಕೊಂಡಿದ್ದರು.

ಬಹುಮಾನಗಳ ಪ್ರಾಯೋಜಕತ್ವ ಮತ್ತು ಫೋಟೊ, ವಿಡಿಯೊ ಚಿತ್ರೀಕರಣವನ್ನು ಶ್ರೀಮತಿ ಶಾಂತ ಮತ್ತು ಶ್ರೀ ಗುರು ಶ್ರೀನಿವಾಸ್‌, ಹಾಗೂ ಆಹ್ವಾನ ಪತ್ರಿಕೆಯ ವಿನ್ಯಾಸ, ಮುದ್ರಣ ಮತ್ತು ಪ್ರಾಯೋಜಕರು : ಜಿಂಕಾ ಆರ್. ಚಂದ್ರಶೇಖರ್ ಅವರು ವಹಿಸಿಕೊಂಡಿದ್ದರು.

ಸೀರೆಗಳ ಪ್ರಾಯೋಜಕತ್ವವನ್ನು ಶ್ರೀಮತಿ ಸುಲೋಚನಾ ರಂಗಸ್ವಾಮಿ ಮಧು ಸಿಲ್ಕ್ ಅಂಡ್ ಸಾರೀಸ್, ಶ್ರೀ ಕೋಟ ವೆಂಕಟೇಶ್ ಮತ್ತು ಶ್ರೀಮತಿ ತಾರ ದಂಪತಿಗಳು ಭರತ್ ಸಿಲ್ಕ್ ಅಂಡ್ ಸ್ಯಾರೀಸ್ ಅವರು ವಹಿಸಿಕೊಂಡಿದ್ದರು, ಕಾರ್ಯಕ್ರಮದ ಮಧ್ಯೆ ನಡೆದ ರಸ ಪ್ರಶ್ನೆ ಕಾರ್ಯಕ್ರಮ ಮತ್ತು ರಾಫೆಲ್ ಡ್ರಾ ನಲ್ಲಿ ವಿಜೇತರಾದವರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಯಿತು.






ವರದಿ: ಪಿ.ಎಸ್.ರಂಗನಾಥ
ಮಸ್ಕತ್ - ಒಮಾನ್ ರಾಷ್ಟ್ರ
ಸಂಚಾಲಕರು - ಒಮಾನ್ ಕನ್ನಡಿಗರ ವೇದಿಕೆ ಮತ್ತು,
ಪ್ರಧಾನ ಕಾರ್ಯದರ್ಶಿ - ಗಲ್ಫ್ ಕನ್ನಡಿಗರ ಒಕ್ಕೂಟ